ಭೂಕಂಪದ ಸಂದರ್ಭ ನೆರವಾಗಿದ್ದು ನಾವು : ಟರ್ಕಿ ವಿರುದ್ಧ ಇಸ್ರೇಲ್ ವಾಗ್ದಾಳಿ
ಟೆಲ್ ಅವೀವ್: ಟರ್ಕಿ ದೇಶವು ಹಮಾಸ್‍ನ ವಾಸ್ತವಿಕ ಕಾರ್ಯನಿರ್ವಾಹಕ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಆರೋಪಿಸಿದ್ದಾರೆ.
ಇಸ್ರೇಲ್ ಪರ ನಿಲುವು ಪ್ರದರ್ಶಿಸಿದ ಕಾರಣಕ್ಕೆ ಇಸ್ರೇಲ್‍ನ ಫುಟ್‍ಬಾಲ್ ಆಟಗಾರ ಶಗಿವ್ ಯೆಹೆಝ್‍ಕೆಲ್‍ನನ್ನು ಟರ್ಕಿ ಪೊಲೀಸರು ಬಂಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ` ಕಳೆದ ವರ್ಷ ಟರ್ಕಿ ಭೂಕಂಪದಿಂದ ನಡುಗಿದಾಗ ಮೊದಲು ನೆರವಿಗೆ ಧಾವಿಸಿದ್ದು ನಾವು. ಹಲವು ಟರ್ಕಿ ನಾಗರಿಕರ ರಕ್ಷಣಾ ಕಾರ್ಯಕ್ಕೆ ನಾವು ನೆರವಾಗಿದ್ದೆವು. ಆದರೆ ಈಗ ನಮ್ಮ ಫುಟ್‍ಬಾಲ್ ಆಟಗಾರ ಶಗಿವ್ ಯೆಹೆಝ್‍ಕಲ್‍ನನ್ನು ಅನಗತ್ಯವಾಗಿ ಬಂಧಿಸಿರುವುದು ಬೂಟಾಟಿಕೆಯ ವರ್ತನೆ ಮತ್ತು ಕೃತಘ್ನತೆಯ ಪ್ರದರ್ಶನವಾಗಿದೆ. ಟರ್ಕಿಯು ಹಮಾಸ್‍ನ ಕಾರ್ಯನಿರ್ವಾಹಕ ಅಂಗವಾಗಿ ಕೆಲಸ ಮಾಡುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಟರ್ಕಿಯಲ್ಲಿ ನಡೆದ ಫುಟ್‍ಬಾಲ್ ಪಂದ್ಯವೊಂದರಲ್ಲಿ ಆಡುತ್ತಿದ್ದ ಇಸ್ರೇಲ್ ಆಟಗಾರ ಶಗಿವ್, ಗೋಲು ಬಾರಿಸಿದ ಬಳಿಕ ತನ್ನ ಶರ್ಟ್‍ನ ಕೈಯಲ್ಲಿ ಬರೆದಿದ್ದ `100' ಎಂಬ ಅಕ್ಷರ ಹಾಗೂ ಇಸ್ರೇಲ್ ಮೇಲೆ ಹಮಾಸ್ ದಾಳಿ ಎಸಗಿದ ದಿನಾಂಕವನ್ನು ಪ್ರದರ್ಶಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊ ಬಗ್ಗೆ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿತ್ತು. ಸಾರ್ವಜನಿಕರನ್ನು ದ್ವೇಷ ಮತ್ತು ಹಗೆತನಕ್ಕೆ ಪ್ರಚೋದಿಸಿದ ಆರೋಪದಲ್ಲಿ 28 ವರ್ಷದ ಶಗಿವ್‍ನನ್ನು ಟರ್ಕಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಬಿಡುಗಡೆಗೊಳಿಸುವಂತೆ ಟರ್ಕಿ ನ್ಯಾಯಾಲಯ ಆದೇಶಿಸಿದೆ.