ಪ್ರಜ್ವಲ್ ರೇವಣ್ಣನ ವಿಕೃತಿಗೆ ಕಠಿಣ ಶಿಕ್ಷೆಯೇ ಉತ್ತರ

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಜ್ವಲ್ ರೇವಣ್ಣನ ಈ ವಿಕೃತ ಲೈಂಗಿಕ ಪ್ರಕರಣವನ್ನು ಅಧಿಕಾರ ರಾಜಕಾರಣದಾಚೆ ನಿಂತು ಲಾಭ-ಹಾನಿಯ ಲೆಕ್ಕಾಚಾರ ಮೀರಿ ಕೇವಲ ಮಹಿಳಾ ಗೌರವ, ಸ್ವಾಭಿಮಾನ ಮತ್ತು ಸಂತ್ರಸ್ತೆಯರ ಆಳದ ಸಂಕಟಗಳಿಗೆ ಖಾಯಂ ಪರಿಹಾರ ಕಂಡುಕೊಳ್ಳುವಲ್ಲಿ ಈ ಪ್ರಕರಣ ಮೈಲುಗಲ್ಲಾಗಬೇಕು. ಅಪರಿಮಿತ ಹಣಬಲ, ಅಧಿಕಾರ ಬಲ ಪುರುಷಾಹಂಕಾರದ ಬಲ ಹೊಂದಿರುವ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಎಲ್ಲ ವಲಯದ ವಿಕೃತಕಾಮಿಗಳಿಗೆ ಈ ಪ್ರಕರಣದ ತನಿಖೆ, ನ್ಯಾಯಾಲಯದ ತೀರ್ಪು ತಕ್ಕ ಪಾಠವಾಗಬೇಕು.

Update: 2024-05-11 08:52 GMT

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಎರಡೂ ಹಂತದ ಮತದಾನ ಮುಗಿದಿದೆ. ಚುನಾವಣಾ ಗೆಲುವಿಗೆ ಅಗತ್ಯ ಇರುವಷ್ಟು ಆರೋಪ ಪ್ರತ್ಯಾರೋಪಗಳು ಸಾಕಷ್ಟು ಸುದ್ದಿ ಮಾಡಿದವು. ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹತ್ತಾರು ಪ್ರಕರಣಗಳನ್ನು ಎಷ್ಟು ಸಾಧ್ಯವೋ ಅಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡವು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮುದ್ದಿನ ಮೊಮ್ಮಗ ಸೈಕೋ ಪ್ರಜ್ವಲ್ ರೇವಣ್ಣನ ವಿಕೃತ ಲೈಂಗಿಕ ಹಗರಣ ಮಾತ್ರ ಚುನಾವಣೆ ಮುಗಿದ ಮೇಲೂ ಸದ್ದು ಮಾಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ತಾಣವಾಗಿದ್ದ ನೇಹಾ ಹಿರೇಮಠ್ ಕುಟುಂಬದ ಮನೆ ಈಗ ಬಿಕೋ ಎನ್ನುತ್ತಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ನಂತರವಂತೂ ಆ ಪ್ರಕರಣವನ್ನೂ ಭಾರತೀಯ ಜನತಾ ಪಕ್ಷದವರು ಮರೆತೇ ಬಿಟ್ಟಿರುತ್ತಾರೆ. ಪ್ರಜ್ವಲ್ ರೇವಣ್ಣನ ಲೈಂಗಿಕ ಪ್ರಕರಣದ ಆಳ, ಅಗಲ, ವಿಸ್ತಾರ ವ್ಯಾಪ್ತಿ ದೊಡ್ಡದಿದೆ. ಅಷ್ಟು ಮಾತ್ರವಲ್ಲ; ಈ ಪ್ರಕರಣಕ್ಕಿರುವ ರಾಜಕೀಯ ಆಯಾಮ ಅತ್ಯಂತ ಸಂಕೀರ್ಣವಾಗಿದೆ. ಈ ಪ್ರಕರಣದಿಂದ ದೇವೇಗೌಡ ಕುಟುಂಬದ ವಾರಸುದಾರಿಕೆ ಮತ್ತು ಒಕ್ಕಲಿಗ ಸಮುದಾಯದ ಪಾರುಪತ್ಯ ನಿರ್ಧಾರವಾಗುವ ಸಾಧ್ಯತೆ ಇರುವುದರಿಂದ ಸಂತ್ರಸ್ತೆಯರ ಹಿತಾಸಕ್ತಿ ಮೀರಿ ಬೆಳೆದು ನಿಲ್ಲುತ್ತದೆ. ಮಾಧ್ಯಮಗಳು ಟಿಆರ್‌ಪಿಯ ಇಂಧನವನ್ನಾಗಿ ಬಳಸಿಕೊಳ್ಳುತ್ತಲೇ ಇರುತ್ತವೆ.

ಹಾಗೆ ನೋಡಿದರೆ ಭ್ರಷ್ಟಾಚಾರ, ಕೊಲೆ, ದಂಗೆ, ಸಾವು, ಲೈಂಗಿಕ ಹಗರಣಗಳನ್ನು ವ್ಯಕ್ತಿ ಮತ್ತು ರಾಜಕೀಯ ಪಕ್ಷವನ್ನು ಸಾಧ್ಯವಾದಷ್ಟು ಹಣಿಯಲು ಬಳಸಿಕೊಳ್ಳುವುದು ಅಧಿಕಾರ ರಾಜಕಾರಣದ ಭಾಗವಾಗಿದೆ. ವಿಠಲೇನ ಹಳ್ಳಿ ಗೋಲಿಬಾರ್ ಪ್ರಕರಣವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕನಕಪುರ ಲೋಕಸಭೆಯ ಉಪಚುನಾವಣೆ ಗೆಲ್ಲಲು ಬಳಸಿಕೊಂಡಿದ್ದರು. ಗೋಲಿಬಾರ್‌ನಲ್ಲಿ ಜೀವ ಕಳೆದುಕೊಂಡ ಕುಟುಂಬಗಳ ಪಾಡು ಏನಾಗಿರಬಹುದು ಎಂದು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿಯ ರೈತರ ಮೇಲೆ ಗೋಲಿಬಾರ್ ಮಾಡಲಾಯಿತು. ಸಿದ್ದಲಿಂಗಪ್ಪ ಚೂರಿ ಜೀವ ಕಳೆದುಕೊಂಡರು. ರಾಜಕೀಯವಾಗಿ ದೊಡ್ಡ ಸುದ್ದಿಯಾಯಿತು. ಆಮೇಲೆ ಅದನ್ನು ಎಲ್ಲರೂ ಮರೆತರು. ಹರತಾಳು ಹಾಲಪ್ಪ ರೇಪ್ ಕೇಸ್, ಲಕ್ಷ್ಮಣ ಸವದಿ ಬ್ಲೂ ಫಿಲಂ ವೀಕ್ಷಣೆ, ರಮೇಶ್ ಜಾರಕಿಹೊಳಿ ಸೆಕ್ಸ್ ಸ್ಕ್ಯಾಂಡಲ್-ಹೀಗೆ ನೂರಾರು ಪ್ರಕರಣಗಳನ್ನು ಹೆಸರಿಸಬಹುದು. ಕಾಲಾ ನಂತರ ಎಲ್ಲ ರಾಜಕಾರಣಿಗಳು ಸತ್ಯ ಹರಿಶ್ಚಂದ್ರರಂತೆ ಮಾತನಾಡಲು ಶುರು ಮಾಡುತ್ತಾರೆ. ಭ್ರಷ್ಟಾಚಾರ ಮತ್ತು ಲೈಂಗಿಕ ಹಗರಣಗಳು ಬಹುಪಾಲು ರಾಜಕಾರಣಿಗಳು, ಅಧಿಕಾರಿಗಳ ಬದುಕಿನ ಅವಿಭಾಜ್ಯ ಅಂಗಗಳಾಗಿರುತ್ತವೆ. ಸಿಕ್ಕಿಬಿದ್ದವರು ಸುದ್ದಿಯಾಗಿ ನಾಲ್ಕುದಿನ ಮುಖ ಮುಚ್ಚಿಕೊಂಡು ತಿರುಗಾಡುತ್ತಾರೆ. ಸಿಕ್ಕಿ ಬೀಳದವರು ಕಳಂಕಿತರ ಬಗ್ಗೆ ರೋಚಕವಾಗಿ ಮಾತನಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ನಿಜವಾದ ಅರ್ಥದಲ್ಲಿ ನರಕ ಅನುಭವಿಸುವವರು ಸಂತ್ರಸ್ತ ಮಹಿಳೆಯರು. ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಹರತಾಳು ಹಾಲಪ್ಪ ಮುಂತಾದವರು ತಲೆ ಎತ್ತಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಆಯಾ ಪ್ರಕರಣಗಳ ಸಂತ್ರಸ್ತೆಯರ ಪರಿಸ್ಥಿತಿ ಏನಾಗಿರಬಹುದು?

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಸೇರಿದಂತೆ ಹಲವರು ತಮ್ಮ ಸೀಡಿಗಳನ್ನು ಪ್ರಸಾರ ಮಾಡಬಾರದೆಂದು ನ್ಯಾಯಾಲಯದಿಂದ ತಡೆಯಾಜ್ಞೆಯೇನೋ ತಂದರು. ಆದರೆ ಅನಧಿಕೃತವಾಗಿ ಪ್ರಸಾರವಾಗಿರಲೂ ಬಹುದು. ಆ ಮಹಿಳೆಯರ ಪರಿಸ್ಥಿತಿ ಏನಾಗಿರಬೇಡ? ಕೆಲವೇ ಜನ ಅಧಿಕಾರಿಗಳು, ರಾಜಕಾರಣಿಗಳನ್ನು ಹೊರತುಪಡಿಸಿದರೆ ಬಹುಪಾಲು ಜನರ ಬಗ್ಗೆ ಅವರ ಪಕ್ಷದ ಕಾರ್ಯಕರ್ತರೇ ರಸವತ್ತಾಗಿ ಪ್ರಸಾರ ಮಾಡುತ್ತಿರುತ್ತಾರೆ. ಸೀಡಿ, ಪೆನ್‌ಡ್ರೈವ್‌ಗಳು ರೆಡಿಯಾಗಿದ್ದರೂ ನಾನಾ ಕಾರಣಕ್ಕೆ ಬಿಡುಗಡೆಯಾಗಿರುವುದಿಲ್ಲ. ರಾಜಕೀಯ ವೈಷಮ್ಯ ಮತ್ತಷ್ಟು ಹೆಚ್ಚಾದರೆ ಎಲ್ಲರ ಸೀಡಿ ಮತ್ತು ಪೆನ್‌ಡ್ರೈವ್‌ಗಳು ಹೊರಬರಬಹುದು. ಸಂಸದ ಪ್ರಜ್ವಲ್ ರೇವಣ್ಣನ ವಿಕೃತ ಲೈಂಗಿಕ ಪ್ರಕರಣದಿಂದ ಎಲ್ಲಾ ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಂದು ಕ್ಷಣ ಅಂತರಂಗ ಬಗೆದು ನೋಡಿಕೊಳ್ಳಬೇಕು. ಆಗ ಸತ್ಯದ ವಿರಾಟ್ ರೂಪದ ದರ್ಶನವಾಗುತ್ತದೆ.

ಜೆಡಿಎಸ್ ಮುಖಂಡರಾದ ಎಚ್.ಡಿ, ರೇವಣ್ಣ, ಕುಮಾರಸ್ವಾಮಿ, ಜಿ.ಟಿ. ದೇವೇಗೌಡ, ಸಾರಾ ಮಹೇಶ್ ಸೇರಿದಂತೆ ಎಲ್ಲರೂ ‘‘ಇದೊಂದು ಷಡ್ಯಂತ್ರ. ನಮ್ಮನ್ನು ರಾಜಕೀಯವಾಗಿ ಮುಗಿಸಲು ಡಿ.ಕೆ. ಶಿವಕುಮಾರ್ ಹುನ್ನಾರ ನಡೆಸಿದ್ದಾರೆ’’ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಸುದೀರ್ಘವಾಗಿ ರಾಜಕಾರಣ ಮಾಡುತ್ತಾ ಬಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮುದ್ದಿನ ಮೊಮ್ಮಗನ ವಿಕೃತ ಲೈಂಗಿಕ ಹಗರಣದ ಸೀಡಿ, ಪೆನ್‌ಡ್ರೈವ್ ಲಭ್ಯವಿದ್ದರೆ ಪ್ರತಿಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳಬಹುದು ಎಂಬ ಪರಿಜ್ಞಾನ ಇರಲಿಲ್ಲವೇ? ಇಲ್ಲಿಯವರೆಗೂ ದೇವೇಗೌಡರು ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್‌ನ ಎಲ್ಲಾ ಮುಖಂಡರು ಈ ಪ್ರಕರಣದ ಕುರಿತು ರಾಜಕೀಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆಯೇ ಹೊರತು ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಿಲ್ಲ. ಪ್ರಜ್ವಲ್ ರೇವಣ್ಣನ ವಿಕೃತಿಯನ್ನು ಖಂಡಿಸುವುದು ಮಾತ್ರವಲ್ಲ ಆತನ ಅಪರಾಧಕ್ಕೆ ಕಠಿಣ ಶಿಕ್ಷೆಯಾಗಬೇಕು. ಒಬ್ಬರು ಇಬ್ಬರೊಂದಿಗೆ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದರೆ ಪರಸ್ಪರ ಒಪ್ಪಿತ ಸಂಬಂಧ ಎಂದು ಭಾವಿಸಬಹುದಿತ್ತು. ಆದರೆ ಪ್ರಜ್ವಲ್ ರೇವಣ್ಣ ಹತ್ತಾರು ಮಹಿಳೆಯರೊಂದಿಗೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದು ಸ್ಪಷ್ಟವಾಗುತ್ತದೆ. ರೇವಣ್ಣ ನಿರಂತರ ಮಂತ್ರಿಯಾಗಿದ್ದವರು. ಹಾಸನದಲ್ಲಿ ಅಧಿಕಾರ ಇವರ ಕುಟುಂಬದ ಕೈಯಲ್ಲೇ ಕೇಂದ್ರೀಕೃತವಾಗಿರುವುದರಿಂದ ಸೈಕೋಪಾತ್‌ನಂತಿರುವ ಪ್ರಜ್ವಲ್ ರೇವಣ್ಣ ಹಣಬಲ, ಅಧಿಕಾರ ಬಲದಿಂದ ಅಮಾಯಕ ಮಹಿಳೆಯರನ್ನು ತನ್ನ ವಿಕೃತ ತೃಷೆಗಾಗಿ ಬಳಸಿಕೊಂಡಿದ್ದಾನೆ. ‘‘ನೌಕರಿ ಕೊಡಿಸುತ್ತೇನೆ, ವರ್ಗಾವಣೆ ಮಾಡಿಸುತ್ತೇನೆ’’ ಎಂದು ಹೇಳಿ ಹಾಸಿಗೆಗೆ ಕರೆದರೂ ಅಪರಾಧವೆ.

ಇಂತಹ ನೀಚ ಕೃತ್ಯ ಎಸಗಿರುವ ವಿಕೃತ ಕಾಮಿ ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆ ಸಿಗುವಂತೆ ನೋಡಿಕೊಳ್ಳಬೇಕು. ಮಾನವಂತ ವಕೀಲರ್ಯಾರೂ ಆತನ ಪರ ವಕಾಲತ್ತು ಮಾಡುವುದಿಲ್ಲ. ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆಯ ಹಂತಕ ಫಯಾಝ್ ಬಗ್ಗೆ ಹಿಂದೂಗಳಾಗಲಿ, ಮುಸ್ಲಿಮರಾಗಲಿ ಯಾರು ಅನುಕಂಪ ತೋರಿಸಲಿಲ್ಲ. ಪ್ರಜ್ವಲ್ ರೇವಣ್ಣನ ವಿಕೃತಿ ಅಸಂಖ್ಯಾತ ಅಮಾಯಕ ಮಹಿಳೆಯರ ಸ್ವಾಭಿಮಾನದ ಬದುಕನ್ನು ಕಿತ್ತುಕೊಂಡಿದೆ. ಅವರನ್ನು ತನ್ನ ವಿಕೃತ ಲೈಂಗಿಕ ತೃಷೆಗಾಗಿ ಬಳಸಿಕೊಂಡಿದ್ದಲ್ಲದೆ ಅದನ್ನು ರೆಕಾರ್ಡ್ ಮಾಡಿಕೊಳ್ಳುವ ಮೂಲಕ ಅವರ ಗೌರವಕ್ಕೆ ಧಕ್ಕೆ ತಂದಿದ್ದಾನೆ. ಹಂಚಲಾದ ಪೆನ್‌ಡ್ರೈವ್‌ಗಳ ಸಂಖ್ಯೆ ಮತ್ತು ಬಲಿಪಶುವಾದ ಸಂತ್ರಸ್ತೆಯರ ಸಂಖ್ಯೆಯ ಬಗ್ಗೆ ಅತಿಶಯದ ಸುದ್ದಿಗಳು ಬಿತ್ತರಗೊಳ್ಳುತ್ತಿವೆ. ವಿಶೇಷ ತನಿಖಾ ತಂಡ ಈ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೆ ನೈಜ ಸಂಖ್ಯೆ ಹೊರ ಬರುತ್ತದೆ. ಪ್ರಜ್ವಲ್ ರೇವಣ್ಣನ ವಿಕೃತಿಯ ತೀವ್ರತೆ ಈಗ ಲಭ್ಯವಿರುವ ಮಾಹಿತಿಯಿಂದಲೇ ಸ್ಪಷ್ಟವಾಗುತ್ತದೆ. ಕರ್ನಾಟಕ ಸರಕಾರ, ವಿಶೇಷವಾಗಿ ವಿಕೃತಕಾಮಿ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗೆಂದು ನಿಯೋಜಿತಗೊಂಡಿರುವ ವಿಶೇಷ ತನಿಖಾ ತಂಡ ಸಂತ್ರಸ್ತ ಮಹಿಳೆಯರ ರಕ್ಷಣೆಗೆ ನಿಗಾವಹಿಸಬೇಕು. ಅಷ್ಟು ಮಾತ್ರವಲ್ಲ; ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ತಮ್ಮ ಜೀವಕ್ಕೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಮಾನಸಿಕ ತಜ್ಞರ ನೆರವು ಪಡೆದು ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಸಾಕಷ್ಟು ಪೆನ್‌ಡ್ರೈವ್‌ಗಳು ಹಂಚಿಕೆಯಾಗಿರುವುದರಿಂದ ಸಂತ್ರಸ್ತ ಮಹಿಳೆಯರು ಮತ್ತು ಕುಟುಂಬ ವರ್ಗದವರು ತಲೆತಗ್ಗಿಸಿ ನಡೆಯುವ ಸಂದರ್ಭಗಳು ಎದುರಾಗುತ್ತವೆ. ಸಂತ್ರಸ್ತ ಮಹಿಳೆಯರನ್ನು ಮಾನಸಿಕ ಒತ್ತಡಗಳಿಂದ ರಕ್ಷಿಸುವಂತಾಗಬೇಕು. ಪ್ರಜ್ವಲ್ ತಂದೆ ಎಚ್.ಡಿ. ರೇವಣ್ಣನವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಲೈಂಗಿಕ ಹಗರಣದ ರೂವಾರಿ ವಿಕೃತಕಾಮಿ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ತೆಗೆದುಕೊಂಡಾಗ ಮಾತ್ರ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತದೆ ಮತ್ತು ವೇಗ ಪಡೆದುಕೊಳ್ಳುತ್ತದೆ. ಪ್ರಜ್ವಲ್‌ನನ್ನು ವಿಚಾರಣೆಗೆ ಒಳಪಡಿಸಿ ಸಮಸ್ತ ಮಾಹಿತಿ ಕಲೆ ಹಾಕುವುದು ಒಂದು ಬಗೆ, ಪೆನ್‌ಡ್ರೈವ್‌ಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಿ ಸಂತ್ರಸ್ತೆಯರ ಖಾಸಗಿ ಬದುಕಿನ ಗೌರವಕ್ಕೆ ಚ್ಯುತಿ ತಂದ ದುರುಳರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗುವಂತೆಯೂ ಮಾಡಬೇಕಿದೆ. ವಿಕೃತಕಾಮಿ ಪ್ರಜ್ವಲ್ ರೇವಣ್ಣನ ಕಾರ್ ಡ್ರೈವರ್ ಕಾರ್ತಿಕ್ ನನ್ನೂ ಪತ್ತೆಹಚ್ಚಿ ವಿಚಾರಣೆ ನಡೆಸಬೇಕಾಗಿದೆ. ಸಂತ್ರಸ್ತ ಮಹಿಳೆಯರ ಅಳಲಿಗೆ ಸ್ಪಂದನೆ ಮತ್ತು ಪುರುಷಾಹಂಕಾರದ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನಿಗೆ ಕಠಿಣ ಶಿಕ್ಷೆಯಾಗುವುದು ಬಹಳ ಮುಖ್ಯ. ರೇವಣ್ಣ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಎಲ್.ಆರ್. ಶಿವರಾಮೇಗೌಡ, ದೇವರಾಜೇ ಗೌಡ, ಶ್ರೇಯಸ್ ಪಟೇಲರ ರಾಜಕೀಯ ಮೇಲಾಟಗಳನ್ನು ಗೌಣವಾಗಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರಜ್ವಲ್ ರೇವಣ್ಣನ ಈ ವಿಕೃತ ಲೈಂಗಿಕ ಪ್ರಕರಣವನ್ನು ಅಧಿಕಾರ ರಾಜಕಾರಣದಾಚೆ ನಿಂತು ಲಾಭ-ಹಾನಿಯ ಲೆಕ್ಕಾಚಾರ ಮೀರಿ ಕೇವಲ ಮಹಿಳಾ ಗೌರವ, ಸ್ವಾಭಿಮಾನ ಮತ್ತು ಸಂತ್ರಸ್ತೆಯರ ಆಳದ ಸಂಕಟಗಳಿಗೆ ಖಾಯಂ ಪರಿಹಾರ ಕಂಡುಕೊಳ್ಳುವಲ್ಲಿ ಈ ಪ್ರಕರಣ ಮೈಲುಗಲ್ಲಾಗಬೇಕು. ಅಪರಿಮಿತ ಹಣಬಲ, ಅಧಿಕಾರ ಬಲ ಪುರುಷಾಹಂಕಾರದ ಬಲ ಹೊಂದಿರುವ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಎಲ್ಲ ವಲಯದ ವಿಕೃತಕಾಮಿಗಳಿಗೆ ಈ ಪ್ರಕರಣದ ತನಿಖೆ, ನ್ಯಾಯಾಲಯದ ತೀರ್ಪು ತಕ್ಕ ಪಾಠವಾಗಬೇಕು.

ಮಹಿಳೆಯರನ್ನು ಬಲವಂತದಿಂದ ತಮ್ಮ ಲೈಂಗಿಕ ತೃಷೆಗಾಗಿ ಕೇವಲ ರಾಜಕಾರಣಿಗಳು, ಅಧಿಕಾರಿಗಳು ಬಳಸಿಕೊಳ್ಳುತ್ತಾರೆ ಎಂದು ಸಾಮಾನ್ಯೀಕರಿಸುವ ಹಾಗಿಲ್ಲ. ಎಲ್ಲೆಲ್ಲಿ ಅಧಿಕಾರ ಬಲ, ಹಣಬಲ ಮತ್ತು ಪುರುಷಾಹಂಕಾರದ ವಿಕೃತಿ ನೆಲೆ ನಿಂತಿರುತ್ತದೆಯೋ ಅಲ್ಲೆಲ್ಲ ಅಸಹಾಯಕ, ಅಮಾಯಕ ಮಹಿಳೆಯರು ಬಲವಂತದಿಂದ ಲೈಂಗಿಕ ತೃಷೆಗೆ ಬಳಕೆಯಾಗುತ್ತಾರೆ. ಕಾರ್ಪೊರೇಟ್ ವಲಯದಲ್ಲೂ ಇಂತಹ ವಿಕೃತಿಗಳು ಕಾಣಿಸಿಕೊಳ್ಳುತ್ತವೆಯಾದರೂ ಪ್ರತಿರೋಧ ವ್ಯಕ್ತಪಡಿಸಲು, ಪ್ರತಿಭಟಿಸಿ ಹೊರಬರಲು ಸಾಕಷ್ಟು ಅವಕಾಶಗಳಿರುತ್ತವೆ. ಸರಕಾರಿ ಕಚೇರಿಗಳು, ಶಾಲಾ-ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲೂ ಮಹಿಳಾ ಶೋಷಣೆ ನಡೆಯುತ್ತಿರುತ್ತದೆ. ಅಲ್ಲೆಲ್ಲ ಮಹಿಳಾ ಕೋಶಗಳು ನೆಪಕ್ಕಾದರೂ ಕ್ರಿಯಾಶೀಲವಾಗಿರುತ್ತವೆ. ಕಿರುಕುಳದಿಂದ ತಪ್ಪಿಸಿಕೊಳ್ಳಲು ವರ್ಗಾವಣೆಯ ಅವಕಾಶವಾದರೂ ಇರುತ್ತದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು, ಸಣ್ಣಪುಟ್ಟ ಖಾಸಗಿ ಔದ್ಯಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಬದುಕಿನ ಅನಿವಾರ್ಯತೆಗಾಗಿ ವಿಕೃತಕಾಮಿಗಳ ವಿಲಾಸಕ್ಕೆ ಬಲಿಯಾಗುತ್ತಲೇ ಇರುತ್ತಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿಕೃತ ಲೈಂಗಿಕ ಹಗರಣಗಳು ಅಧಿಕಾರದ ಮೇಲಾಟಕ್ಕಾದರೂ ಆಗೀಗ ಹೊರಬರುತ್ತವೆ, ಸುದ್ದಿಯಾಗುತ್ತವೆ. ಆದರೆ ಇನ್ನಿತರ ವಲಯಗಳಲ್ಲಿ ಸಂಭವಿಸುವ ಮಹಿಳಾ ಶೋಷಣೆಯ ಘಟನೆಗಳು ಹೊರಬೀಳುವುದಿಲ್ಲ. ಮಾಧ್ಯಮಗಳು ಮಹಿಳಾಪರ ಕಾಳಜಿಯ ಕಾರಣಕ್ಕೆ ಇಂತಹ ಪ್ರಕರಣಗಳನ್ನು ಸುದ್ದಿ ಮಾಡುವುದಿಲ್ಲ. ಟಿಆರ್‌ಪಿ ಮತ್ತು ರಾಜಕೀಯ ಕಾರಣಕ್ಕೆ ಸುದ್ದಿಯಾಗುತ್ತವೆ.

ಚಿತ್ರದುರ್ಗದ ಮುರುಘಾ ಶರಣರ ಪ್ರಕರಣವನ್ನೇ ತೆಗೆದುಕೊಳ್ಳಿ. ಮುರುಘಾ ಶರಣರು ಅಲ್ಲಿಯ ಶಾಲಾ-ಕಾಲೇಜುಗಳ ಮಹಿಳಾ ಸಿಬ್ಬಂದಿಯನ್ನು ತಮ್ಮ ಮೇಲೆ ವಿಕೃತ ಲೈಂಗಿಕ ತೆವಲಿಗೆ ಬಲವಂತದಿಂದ ಬಳಸಿಕೊಳ್ಳುತ್ತಿದ್ದಾರೆ ಎಂಬ ಗಾಳಿಸುದ್ದಿಗಳಿದ್ದವು. ಆಡಳಿತಾಧಿಕಾರಿ ಬಸವರಾಜನ್, ಆತನ ಹೆಂಡತಿ ಸೌಭಾಗ್ಯ ಮತ್ತು ಸ್ವಾಮೀಜಿ ನಡುವಿನ ಅಧಿಕಾರದ ಮೇಲಾಟದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲಾಗುವ ವಿಕೃತ ಲೈಂಗಿಕ ಶೋಷಣೆ ಪ್ರಕರಣ ಆಕಸ್ಮಿಕವಾಗಿ ಬೆಳಕಿಗೆ ಬಂತು. ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಅಲ್ಲಿಯವರೆಗೂ ಮುರುಘಾ ಶರಣರು ಸನ್ಯಾಸಿಯ ವೇಷ ಧರಿಸಿ ಪೂಜನೀಯ ಎನಿಸಿಕೊಂಡಿದ್ದರು. ಅಧಿಕಾರ ಬಲ, ಹಣಬಲದಿಂದ ಮಾಧ್ಯಮ ಬಲವನ್ನು ತಮ್ಮದಾಗಿಸಿಕೊಂಡಿದ್ದರು. ಮುರುಘಾ ಮಠದಂತಹ ಪ್ರಶ್ನಾತೀತ ಅಧಿಕಾರ ಬಲ ಹೊಂದಿರುವಂತಹ ನೂರಾರು ಮಠ ಮಾನ್ಯಗಳಿವೆ. ಖಾಯಂ ಅಧ್ಯಕ್ಷರನ್ನು ಹೊಂದಿರುವ ನೂರಾರು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ನೇಮಕ ಮಾಡಿಕೊಳ್ಳುವುದರಿಂದ ಹಿಡಿದು ಶಿಕ್ಷೆ ನೀಡುವ ಎಲ್ಲಾ ಅಧಿಕಾರವೂ ಅಧ್ಯಕ್ಷರ ಕೈಯಲ್ಲೇ ಇರುತ್ತದೆ. ಮಹಿಳೆಯರನ್ನು ಆಟದ ಗೊಂಬೆಯಂತೆ ಬಳಸಿಕೊಳ್ಳುತ್ತಿರುತ್ತಾರೆ. ಅಪರಿಮಿತ ಅಧಿಕಾರ ಬಲ, ಹಣಬಲ ಅವರಲ್ಲಿನ ವಿಕೃತಿಗೆ ಬಲ ನೀಡುತ್ತವೆ. ಸಂತ್ರಸ್ತೆಯರು ಒಂದು ನೌಕರಿ ಎಂಬ ಬದುಕಿನ ಆಸರೆಗಾಗಿ ಎಲ್ಲವನ್ನು ಸಹಿಸಿಕೊಂಡು ಇರುತ್ತಾರೆ. ಎಲ್ಲರೂ ವಿಕೃತಕಾಮಿಗಳಾಗಿರುತ್ತಾರೆ ಎಂದು ಹೇಳುವುದು ಉಚಿತವೆನಿಸಲಾರದು. ಆದರೆ ಅಪರಿಮಿತ ಅಧಿಕಾರ ಬಲ, ಹಣಬಲ ಕೇಂದ್ರೀಕೃತವಾದಲ್ಲಿ ವಿಕೃತಿಗೆ ಆನೆ ಬಲ ಬರುವುದಂತೂ ನಿಜ.

ಸಂಸದ ಪ್ರಜ್ವಲ್ ರೇವಣ್ಣನ ವಿಕೃತಿಗೆ ಬಲ ದೊರೆತಿದ್ದೇ ಅಜ್ಜನ ಅಧಿಕಾರ ಬಲ, ಅಪ್ಪ ರೇವಣ್ಣರ ಪುತ್ರ ವ್ಯಾಮೋಹದ ಬಲ, ತಾಯಿ ಭವಾನಿ ರೇವಣ್ಣ ಅವರ ಮಿತಿಮೀರಿದ ದುರಹಂಕಾರದಿಂದ. ಪುರುಷಾಹಂಕಾರವನ್ನು ನಿರಂತರವಾಗಿ ಪೋಷಿಸಿದ ದೇವೇಗೌಡ ಕುಟುಂಬದ ಸಂಸ್ಕಾರವೇ ಆತನ ವಿಕೃತಿಗೆ ಬಲ ನೀಡಿದೆ. ಹಿರಿಯರೊಂದಿಗೆ, ಮಹಿಳೆಯರೊಂದಿಗೆ ಪ್ರಜ್ವಲ್ ರೇವಣ್ಣ ಅಸಭ್ಯವಾಗಿ ನಡೆದುಕೊಂಡಾಗ ಕಪಾಳಕ್ಕೆ ನಾಲ್ಕು ಬಾರಿಸಿ ಬುದ್ಧಿ ಕಲಿಸಿದ್ದರೆ ಆತನಲ್ಲಿನ ವಿಕೃತಿ ಇಷ್ಟು ವಿಕಾರವಾಗಿ ಬೆಳೆದು ನಿಲ್ಲುತ್ತಿರಲಿಲ್ಲ. ಹಣಬಲ, ಅಧಿಕಾರ ಬಲ, ಪುಂಡಾಟಿಕೆಗೆ ಅಪ್ಪ-ಅಮ್ಮನ ಬೆಂಬಲ ಇದ್ದರೆ ಪ್ರಜ್ವಲ್ ರೇವಣ್ಣ ವಿಕೃತಕಾಮಿಯೇ ಆಗುತ್ತಾನೆ. ‘ಮಗ, ಮೊಮ್ಮಗ ತಪ್ಪು ಮಾಡಿದರೆ ರಾಜಕೀಯ ವಿರೋಧಿಗಳು ಸುಮ್ಮನೆ ಬಿಡಲಾರರು’ ಎಂಬ ಪರಿಜ್ಞಾನ ಇಲ್ಲದೆ ದೇವೇಗೌಡರು ಕುಟುಂಬ ವ್ಯಾಮೋಹ ತೋರಿದರೆ ‘ಮಾಡಿದ್ದುಣ್ಣೋ ಮಾರಾಯ’ ಎನ್ನಬೇಕಾಗುತ್ತದೆ. ತಮ್ಮ ರಾಜಕೀಯ ವಿರೋಧಿಗಳ ಹಗರಣ ಬಯಲಿಗೆ ಬಂದಾಗ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅಷ್ಟೇ ಯಾಕೆ ಪ್ರಜ್ವಲ್ ರೇವಣ್ಣ ಕೂಡ ಅದೇ ಮಾಡುತ್ತಿದ್ದರು. ದೇವೇಗೌಡರಂತಹ ಹಿರಿಯರು ಸಂತ್ರಸ್ತ ಮಹಿಳೆಯರ ಆತ್ಮ ಗೌರವದ ಬಗ್ಗೆ ಆಲೋಚಿಸಬೇಕು. ಅಸಹಾಯಕರನ್ನು ತನ್ನ ವಿಕೃತಿಗೆ ಬಳಸಿಕೊಂಡ ಪ್ರಜ್ವಲ್ ರೇವಣ್ಣನ ನೀಚತನದ ಕುರಿತು ಆಕ್ರೋಶಭರಿತ ರಾಗಬೇಕು. ಅದು ಜನತಂತ್ರದ ಸಾರ್ಥಕ ನಡಿಗೆ.

ವಿಕೃತಕಾಮಿ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣ ಪುರುಷಾಹಂಕಾರಕ್ಕೆ ಹಿಡಿದ ಕನ್ನಡಿಯಾಗಿದೆ. ಆ ಪುರುಷಾಹಂಕಾರಕ್ಕೆ ಕಠಿಣಾತಿ ಕಠಿಣ ಶಿಕ್ಷೆ ನೀಡಿದಾಗ ಮಾತ್ರ ಇಂತಹ ಕೃತ್ಯಕ್ಕೆ ಯಾರೂ ಮನಸ್ಸು ಮಾಡಲಾರರು. ಕರ್ನಾಟಕ ಸರಕಾರ ಈ ಪ್ರಕರಣದಲ್ಲಿ ನಿಷ್ಠುರವಾಗಿ ನಡೆದುಕೊಳ್ಳುವ ಮೂಲಕ ವಿಕೃತಕಾಮಿ ಪ್ರಜ್ವಲ್ ರೇವಣ್ಣನಂತಹವರ ಹುಟ್ಟಡಗಿಸಬೇಕು. ಪೆನ್‌ಡ್ರೈವ್ ಹಂಚಿದವರು, ಅದನ್ನು ನೋಡಿ ಜೊಲ್ಲು ಸುರಿಸಿದವರು ಸಮಾನ ವಿಕೃತಿಗಳೇ. ಸಂತ್ರಸ್ತ ಮಹಿಳೆಯರಲ್ಲಿ ಅಕ್ಕ, ತಂಗಿ, ಮಗಳನ್ನು ಕಾಣುವ ಮನಸ್ಸುಗಳು ಮಾತ್ರ ಪಕ್ಷಾತೀತವಾಗಿ ವಿಕೃತಕಾಮಿ ಪ್ರಜ್ವಲ್ ಗೆ ಕಠಿಣ ಶಿಕ್ಷೆ ಬಯಸುತ್ತವೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News