ಫೆಲೆಸ್ತೀನ್ ನಾಶಮಾಡಲು ನಾವು ಬಯಸುತ್ತಿಲ್ಲ: ಇಸ್ರೇಲ್
ಟೆಲ್‍ಅವೀವ್ : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯು ಫೆಲೆಸ್ತೀನಿಯನ್ ಜನಸಮುದಾಯದ ವಿರುದ್ಧ ದೇಶವೊಂದರ ನೇತೃತ್ವದಲ್ಲಿ ನಡೆಯುವ ನರಹತ್ಯೆಯಾಗಿದೆ ಎಂಬ ದಕ್ಷಿಣ ಆಫ್ರಿಕಾದ ಆರೋಪವನ್ನು ತಿರಸ್ಕರಿಸುವುದಾಗಿ ಇಸ್ರೇಲ್ ಹೇಳಿದೆ.
ಅಂತರರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದಲ್ಲಿ ದಕ್ಷಿಣ ಆಫ್ರಿಕಾ ದಾಖಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭ ವಾದ ಮಂಡಿಸಿದ ಇಸ್ರೇಲ್‍ನ ಪ್ರತಿನಿಧಿ `ಗಾಝಾದಲ್ಲಿನ ಕಾರ್ಯಾಚರಣೆಗೆ ತಡೆ ನೀಡಬೇಕೆಂದು ಕೋರುವ ದಕ್ಷಿಣ ಆಫ್ರಿಕಾದ ಅರ್ಜಿಯನ್ನು ತಿರಸ್ಕರಿಸಬೇಕು. ಯಾಕೆಂದರೆ ದೇಶ ಮತ್ತು ದೇಶದ ಜನತೆಯ ರಕ್ಷಣೆ ತಾನು ನಡೆಸುತ್ತಿರುವ ಕಾರ್ಯಾಚರಣೆಯ ಉದ್ದೇಶವಾಗಿದೆ' ಎಂದರು. ನರಮೇಧದ ಕೃತ್ಯಗಳು ನಡೆದಿದ್ದರೆ ಅವುಗಳನ್ನು ಇಸ್ರೇಲ್ ವಿರುದ್ಧ ನಡೆಸಲಾಗಿದೆ. ಹಮಾಸ್ ಇಸ್ರೇಲ್ ವಿರುದ್ಧ ನರಮೇಧವನ್ನು ಬಯಸುತ್ತದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ.
ಇದಕ್ಕೂ ಮುನ್ನ ವಾದ ಮಂಡಿಸಿದ್ದ ದಕ್ಷಿಣ ಆಫ್ರಿಕಾದ ಪ್ರತಿನಿಧಿ `ಅಕ್ಟೋಬರ್ 7ರ ಬಳಿಕ ಗಾಝಾದಲ್ಲಿ ಇಸ್ರೇಲ್‍ನ ಕಾರ್ಯಾಚರಣೆ ಸಂದರ್ಭ 23,000ಕ್ಕೂ ಅಧಿಕ ಜನರು ಹತರಾಗಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಗಾಝಾದಲ್ಲಿ ಇಸ್ರೇಲ್ ಪದಾತಿ ದಳದ ಕಾರ್ಯಾಚರಣೆ ಗಾಝಾದ ಜನಸಂಖ್ಯೆಯನ್ನು ನಾಶಗೊಳಿಸುವ ಗುರಿ ಹೊಂದಿದೆ' ಎಂದು ಆರೋಪಿಸಿದ್ದರು.