ಹಿಂಸಾಚಾರದ ನಡುವೆ ಪಾಕಿಸ್ತಾನದಲ್ಲಿ ಮತದಾನ ಅಂತ್ಯ
ಇಸ್ಲಮಾಬಾದ್ : ವ್ಯಾಪಕ ಹಿಂಸಾಚಾರ, ಚುನಾವಣೆಯಲ್ಲಿ ಅಕ್ರಮ ನಡೆದಿರುವ ಆರೋಪ, ಮೊಬೈಲ್ ಇಂಟರ್ನೆಟ್ ಸೇವೆಗಳ ಸ್ಥಗಿತದ ನಡುವೆ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಮತದಾನ ಗುರುವಾರ ಅಂತ್ಯಗೊಂಡಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡ ಭದ್ರತಾ ಪಡೆಗಳ ಮೇಲೆ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಕನಿಷ್ಟ 7 ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದರೆ, ನೈಋತ್ಯ ಬಲೂಚಿಸ್ತಾನ ಪ್ರಾಂತದಲ್ಲಿ ನಡೆದ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಜೈಲುಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಹಾಗೂ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಬಹುತೇಕ ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡಿದ್ದರೆ ಪಕ್ಷದ ಚುನಾವಣಾ ಚಿಹ್ನೆ `ಬ್ಯಾಟ್' ಅನ್ನು ಚುನಾವಣಾ ಆಯೋಗ ರದ್ದುಪಡಿಸಿದ್ದರಿಂದ ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ದೇಶದಲ್ಲಿ 128 ದಶಲಕ್ಷ ಮತದಾರರಿದ್ದು ಗುರುವಾರ ಕನಿಷ್ಟ ಮತದಾನವಾಗಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್(ಪಿಎಂಎಲ್-ಎನ್) ಪಕ್ಷ ಭರ್ಜರಿ ಬಹುಮತದೊಂದಿಗೆ ಗೆಲುವು ಪಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ವರದಿ ಮಾಡಿವೆ.
ಈ ಮಧ್ಯೆ, ಬುಧವಾರ ಸಂಭವಿಸಿದ 2 ಸ್ಫೋಟಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಗುರುವಾರ ದೇಶದಾದ್ಯಂತ ಮೊಬೈಲ್ ಫೋನ್‍ಗಳ ನೆಟ್‍ವರ್ಕ್ ಸೇವೆಯನ್ನು ಅಮಾನತುಗೊಳಿಸಿರುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಈ ಕ್ರಮ ದೇಶದ ಜನತೆಯ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ ಎಂದು ಮಾನವ ಹಕ್ಕುಗಳ ಪ್ರತಿಪಾದಕರು ಟೀಕಿಸಿದ್ದಾರೆ. ಆದರೆ ಸಂಭಾವ್ಯ ಬೆದರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಆಂತರಿಕ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಭದ್ರತಾ ಕ್ರಮವಾಗಿ ಇರಾನ್ ಮತ್ತು ಅಫ್ಘಾನಿಸ್ತಾನದ ಜತೆಗಿನ ಗಡಿಯನ್ನು ಮುಚ್ಚಿರುವುದಾಗಿ ವಿದೇಶಾಂಗ ಇಲಾಖೆ ಹೇಳಿದೆ. ರಾಷ್ಟ್ರೀಯ ಮತ್ತು 4 ಪ್ರಾಂತೀಯ ಅಸೆಂಬ್ಲಿಗೆ ನಡೆದಿರುವ ಚುನಾವಣೆಯಲ್ಲಿ ಸುಮಾರು 18,000 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಉತ್ತರ ವಝೀರಿಸ್ತಾನದ ತಾಪ್ಪಿ ಮತಗಟ್ಟೆಯನ್ನು ತಾಲಿಬಾನ್ ವಶಪಡಿಸಿಕೊಂಡು ಚುನಾವಣಾ ಸಿಬಂದಿಗಳನ್ನು ಮತ್ತು ಮತದಾರರನ್ನು ಬೆದರಿಸಿದೆ ಎಂದು ಅಭ್ಯರ್ಥಿ ಮೊಹ್ಸಿನ್ ದವಾರ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಮತದಾನ ಕೇಂದ್ರದಲ್ಲಿದ್ದ ತನ್ನ ಪಕ್ಷದ ಮೂವರು ಮಹಿಳಾ ಏಜೆಂಟರ ಮೇಲೆ ತಾಲಿಬಾನ್‍ಗಳು ಹಲ್ಲೆ ನಡೆಸಿದ್ದಾರೆ. ಈ ಮತದಾನ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತಗಟ್ಟೆಯ ಮೇಲೆ ದಾಳಿ
ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಕುಲಾಚಿ ನಗರದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ 5 ಭದ್ರತಾ ಸಿಬಂದಿ ಮೃತಪಟ್ಟಿದ್ದಾರೆ. ಇದೇ ಪ್ರದೇಶದ ಮತಗಟ್ಟೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ಮತದಾರರು ಆತಂಕಗೊಂಡರು. ಆದರೆ ಯಾವುದೇ ಸಾವು-ನೋವು ವರದಿಯಾಗಿಲ್ಲ. ಬಲೂಚಿಸ್ತಾನ ಪ್ರಾಂತದ ಲಜ್ಜಾ ನಗರದ ಮತಗಟ್ಟೆಯ ಸಮೀಪ ಬಾಂಬ್ ಸ್ಫೋಟಿಸಿ ಇಬ್ಬರು ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದು ಇತರ 9 ಸಿಬಂದಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನದ ಬಂದರು ನಗರ ಗ್ವದರ್‍ನಲ್ಲಿ 14 ಸಣ್ಣಪುಟ್ಟ ಸ್ಫೋಟಗಳಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಝೊಹೈಬ್ ಹುಸೇನ್ ಹೇಳಿದ್ದಾರೆ.