ವಿಶ್ವಸಂಸ್ಥೆಯ ಮೌನ ಇಸ್ರೇಲ್ ನ ಅನಾಗರಿಕ ದಾಳಿಗೆ ಕಾರಣ: ಜೋರ್ಡನ್ ಆರೋಪ

Update: 2023-11-15 18:02 GMT

Photo : NDTV 

ಅಮ್ಮಾನ್: ವಿಶ್ವಸಂಸ್ಥೆ ಭದ್ರತಾ ಮಂಡಳಿ ತನ್ನ ಮೌನದ ಮೂಲಕ ಗಾಝಾದ ಮುಖ್ಯ ಆಸ್ಪತ್ರೆಯ ಮೇಲೆ ಇಸ್ರೇಲಿನ ಅನಾಗರಿಕ ದಾಳಿಗೆ ಪ್ರೇರಣೆ ನೀಡಿದೆ ಎಂದು ಜೋರ್ಡನ್ ಬುಧವಾರ ಆರೋಪಿಸಿದೆ.
ಅಲ್-ಶಿಫಾ ಆಸ್ಪತ್ರೆಯಲ್ಲಿನ ದುರಂತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೌನದಿಂದ ಆಗಿರುವ ಅನಾಗರಿಕತೆಗೆ ಸಾಕ್ಷಿಯಾಗಿದೆ ಎಂದು ಜೋರ್ಡನ್ ವಿದೇಶಾಂಗ ಸಚಿವ ಅಯ್ಮಾನ್ ಸಫಾದಿ ಹೇಳಿದ್ದಾರೆ. `ಈ ಕ್ರೂರ ಕೃತ್ಯದ ಕುರಿತ ಮೌನವನ್ನು ನಾವು ಖಂಡಿಸುತ್ತೇವೆ. ಇದು ಯುದ್ಧ ಅಪರಾಧಗಳಿಗೆ ರಕ್ಷಣೆ ನೀಡುತ್ತಿದೆ. ಇದು ಸ್ವೀಕಾರಾರ್ಹವಲ್ಲ, ಸಮರ್ಥನೀಯವಲ್ಲ. ವಿಶ್ವಸಂಸ್ಥೆ  ಭದ್ರತಾ ಮಂಡಳಿ ತಕ್ಷಣ ಕಾರ್ಯನಿರ್ವಹಿಸಬೇಕು' ಎಂದವರು ಆಗ್ರಹಿಸಿದ್ದಾರೆ.
ಗಾಝಾ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
►  ಅಲ್ ಶಿಫಾ ಆಸ್ಪತ್ರೆಯಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್ `ಅಲ್ಲಿ ಏನಿದೆ ಎಂಬುದು ನಮಗೆ ದೃಢವಾಗಿದೆ. ಅಗತ್ಯಬಿದ್ದರೆ ದಾಳಿ, ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದುʼ ಎಂದಿದೆ.
►  ಆಸ್ಪತ್ರೆಯ ಮೇಲಿನ ದಾಳಿಯ ಸಂದರ್ಭದಲ್ಲಿ ಇಸ್ರೇಲಿ ಪಡೆಗಳು ಶಸ್ತ್ರಾಸ್ತ್ರಗಳ ಸಂಗ್ರಹ ಹಾಗೂ ಮೂಲಸೌಕರ್ಯಗಳನ್ನು ಪತ್ತೆ ಹಚ್ಚಿದ್ದು ಇದು ಹಮಾಸ್ ಮೇಲಿನ ನಮ್ಮ ಆರೋಪವನ್ನು ಪುಷ್ಟೀಕರಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. 
►  ಈ ಮಧ್ಯೆ, ಅಲ್-ಶಿಫಾ ಆಸ್ಪತ್ರೆಯ ಮೇಲಿನ ದಾಳಿಯ ಬಳಿಕ ಕದನ ವಿರಾಮಕ್ಕೆ ಇಸ್ರೇಲ್ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚಿದೆ.
►  ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮಕ್ಕೆ ಸಂಬಂಧಿಸಿ ಎರಡೂ ದೇಶಗಳು ತಮ್ಮ ಷರತ್ತನ್ನು ಬದಿಗಿರಿಸಿ ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಲು ಅವಕಾಶ ನೀಡಬೇಕೆಂದು ಖತರ್ ಹಮಾಸ್ ಮತ್ತು ಇಸ್ರೇಲನ್ನು ಆಗ್ರಹಿಸಿದೆ.
►  ನಮ್ಮನ್ನು ಕೆಣಕಿದ ಹಮಾಸ್ ಗೆ ಗಾಝಾದಲ್ಲಿ ಅವಿತುಕೊಳ್ಳಲು ಯಾವುದೇ ಸ್ಥಳ ಸುರಕ್ಷಿತವಲ್ಲ. ಇಸ್ರೇಲ್ ಸೇನೆ ಗಾಝಾದ ಯಾವುದೇ ಪ್ರದೇಶಕ್ಕೂ ಪ್ರವೇಶಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
►  ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾಕ್ಕೆ ತುರ್ತು ಅಗತ್ಯದ ವಸ್ತುಗಳನ್ನು ಒದಗಿಸಲು ವಿಶ್ವಸಂಸ್ಥೆ ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಇರಾನ್ ವಿದೇಶಾಂಗ ಇಲಾಖೆ ಬುಧವಾರ ಆಗ್ರಹಿಸಿದೆ.
Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News