ಬಿಜೆಪಿಯೊಳಗೆ ಬೂದಿ ಮುಚ್ಚಿದ ಕೆಂಡ

ಚುನಾವಣೆ ಮುಗಿದು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಒಳ ಹೊಡೆತಗಳ ಹೊರತಾಗಿಯೂ 17 ಸೀಟುಗಳನ್ನು ಗೆಲ್ಲಿಸಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್‌ನಿಂದ ಶಹಬ್ಬಾಸ್‌ಗಿರಿ ನಿರೀಕ್ಷಿಸಿದ್ದರು. ಆದರೆ ಮೋದಿ ಅಮಿತ್-ಶಾ ಜೋಡಿ ಮತ್ತೆ ಸಂತೋಷ್ ಬಣಕ್ಕೆ ಮಣೆ ಹಾಕುವ ಮೂಲಕ ಶಾಕ್ ನೀಡಿದೆ. ವಿ. ಸೋಮಣ್ಣ ಅವರನ್ನು ರೈಲ್ವೆ ಮತ್ತು ಜಲಶಕ್ತಿ ಸಹಾಯಕ ಸಚಿವರನ್ನಾಗಿಸಿದ್ದು ಬಿಎಸ್‌ವೈ ಬಣಕ್ಕೆ ನುಂಗಲಾರದ ತುತ್ತಾಗಿದೆ. ಸಂತೋಷ್ ಬಣ ಮತ್ತೆ ಕ್ರಿಯಾಶೀಲವಾಗಿದ್ದು ನೋಡಿದರೆ ವಿಜಯೇಂದ್ರ ಸ್ಥಾನಕ್ಕೂ ಕುತ್ತು ಒದಗಿ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಬಳಸಿ ಬಿಸಾಡುವುದು ಬಿಜೆಪಿಗೆ ಹೊಸದೇನಲ್ಲ

Update: 2024-06-22 05:16 GMT

ಕರ್ನಾಟಕದ ಬಿಜೆಪಿಯೊಳಗೆ All is not well in BJP ಎನ್ನುವುದು ಮತ್ತೊಮ್ಮೆ ಬಯಲಾಗಿದೆ. ಅಷ್ಟು ಮಾತ್ರವಲ್ಲ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ ಎಂಬುದಕ್ಕೆ ಸ್ಪಷ್ಟ ಸಂಕೇತಗಳು ಗೋಚರಿಸುತ್ತಿವೆ. ಕರ್ನಾಟಕದ ಲೋಕಸಭೆಯ ಚುನಾವಣಾ ಸಂದರ್ಭದಲ್ಲಿ ಬಿಎಸ್‌ವೈ ವಿರೋಧಿ ಬಣದ ನೇತಾರ ಬಿ.ಎಲ್. ಸಂತೋಷ್ ಅವರನ್ನು ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರಚಾರದ ಎಲ್ಲಾ ಹಂತಗಳಲ್ಲಿ ದೂರ ಇಟ್ಟಂತೆ ಹೈಕಮಾಂಡ್ ಬಿಂಬಿಸಿತೇ ಹೊರತು ಅವರ ತೆರೆಮರೆಯ ಆಟಕ್ಕೆ ಬ್ರೇಕ್ ಹಾಕಲೇ ಇಲ್ಲ. ನೇತಾರ ಎಲ್ಲೂ ಕಾಣಿಸಿಕೊಳ್ಳಲಿಲ್ಲವಾದರೂ ಅವರ ಪ್ರಭಾವಳಿ ಮತ್ತು ನೇತ್ಯಾತ್ಮಕ ಶಕ್ತಿ ಎಲ್ಲೆಡೆ ಕ್ರಿಯಾಶೀಲವಾಗಿತ್ತು. ಹಾಗೆ ನೋಡಿದರೆ ಬಿ.ಎಲ್. ಸಂತೋಷ್ ಅವರಿಗೆ ಬಹುದೊಡ್ಡ ಮಟ್ಟದಲ್ಲಿ ಮತಗಳ ಪರಿವರ್ತನೆ ಮಾಡುವ ಶಕ್ತಿ ಇಲ್ಲ. ಆದರೆ ಅವರ ಸೀಮಿತ ಶಕ್ತಿ ಬಳಸಿಕೊಂಡು ಆಟ ಕೆಡಿಸುವ ಶಕ್ತಿ ಇದೆ. ಅವರ ಒಂದಷ್ಟು ಅನುಯಾಯಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರೂ ಅವರ ಮನದಾಳದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲೇಬಾರದು ಎಂಬ ಇರಾದೆ ಇತ್ತು. ಬಿ.ಎಸ್. ಯಡಿಯೂರಪ್ಪ ಮತ್ತವರ ಮಗ ವಿಜಯೇಂದ್ರ ಅವರ ಆಟಾಟೋಪಕ್ಕೆ ಕಡಿವಾಣ ಹಾಕಲು ಬಿಜೆಪಿಯೊಳಗಿನ ಅವರ ವಿರೋಧಿ ಬಣ ಶಕ್ತಿಮೀರಿ ಶ್ರಮಿಸಿತು. ಕಾಂಗ್ರೆಸ್‌ನವರ ಹೊಣೆಗೇಡಿ ತಂತ್ರಗಾರಿಕೆಯಿಂದ ಸಂಪೂರ್ಣ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಬಿಎಸ್‌ವೈ ವಿರೋಧಿ ಬಣಕ್ಕೆ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಗೆಲ್ಲಲೇಬಾರದು ಮತ್ತು ಕರ್ನಾಟಕದಲ್ಲಿ ಬಿಜೆಪಿಗೆ ನಾಲ್ಕೈದು ಸ್ಥಾನಗಳಲ್ಲಿ ಮಾತ್ರ ಗೆಲುವು ಸಿಗಬೇಕು ಎಂಬ ಗುರಿ ಇಟ್ಟುಕೊಂಡೇ ಒಳ ಹೊಡೆತ ಮತ್ತು ಹೊರಹೊಡೆತ ಎರಡೂ ಕೊಟ್ಟಿತು. ಈ ಚುನಾವಣೆಯಲ್ಲಿ ಬಿ.ಎಲ್. ಸಂತೋಷ್ ಅವರ ಡಾರ್ಲಿಂಗ್ ಮೀಡಿಯಾ ಮಂದಿ ಸಂಪೂರ್ಣವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡಿದರು. ಆ ಶಕ್ತಿಯನ್ನೂ ಕಾಂಗ್ರೆಸ್‌ನವರು ಸದುಪಯೋಗ ಮಾಡಿಕೊಳ್ಳಲಿಲ್ಲ. ಕರ್ನಾಟಕದ ಆರೆಸ್ಸೆಸ್ ಕೇಡರ್ ಚುನಾವಣಾ ಪ್ರಚಾರದಿಂದ ದೂರ ಉಳಿಯಿತು.

ಬಿಎಸ್‌ವೈ ವಿರೋಧಿ ಬಣಕ್ಕೆ ಚಿಕ್ಕೋಡಿಯಲ್ಲಿ ಶಶಿಕಲಾ ಜೊಲ್ಲೆ, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ, ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಕಲಬುರ್ಗಿಯಲ್ಲಿ ಉಮೇಶ್ ಜಾದವ್ ಮಾತ್ರ ಗೆಲ್ಲಬೇಕಿತ್ತು. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಯಾವ ಕಾರಣಕ್ಕೂ ಗೆಲ್ಲಬಾರದೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಹಲವರು ಎಲ್ಲ ದೇವರಿಗೆ ಹರಕೆ ಹೊತ್ತಿದ್ದರು. ಶೆಟ್ಟರ್ ಅವರನ್ನು ಅಕ್ಷರಶಃ ಗೆಲ್ಲಿಸಿದ್ದು ಯಡಿಯೂರಪ್ಪ ಫ್ಯಾಕ್ಟರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಶತ್ರುಪಡೆ. ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇ ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು. ಹೇಳಿ ಕೇಳಿ ಯಡಿಯೂರಪ್ಪ ಕಡು ಪುತ್ರ ವ್ಯಾಮೋಹಿ. ತನ್ನ ಮಕ್ಕಳ ಏಳಿಗೆಗಾಗಿ ಯಾರನ್ನಾದರೂ ಬಲಿ ಕೊಡಬಲ್ಲರು. ಅವರ ಮನೋಗತವನ್ನು ಅರಿತಿದ್ದ ವಿರೋಧಿ ಬಣ ಈಶ್ವರಪ್ಪ ಅವರನ್ನು ಬಂಡಾಯ ಅಭ್ಯರ್ಥಿಯನ್ನಾಗಿಸಿದ್ದಲ್ಲದೆ ಹೆಚ್ಚು ಕ್ರಿಯಾಶೀಲಗೊಳಿಸಿತು. ಪ್ರತಿದಿನ ಒಂದು ವೃತದಂತೆ ಈಶ್ವರಪ್ಪ ಅವರು ಯಡಿಯೂರಪ್ಪ ಮತ್ತವರ ಮಕ್ಕಳ ವಿರುದ್ಧ ವಾಚಾಮಗೋಚರವಾಗಿ ಟೀಕಿಸುವುದನ್ನು ರೂಢಿ ಮಾಡಿಕೊಂಡರು. ಅವರ ಟೀಕೆ ಟಿಪ್ಪಣಿಗಳಿಗೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಗುವಂತೆ ನೋಡಿಕೊಂಡರು. ಈಶ್ವರಪ್ಪ ಆತ್ಮವಿಶ್ವಾಸದಿಂದ ಆರ್ಭಟಿಸುವುದನ್ನು ನೋಡಿ ಯಡಿಯೂರಪ್ಪ ಮಗನ ಸೋಲನ್ನು ಊಹಿಸಿಕೊಂಡು ತಮ್ಮ ಸಮಸ್ತ ಶಕ್ತಿಯನ್ನು ಮಗ ರಾಘವೇಂದ್ರ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರೀಕರಿಸಬಹುದೆಂದು ವಿರೋಧಿ ಬಣ ಅಂದಾಜಿಸಿತ್ತು.

ಅಭಿನವ ಧೃತರಾಷ್ಟ್ರ ಯಡಿಯೂರಪ್ಪ ಅವರಿಗೆ ವಿಜಯೇಂದ್ರ-ರಾಘವೇಂದ್ರ ಎರಡು ಕಣ್ಣುಗಳಿದ್ದಂತೆ. ಅವರಿಗೆ ವಿಜಯೇಂದ್ರ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು, ರಾಘವೇಂದ್ರ ಕೇಂದ್ರದಲ್ಲಿ ಮಂತ್ರಿಯಾಗಬೇಕೆಂಬ ಹೆಬ್ಬಯಕೆ ಇದೆ. ಅದಕ್ಕಾಗಿ ಬಿಜೆಪಿಯೊಳಗಿನ ವಿರೋಧಿಗಳು ಉರುಳಿಸುವ ಎಲ್ಲ ದಾಳಗಳನ್ನು ಮೌನವಾಗಿ ಸ್ವೀಕರಿಸಿ, ಯುದ್ಧಭೂಮಿಯಲ್ಲೇ ಉತ್ತರಿಸಬೇಕೆಂಬ ಛಲದಿಂದ ತಮ್ಮ ವಯಸ್ಸನ್ನು ಪಣಕ್ಕಿಟ್ಟು ಹೋರಾಡಿದರು. ನಿರೀಕ್ಷಿತ ಫಲಿತಾಂಶ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲವಾದರೂ ಹೈಕಮಾಂಡ್ ಸಮಾಧಾನಪಟ್ಟುಕೊಳ್ಳುವಷ್ಟು ಫಸಲು ತೆಗೆದಿದ್ದಾರೆ. ಯಡಿಯೂರಪ್ಪ ಅವರಿಗೆ ಇದ್ದಷ್ಟು ಹೋರಾಟದ ಛಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಇದ್ದಿದ್ದರೆ ಬಿಜೆಪಿಯೊಳಗಿನ ಒಡಕನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಏನಿಲ್ಲವೆಂದರೂ 25 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಅವಕಾಶಗಳಿದ್ದವು. ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರಿಗೆ ಕಾರುಬಾರು ಕೊಡದೆ ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ನತ್ತ ಸೆಳೆದುಕೊಂಡಿದ್ದರೆ ರಾಘವೇಂದ್ರ ಸೋಲು ನಿಶ್ಚಿತವಾಗಿತ್ತು. ಅಷ್ಟರ ಮಟ್ಟಿಗೆ ಬಿಎಸ್‌ವೈ ವಿರೋಧಿ ಬಣ ಪಿಚ್ ರೆಡಿ ಮಾಡಿತ್ತು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಗೆಲುವು ಸಾಧಿಸಿದ್ದೇ ಬಿಜೆಪಿಯಲ್ಲಿನ ಬಿಎಸ್‌ವೈ ವಿರೋಧಿ ಬಣದ ವ್ಯವಸ್ಥಿತ ಕಾರ್ಯಾಚರಣೆಯಿಂದ. ಮಾಜಿ ಸಂಸದ ಸಂಗಣ್ಣ ಕರಡಿಯವರಿಗೆ ಟಿಕೆಟ್ ಕಟ್ ಮಾಡಿಸಿದ್ದೇ ಯಡಿಯೂರಪ್ಪ. ಈ ಒಳಮರ್ಮದ ಅರಿವಿದ್ದ ಬಿ.ಎಲ್. ಸಂತೋಷ್ ಖಾಸಾ ಶಿಷ್ಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ರಾತ್ರೋರಾತ್ರಿ ಸಂಗಣ್ಣ ಕರಡಿಯವರನ್ನು ಸಂಪರ್ಕಿಸಿ ಪಕ್ಷಾಂತರ ಮಾಡಿಸಿದರು. ಯಡಿಯೂರಪ್ಪ ಮನಸ್ಸು ಮಾಡಿದ್ದರೆ ಸಂಗಣ್ಣ ಕರಡಿ ಪಕ್ಷ ತ್ಯಜಿಸುವುದನ್ನು ತಪ್ಪಿಸಬಹುದಿತ್ತು. ಬಿಜೆಪಿ ಬಣ ರಾಜಕೀಯಕ್ಕೆ ಬಸವರಾಜ ಕ್ಯಾವಟರ್ ಬಲಿಯಾದರು. ಸಂಗಣ್ಣ ಕರಡಿ ಬೀದಿ ಪಾಲಾದರು. ಸಂಗಣ್ಣ ಕರಡಿಯವರಿಗೆ ಮತಕ್ಷೇತ್ರವೇ ಇಲ್ಲವಾಯಿತು.

ಕಲಬುರ್ಗಿ, ಬೀದರ್, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹರಸಾಹಸ ಮಾಡಿ ಗೆಲುವು ಸಾಧಿಸಿದ್ದಾರೆ. ಕೊಪ್ಪಳದಲ್ಲೂ ಅಷ್ಟೇ. ಕಲ್ಯಾಣ ಕರ್ನಾಟಕದ ಐದೂ ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಕೈವಶವಾದದ್ದು ಬಿಜೆಪಿಯೊಳಗಿನ ಬಣರಾಜಕೀಯವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರಿಂದ. ಮಲ್ಲಿಕಾರ್ಜುನ ಖರ್ಗೆ ಮತ್ತವರ ತಂಡ ಪ್ರದರ್ಶಿಸಿದ ಒಗ್ಗಟ್ಟನ್ನು ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳು ತೋರಿದ್ದರೆ ಲೋಕಸಭಾ ಸದಸ್ಯರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿತ್ತು. ಕಲಬುರ್ಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಯವರಿಗೆ ಗೆಲುವು ಸರಳವಾಗಿರಲಿಲ್ಲ. ಬಿಜೆಪಿಯೊಳಗಿನ ಬಣ ರಾಜಕೀಯದ ಒಡಕನ್ನು ಕಾಂಗ್ರೆಸ್‌ನವರು ಸಮರ್ಪಕವಾಗಿ ಬಳಸಿಕೊಂಡರು. ಡಾ. ಉಮೇಶ್ ಜಾದವ್ ಅವರನ್ನು ಶತಾಯಗತಾಯ ಗೆಲ್ಲಿಸಬೇಕೆಂದು ಬಿ.ಎಲ್. ಸಂತೋಷ್ ಅವರು ಖುದ್ದು ಕಲಬುರ್ಗಿ ನಗರಕ್ಕೆ ಬಂದು ಗುಪ್ತ ಕಾರ್ಯಾಚರಣೆ ನಡೆಸಿದ್ದರು. ಆದರೆ ಅಷ್ಟೊತ್ತಿಗೆ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ ಪಾಟೀಲ್, ಸಂಸದ ಉಮೇಶ್ ಜಾದವ್ ಅವರನ್ನು ಸೋಲಿಸಲು ಪಿಚ್ ರೆಡಿ ಮಾಡಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಾಧಾಕೃಷ್ಣ ದೊಡ್ಡಮನಿಯವರು ಬಿಜೆಪಿ ಒಡಕನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಗೆದ್ದರು. ಕೋಟನೂರಿನ ಅಹಿತಕರ ಘಟನೆ ನಡೆಯದೇ ಹೋಗಿದ್ದರೆ ಹೆಚ್ಚು ಲೀಡ್‌ನಿಂದ ಗೆಲ್ಲುತ್ತಿದ್ದರು. ಉಮೇಶ್ ಜಾದವ್ ಸೋಲಿಗೆ ಕಾರಣರಾದವರೆಲ್ಲ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹಿಂಬಾಲಕ ಪಡೆ.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಅವರಿಗೆ ಗೆಲುವು ಕಷ್ಟವಿತ್ತು. ಬೀದರ್ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದರು. ಮೂರರಲ್ಲಿ ಕಾಂಗ್ರೆಸ್ ಶಾಸಕರು. ಅದರಲ್ಲೂ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಶಾಸಕರಿದ್ದರೂ ಲೋಕಸಭೆಗೆ ಮತದಾರರ ಒಲವು ಬಿಜೆಪಿಯ ಪರವೇ ಇರುತ್ತದೆ. ಈ ಬಾರಿಯೂ ಅಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿಗೇ ಲೀಡ್ ದೊರೆತಿದೆ. ಮಾಜಿ ಮಂತ್ರಿ ಭಗವಂತ ಖೂಬಾ ಗೆಲುವಿಗೆ ಅಡ್ಡಿಯಾಗಿದ್ದೇ ಬಿಜೆಪಿ ಶಾಸಕರು. ಔರಾದ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಶಾಸಕರಾದ ಪ್ರಭು ಚೌಹಾಣ್, ಶರಣು ಸಲಗರ ಬಹಿರಂಗ ಸಭೆಯಲ್ಲೇ ಭಗವಂತ ಖೂಬಾ ಅವರಿಗೆ ಟಿಕೆಟ್ ಕೊಡಬೇಡಿ ಎಂದು ವಿಜಯೇಂದ್ರ ಅವರನ್ನು ಒತ್ತಾಯಿಸಿದ್ದರು. ಶಾಸಕರ ವಿರೋಧದ ನಡುವೆ ಅಭ್ಯರ್ಥಿಯಾದ ಭಗವಂತ ಖೂಬಾ ಹೀನಾಯವಾಗಿ ಸೋತಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರ ಒಂದರ್ಥದಲ್ಲಿ ಬಿಜೆಪಿಯ ಭದ್ರಕೋಟೆ. ಅಲ್ಲಿ ಬಿಜೆಪಿ ಶಾಸಕರ ಸಂಖ್ಯಾಬಲ ಜಾಸ್ತಿ ಇತ್ತು. ಇದೆಲ್ಲದರ ನಡುವೆ ಸಚಿವ ಈಶ್ವರ ಖಂಡ್ರೆಯವರು ಮಗ ಸಾಗರ್ ಖಂಡ್ರೆಯವರನ್ನು ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿಕೊಂಡಿದ್ದಾರೆ. ಕಾರಣ ಸ್ಪಷ್ಟ; ಬಿಜೆಪಿಯ ಒಡಕಿನ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ ರಾಜಕಾರಣಕ್ಕೆ ಹೊಸಬರು. ಐಎಎಸ್ ಅಧಿಕಾರಿ ಯಾಗಿ ನಿವೃತ್ತರಾದವರು. ಬಿಜೆಪಿ ಶಾಸಕ ಅಮರೇಶ ನಾಯಕ ಶಾಸಕ, ಸಚಿವ ಹಾಗೂ ಸಂಸದರಾಗಿ ಅಪಾರ ರಾಜಕೀಯ ಅನುಭವ ಹೊಂದಿದವರು. ಮೂಲತಃ ಕಾಂಗ್ರೆಸಿಗರಾದ ಅವರು ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿದ್ದರು. ಈ ಬಾರಿ ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಸಚಿವ ಶಿವನಗೌಡ ನಾಯಕ ಸೇರಿ ಹಲವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಳೆದು ತೂಗಿ ಬಿಜೆಪಿ ಟಿಕೆಟ್ ಮತ್ತೆ ಅಮರೇಶ್ ನಾಯಕ್ ಅವರಿಗೇ ನೀಡಲಾಯಿತು. ಉಳಿದವರೆಲ್ಲ ತಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಪಣತೊಟ್ಟರು. ಬಿಜೆಪಿಯಲ್ಲಿನ ಒಡಕನ್ನು ಕಾಂಗ್ರೆಸ್ ನಾಯಕರು ಸರಿಯಾಗಿ ಬಳಸಿಕೊಂಡರು. ಬಣ ರಾಜಕೀಯವನ್ನು ತಹಬಂದಿಗೆ ತರುವಲ್ಲಿ ವಿಜಯೇಂದ್ರ ವಿಫಲರಾದರು. ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ ಗೆಲುವು ಸಾಧಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರ ತಂತ್ರಗಾರಿಕೆ ಫಲಿಸಿತು. ವಾಲ್ಮೀಕಿ ಸಮುದಾಯದ ಕಾಂಗ್ರೆಸ್ ಕೈಹಿಡಿಯಿತು. ಇಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ಒಂದಷ್ಟು ಕೆಲಸ ಮಾಡಿತಾದರೂ ಒಡಕಿನ ಬಲ ಹೆಚ್ಚಾಗಿ ಬಿಜೆಪಿ ಅಭ್ಯರ್ಥಿ ಮುಗ್ಗರಿಸಬೇಕಾಯಿತು. ಮೋದಿ ಅಲೆ ಅಷ್ಟಾಗಿ ಇರಲಿಲ್ಲ. ಆದರೆ ಅಮರೇಶ ನಾಯಕ ಅದೊಂದನ್ನೇ ನಂಬಿ ಕೆಟ್ಟರು.

ಬಳ್ಳಾರಿಯಲ್ಲಿ ಬಿ. ಶ್ರೀರಾಮುಲು ಮುಗ್ಗರಿಸಿದ್ದು ಅತಿಯಾಗಿ ಮೋದಿ ಅಲೆಯನ್ನು ನಂಬಿದ್ದರಿಂದ. ಜನಾರ್ದನ ರೆಡ್ಡಿ ತನ್ನ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೇಬಿಟ್ಟರು ಎಂದು ಭಾವಿಸಲಾಗಿತ್ತು. ಜನಾರ್ದನ ರೆಡ್ಡಿಯವರನ್ನು ಮತದಾರ ಗಂಭೀರವಾಗಿ ಪರಿಗಣಿಸಲಿಲ್ಲ. ಅಷ್ಟಕ್ಕೂ ಬಿಜೆಪಿಯಲ್ಲಿನ ಭಿನ್ನಮತಕ್ಕೆ ಮದ್ದು ಅರೆಯಲು ಯಡಿಯೂರಪ್ಪ ಮನಸ್ಸು ತೊಡಗಿಸಲಿಲ್ಲ. ಸೋತರೆ ಸೋಲಲಿ ಎಂಬ ಭಾವದಲ್ಲಿ ಯಡಿಯೂರಪ್ಪ, ವಿಜಯೇಂದ್ರ ಪ್ರಚಾರ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ತುಕಾರಾಮರನ್ನು ಗೆಲ್ಲಿಸಲು ಬಿ. ನಾಗೇಂದ್ರ ಹೆಚ್ಚು ಶ್ರಮ ಹಾಕಿದರು. ವಿಧಾನಸಭಾ ಚುನಾವಣೆಯಂತೆ ಕುರುಬ, ವಾಲ್ಮೀಕಿ ಮತ್ತು ದಲಿತ ಮತಗಳನ್ನು ಒಂದುಗೂಡಿಸಿದ್ದರು. ಬಿ. ಶ್ರೀರಾಮುಲುಗೆ ಪಕ್ಷದ ಕಾರ್ಯಕರ್ತರು, ಸಮುದಾಯ ಮತ್ತು ಜನಾರ್ದನ ರೆಡ್ಡಿ ಪರಿವಾರ ತನು-ಮನ-ಧನದೊಂದಿಗೆ ಕೆಲಸ ಮಾಡಲಿಲ್ಲ. ಸಂಘ ಪರಿವಾರದ ಕೇಡರ್ ಚುನಾವಣೆಯಲ್ಲಿ ಸಕ್ರಿಯ ಪಾತ್ರ ವಹಿಸಲಿಲ್ಲ. ಬಿ. ಶ್ರೀರಾಮುಲು ಅವರ ಅತಿಯಾದ ಕುಟುಂಬ ವ್ಯಾಮೋಹ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತ್ತು. ಸೋಲಿನ ಅನುಕಂಪ ಮತ್ತು ಮೋದಿ ಅಲೆ ದಡ ತಲುಪಿಸಬಹುದು ಎಂದು ರಾಮುಲು ಬಲವಾಗಿ ನಂಬಿದ್ದರು. ರಾಮುಲು ಗೆದ್ದರೆ ಗೆಲ್ಲಲಿ ಎಂಬುದು ಯಡಿಯೂರಪ್ಪರ ಇರಾದೆಯಾಗಿತ್ತು. ಆದರೆ ಅವರ ವಿರೋಧಿ ಬಣಕ್ಕೆ ಬಿಜೆಪಿ ಸ್ಥಾನಗಳನ್ನು ಕಡಿತಗೊಳಿಸುವುದು ಮೊದಲ ಆದ್ಯತೆಯಾಗಿತ್ತು. ಶ್ರೀರಾಮುಲು ಅವರಿಗೆ ಯಾವ ದಿಕ್ಕಿನಿಂದಲೂ ಪ್ರೀತಿ ಹರಿದು ಬರಲಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಬಿಜೆಪಿಯ ಒಳಜಗಳದ ಲಾಭ ಪಡೆಯಿತು.

ಬಿಜೆಪಿಯ ಒಡಕಿನ ಲಾಭ ಪಡೆದು ತನ್ನ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಸದವಕಾಶ ವಿಜಯಪುರ ಜಿಲ್ಲೆಯ ಉಸ್ತುವಾರಿ ಮಂತ್ರಿ ಎಂ.ಬಿ. ಪಾಟೀಲ್ ಅವರಿಗಿತ್ತು. ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಇದ್ದರೆ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದಾರೆ. ಯತ್ನಾಳ್‌ಗೂ ಸಂಸದ ರಮೇಶ್ ಜಿಗಜಿಣಗಿಯವರಿಗೂ ಎಣ್ಣೆ-ಸೀಗೆಕಾಯಿ ಸಂಬಂಧ. ಜಿಗಜಿಣಗಿ ಸೋಲಲೆಂದೇ ಯತ್ನಾಳ್ ತನ್ನ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಕೊಡಿಸಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಬಸನಗೌಡ ಪಾಟೀಲ್ ಯತ್ನಾಳ್ ಸ್ಟಾರ್ ಪ್ರಚಾರಕರಾಗಿ ಬೇರೆ ಕ್ಷೇತ್ರಗಳಲ್ಲಿ ಹೆಚ್ಚು ಪ್ರಚಾರ ಮಾಡಿದ್ದಾರೆ. ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಯತ್ನಾಳ್ ಪ್ರಚಾರ ಮಾಡಿದ್ದು ಕಡಿಮೆ. ಎಂ.ಬಿ. ಪಾಟೀಲರು ಸತೀಶ್ ಜಾರಕಿಹೊಳಿ ಮಾದರಿಯಲ್ಲಿ ಪ್ರಚಾರ ಮಾಡಿದ್ದರೆ ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿದ್ದರು. ದುರಂತ ನೋಡಿ, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತರಾಯ ಗೌಡ ಪಾಟೀಲರು ಕಾಂಗ್ರೆಸ್‌ನ ಘಟಾನುಘಟಿ ನಾಯಕರು. ಅವರ ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿಯವರಿಗೆ ಹೆಚ್ಚು ಮತಗಳು ಬಂದಿವೆ. ರಾಜು ಅಲಗೂರ ಅವರನ್ನು ಗೆಲ್ಲಿಸುವುದು ಎಂ.ಬಿ. ಪಾಟೀಲ್ ಮಾತ್ರವಲ್ಲ, ಉಳಿದ ಪಾಟೀಲರ ಆದ್ಯತೆಯಾಗಿರಲಿಲ್ಲ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಮಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದು ಚರಿತ್ರಾರ್ಹ ವಿದ್ಯಮಾನ. ಹೇಳಿ ಕೇಳಿ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಾಮಾನ್ಯ ಅಭ್ಯರ್ಥಿಗಳಿಗಾಗಿ ಇರುವಂತಹದ್ದು. ಅಂತಲ್ಲಿ ವಾಲ್ಮೀಕಿ ಸಮುದಾಯದ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದು ಸತೀಶ್ ಅವರ ಕ್ರಿಯಾಶೀಲತೆಯಿಂದ. ರಮೇಶ್ ಕತ್ತಿ ಆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಹಂಬಲಿಸಿದ್ದರು. ಯಡಿಯೂರಪ್ಪ ಪ್ರಯತ್ನಿಸಿದರೂ ಟಿಕೆಟ್ ಕೊಡಿಸಲು ಸಾಧ್ಯವಾಗಿರಲಿಲ್ಲ. ಬಿ.ಎಸ್. ಯಡಿಯೂರಪ್ಪ ವಿರೋಧಿ ಬಣದ ಶಶಿಕಲಾ ಜೊಲ್ಲೆಯವರ ಗಂಡನಿಗೆ ಟಿಕೆಟ್ ಸಿಕ್ಕಿದ್ದರಿಂದ ಲಕ್ಷ್ಮಣ್ ಸವದಿಗೆ ಹುರುಪು ಬಂದಿತ್ತು. ಜೊಲ್ಲೆ ಮತ್ತು ಸವದಿ ಬಿ.ಎಲ್. ಸಂತೋಷ್ ಬಣದ ಆಪ್ತರು. ಶಶಿಕಲಾ ಜೊಲ್ಲೆ ಗಂಡ ಸೋತರೆ ಉಮೇಶ್ ಕತ್ತಿ ಬಣ ಮತ್ತೆ ಚಿಗುರಿ ಕೊಳ್ಳಬಹುದೆಂಬ ಭೀತಿಯಲ್ಲಿ ಸವದಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಅಥಣಿಯಲ್ಲಿ ಅಣ್ಣಾ ಸಾಹೇಬ ಜೊಲ್ಲೆಯವರಿಗೆ ಹೆಚ್ಚು ಮತಗಳು ಬಂದಿರುವುದು ಸಹಜವಾಗಿಯೇ ಸತೀಶ್ ಜಾರಕಿಹೊಳಿಯವರನ್ನು ಕೆರಳಿಸಿದೆ. ಅಣ್ಣಾ ಸಾಹೇಬ ಜೊಲ್ಲೆಯವರನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಸಂತೋಷ್ ಬಣದ ಸಮಸ್ತರೂ ಯತ್ನಿಸಿದ್ದಾರೆ. ಕಾಂಗ್ರೆಸ್ ಶಾಸಕರಾಗಿದ್ದರೂ ಸಂತೋಷ್ ಶಿಷ್ಯನಾಗಿಯೇ ಮುಂದುವರಿದಿರುವ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿಗಾಗಿ ಕೆಲಸ ಮಾಡಿದ್ದರಲ್ಲಿ ಆಶ್ಚರ್ಯವಿಲ್ಲ. ಲಕ್ಷ್ಮಣ ಸವದಿ ತಾಂತ್ರಿಕವಾಗಿ ಕಾಂಗ್ರೆಸ್ ಶಾಸಕ, ಮಾನಸಿಕವಾಗಿ ಬಿಜೆಪಿ ನಾಯಕ. ರಾಜ್ಯ ಬಿಜೆಪಿಗೆ ವಿಜಯೇಂದ್ರ ಅಧ್ಯಕ್ಷರಾಗಿರದಿದ್ದರೆ ಲಕ್ಷ್ಮಣ ಸವದಿ ಎಂದೋ ಬಿಜೆಪಿ ಸೇರುತ್ತಿದ್ದರು. ಸತೀಶ್ ಜಾರಕಿಹೊಳಿ ಬಹುದೊಡ್ಡ ಟಾಸ್ಕ್ ಗೆದ್ದಿದ್ದಾರೆ.

ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಗೆಲ್ಲುವುದು ಬಿಜೆಪಿಯ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರಿಗೆ ಇಷ್ಟವಿರಲಿಲ್ಲ. ಸಂತೋಷ್ ಲಾಡ್, ವಿನಯ ಕುಲಕರ್ಣಿ ಸವಾಲಾಗಿ ಸ್ವೀಕರಿಸಿ ಇನ್ನಷ್ಟು ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿಯವರಿಗೆ ಕೊಡಿಸಿದ್ದರೆ ಜೋಶಿ ಸೋಲುವುದು ಗ್ಯಾರಂಟಿಯಾಗಿತ್ತು. ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲ್ಲುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಮಂತ್ರಿ ಸುಧಾಕರ್ ಕಾರಣಕ್ಕೆ ಕಾರಜೋಳ ಗೆದ್ದಿದ್ದಾರೆ. ಬಿ.ಎಲ್. ಸಂತೋಷ್, ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ ಯತ್ನಾಳ್ ಬಣಕ್ಕೆ ಯಡಿಯೂರಪ್ಪ ಬಿಜೆಪಿಯಲ್ಲಿ ಮತ್ತೆ ಮುನ್ನಲೆಗೆ ಬಂದಿದ್ದು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೇರಿದ್ದು ಸುತರಾಂ ಇಷ್ಟವಿರಲಿಲ್ಲ. ಹೀಗಾಗಿ ಈ ಚುನಾವಣೆ ಅವರಿಗೆ ಅತ್ಯಂತ ಮಹತ್ವದ್ದಾಗಿತ್ತು. ಸ್ಟಾರ್ ಪ್ರಚಾರಕ ಬಸನಗೌಡ ಪಾಟೀಲ್ ಯತ್ನಾಳ್ ಕೆಲವು ಕ್ಷೇತ್ರಗಳಲ್ಲಿ ಹೆಚ್ಚು ಪ್ರಚಾರ ಮಾಡಿದ್ದರು. ಚಿಕ್ಕೋಡಿ, ಕಲಬುರ್ಗಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಪ್ರಚಾರ ಮಾಡಿ ಎಲ್ಲರ ಸೋಲಿಗೆ ಕಾರಣರಾಗಿದ್ದಾರೆ. ಯತ್ನಾಳ್ ಹೋದಲ್ಲೆಲ್ಲ ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ.

ಚುನಾವಣೆ ಮುಗಿದು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಒಳ ಹೊಡೆತಗಳ ಹೊರತಾಗಿಯೂ 17 ಸೀಟುಗಳನ್ನು ಗೆಲ್ಲಿಸಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪ ಹೈಕಮಾಂಡ್ ನಿಂದ ಶಹಬ್ಬಾಸ್‌ಗಿರಿ ನಿರೀಕ್ಷಿಸಿದ್ದರು. ಆದರೆ ಮೋದಿ ಅಮಿತ್-ಶಾ ಜೋಡಿ ಮತ್ತೆ ಸಂತೋಷ್ ಬಣಕ್ಕೆ ಮಣೆ ಹಾಕುವ ಮೂಲಕ ಶಾಕ್ ನೀಡಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದರಿಂದ ರಾಘವೇಂದ್ರ ಅವರಿಗೆ ಮಂತ್ರಿಗಿರಿ ಸಿಗುವುದು ಡೌಟ್ ಎಂದು ಎಲ್ಲರೂ ಭಾವಿಸಿದ್ದರೂ ಬಿಎಸ್‌ವೈ ಆಶಾವಾದಿಯಾಗಿದ್ದರು. ಮಗನಿಗೆ ಸಿಗದೇ ಹೋದರೆ; ಹಿಂದಿ-ಇಂಗ್ಲಿಷ್ ನಿರರ್ಗಳವಾಗಿ ಮಾತನಾಡಬಲ್ಲ, ಪ್ರತಿಭಾವಂತ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಾದರೂ ಕೇಂದ್ರದಲ್ಲಿ ಮಂತ್ರಿಸ್ಥಾನ ಸಿಗಬಹುದೆಂಬ ನಿರೀಕ್ಷೆ ಯಡಿಯೂರಪ್ಪನವರಿಗೆ ಇತ್ತು. ಕಾರ್ಪೊರೇಟರ್ ಶೈಲಿಯ ಕನ್ನಡ ಮಾತ್ರ ಗೊತ್ತಿರುವ ಹಿಂದಿ-ಇಂಗ್ಲಿಷ್ ಗಂಧ ಗಾಳಿ ಗೊತ್ತಿಲ್ಲದ ವಿ. ಸೋಮಣ್ಣ ಅವರನ್ನು ರೈಲ್ವೆ ಮತ್ತು ಜಲಶಕ್ತಿ ಸಹಾಯಕ ಸಚಿವರನ್ನಾಗಿಸಿದ್ದು ಬಿಎಸ್‌ವೈ ಬಣಕ್ಕೆ ನುಂಗಲಾರದ ತುತ್ತಾಗಿದೆ. ಸಂತೋಷ್ ಬಣ ಮತ್ತೆ ಕ್ರಿಯಾಶೀಲವಾಗಿದ್ದು ನೋಡಿದರೆ ವಿಜಯೇಂದ್ರ ಸ್ಥಾನಕ್ಕೂ ಕುತ್ತು ಒದಗಿ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಬಳಸಿ ಬಿಸಾಡುವುದು ಬಿಜೆಪಿಗೆ ಹೊಸದೇನಲ್ಲ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News