ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಬ ಭ್ರಷ್ಟಕೂಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳ್ಳದಂಧೆಯಲ್ಲಿ ಪಳಗಿದೆ. ಅಶ್ವತ್ಥ ನಾರಾಯಣ್ ಅವರಂತಹ ಪೂಜ್ಯರ ನೇತೃತ್ವದ ಭಾಗ್ಯ ಅದು ಪಡೆದಿತ್ತು. ಪಿಎಸ್ಸೈ ಹಗರಣದ ಸಂದರ್ಭದಲ್ಲಿ ಸಾಕಷ್ಟು ಮಾತನಾಡಿದ ಪ್ರಿಯಾಂಕ್ ಖರ್ಗೆಯವರು ಈಗ ಅಧಿಕಾರ ದಂಡ ಬಳಸಿ ಅತ್ಯುತ್ತಮ ಕೆಲಸ ಮಾಡಬೇಕಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಸಮಗ್ರ ತನಿಖೆಗೆ ಒಳಪಡಿಸಿದರೆ ಕಳ್ಳಾಟಗಳು ಹೊರ ಬರುತ್ತವೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ -ಪ್ರವೇಶ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸುತ್ತಿದೆ. ಈ ಒಎಂಆರ್ ಶೀಟ್ ಪದ್ಧತಿ ರದ್ದು ಮಾಡಬೇಕು. ಕೆ-ಸೆಟ್ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲಾ ಪರೀಕ್ಷೆಗಳು ಆನ್‌ಲೈನ್ ಮೂಲಕ ನಡೆದರೆ ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ.

Update: 2023-11-11 04:35 GMT

Photo: twitter/KEA

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹುಟ್ಟಿನಿಂದಲೇ ಅಕ್ರಮಗಳಿಗೆ ಹೆಸರಾಗಿದೆ. ಆರಂಭದಲ್ಲಿ ಸಿಇಟಿ-ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿದ್ದ ಪರೀಕ್ಷಾ ಪ್ರಾಧಿಕಾರ ಕರ್ನಾಟಕದ ಮಾನ ಮರ್ಯಾದೆಯನ್ನು ಬೀದಿ ಪಾಲು ಮಾಡುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಸಿಇಟಿ-ಪ್ರವೇಶ ಪರೀಕ್ಷೆಗಳನ್ನು ನಡೆಸುವ ಹೊಣೆ ಹೊತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೇಲೆ ಇಂಜಿನಿಯರಿಂಗ್ ಮೆಡಿಕಲ್ ಸೀಟ್ ಬ್ಲಾಕ್ ಮಾಡಿ ಅಕ್ರಮ ಎಸಗಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆಗಲೇ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಶ್ವಾಸಾರ್ಹತೆ ಗಳಿಸಿಕೊಳ್ಳುತ್ತಿತ್ತು. ಸೀಟ್ ಬ್ಲಾಕಿಂಗ್ ಆರೋಪಗಳು ಕೇಳಿ ಬಂದಾಗ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿದ್ದರೆ ಮತ್ತೆಂದೂ ಅಲ್ಲಿ ಅಕ್ರಮಗಳು ಮರುಕಳಿಸುತ್ತಿರಲಿಲ್ಲ. ಸೀಟ್ ಬ್ಲಾಕಿಂಗ್ ದಂಧೆ ಅಬಾಧಿತವಾಗಿ ನಡೆಯತೊಡಗಿತು. ನಾವಿರುವುದೇ ದಂಧೆ ನಡೆಸಲು ಎಂಬ ಮನೋಭಾವ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯಲ್ಲಿ ಮನೆ ಮಾಡಿತು. ಉನ್ನತ ಶಿಕ್ಷಣ ಮಂತ್ರಿ ಸೇರಿದಂತೆ ಆ ವ್ಯವಸ್ಥೆಯ ಭಾಗವಾಗಿರುವ ಎಲ್ಲರಿಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾಮಧೇನು- ಕಲ್ಪವೃಕ್ಷವಾಯಿತು. ಇಂಜಿನಿಯರಿಂಗ್, ಮೆಡಿಕಲ್ ಸೀಟ್ ಬ್ಲಾಕಿಂಗ್‌ನಲ್ಲಿ ಕೋಟಿ ಕೋಟಿ ರೂ. ದುಡಿಯತೊಡಗಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಕ್ರಮಗಳ ಕೂಪ ಎನ್ನುವುದು ಹೆಚ್ಚು ಸುದ್ದಿ ಮಾಡಿದ್ದು 2013ರ ನಂತರ. ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಆರ್.ವಿ. ದೇಶಪಾಂಡೆ ಅವರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿಸಿದರು. ಜೆ.ಎಚ್. ಪಟೇಲ್ ಮತ್ತು ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಕಾಲಾವಧಿಯಲ್ಲಿ ಸತತ 10 ವರ್ಷಗಳ ಕಾಲ ಕೈಗಾರಿಕಾ ಮಂತ್ರಿಯಾಗಿದ್ದ ಆರ್.ವಿ. ದೇಶಪಾಂಡೆ ಅವರಿಗೆ ಉನ್ನತ ಶಿಕ್ಷಣ ಇಲಾಖೆ ಜುಜುಬಿ ಖಾತೆ ಎನಿಸಿತೇನೋ? ಅವರು ಹೆಚ್ಚು ನಿಗಾ ವಹಿಸಲಿಲ್ಲ. ದೇಶಪಾಂಡೆಯವರ ಪಿ.ಎ. ಹನುಮಂತ ಕೊಟಬಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದ. ನಾಲ್ಕು ಕಾಸು ಮಾಡಿಕೊಳ್ಳುವುದು ಆತನ ಇರಾದೆಯಾಗಿತ್ತು. ಕುಲಸಚಿವರ ನೇಮಕಾತಿಯಲ್ಲಿ ಕೊಟಬಾಗಿ ಸಾಕಷ್ಟು ಪೀಕಿದ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಸೀಟ್ ಬ್ಲಾಕಿಂಗ್ ದಂಧೆ ನಡೆಸಿ ಕೊಟಬಾಗಿಗೆ ಟಿಪ್ಸ್ ನೀಡುತ್ತಿದ್ದರು. ಅಷ್ಟಕ್ಕೆ ತೃಪ್ತಿಪಟ್ಟುಕೊಂಡ ಆತ ಅಧಿಕಾರಿಗಳು ಹೇಳಿದ ಹಾಗೆ ಕೆೇಳುತ್ತಿದ್ದ. ಆಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರಿಗೆ ‘ಲಡ್ಡು ಬಂದು ಬಾಯಿಗೆ ಬಿತ್ತು’. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಮೇಲಾಗಿ ಕಾರ್ಯಭಾರ ಜಾಸ್ತಿ ಇದೆ ಎಂಬ ನೆಪ ಮುಂದೆ ಮಾಡಿ ಸರಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹೊಣೆಗಾರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡಲಾಯಿತು. ಆರಂಭದ ದಿನಗಳಲ್ಲಿ ಹುದ್ದೆ ಆಕಾಂಕ್ಷಿಗಳು ಸಂಭ್ರಮ ಪಟ್ಟರು.

ಕರ್ನಾಟಕ ಲೋಕಸೇವಾ ಆಯೋಗವು ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಮೌಖಿಕ ಸಂದರ್ಶನದ ಮೂಲಕ ನಡೆಸುತ್ತಿತ್ತು. ಒಂದು ಹುದ್ದೆಗೆ ಅತಿ ಹೆಚ್ಚು ಅಂಕ ಗಳಿಸಿದ (ಸ್ನಾತ್ತಕೋತ್ತರ ಪದವಿಯಲ್ಲಿ) ಮೂರು ಅಥವಾ ಐದು ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಕರೆಯುತ್ತಿತ್ತು. ನಾಮಕಾವಾಸ್ತೆ ಮೌಖಿಕ ಸಂದರ್ಶನ ನಡೆಸಿ; ಮೂರು ಅಥವಾ ಐದು ಜನ ಅಭ್ಯರ್ಥಿಗಳಲ್ಲಿ ಒಬ್ಬರಿಂದ ಲಂಚ ಪಡೆದು ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ನೀಡಲಾಗುತ್ತಿತ್ತು. ಪರಿಸ್ಥಿತಿ ಹೀಗಿರುವಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸತ್ಯ ಹರಿಶ್ಚಂದ್ರನಂತೆ ಕಂಡಿತು. ಪರೀಕ್ಷಾ ಪ್ರಾಧಿಕಾರ ನಡೆಸುವ ಒಂದು ಪರೀಕ್ಷೆ ಪಾಸ್ ಮಾಡಿದರೆ, ಲಂಚ ಇಲ್ಲದೆ, ಮೌಖಿಕ ಪರೀಕ್ಷೆಯ ಗೊಡವೆ ಇಲ್ಲದೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಗಿಟ್ಟಿಸಿಕೊಳ್ಳಬಹುದಲ್ಲ ಎಂದು ಪ್ರತಿಭಾವಂತ ಅಭ್ಯರ್ಥಿಗಳು ಖುಷಿ ಪಟ್ಟಿದ್ದರು. ಆರಂಭದ ವರ್ಷಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೈಚಳಕವನ್ನು, ಲಂಚದ ಮಹಿಮೆಯನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆ ಸ್ನಾತಕೋತ್ತರ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೂ ಕಬ್ಬಿಣದ ಕಡಲೆ ಎನಿಸ ತೊಡಗಿತು. ದುರಂತವೆಂದರೆ ಕರ್ನಾಟಕ ಲೋಕಸೇವಾ ಆಯೋಗದ 1:3 ಅನುಪಾತದ ಮೌಖಿಕ ಸಂದರ್ಶನಕ್ಕೂ ಅರ್ಹರಲ್ಲದ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಪಾಸ್ ಮಾಡಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಗಿಟ್ಟಿಸಿಕೊಳ್ಳತೊಡಗಿದರು. ಅಷ್ಟು ಹೊತ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯನ್ನು ಹಣ ಕೊಟ್ಟು ಗೆಲ್ಲಬಹುದೆಂಬ ಗುಲ್ಲು ಎಲ್ಲೆಡೆ ಹರಡಿತು. ಒಎಮ್‌ಆರ್ ಶೀಟ್‌ಗಳನ್ನು ಖಾಲಿಬಿಟ್ಟು ಬಂದರೆ ತಾವೇ ತುಂಬಿಕೊಳ್ಳುತ್ತಾರೆಂದೂ, ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಮತ್ತು ಈ ಉತ್ತರಗಳನ್ನು ಸೋರಿಕೆ ಮಾಡುತ್ತಾರೆಂದು ಸುದ್ದಿಯಾಗತೊಡಗಿತು. ಇಷ್ಟಾದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಕ್ರಮ ನಡೆದಿರುವುದನ್ನು ಅಲ್ಲಗಳೆದು ಮುಚ್ಚಿಹಾಕತೊಡಗಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಬುದು ಹುಲ್ಲುಗಾವಲು ಪ್ರದೇಶ ಎಂದು ಮನವರಿಕೆ ಮಾಡಿಕೊಂಡ ಆಗಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ‘ರಾಜ್ಯದ ಎಲ್ಲಾ ವಿವಿಗಳ ಬೋಧಕ ಹುದ್ದೆಗಳನ್ನು’ ಪ್ರಾಧಿಕಾರದಿಂದ ಭರ್ತಿ ಮಾಡಿಕೊಳ್ಳಲು ಯತ್ನಿಸಿದರು. ಹಾಗೆ ಮಾಡಲು ಯುಜಿಸಿ ನಿಯಮಗಳು ಅಡ್ಡಿಯಾದಾಗ ವಿವಿ ಕಾಯ್ದೆಗೇ ತಿದ್ದುಪಡಿ ಮಾಡಲು ಮುಂದಾಗಿದ್ದರು.

2018ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಜಿ.ಟಿ. ದೇವೇಗೌಡರು ಉನ್ನತ ಶಿಕ್ಷಣ ಸಚಿವರಾದರು. ಸಹಕಾರ ಖಾತೆಯ ಆಕಾಂಕ್ಷಿಯಾಗಿದ್ದ ಅವರು ಬೇಜಾರು ಮಾಡಿಕೊಂಡು ಉನ್ನತ ಶಿಕ್ಷಣ ಖಾತೆಯನ್ನು ಮೇಯಲು ಮಗ ಮತ್ತು ಅಳಿಯನಿಗೆ ಬಿಟ್ಟುಕೊಟ್ಟರು. ವಿವಿಗಳ ಬೋಧಕ ಸಿಬ್ಬಂದಿ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ನಡೆಸಬೇಕೆಂಬುದು ಅಲ್ಲಿಯ ಅಧಿಕಾರಿಗಳ ಅಪೇಕ್ಷೆಯಾಗಿತ್ತು. ವಿವಿ ಕುಲಪತಿಗಳು ಭ್ರಷ್ಟರಾಗಿದ್ದಾರೆ; ಲಂಚ ತೆಗೆದುಕೊಂಡು ಆಯ್ಕೆ ಮಾಡುತ್ತಾರೆ. ಪರೀಕ್ಷಾ ಪ್ರಾಧಿಕಾರ ಪಾರದರ್ಶಕವಾಗಿ ಆಯ್ಕೆ ಮಾಡುತ್ತದೆ ಎಂದು ಜಿ.ಟಿ. ದೇವೇಗೌಡರ ಮೂಲಕ ನಂಬಿಸಲು ಯತ್ನಿಸಿದರು. ಡಿಗ್ರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರುಗಳ ನೇಮಕಾತಿಯಲ್ಲಿ ಅಕ್ರಮಗಳು ಅವ್ಯಾಹತವಾಗಿ ನಡೆದಿದ್ದವು. ಆನಂತರ ಬಂದ ಪರಮ ಭ್ರಷ್ಟ ಉನ್ನತ ಶಿಕ್ಷಣ ಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ್ ಕುಲಪತಿ, ಕುಲಸಚಿವ ಮತ್ತು ಡಿಗ್ರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರುಗಳ ನೇಮಕಾತಿಯಲ್ಲಿ ಕೋಟಿ ಕೋಟಿ ಹಣ ಸಂಪಾದಿಸಿದರು. ಅವರೂ ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿಯ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ನಡೆಸಲು ಹರಸಾಹಸ ಮಾಡಿದರು. ಯುಜಿಸಿ ನಿಯಮ ಮೀರಿ ವಿವಿ ಕಾಯ್ದೆಗೆ ತಿದ್ದುಪಡಿತರಲು ಯತ್ನಿಸಿದರು. ಯಶಸ್ಸು ದೊರೆಯಲಿಲ್ಲ. ಕೊನೆಗೆ ಡಿಗ್ರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಒತ್ತು ನೀಡಿದರು. ಲಂಚದ ಮೊತ್ತ ರೂ. 40 ರಿಂದ 50 ಲಕ್ಷದವರೆಗೂ ಹೆಚ್ಚಿಸಿದರು.

ಅಶ್ವತ್ಥ ನಾರಾಯಣ್ ಉನ್ನತ ಶಿಕ್ಷಣ ಮಂತ್ರಿಯಾಗಿದ್ದ ಅವಧಿಯಲ್ಲಿ ಡಿಗ್ರಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳು ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸಿದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸುದ್ದಿ ವ್ಯಾಪಕ ಪ್ರಚಾರ ಪಡೆಯಿತು. ಆಗಲೂ ಮರು ಪರೀಕ್ಷೆ ನಡೆಸಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷಾ ಅಕ್ರಮಗಳ ತನಿಖೆ ನಡೆಯಲೇ ಇಲ್ಲ. ಅಕ್ರಮಗಳನ್ನು ಹೂತು ಹಾಕುವುದನ್ನು ಅಶ್ವತ್ಥ ನಾರಾಯಣ್ ಬಿಬಿಎಂಪಿಯಲ್ಲೇ ಕಲಿತಿದ್ದರು. ಹಣಕೊಟ್ಟವರಿಗೆ ಮಾತ್ರ ಡಿಗ್ರಿ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಹುದ್ದೆ ಎಂಬುದು ಅಶ್ವತ್ಥ ನಾರಾಯಣ್ ಅಘೋಷಿತ ನಿಯಮವಾಗಿತ್ತು. ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ-ಕೀ ಉತ್ತರ ಸೋರಿಕೆ ಮಾಡುವುದು ಒಂದು ವಿಧಾನವಾದರೆ; ಒಎಂಆರ್ ಶೀಟ್ ಖಾಲಿ ಬಿಟ್ಟು ಬರುವುದು ಇನ್ನೊಂದು ವಿಧಾನ. ಹೈಟೆಕ್ ಡಿವೈಸ್‌ಗಳನ್ನು ಬಳಸಿ ಹೊರಗಿನಿಂದ ಅಭ್ಯರ್ಥಿಗಳಿಗೆ ಉತ್ತರ ಹೇಳುವುದು ಸುಧಾರಿತ ವಿಧಾನ. ಒಟ್ಟಿನಲ್ಲಿ ಪರೀಕ್ಷಾ ಅಕ್ರಮ ನಡೆಸಿ ನೌಕರಿಗಿಟ್ಟಿಸುವುದು ಅಶ್ವತ್ಥ ನಾರಾಯಣ್ ಕಳಿಸಿಕೊಟ್ಟ ಅತ್ಯಂತ ಸರಳ ಮಾರ್ಗ. ಇದಕ್ಕೆ ಹೆಚ್ಚು ಅಂಕ, ಪ್ರತಿಭೆಯ ಅಗತ್ಯವಿಲ್ಲ. ಅವರು ನಿಗದಿ ಮಾಡಿದ ಹಣ ಸಂದಾಯ ಮಾಡಿದರೆ ನೌಕರಿ ಗ್ಯಾರಂಟಿ. ಸೋಜಿಗದ ಸಂಗತಿ ಎಂದರೆ ಸರಕಾರ ಬದಲಾಗಿರಬಹುದು ಅಶ್ವತ್ಥ ನಾರಾಯಣ್ ಜಾಗದಲ್ಲಿ ಉನ್ನತ ಶಿಕ್ಷಣ ಮಂತ್ರಿ ಆಗಿ ಡಾ. ಎಂ.ಸಿ. ಸುಧಾಕರ್ ಬಂದಿರಬಹುದು. ಆದರೆ ವ್ಯವಸ್ಥೆ ಮೊದಲಿದ್ದ ಹಾಗೇ ಇದೆ. ಅಶ್ವತ್ಥ ನಾರಾಯಣ್‌ಗೆ ಅತ್ಯಂತ ವಿಧೇಯರಾಗಿರುವ ಅಧಿಕಾರಿಗಳೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಭ್ರಷ್ಟ ವ್ಯವಸ್ಥೆಯನ್ನು ರನ್ ಮಾಡುತ್ತಿದ್ದಾರೆ. ಈ ಒಳಸುಳಿಯನ್ನು ಅರ್ಥಮಾಡಿಕೊಳ್ಳದ ಪ್ರಿಯಾಂಕ್ ಖರ್ಗೆ ಸಮಸ್ಯೆಯನ್ನು ಎಳೆದುಕೊಂಡು ಮೈ ಮೇಲೆ ಹಾಕಿಕೊಳ್ಳುತ್ತಿದ್ದಾರೆ. ಹುತ್ತವ ಬಡಿದರೆ ಹಾವು ಸಾಯುವುದಿಲ್ಲ ಎಂಬ ಸತ್ಯವನ್ನು ಪ್ರಿಯಾಂಕ್ ಮನವರಿಕೆ ಮಾಡಿಕೊಳ್ಳಬೇಕಷ್ಟೇ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಬ ಭ್ರಷ್ಟ ಕೂಟವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವವರೇ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು. ಅವರು ಮಂತ್ರಿಯಾಗಿದ್ದಾಗಲೇ ಮೈಸೂರು ವಿವಿ ನಡೆಸುತ್ತಿದ್ದ ಕೆ-ಸೆಟ್ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿದ್ದರು. ಕಾರಣ: ಮೈಸೂರು ವಿವಿ ಭ್ರಷ್ಟಾಚಾರ ನಡೆಸಿದೆಯೆಂದು. ಕಲಬುರಗಿ- ಯಾದಗಿರಿಯಲ್ಲಿ ಅಕ್ಟೋಬರ್ 28ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್‌ಡಿಎ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮ ಬಟಾಬಯಲಾಗಿದೆ.

ಇದೇ ಜಾಡು ಹಿಡಿದು ಸಮಗ್ರ ತನಿಖೆ ನಡೆಸಿದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಂಡವಾಳ ಬಯಲಾಗುತ್ತದೆ. ವಿವಿಧ ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ 670 ಎಫ್‌ಡಿಎ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಕ್ಟೋಬರ್ 28,29, 2023ರಂದು ಪ್ರವೇಶ ಪರೀಕ್ಷೆ ನಡೆಸಿತ್ತು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿನ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಬ್ಲೂಟೂತ್ ಡಿವೈಸ್ ಬಳಸಿ ಉತ್ತರ ಬರೆಯುತ್ತಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಪಿಎಸ್ಸೈ ನೇಮಕಾತಿ ಅಕ್ರಮದ ಮಾದರಿಯಲ್ಲೇ ವಾಕಿ ಟಾಕಿ ಮತ್ತು ಬ್ಲೂಟೂತ್ ಡಿವೈಸ್, ಅತ್ಯಂತ ಚಿಕ್ಕ ಇಯರ್‌ಪೀಸ್ ಬಳಸಿ ಅಕ್ರಮ ನಡೆಸುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿ ಹಲವರನ್ನು ಬಂಧಿಸಿ ದೂರು ದಾಖಲಿಸಿದ್ದಾರೆ.

ಬಂಧಿತರಲ್ಲಿ; ಪಿಎಸ್ಸೈ ಹಗರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಊರಿನ ಸೊನ್ನದವರು ಇದ್ದಾರೆ. ಅಷ್ಟು ಮಾತ್ರವಲ್ಲ ಬಂಧಿತ ತ್ರಿಮೂರ್ತಿ ಮತ್ತು ಲಕ್ಷ್ಮಿಪುತ್ರ ತಳವಾರ ತಾವು ಆರ್.ಡಿ. ಪಾಟೀಲ್ ಸೂಚನೆಯ ಮೇರೆಗೆ ಅಕ್ರಮ ನಡೆಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಮುಖ್ಯ ಆರೋಪಿ ಆರ್.ಡಿ. ಪಾಟೀಲ್ ಪರಾರಿ ಆಗಿದ್ದಾನೆ. ಅಫಝಲ್‌ಪುರ ತಾಲೂಕಿನ ಸೊನ್ನ ಗ್ರಾಮದ ಆರ್.ಡಿ. ಪಾಟೀಲ್ ಪಿಎಸ್ಸೈ ಅಕ್ರಮದ ಕಿಂಗ್‌ಪಿನ್ ಎಂಬುದು ಜಗಜ್ಜಾಹೀರಾಗಿದೆ. 2021ರಲ್ಲಿ 545 ಪಿಎಸ್ಸೈ ನೇಮಕಾತಿಗೆ ಪ್ರವೇಶ ಪರೀಕ್ಷೆ ನಡೆದಿತ್ತು. ಆರ್.ಡಿ. ಪಾಟೀಲ್ ನೇತೃತ್ವದ ತಂಡ ಅತ್ಯಾಧುನಿಕ ಉಪಕರಣಗಳಾದ ಬ್ಲೂಟೂತ್ ಡಿವೈಸ್, ವಾಕಿ ಟಾಕಿ ನೀಡಿ ವ್ಯವಸ್ಥಿತವಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಎಸೆಗಲು ನೆರವು ನೀಡಿತ್ತು. ಒಟ್ಟು 107 ಜನರ ಬಂಧನವಾಗಿತ್ತು. 23 ಕಡೆ ಪ್ರಕರಣ ದಾಖಲಾಗಿತ್ತು. ಹಗರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಮೇಲೆ ಕಲಬುರ್ಗಿ, ಧಾರವಾಡ, ಬೆಂಗಳೂರು, ತುಮಕೂರಿನಲ್ಲಿ ಪ್ರಕರಣಗಳು ದಾಖಲಾಗಿವೆ. ಆರ್.ಡಿ. ಪಾಟೀಲ್ ಒಬ್ಬನ ಮೇಲೆಯೇ ಎಂಟು ಆರೋಪ ಪಟ್ಟಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ. ಪಿಎಸ್ಸೈ ಹಗರಣದ ಆರಂಭಿಕ ತನಿಖೆ ನಡೆಸಿದ ಸಿಐಡಿ ಪೊಲೀಸರು ಡಿವೈಎಸ್‌ಪಿ ಶಾಂತಕುಮಾರ್ ಹೇಳಿಕೆ ಆಧರಿಸಿ ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ದರ್ಜೆಯ ಅಮೃತ್ ಪಾಲ್ ಅವರನ್ನು ಜುಲೈ 4, 2022ರಂದು ಬಂಧಿಸಿತ್ತು. ಸೆಷನ್ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು ಒಂದು ವರ್ಷ, ಒಂದು ತಿಂಗಳ ನಂತರ ಹೈಕೋರ್ಟ್ ಅಮೃತ್ ಪಾಲ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸರಕಾರ ಪಿಎಸ್ಸೈ ನೇಮಕಾತಿ ಹಗರಣದ ಸಮಗ್ರ ತನಿಖೆ ಗೆಂದು ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಡಿ. ವೀರಪ್ಪ ಅವರ ನೇತೃತ್ವದಲ್ಲಿ ‘ಜ್ಯುಡಿಶಿಯಲ್ ಕಮಿಷನ್’ ಅನ್ನು ನೇಮಿಸಿದೆ. ಅಷ್ಟು ಮಾತ್ರವಲ್ಲ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ 545 ಪಿಎಸ್ಸೈ ಹುದ್ದೆಗಳ ನೇಮಕಾತಿಯನ್ನೇ ರದ್ದುಪಡಿಸಲಾಯಿತು. ಈ ಪ್ರಕರಣದ ವಿರುದ್ಧ ಹೆಚ್ಚು ಮಾತನಾಡಿದವರು ಆಗ ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆ ಅವರು.

ಈಗ ಪ್ರಿಯಾಂಕ್ ಖರ್ಗೆ ಅವರು ಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿದ್ದಾರೆ. ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಐಟಿಬಿಟಿ ಮತ್ತು ಗ್ರಾಮೀಣ ಅಭಿವೃದ್ಧಿ-ಪಂಚಾಯತ್ ರಾಜ್ ನಂತಹ ಮಹತ್ವದ ಖಾತೆಗಳನ್ನು ಹೊಂದಿದ್ದಾರೆ. ಹೊಣೆಗಾರಿಕೆಯಿಂದ ಕೆಲಸ ಮಾಡುವುದು ಅವರ ಪಾಳಿ. ಅವರದೇ ಉಸ್ತುವಾರಿಯ ಕಲಬುರಗಿ ಮತ್ತು ಪಕ್ಕದ ಜಿಲ್ಲೆಯ ಯಾದಗಿರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ಪಿಎಸ್ಸೈ ಮಾದರಿ ಅಕ್ರಮ ನಡೆದಿದ್ದು ಬಿಜೆಪಿಯವರಿಗೆ ಅದರಲ್ಲೂ ಡಾ. ಅಶ್ವತ್ಥ ನಾರಾಯಣ್ ಅವರಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಪರೀಕ್ಷೆ ಶುರುವಾದ ಮೇಲೆ ಅಕ್ರಮ ಬಯಲಾಗಿದೆ. ಬ್ಲೂಟೂತ್ ಡಿವೈಸ್ ಬಳಸಿ ಪರೀಕ್ಷೆ ಬರೆಯುತ್ತಿರುವುದು, ವಾಕಿಟಾಕಿಯಲ್ಲಿ ಉತ್ತರ ಹೇಳುತ್ತಿರುವುದು ಪೊಲೀಸರ ಕಣ್ಣಿಗೆ ಕಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರ ಸೋರಿಕೆಯಾಗಿದ್ದರಿಂದಲೇ ಅಕ್ರಮ ನಡೆದಿದೆ. ಈ ಪ್ರಕರಣದಲ್ಲಿ ಆರ್.ಡಿ. ಪಾಟೀಲ್ ಮಾತ್ರವಲ್ಲ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉನ್ನತ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಪರೀಕ್ಷಾ ಅಕ್ರಮ ನಡೆಯದಂತೆ ನಿಗಾ ವಹಿಸಲು ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳು ಮಂತ್ರಿ ಪ್ರಿಯಾಂಕ್ ಖರ್ಗೆಯವರಿಗೆ ಮೊದಲೇ ಮನವಿ ಮಾಡಿಕೊಂಡಿದ್ದರು. ಝೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವುದು ಮುಂಜಾಗ್ರತಾ ಕ್ರಮದ ಹಳೆಯ ವ್ಯವಸ್ಥೆ. ಮೊಬೈಲ್‌ನಲ್ಲಿ ಪ್ರಶ್ನೆ ಪತ್ರಿಕೆ-ಕೀ ಉತ್ತರ ಸೋರಿಕೆಯಾದ ಕ್ಷಣಾರ್ಧದಲ್ಲಿ ಸಂಬಂಧಪಟ್ಟವರಿಗೆ ತಲುಪಿರುತ್ತದೆ.

ಕಲಬುರಗಿ-ಯಾದಗಿರಿಯಲ್ಲಿ ಪೊಲೀಸರು ಅಕ್ರಮ ಪತ್ತೆಹಚ್ಚಿದ್ದಾರೆ ಅಥವಾ ಅರೆಬರೆ ತರಬೇತಿ ಪಡೆದ ಪರೀಕ್ಷಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಜಾಣರು ಪರೀಕ್ಷೆ ಬರೆದಿರುತ್ತಾರೆ. ಕರ್ನಾಟಕದಾದ್ಯಂತ ಈ ಅಕ್ರಮ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದರಿಂದ ಕಳ್ಳ ವ್ಯವಹಾರ ಬಯಲಿಗೆ ಬರಲಿಕ್ಕಿಲ್ಲ. ಒಂದು ಕಡೆ ಪ್ರಶ್ನೆ ಪತ್ರಿಕೆ-ಕೀ ಉತ್ತರ ಸೋರಿಕೆಯಾದರೆ ಎಲ್ಲಾ ಕಡೆ ಆಗಿದೆ ಎಂದೇ ಅರ್ಥ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳ್ಳದಂಧೆಯಲ್ಲಿ ಪಳಗಿದೆ. ಅಶ್ವತ್ಥ ನಾರಾಯಣ್ ಅವರಂತಹ ಪೂಜ್ಯರ ನೇತೃತ್ವದ ಭಾಗ್ಯ ಅದು ಪಡೆದಿತ್ತು. ಪಿಎಸ್ಸೈ ಹಗರಣದ ಸಂದರ್ಭದಲ್ಲಿ ಸಾಕಷ್ಟು ಮಾತನಾಡಿದ ಪ್ರಿಯಾಂಕ್ ಖರ್ಗೆಯವರು ಈಗ ಅಧಿಕಾರ ದಂಡ ಬಳಸಿ ಅತ್ಯುತ್ತಮ ಕೆಲಸ ಮಾಡಬೇಕಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಸಮಗ್ರ ತನಿಖೆಗೆ ಒಳಪಡಿಸಿದರೆ ಕಳ್ಳಾಟಗಳು ಹೊರ ಬರುತ್ತವೆ.. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ -ಪ್ರವೇಶ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸುತ್ತಿದೆ. ಈ ಒಎಂಆರ್ ಶೀಟ್ ಪದ್ಧತಿ ರದ್ದು ಮಾಡಬೇಕು. ಕೆ-ಸೆಟ್ ಸೇರಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲಾ ಪರೀಕ್ಷೆಗಳು ಆನ್‌ಲೈನ್ ಮೂಲಕ ನಡೆದರೆ ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News