‌ಫೆಲೆಸ್ತೀನ್‌ ಹಿತಾಸಕ್ತಿಗಳನ್ನು ಅಮೆರಿಕ ಕಡೆಗಣಿಸಿದೆ: ರಶ್ಯ ಅಧ್ಯಕ್ಷ ಪುಟಿನ್‌ ಆರೋಪ

Update: 2023-10-11 06:21 GMT

ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (PTI)

ಮಾಸ್ಕೋ: ಮಧ್ಯ ಪೂರ್ವ ದೇಶಗಳಲ್ಲಿ ಅಮೆರಿಕಾದ ನೀತಿಯು ವಿಫಲವಾಗಿದೆ ಹಾಗೂ ಫೆಲೆಸ್ತೀನೀಯರ ಅಗತ್ಯತೆಗಳನ್ನು ಅಮೆರಿಕಾ ಗಣನೆಗೆ ತೆಗೆದುಕೊಂಡಿಲ್ಲ ಎಂಬುದನ್ನು ಇಸ್ರೇಲ್‌ ಮತ್ತು ಹಮಾಸ್ ನಡುವೆ ಭುಗಿಲೆದ್ದಿರುವ ಹಿಂಸಾಚಾರ ಸಾಬೀತು ಪಡಿಸಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದಾರೆ.

ಇಸ್ರೇಲ್‌ ಮತ್ತು ಫೆಲೆಸ್ತೀನ್‌ ಎರಡು ದೇಶಗಳೊಂದಿಗೂ ರಷ್ಯಾ ಸಂಪರ್ಕದಲ್ಲಿದೆ ಹಾಗೂ ಈ ಸಂಘರ್ಷ ಪರಿಹರಿಸುವ ನಿಟ್ಟಿನಲ್ಲಿ ಶ್ರಮಿಸಲು ಬಯಸುತ್ತದೆ ಎಂದು ಪುಟಿನ್‌ ಅವರ ವಕ್ತಾರ ಡಿಮಿತ್ರಿ ಪೆಸ್ಕೋವ್‌ ಹೇಳಿದ್ದಾರೆ. ಅದೇ ಸಮಯ ಈ ಸಂಘರ್ಷ ಇತರ ಪ್ರದೇಶಗಳಿಗೂ ವ್ಯಾಪಿಸಬಹುದೆಂಬ ಎಚ್ಚರಿಕೆಯನ್ನೂ ಅವರು ರವಾನಿಸಿದ್ದಾರೆ.

ಇರಾಕ್‌ ಪ್ರಧಾನಿ ಮುಹಮ್ಮದ್‌ ಶಿಯಾ ಅಲ್-ಸುದಾನಿ ಜೊತೆಗಿನ ಮಾತುಕತೆ ವೇಳೆಗಿನ ಅವಕಾಶವನ್ನು ಅಮೆರಿಕಾ ವಿರುದ್ಧ ಹರಿಹಾಯಲು ಪುಟಿನ್‌ ಬಳಸಿಕೊಂಡಿದಾರೆ.

“ಮಧ್ಯ ಪೂರ್ವದಲ್ಲಿ ಅಮೆರಿಕಾದ ವಿಫಲ ನೀತಿಯ ಜ್ವಲಂತ ಉದಾಹರಣೆ ಇದೆಂಬುದನ್ನು ಹಲವು ಜನರು ನನ್ನೊಂದಿಗೆ ಒಪ್ಪುತ್ತಾರೆ,” ಎಂದು ಪುಟಿನ್‌ ಹೇಳಿದರು.

ಶಾಂತಿ ಸ್ಥಾಪಿಸುವಲ್ಲಿ ಏಕಸ್ವಾಮ್ಯ ಪ್ರಯತ್ನಗಳನ್ನು ಅಮೆರಿಕಾ ಮಾಡಲು ಬಯಸಿದೆ ಹಾಗೂ ಕಾರ್ಯಗತವಾಗುವಂತಹ ಸಂಧಾನಗಳನ್ನು ಮಾಡಲು ವಿಫಲವಾಗಿದೆ. ಫೆಲೆಸ್ತೀನೀಯರ ಹಿತಾಸಕ್ತಿಗಳನ್ನು ಅಮೆರಿಕಾ ಕಡೆಗಣಿಸಿದೆ ಎಂದೂ ಅವರು ಹೇಳಿದರು.

ಅದೇ ಸಮಯ ಶಾಂತಿ ಪ್ರಕ್ರಿಯೆಯಲ್ಲಿ ರಶ್ಯಾದ ಪಾತ್ರವನ್ನು ಅವರು ಉಲ್ಲೇಖಿಸಿಲ್ಲ.

ಇಸ್ರೇಲ್‌ ಮೇಲೆ ಹಮಾಸ್‌ ದಾಳಿ ನಡೆದಂದಿನಿಂದ ಇಸ್ರೇಲ್‌ ಮತ್ತು ಫೆಲೆಸ್ತೀನ್‌ ಜೊತೆಗೆ ತನಗಿರುವ ಸಮಾನ ಸಂಬಂಧಗಳನ್ನು ರಶ್ಯ ಒತ್ತಿ ಹೇಳಿದೆ.

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News