"ಫೆಲೆಸ್ತೀನ್ ಅನ್ನು ಸ್ವತಂತ್ರಗೊಳಿಸಿ" ಘೋಷಣೆ ಕೂಗುತ್ತಾ ಇಸ್ರೇಲಿ ರಾಯಭಾರ ಕಚೇರಿಯೆದುರು ಆತ್ಮಾಹುತಿಗೆ ಯತ್ನಿಸಿದ ಅಮೆರಿಕಾದ ವಾಯು ಪಡೆ ಅಧಿಕಾರಿ
ವಾಷಿಂಗ್ಟನ್: ಅಮೆರಿಕನ್ ವಾಯು ಪಡೆಯ ಅಧಿಕಾರಿಯೊಬ್ಬರು ವಾಷಿಂಗ್ಟನ್‌ನಲ್ಲಿರುವ ಇಸ್ರೇಲಿ ದೂತಾವಾಸದ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದು ಸದ್ಯ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಘಟನೆ ರವಿವಾರ ಅಪರಾಹ್ನ ನಡೆದಿದೆ ಎಂದು timesofindia ವರದಿ ಮಾಡಿದೆ.
ಈ ಅಧಿಕಾರಿ ಇಸ್ರೇಲಿ ರಾಯಭಾರ ಕಚೇರಿ ಸಮೀಪ ಸುಮಾರು 1 ಗಂಟೆಗೆ ಬಂದು ಟ್ವಿಚ್‌ನಲ್ಲಿ ಲೈವ್ ಸ್ಟ್ರೀಮ್ ಆರಂಭಿಸಿ ನಂತರ ಮೈಗೆ ಇಂಧನ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
“ಗಾಝಾದಲ್ಲಿ ನಡೆಯುತ್ತಿರುವ ನರಮೇಧದ ಭಾಗವಾಗಿ ನಾನು ಇನ್ನು ಮುಂದುವರಿಯುವುದಿಲ್ಲ. ನಾನು ಪ್ರತಿಭಟನೆಯ ಭಾಗವಾಗಿ ವಿಪರೀತ ಕ್ರಮಕೈಗೊಳ್ಳಲಿದ್ದೇನೆ,” ಎಂದು ಅವರು ಹೇಳುತ್ತಾ “ಫೆಲೆಸ್ತೀನ್ ಅನ್ನು ಸ್ವತಂತ್ರಗೊಳಿಸಿ” ಎಂಬ ಘೋಷಣೆ ಕೂಗುತ್ತಾ ಮೈಗೆ ಬೆಂಕಿ ಹಚ್ಚಿಕೊಂಡಿದ್ದಾರೆ.
ಈ ಭಯಾನಕ ವೀಡಿಯೋವನ್ನು ನಂತರ ಟ್ವಿಚ್ ವೇದಿಕೆಯಿಂದ ಡಿಲೀಟ್ ಮಾಡಲಾಗಿದೆ.
ಆತ್ಮಾಹುತಿಗೆ ಯತ್ನಿಸಿದ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಅವರು ಟೆಕ್ಸಾಸ್ ಮೂಲದ ವಾಯುಪಡೆ ಅಧಿಕಾರಿ ಎಂದಷ್ಟೇ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಮೂಲಕ ತಿಳಿದು ಬಂದಿದೆ.
ಅಮೆರಿಕಾದ ಅಧಿಕಾರಿಗಳು ಈ ಘಟನೆ ಕುರಿತು ಪ್ರತಿಕ್ರಿಯಿಸಿಲ್ಲ.