ಆದಿತ್ಯನಾಥ್ ಸರಕಾರದ ದ್ವೇಷಕ್ಕೆ ಕೊನೆಯೇ ಇಲ್ಲವೇ?

Update: 2024-01-20 06:57 GMT

Photo: PTI

ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದರಿಂದಾಗಿ 63 ಮಕ್ಕಳನ್ನು ಬಲಿ ತೆಗೆದುಕೊಂಡ ಉತ್ತರಪ್ರದೇಶದ ಗೋರಖ್‌ಪುರದ ಸರಕಾರಿ ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆ ದುರಂತ ಸಂಭವಿಸಿ ಆರೂವರೆ ವರ್ಷಗಳೇ ಕಳೆದಿವೆ.

2017ರ ಆಗಸ್ಟ್‌ನಲ್ಲಿ ಅಂಥದೊಂದು ಘೋರ ದುರಂತ ಸಂಭವಿಸಿದಾಗ, ಆಸ್ಪತ್ರೆಯಲ್ಲಿದ್ದವರ ಜೀವ ಕಾಪಾಡಲು, ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲು ಸ್ವಂತ ಹಣ ಖರ್ಚು ಮಾಡಿ ಕಾಳಜಿ ಮೆರೆದಿದ್ದ ಡಾ.ಕಫೀಲ್ ಖಾನ್ ಪ್ರಯತ್ನಗಳು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ ದುರಂತವೆಂದರೆ ಹಾಗೆ ದೇಶಾದ್ಯಂತ ಹೀರೋ ಎಂದು ಹೊಗಳಿಸಿಕೊಂಡಿದ್ದ ಅದೇ ಕಫೀಲ್ ಖಾನ್ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರಕ್ಕೆ ಮಾತ್ರ ವಿಲನ್ ಆಗಿ ಕಂಡಿದ್ದರು.

ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಪಾವತಿಸದೆ ಇದ್ದುದರಿಂದ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡು ಈ ದುರಂತ ಸಂಭವಿಸಿದ್ದುದು ಬಯಲಾಗಿತ್ತು.ಆದರೆ ಮಕ್ಕಳ ಪ್ರಾಣ ಉಳಿಸಲು ಹೋರಾಡಿದ್ದ ವೈದ್ಯ ಕಫೀಲ್ ಅವರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿತು ಯುಪಿ ಸರಕಾರ. ಡಾ.ಖಾನ್ ಅವರನ್ನೇ ಆದಿತ್ಯನಾಥ್ ಸರಕಾರ ಕರ್ತವ್ಯ ಲೋಪದ ಆರೋಪದ ಮೇಲೆ ಹುದ್ದೆಯಿಂದ ಕಿತ್ತುಹಾಕಿತ್ತು. ಬಳಿಕ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಿ ಜೈಲಿಗೆ ಕಳಿಸಲಾಯಿತು. 2019ರಲ್ಲಿ ನ್ಯಾಯಾಲಯ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿತು.

ಆದರೆ, ಅವತ್ತು ಡಾ.ಖಾನ್ ವಿರುದ್ಧ ಹಗೆ ಸಾಧಿಸುವುದಕ್ಕೆ ನಿಂತ ಯುಪಿ ಸರಕಾರ ಇವತ್ತಿಗೂ, ಆರೂವರೆ ವರ್ಷಗಳ ನಂತರವೂ ಬಿಡದೆ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ನಿರಂತರ ಕೇಸು ದಾಖಲಿಸುತ್ತಲೇ ಬಂದಿದೆ, ಜೈಲಿಗೆ ಕಳಿಸುತ್ತಲೇ ಬಂದಿದೆ. ಎಂತೆಂತಹ ಅಪರಾಧಿಗಳೆಲ್ಲ ಇದೇ ಆದಿತ್ಯನಾಥ್ ಆಡಳಿತದಲ್ಲಿ ಆರಾಮವಾಗಿರುವಾಗ ಮಕ್ಕಳ ಜೀವ ರಕ್ಷಿಸಲು ಹೋರಾಡಿದ ಹೀರೋನನ್ನು ಅಲ್ಲಿ ಹೀಗೆ ನಡೆಸಿಕೊಳ್ಳಲಾಗುತ್ತಿದೆ.

ಯಾಕಿಂಥ ದ್ವೇಷ ಅದಕ್ಕೆ? ಅವತ್ತು ಸುಳ್ಳು ಆರೋಪ ಹೊರಿಸಿ ಆಸ್ಪತ್ರೆ ದುರಂತ ಪ್ರಕರಣದಲ್ಲಿ ಜೈಲಿಗೆ ಕಳಿಸಿದ್ದ ಕೇಸ್‌ನಿಂದ ಹಿಡಿದು ಈವರೆಗೆ ಡಾ.ಖಾನ್ ವಿರುದ್ಧ ಯುಪಿ ಸರಕಾರ ಆರು ಕೇಸ್‌ಗಳನ್ನು ಹಾಕಿದೆ. 6ನೇ ಎಫ್‌ಐಆರ್ ಖಾನ್ ವಿರುದ್ಧ ದಾಖಲಾದದ್ದು 2023ರ ಡಿಸೆಂಬರ್ 1ರಂದು.

ಇನ್ನೂ ವಿಚಿತ್ರ ವೆಂದರೆ, ಆ ಎಫ್‌ಐಆರ್ ಅವರ ವಿರುದ್ಧ ದಾಖ ಲಾದದ್ದು ಯಾರೋ ಕೆಲವರ ಮಧ್ಯೆ ನಡೆಯಿತೆನ್ನಲಾದ ಸಂಭಾಷಣೆಯ ಬಗ್ಗೆ ಯಾವನೋ ಒಬ್ಬ ಬಂದು ಕೊಟ್ಟ ದೂರನ್ನು ಆಧರಿಸಿ. ಹೇಗೆ ಉತ್ತರ ಪ್ರದೇಶದ ಯುಪಿ ಸರಕಾರ ನೆಪಗಳನ್ನು ಹುಡುಕಿ ಖಾನ್ ಅವರನ್ನು ಕಾಡುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಗೋರಖ್‌ಪುರ ದುರಂತದ ಬಗ್ಗೆ 2021ರಲ್ಲಿ ಖಾನ್ ಬರೆದ ಪುಸ್ತಕದ ವಿಚಾರವೂ ಈ ಪ್ರಕರಣದಲ್ಲಿ ಬರುತ್ತದೆ.

ಯಾರೋ ಕೆಲವರು ಮಾತಾಡಿಕೊಳ್ಳುತ್ತಿದ್ದರು. ಅವರ ಮಾತಿನಲ್ಲಿ ಖಾನ್ ವಿಚಾರವೂ ಬಂದಿತ್ತು. ಖಾನ್ ಗುಪ್ತವಾಗಿ ಪುಸ್ತಕ ಪ್ರಕಟಿಸಿದ್ದು, ಅದನ್ನು ಗುಟ್ಟಾಗಿಯೇ ರಾಜ್ಯಾದ್ಯಂತ ಹಂಚುತ್ತಿದ್ದಾರೆ. ಜನರನ್ನು ಎತ್ತಿಕಟ್ಟಿ, ಹಿಂದೂಗಳ ಸರಕಾರವನ್ನು ಬೀಳಿಸಲು ನೋಡುತ್ತಿದ್ದಾರೆ ಎಂಬುದು ಈಗ ಖಾನ್ ಮೇಲೆ ಯುಪಿ ಪೊಲೀಸರು ಹೊರಿಸಿರುವ ಹೊಸ ಆರೋಪವಾಗಿದೆ.

ಶಾರುಕ್ ಖಾನ್ ನಟನೆಯ ‘ಜವಾನ್’ ಸಿನೆಮಾದಲ್ಲಿ ತಮ್ಮ ನಿಜಬದುಕಿನ ವಿವರಗಳನ್ನೇ ಹೋಲುವ ಪಾತ್ರವನ್ನು ಸೃಷ್ಟಿಸಲಾಗಿದ್ದು, ಅದರಿಂದಾಗಿ ಮತ್ತೆ ಗೋರಖ್‌ಪುರ ದುರಂತ ಗಮನ ಸೆಳೆದ ಹಿನ್ನೆಲೆಯಲ್ಲಿ ಇಂಥದೊಂದು ಕೇಸ್ ಹಾಕಿರುವ ಸಾಧ್ಯತೆ ಇದೆ ಎಂಬುದು ಡಾ.ಖಾನ್ ಅನುಮಾನಿಸಿದ್ದಾರೆ. ಪೊಲೀಸರು ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ 10 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾನೂನುಬಾಹಿರ ಸಭೆ, ರಾಷ್ಟ್ರೀಯ ಒಗ್ಗಟ್ಟಿಗೆ ಧಕ್ಕೆ, ನಕಲಿ ಸಹಿಯನ್ನೇ ಅಸಲಿ ಎಂಬಂತೆ ಬಳಸುವುದು, ಶಾಂತಿ ಭಂಗ ಉಂಟುಮಾಡಲು ನಿಂದನೆ, ತೊಂದರೆ ಉಂಟುಮಾಡುವ ಹೇಳಿಕೆಗಳು, ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಉದ್ದೇಶದಿಂದ ಪದಗಳ ಬಳಕೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶಪೂರಿತ ಕೃತ್ಯಗಳು ಸೇರಿದಂತೆ ಹಲವು ಆಪಾದನೆಗಳನ್ನು ಅವರ ಮೇಲೆ ಹೊರಿಸಲಾಗಿದೆ.

ಲಕ್ನೊ ನಿವಾಸಿ ಮನೀಶ್ ಶುಕ್ಲಾ ಎಂಬ ವ್ಯಕ್ತಿ ಸಲ್ಲಿಸಿದ ದೂರಿನ ಆಧಾರದಲ್ಲಿ ಲಕ್ನೊ ದಕ್ಷಿಣ ಜಿಲ್ಲೆಯ ಕೃಷ್ಣನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಎಫ್‌ಐಆರ್ ಪೊಲೀಸರ ವ್ಯವಸ್ಥಿತ ನಾಟಕ ಎಂಬುದನ್ನೇ ತೋರಿಸುತ್ತದೆ ಎನ್ನುತ್ತಾರೆ ಅದನ್ನು ಗಮನಿಸಿರುವ ವಕೀಲರು.

ರಾಜ್ಯದಲ್ಲಿ ಗಲಭೆ ಉಂಟುಮಾಡಿ ಸರಕಾರ ಬೀಳಿಸಲು ಪುಸ್ತಕವನ್ನು ರಹಸ್ಯವಾಗಿ ಹಂಚಲಾಗುತ್ತಿದೆ ಎಂಬ ಆರೋಪಕ್ಕೂ, ಗೋರಖ್‌ಪುರ ದುರಂತದ ಕುರಿತಾದ ಖಾನ್ ಅವರ ಪುಸ್ತಕದ ವಿಷಯಕ್ಕೂ ಯಾವ ಸಂಬಂಧವೂ ಇಲ್ಲ. ಪೊಲೀಸರು ಹೇಳುತ್ತಿರುವುದು ಒಂದು ಕಟ್ಟುಕಥೆ ಎಂದು ಎಫ್‌ಐಆರ್ ಬಗ್ಗೆ ಆರ್ಟಿಕಲ್ 14 ಡಾಟ್ ಕಾಂ ಪೋರ್ಟಲ್ ಜೊತೆ ಮಾತನಾಡಿರುವ ಸುಪ್ರೀಂ ಕೋರ್ಟ್ ವಕೀಲ ಶಾರುಖ್ ಆಲಂ ಹೇಳಿದ್ದಾರೆ. ಪೊಲೀಸರ ಈ ನಡೆ ಅತಿ ಅಪಾಯಕಾರಿ ಎಂದು ಅವರು ಉಲ್ಲೇಖಿಸಿದ್ದಾರೆ.

ಅತ್ಯಾಚಾರಕ್ಕೊಳಗಾದವರು ಬಂದು ದೂರು ನೀಡಿದರೆ ಕೇಸು ದಾಖಲಿಸಿಕೊಳ್ಳಲು ಸತಾಯಿಸುವ, ಕಾನೂನನ್ನು ತಮಗೆ ಬೇಕಾದ ಹಾಗೆ ಬಳಸಿ ಆಟವಾಡಬಲ್ಲ ಇದೇ ಪೊಲೀಸರು, ಡಾ.ಖಾನ್ ವಿರುದ್ಧ ಮಾತ್ರ ಯಾರೋ ಒಬ್ಬ ಯಾವ ಆಧಾರವೂ ಇಲ್ಲದೆ ನೀಡಿದ ದೂರು ಕೊಟ್ಟ ತಕ್ಷಣವೇ ಒಂದೆರಡಲ್ಲ, 10 ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ಹಾಕಿಬಿಡುತ್ತಾರೆ.

62 ವರ್ಷದ ಕಾಸಿಮ್ ಅಹ್ಮದ್ ಎಂಬವರನ್ನು ನಾಲ್ವರ ಗುಂಪು ಕಾರಿನೊಳಗೆ ಎಳೆದುಕೊಂಡು ಥಳಿಸಿ, ಆತನೊಂದಿಗೆ ತೀರಾ ಅನುಚಿತವಾಗಿ ವರ್ತಿಸಿ, ಕೋಮುವಾದಿ ನಿಂದನೆಗಳನ್ನು ಮಾಡಿದ ಕಳವಳಕಾರಿ ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಲು ಇದೇ ಯುಪಿ ಪೊಲೀಸರು ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿದ್ದರು ಎಂಬುದನ್ನು ವಕೀಲ ಶಾರುಕ್ ಆಲಂ ನೆನಪಿಸುತ್ತಾರೆ. ಅಂಥದೊಂದು ದ್ವೇಷ ಅಪರಾಧದ ವಿಚಾರದಲ್ಲಿ ಪೊಲೀಸರು ತೋರಿದ ನಿರ್ಲಕ್ಷ್ಯದ ಬಗ್ಗೆ ಸುಪ್ರೀಂ ಕೋರ್ಟೇ ವಿಷಾದ ವ್ಯಕ್ತಪಡಿಸಬೇಕಾಗಿ ಬಂದಿತ್ತು.

ಹೇಗೆಲ್ಲ ಪೊಲೀಸರು ಮತ್ತು ಯುಪಿ ಸರಕಾರ ಖಾನ್ ಬೆನ್ನು ಬೀಳುತ್ತಲೇ ಇದೆ ಎಂಬುದನ್ನು ಸ್ವಲ್ಪ ಗಮನಿಸುವುದಾದರೆ,

2017ರ ಗೋರಖ್‌ಪುರ ಆಸ್ಪತ್ರೆ ದುರಂತ ಪ್ರಕರಣದಲ್ಲಿ 2018ರ ಸೆಪ್ಟಂಬರ್ 2ರಂದು ಬಂಧಿಸಲ್ಪಟ್ಟ ಏಳು ತಿಂಗಳ ಬಳಿಕ ಗೋರಖ್‌ಪುರ ಜಿಲ್ಲಾ ಜೈಲಿನಲ್ಲಿದ್ದ ಖಾನ್ ಅವರಿಗೆ 2018ರ ಎಪ್ರಿಲ್ 25ರಂದು ಅಲಹಾಬಾದ್ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು.

ಆದರೆ, ಜಾಮೀನಿನ ಮೇಲೆ ಹೊರಗಿದ್ದಾಗ 2018ರ ಸೆಪ್ಟಂಬರ್ 22ರಂದು, ಬಹ್ರೈಚ್ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿನ ಮಕ್ಕಳ ಸಾವಿನ ತನಿಖೆಗೆ ಹೋಗಿದ್ದ ಅವರನ್ನು ಆಸ್ಪತ್ರೆಗೆ ನುಗ್ಗಿದ ಆರೋಪದ ಮೇಲೆ ಬಂಧಿಸಲಾಯಿತು. ಈ ಎರಡನೇ ಪ್ರಕರಣದಲ್ಲಿ ಜಾಮೀನು ಸಿಗುವ ಹೊತ್ತಿಗೆ 45 ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು.

ಅದರಲ್ಲಿ ಬಿಡುಗಡೆಯಾದ ಒಂದೇ ದಿನದೊಳಗೆ ಅವರನ್ನು ವಂಚನೆಯ ಪ್ರಕರಣದಲ್ಲಿ ಮೂರನೇ ಬಾರಿಗೆ ಬಂಧಿಸಲಾಯಿತು. ಮತ್ತದು ಒಂಭತ್ತು ವರ್ಷಗಳಿಂದ ಬಾಕಿಯಿದ್ದ ಪ್ರಕರಣವಾಗಿತ್ತು.

ಅದಾದ ಬಳಿಕ, 2019ರ ಡಿಸೆಂಬರ್ 12ರಂದು, ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಷಣ ಮತ್ತು ಪ್ರಚೋದನಕಾರಿ ಹೇಳಿಕೆ ಆರೋಪದ ಮೇಲೆ ಖಾನ್ ಅವರನ್ನು ಮತ್ತೆ ಯುಪಿ ಪೊಲೀಸರು ಬಂಧಿಸಿದರು.

2020ರ ಫೆಬ್ರವರಿ 10ರಂದು ಖಾನ್‌ಗೆ ಜಾಮೀನು ಸಿಕ್ಕಿತಾದರೂ, ಮಥುರಾ ಜೈಲಿನಿಂದ ಅವರ ಬಿಡುಗಡೆಯಾಗಲಿಲ್ಲ.

ಮೂರು ದಿನಗಳ ನಂತರ, 2020ರ ಫೆಬ್ರವರಿ 13ರಂದು, ಯಾವುದೇ ಆರೋಪವಿಲ್ಲದೆ 12 ತಿಂಗಳವರೆಗೆ ವಶಕ್ಕೆ ತೆಗೆದುಕೊಳ್ಳಲು ಅವಕಾಶವಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಖಾನ್ ವಿರುದ್ಧ ಅನ್ವಯಿಸಲಾಯಿತು. ಖಾನ್ ಬಿಡುಗಡೆ ಸಾರ್ವಜನಿಕ ಸುವ್ಯವಸ್ಥೆಗೆ ಅಪಾಯಕಾರಿ ಎನ್ನಲಾಯಿತಲ್ಲದೆ, ಬಂಧನ ಆದೇಶವನ್ನು ಎರಡೆರಡು ಬಾರಿ ಮರು ಹೊರಡಿಸಲಾಯಿತು. ಸುಮಾರು ಏಳು ತಿಂಗಳ ಕಾಲ, ಅಂದರೆ 2020ರ ಫೆಬ್ರವರಿ 13ರಿಂದ 2020ರ ಸೆಪ್ಟಂಬರ್ 1ರವರೆಗೆ ಖಾನ್ ಜೈಲಿನಲ್ಲಿರಬೇಕಾಯಿತು.

ಕಡೆಗೆ ಅಲಹಾಬಾದ್ ಹೈಕೋರ್ಟ್ 2019ರ ಡಿಸೆಂಬರ್‌ನಲ್ಲಿ, ಖಾನ್ ಮಾಡಿದರೆನ್ನಲಾದ ಭಾಷಣ ಮತ್ತು ಫೆಬ್ರವರಿ 2020ರಲ್ಲಿ ಎನ್‌ಎಸ್‌ಎ ಅಡಿ ಬಂಧಿಸಿರುವುದರ ನಡುವೆ ಯಾವುದೇ ಸಾಂದರ್ಭಿಕ ಸಂಬಂಧ ಇಲ್ಲವೆಂದು ಗಮನಿಸಿ, ತಕ್ಷಣ ಬಿಡುಗಡೆಗೆ ಆದೇಶಿಸಿತು.

ಅಷ್ಟಾದ ಮೇಲೂ ಸೇಡಿನ ಆಟ ಬಿಟ್ಟುಕೊಡದ ಯುಪಿ ಸರಕಾರ, ಅಲಹಾಬಾದ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಲು ಯತ್ನಿಸಿತ್ತು. ಆದರೆ, 2020ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿತು.

ಇಷ್ಟೆಲ್ಲ ಆಗುವ ಹೊತ್ತಿಗೆ ಖಾನ್ ನಾಲ್ಕು ವರ್ಷಗಳಲ್ಲಿ ಸುಮಾರು 500 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು.

ಮಾರ್ಚ್ 2022ರಲ್ಲಿ, ಡಿಯೋರಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯನ್ನು ಪರೀಕ್ಷಿಸಲು ಆ್ಯಂಬುಲೆನ್ಸ್‌ಗೆ ಬಲವಂತವಾಗಿ ಪ್ರವೇಶಿಸಿದ ಮತ್ತು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಖಾನ್ ವಿರುದ್ಧ 5ನೇ ಎಫ್‌ಐಆರ್ ದಾಖಲಿಸಲಾಗಿತ್ತು.

ಇದಾದ ಬಳಿಕ 2023ರ ಡಿಸೆಂಬರ್ 1ರಂದು ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪ ಹೊರಿಸಿ ದಾಖಲಾಗಿರುವುದು 6ನೇ ಎಫ್‌ಐಆರ್.

ಅತ್ಯಾಚಾರಿಗಳು, ಲೈಂಗಿಕ ಪೀಡಕರು, ಗುಂಪು ಹಲ್ಲೆ, ಹತ್ಯೆ ಆರೋಪಿಗಳು, ದ್ವೇಷ ಭಾಷಣ ಮಾಡುವವರು ರಾಜಾರೋಷವಾಗಿ ತಿರುಗಾಡುವ, ಇನ್‌ಸ್ಪೆಕ್ಟರ್‌ರನ್ನು ಕೊಂದು ಹಾಕಿದ ಗುಂಪು ಹತ್ಯೆ ಆರೋಪಿ ಬಿಜೆಪಿ ವಲಯ ಅಧ್ಯಕ್ಷನಾಗುವ ಯುಪಿಯಲ್ಲಿ ಒಬ್ಬ ಜನಪರ ವೈದ್ಯನ ಮೇಲೆ ಯಾರೋ ಬಂದು ಏನೋ ಹೇಳಿದರೆ ತಕ್ಷಣ ಎಫ್‌ಐಆರ್ ಆಗುತ್ತೆ.

ಆದಿತ್ಯನಾಥ್ ಸರಕಾರದ ದ್ವೇಷಕ್ಕೆ ಕೊನೆಯೇ ಇಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಆರ್. ಕುಮಾರ್

contributor

Similar News