ಬಿಜೆಪಿಗೇ ಭಾರವಾದ ಬಸನಗೌಡ ಯತ್ನಾಳ್

ಮುಸ್ಲಿಮ್ ಸಮುದಾಯವನ್ನು ದ್ವೇಷಿಸುವುದು ಹಿಂದೂವಿನ ಕೆಲಸ ಎಂದು ಭಾವಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಧರ್ಮವನ್ನು ಕುಬ್ಜಗೊಳಿಸುತ್ತಿದ್ದಾರೆ. ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಜಗತ್ತಿಗೇ ಪರಿಚಯಿಸಿದ ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ ಅವರನ್ನು ಅಪಮಾನಿಸುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವ, ಭಾರತದ ಸಂವಿಧಾನದ ಆಶಯಗಳ ವಿರುದ್ಧ ದ್ವೇಷದ ರಾಜಕಾರಣಕ್ಕೆ ಕುಮ್ಮಕ್ಕು ಕೊಡುವ ಮೂಲಕ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರನ್ನು ಅಗೌರವದಿಂದ ಕಾಣುತ್ತಿದ್ದಾರೆ. ಅಷ್ಟು ಮಾತ್ರವಲ್ಲ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಧಿಕ್ಕರಿಸುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಆಚಾರವಿಲ್ಲದ ನಾಲಿಗೆಯಿಂದ ಬಿಜೆಪಿಗೇ ಭಾರವಾಗಿದ್ದಾರೆ.

Update: 2023-12-16 05:40 GMT

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್

ದುಃಖಭಾಗ್ ಭವೇತ್ ಓಂ ಶಾಂತಿಃ ಶಾಂತಿಃ ಶಾಂತಿಃ

(ಎಲ್ಲರೂ ಸುಖಿಗಳಾಗಲಿ ಎಲ್ಲರೂ ಆರೋಗ್ಯವಂತರಾಗಲಿ, ಎಲ್ಲರೂ ಒಳಿತನ್ನು ಕಾಣಲಿ, ಯಾರಿಗೂ ದುಃಖ ಅನುಭವವಾಗದಿರಲಿ, ಎಲ್ಲೆಡೆಯೂ ಶಾಂತಿ ನೆಲೆಸಲಿ)

ಬೃಹದಾರಣ್ಯಕ ಉಪನಿಷತ್ 14:14

ಭಾರತೀಯ ಜನತಾ ಪಕ್ಷದ ಶಾಸಕ ಬಸನಗೌಡ ರಾಮನಗೌಡ ಪಾಟೀಲ್ ಯತ್ನಾಳ್ ತನ್ನಷ್ಟಕ್ಕೆ ತಾನು ಹಿಂದೂ ಧರ್ಮದ ರಕ್ಷಕ, ಹಿಂದೂಗಳ ಉದ್ಧಾರಕ ಎಂದು ಭ್ರಮಿಸಿ ಪ್ರತಿನಿತ್ಯ ತನ್ನ ಅಪ್ರಬುದ್ಧ ಹೇಳಿಕೆಗಳಿಂದ ಹಿಂದೂ ಧರ್ಮವನ್ನು ಕುಬ್ಜಗೊಳಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಹಿಂದೂಗಳು ಈತನ ತಳಬುಡವಿಲ್ಲದ ಮಾತುಗಳಿಂದ ಮುಜುಗರ ಅನುಭವಿಸುತ್ತಿದ್ದಾರೆ. ಹಿಂದೂ ಧರ್ಮವನ್ನು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಿ ಆ ಧರ್ಮದ ಒಟ್ಟಾಶಯವನ್ನು ಜಗತ್ತಿಗೇ ಸಾರಿ ಹೇಳಿದ ಸ್ವಾಮಿ ವಿವೇಕಾನಂದರಾಗಲೀ, ಅವರ ಗುರು ರಾಮಕೃಷ್ಣ ಪರಮಹಂಸರಾಗಲೀ, ಅಷ್ಟೇ ಯಾಕೆ ಹಿಂದೂ ಧರ್ಮವನ್ನೇ ಉಸಿರಾಡಿ ಹಂತಕನ ಗುಂಡೇಟಿಗೆ ಬಲಿಯಾಗಿ ‘ಹೇ ರಾಮ್’ ಎಂದು ಉದ್ಗಾರ ತೆಗೆದೇ ಕೊನೆಯುಸಿರೆಳೆದ ಮಹಾತ್ಮಾ ಗಾಂಧೀಜಿಯವರಾಗಲಿ, ಧರ್ಮ ಗ್ರಂಥಗಳಾಗಲಿ ಎಲ್ಲೂ ‘ಬೇರೆ ಧರ್ಮ ಮತ್ತು ಬೇರೆ ಧರ್ಮದವರನ್ನು ದ್ವೇಷಿಸಿ’ ಎಂದು ಹೇಳಿದ ಒಂದೇ ಒಂದು ನಿದರ್ಶನ ದೊರೆಯುವುದಿಲ್ಲ. ಹಾಗಾದರೆ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಾದಿಸುವ ಹಿಂದೂ ಧರ್ಮವನ್ನು ಯಾರು ಕಲಿಸಿಕೊಟ್ಟದ್ದು? ಈ ಬಾಯಿಬಡುಕ ಬಸನಗೌಡ ಯತ್ನಾಳ್ ಅವರಿಗೆ ಜನ್ಮ ಕೊಟ್ಟ ಲಿಂಗಾಯತ ಧರ್ಮ, ಆ ಧರ್ಮದ ಮಹಾನ್ ಪುರುಷ ಬಸವಣ್ಣನವರು ತಮ್ಮ ಒಂದೇ ಒಂದು ವಚನದಲ್ಲಿ ದ್ವೇಷ ಬಿತ್ತುವ ವಿಚಾರ ಹೇಳಿಲ್ಲ. ‘ದಯವಿಲ್ಲದ ಧರ್ಮವದಾವುದಯ್ಯ, ದಯವೇ ಧರ್ಮದ ಮೂಲವಯ್ಯ’ ಎಂದು ಸ್ವತಹ ಬಸವಣ್ಣನವರೇ ತಮ್ಮದೊಂದು ವಚನದಲ್ಲಿ ಧರ್ಮವನ್ನು ವ್ಯಾಖ್ಯಾನಿಸಿದ್ದಾರೆ.

ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಐತಿಹಾಸಿಕ ಭಾಷಣ ಮಾಡಿದ ಸ್ವಾಮಿ ವಿವೇಕಾನಂದರು ಪ್ರಪಂಚಕ್ಕೆ ಹಿಂದೂ ಧರ್ಮದ ವೈಶಿಷ್ಟ್ಯವನ್ನು, ಹೆಚ್ಚುಗಾರಿಕೆಯನ್ನು ಹೇಳಿಕೊಟ್ಟವರು. ಅವರ ಸಮಗ್ರ ಕೃತಿ ಶ್ರೇಣಿಯ ಯಾವ ಪುಟದಲ್ಲಿಯೂ ‘‘ಪರಧರ್ಮವರನ್ನು ದ್ವೇಷಿಸಿ’’ ಎಂದು ಬರೆದ ಒಂದು ಪದವೂ ಸಿಗುವುದಿಲ್ಲ. ಹಿಂದೂ ಧರ್ಮದ ಕುರಿತು ಸ್ವಾಮಿ ವಿವೇಕಾನಂದರು ಒಂದೆಡೆ ಖಚಿತ ಮಾತುಗಳಲ್ಲಿ ಹೇಳುತ್ತಾರೆ: ‘‘ವಿವಿಧ ತತ್ವಗಳಲ್ಲಿ ಒಂದಾದ ಹಿಂದೂ ಧರ್ಮದ ಸಿದ್ಧಾಂತ ಯಾವಾಗಲೂ ದ್ವೇಷದ-ಧ್ವಂಸದ ಕಡೆ ಗಮನ ಕೊಡುವುದಿಲ್ಲ. ಅದು ಇತರ ತತ್ವಗಳೊಂದಿಗೆ ಹೊಂದಿಕೊಂಡು ಹೋಗಬೇಕೆಂದು ಯತ್ನಿಸುವುದು. ಭರತ ಖಂಡಕ್ಕೆ ಯಾವುದಾದರೂ ಒಂದು ಹೊಸ ಭಾವನೆ ಬಂದರೆ ನಾವು ಅದನ್ನು ವಿರೋಧಿಸುವುದಿಲ್ಲ. ಅದನ್ನು ಸ್ವೀಕರಿಸಿ ಅದರೊಂದಿಗೆ ಹೊಂದಿಕೊಂಡು ಹೋಗಲು ಯತ್ನಿಸುವೆವು. ಆದ ಕಾರಣವೇ ನಾವು ಯಾವ ಧರ್ಮದವರೊಂದಿಗೂ ಹೋರಾಡುವುದಿಲ್ಲ. ನಮ್ಮ ಧರ್ಮಕ್ಕೆ ಸೇರದ ಎಷ್ಟೋ ಮಂದಿ ಒಳ್ಳೆಯ ಸ್ತ್ರೀ-ಪುರುಷರು ಇರುವರು. ಆದ ಕಾರಣ ನಮ್ಮದೊಂದೇ ಮುಕ್ತಿಗೆ ಮಾರ್ಗ ಎನ್ನುವುದಿಲ್ಲ. ನಾವು, ‘ಹಲವು ನದಿಗಳು ಬೇರೆ ಬೇರೆ ಬೆಟ್ಟಗಳಲ್ಲಿ ಹುಟ್ಟಿ ಕೊನೆಗೆ ಅವೆಲ್ಲ ಸಾಗರಕ್ಕೆ ಸೇರುವಂತೆ ಭಿನ್ನ-ಭಿನ್ನ ದೃಷ್ಟಿಯಿಂದ ಉತ್ಪನ್ನವಾದ ಧರ್ಮಗಳೆಲ್ಲ ಕೊನೆಗೆ ನನ್ನ ಸಮೀಪಕ್ಕೆ ಬರುವವು’-ಪ್ರತಿಯೊಬ್ಬ ಬಾಲಕನೂ ಪ್ರತಿದಿನ ಭರತ ಖಂಡದಲ್ಲಿ ಮಾಡುವ ಪ್ರಾರ್ಥನೆಯ ಒಂದು ಭಾಗ ಇದು. ಇಂತಹ ಪ್ರಾರ್ಥನೆ ಹಿಂದಿನಿಂದಲೂ ಇರುವಾಗ ಧರ್ಮದ ಹೆಸರಿನಲ್ಲಿ ಜಗಳ ಮಾಡಲು ಅವಕಾಶವೇ ಇರುವುದಿಲ್ಲ. ಇದು ಭರತ ಖಂಡದ ದಾರ್ಶನಿಕ ದೃಷ್ಟಿ. ನಾವು ಎಲ್ಲಾ ಮಹಾತ್ಮರನ್ನು ಗೌರವಿಸುತ್ತೇವೆ’’-ಎಂದು. (ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ-ಸಂಪುಟ-7)

ಬಸವಾದಿ ಶರಣರ ಸಂಸ್ಕಾರ ದೊರೆಯುವ ಪರಿಸರದಲ್ಲಿ ಹುಟ್ಟಿ ಬೆಳೆದ ಬಸನಗೌಡ ಪಾಟೀಲ್ ಯತ್ನಾಳ್ ದ್ವೇಷ ಬಿತ್ತುವ ತತ್ವಾದರ್ಶಗಳನ್ನು ಎಲ್ಲಿಂದ ಕಲಿತರು? ಹಿರಿಯ ಗಾಂಧಿವಾದಿ ಎಚ್. ಎಸ್. ದೊರೆಸ್ವಾಮಿಯವರನ್ನು ಬಹಿರಂಗ ಸಭೆಯಲ್ಲಿ ಪಾಕಿಸ್ತಾನದ ಏಜೆಂಟ್ ಎಂದು ಟೀಕಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ, ತಮ್ಮ ಇಡೀ ಬದುಕನ್ನು ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳ ಅನುಷ್ಠಾನಕ್ಕಾಗಿ ಮುಡಿಪಾಗಿಟ್ಟ ದೊರೆಸ್ವಾಮಿಯವರನ್ನು ಟೀಕಿಸುವುದೆಂದರೆ ಆಕಾಶಕ್ಕೆ ಉಗುಳಿದಂತೆ. ದೊರೆಸ್ವಾಮಿಯವರು ಮಹಾತ್ಮಾ ಗಾಂಧೀಜಿಯವರ ಅನುಯಾಯಿ. ಅವರು ನಿಸ್ವಾರ್ಥದಿಂದ ಸಮಾಜಸೇವೆ ಮಾಡಿದವರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಹಾತ್ಮಾ ಗಾಂಧೀಜಿಯವರೇ ಅರ್ಥವಾಗಿಲ್ಲವೆನಿಸುತ್ತದೆ. ಗಾಂಧೀಜಿಯವರ ಒಂದೆರಡು ಪುಸ್ತಕಗಳನ್ನಾದರೂ ಓದಿದ್ದರೆ ಯತ್ನಾಳ್ ಅವರಿಗೆ ಈ ಮಟ್ಟದ ಬೌದ್ಧಿಕ ದಾರಿದ್ರ್ಯ ಒದಗಿ ಬರುತ್ತಿರಲಿಲ್ಲ. ಗಾಂಧೀಜಿಯವರನ್ನು ಓದಿಕೊಂಡರೆ ಹಿಂದೂ ಧರ್ಮದ ಸಾರ ಮತ್ತು ಸಂಸದೀಯ ಪ್ರಜಾಪ್ರಭುತ್ವದ ತಿರುಳು ಅರ್ಥವಾಗುತ್ತಿತ್ತು. ಮಹಾತ್ಮಾ ಗಾಂಧೀಜಿಯವರು ಒಂದೆಡೆ ಬಸನಗೌಡ ಯತ್ನಾಳ್ ತರಹ ಅರೆಬೆಂದ ರಾಜಕಾರಣಿಗಳನ್ನು ಉದ್ದೇಶಿಸಿ-‘‘ನಮ್ಮದು ಮಾತ್ರ ನಿಜವಾದ ಧರ್ಮ, ಉಳಿದವು ಸುಳ್ಳು ಎಂದು ಒಂದು ಧರ್ಮದ ಅನುಯಾಯಿಗಳು ಎದ್ದು ನಿಂತು ಹೇಳುವ ಕಾಲ ಮುಗಿದು ಹೋಗಿದೆ. ಎಲ್ಲಾ ಧರ್ಮಗಳ ಬಗ್ಗೆಯೂ ಸಹಿಷ್ಣುತೆಯ ಭಾವನೆ ಹೊಂದಿರುವುದು ಭವಿಷ್ಯಕ್ಕೆ ಶುಭ ಸೂಚನೆ. ಇಂದಿನ ಅಗತ್ಯ ಏಕಧರ್ಮ ಅಲ್ಲ. ನಾನಾ ಧರ್ಮಗಳ ಭಕ್ತರಲ್ಲಿ ಪರಸ್ಪರ ಗೌರವ ಹಾಗೂ ಸಹಿಷ್ಣುತೆ. ನಾವು ತಲುಪಬೇಕಾದದ್ದು ಸ್ಥಿರ ಸ್ಥಿತಿಯಲ್ಲ. ವಿವಿಧತೆಯಲ್ಲಿ ಏಕತೆ. ನಮ್ಮ ಸಂಪ್ರದಾಯ, ಪಾರಂಪರಿಕತೆ ಹವಾಗುಣ ಹಾಗೂ ಇತರ ಪರಿಸರಗಳನ್ನು ಮೂಲೋತ್ಪಾಟನೆ ಮಾಡುವ ಯಾವುದೇ ಯತ್ನವೂ ಸೋಲುತ್ತದೆ. ಅದೊಂದು ದೈವ ದ್ರೋಹ. ದೀರ್ಘ ಅಧ್ಯಯನ ಹಾಗೂ ಅನುಭವದ ನಂತರ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ. ಒಂದು: ಎಲ್ಲಾ ಧರ್ಮಗಳು ಸತ್ಯವಾದವು. ಎರಡು: ಎಲ್ಲಾ ಧರ್ಮಗಳಲ್ಲಿಯೂ ಏನಾದರೂ ದೋಷ ಉಂಟು. ಮೂರು: ನನಗೆ ಎಲ್ಲಾ ಧರ್ಮಗಳೂ ನನ್ನದೇ ಹಿಂದೂ ಧರ್ಮದಂತೆ ಪ್ರಿಯ. ನಮ್ಮದೇ ನಿಕಟ ಬಂದುಗಳು ಹೇಗೂ ಹಾಗೆಯೇ ಎಲ್ಲ ಮಾನವ ಜೀವಿಗಳು ನಮಗೆ ಪ್ರಿಯರಾಗಿರಬೇಡವೇ? ಈ ರೀತಿ ಅನ್ಯ ಧರ್ಮಗಳ ಬಗ್ಗೆ ನನ್ನ ಗೌರವ ನನ್ನದೇ ಧರ್ಮಕ್ಕೆ ಹೇಗೋ ಹಾಗೆಯೇ’’ ಎಂದು ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಬಾಯಿಬಡುಕನಾಗಿ ಒದರಾಡುತ್ತಿದ್ದರೆ ದಿವ್ಯ ನಿರ್ಲಕ್ಷ್ಯ ತೋರಿಸಬಹುದಿತ್ತು. ಆತ ದೀರ್ಘ ಕಾಲದಿಂದ ಸಾರ್ವಜನಿಕ ಬದುಕಿನಲ್ಲಿರುವ ಜನಪ್ರತಿನಿಧಿ. ಸಂಸದೀಯ ಪ್ರಜಾಪ್ರಭುತ್ವದ ಶಿಷ್ಟಾಚಾರ ಪಾಲಿಸಬೇಕಾದದ್ದು ಆತನ ಕರ್ತವ್ಯ. ‘ಹಿಂದೂ ಹುಲಿ’ ಎಂದು ಅಭಿಮಾನಿಗಳು ಬಹುಪರಾಕ್ ಹಾಕಿದಾಗ ಹೆಮ್ಮೆಯಿಂದ ಬೀಗುವ ಬಸನಗೌಡ ಯತ್ನಾಳ್ ಅವರಿಗೆ ಹಿಂದೂ ಧರ್ಮದ ಮೂಲ ಪಾಠಗಳು ತಿಳಿದಿರಬೇಕು. ಆತ ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದರಿಂದ ಬಸವಾದಿ ಶರಣರ ನಡೆ-ನುಡಿಯ ಕನಿಷ್ಠ ಪರಿಜ್ಞಾನವಾದರೂ ಇರಬೇಕು. ಆತ ಏಕಕಾಲಕ್ಕೆ ಹಿಂದೂ ಧರ್ಮವನ್ನು, ಬಸವಾದಿ ಶರಣರ ಪರಂಪರೆಯನ್ನು, ಶಾಸಕನಾಗಿರುವುದರಿಂದ ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಭಾರತದ ಸಂವಿಧಾನದ ಆಶಯಗಳನ್ನು ಪ್ರತಿನಿಧಿಸುತ್ತಾರೆ. ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿರುವ ಸಂವೇದನಾಶೀಲ ಜನಪ್ರತಿನಿಧಿ ಯಾವತ್ತೂ ಮತದಾರರಲ್ಲಿ ತಾರತಮ್ಯ ಮಾಡಬಾರದು. ಮಾತ್ರವಲ್ಲ; ತಾರತಮ್ಯದ ಮಾತುಗಳನ್ನೂ ಆಡಬಾರದು. ಆದರೆ ವಿಜಯಪುರದ ಶಾಸಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ನಗರಸಭೆ ಸದಸ್ಯರ ಸಭೆಯಲ್ಲಿ ‘‘ಹಿಂದೂಗಳ ಕೆಲಸ ಮಾತ್ರ ಮಾಡಿಕೊಡಿ. ಮುಸ್ಲಿಮರ ಕೆಲಸ ಮಾಡಬೇಡಿ. ನನಗೆ ವೋಟು ಹಾಕಿದವರ ಕೆಲಸ ಮಾಡಿ, ಬೇರೆಯವರನ್ನು ದೂರವಿಡಿ. ವಿಜಯಪುರದ ಮುಸ್ಲಿಮರು ಟಿಪ್ಪು ಸುಲ್ತಾನನ ಸಂತತಿ ಇದ್ದಂತೆ’’ ಎಂದು ಹೇಳುವ ಮೂಲಕ ಭಾರತದ ಸಂವಿಧಾನಕ್ಕೂ, ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಅಗೌರವ ತೋರುತ್ತಿದ್ದಾರೆ. ಅಷ್ಟೇ ಅಲ್ಲ; ಯತ್ನಾಳ್ ಅವರು ಹಿಂದೂ ಧರ್ಮದವರು, ಬಸವಾನುಯಾಯಿಗಳು ಎಂದು ಹೇಳಿಕೊಳ್ಳುವ ಯೋಗ್ಯತೆ ಕಳೆದುಕೊಳ್ಳುತ್ತಾರೆ.

ಇತ್ತೀಚೆಗೆ ಮಿಜೋರಾಂ, ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನ ಹಾಗೂ ತೆಲಂಗಾಣ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದ ದಿನ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಜೆಪಿಯ ದಿಲ್ಲಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಹೇಳುತ್ತಾ, ‘‘ಬಿಜೆಪಿಯನ್ನು ಬೆಂಬಲಿಸದ ಮಿಜೋರಾಂ, ತೆಲಂಗಾಣ ಮತದಾರರಿಗೂ ಕೇಂದ್ರ ಸರಕಾರದ ಸೇವೆ ಸಿಗುತ್ತದೆ.’’ ಎಂದು ಹೇಳಿದ್ದರು. ಸಂಸದೀಯ ಪ್ರಜಾಪ್ರಭುತ್ವದ ಸೌಂದರ್ಯ ಇರುವುದೇ ಚುನಾವಣಾ ರಾಜಕೀಯದ ಆಚೆ ತೋರುವ ಕಾಳಜಿ, ಕಕ್ಕುಲಾತಿಯಲ್ಲಿ. ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರು ಮಾತ್ರವಲ್ಲ ಅಪಾರ ಸಂಖ್ಯೆಯ ಹಿಂದೂಗಳು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮತ ಹಾಕಿಲ್ಲ. ಆದರೆ ಗೆದ್ದ ಮೇಲೆ ಬೆಂಬಲಿಸಿದವರಿಗೆ ಹೇಗೋ ಹಾಗೆ ವಿರೋಧಿಸಿದವರಿಗೂ ಬಸನಗೌಡ ಯತ್ನಾಳ್ ಅವರೇ ಅಧಿಕೃತ ಶಾಸಕರು. ಭಾರತೀಯ ಜನತಾ ಪಕ್ಷದ ಅಧಿನಾಯಕ, ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಪ್ರತೀ ಭಾಷಣದಲ್ಲಿ ‘‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’’ ಎಂದು ಮಂತ್ರದಂತೆ ಪಠಿಸಿರುತ್ತಾರೆ. ಹಾಗಾದರೆ ‘ಸಬ್‌ಕಾ ಸಾಥ್’ ವಾಕ್ಯದ ವ್ಯಾಪ್ತಿಯಲ್ಲಿ ಮುಸ್ಲಿಮರು, ಬಿಜೆಪಿಗೆ ಮತ ಹಾಕದವರು ಸೇರುವುದಿಲ್ಲವೇ? ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಿಂತ ಭಿನ್ನ ರಾಜಕಾರಣಿಯೇ ಈ ಬಸನಗೌಡ ಪಾಟೀಲ ಯತ್ನಾಳ್? ಹಿಂದೂ ಧರ್ಮದ ತತ್ವಾದರ್ಶಗಳಿಗೆ, ಬಸವಾದಿ ಶರಣರ ನುಡಿಗಳಿಗೆ, ಸಂಸದೀಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಭಾರತದ ಸಂವಿಧಾನವನ್ನು ಗೌರವಿಸುವ ಜಾಯಮಾನ ಬಸನಗೌಡ ಯತ್ನಾಳ್ ಅವರದ್ದಲ್ಲ. ಕನಿಷ್ಠಪಕ್ಷ ತಮ್ಮದೇ ಪಕ್ಷದ ಅಧಿನಾಯಕ, ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ‘‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’’ ಎಂಬ ಮಾತಿಗಾದರೂ ಬೆಲೆ ಕೊಡಬೇಕಲ್ಲವೇ?

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದವರಲ್ಲಿ ಯಡಿಯೂರಪ್ಪ-ಅನಂತಕುಮಾರ್ ಜೋಡಿ ಪ್ರಮುಖವಾದುದು. ಯಡಿಯೂರಪ್ಪ ಕರ್ನಾಟಕದುದ್ದಕ್ಕೂ ಸುತ್ತಾಡಿ ಪಕ್ಷಕ್ಕಾಗಿ ಸೈಕಲ್ ಹೊಡೆಯದಿದ್ದರೆ ಬಿಜೆಪಿಯು ಅಧಿಕಾರ ವಂಚಿತ ಇತರ ಪಕ್ಷಗಳಂತೆ ಇರುತ್ತಿತ್ತು. ದಕ್ಷಿಣ ಭಾರತದ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಬಿಜೆಪಿಗೆ ತಲೆ ಎತ್ತಿ ನಿಲ್ಲಲು ಸಾಧ್ಯವಾಗಲೇ ಇಲ್ಲ. ಎಸ್. ಮಲ್ಲಿಕಾರ್ಜುನಯ್ಯ, ಎ.ಕೆ. ಸುಬ್ಬಯ್ಯ, ಬಿ.ಬಿ. ಶಿವಪ್ಪ, ಯಡಿಯೂರಪ್ಪ ಮುಂತಾದವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರಿಂದಲೇ ಅದರ ನೆಲೆ ವಿಸ್ತಾರವಾಯಿತು. ಯಡಿಯೂರಪ್ಪನವರ ಹತ್ತಾರು ಅವಗುಣಗಳೊಂದಿಗೆ ಅವರ ಕ್ರಿಯಾಶೀಲತೆ, ಜಿದ್ದು, ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ತತ್ವದಲ್ಲಿ ನಂಬಿಕೆ ಇರಿಸಿದ್ದನ್ನು ಮೆಚ್ಚಿಕೊಳ್ಳಲೇಬೇಕು. ಕರ್ನಾಟಕದ ಮಟ್ಟಿಗೆ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ ಅವರನ್ನೇ ಕಟುವಾದ ಪದಗಳಲ್ಲಿ ನಿರಂತರವಾಗಿ ಟೀಕಿಸುವ ಬಸನಗೌಡ ಪಾಟೀಲ್ ಯತ್ನಾಳ್ ನಿಷ್ಠೆ ಯಾರಿಗೆ? ಬಿಜೆಪಿ ಸಂವಿಧಾನ ಭಿನ್ನಮತ ಮಾಡಲು ಹೇಳುತ್ತದೆಯೇ? ಯತ್ನಾಳ್ ಶಾಸಕ, ಸಂಸದ, ಕೇಂದ್ರ ಮಂತ್ರಿ ಆಗುವುದರಲ್ಲಿ ಯಡಿಯೂರಪ್ಪ ಪಾತ್ರ ಗುಲಗುಂಜಿಯಷ್ಟಾದರೂ ಇದ್ದಿರಬೇಕಲ್ಲ. ಯಡಿಯೂರಪ್ಪನವರ ಪುತ್ರ ವ್ಯಾಮೋಹ ಸೇರಿದಂತೆ ಅವರ ಗುಣದೋಷಗಳ ಚರ್ಚೆ ಪಕ್ಷದ ಸೂಕ್ತ ವೇದಿಕೆಯಲ್ಲಿ ಮಾಡಬೇಕು.

ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್ ಅತ್ಯಂತ ಅದೃಷ್ಟವಂತ ರಾಜಕಾರಣಿ. ಕೇವಲ 31ನೇ ವಯಸ್ಸಿಗೆ ಬಿಜಾಪುರ ನಗರ ವಿಧಾನಸಭಾ ಮತ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಿಂದ 1999ರ ವರೆಗೆ ಶಾಸಕರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, 1999ರಿಂದ 2009ರವರೆಗೆ 10 ವರ್ಷಗಳ ಕಾಲ ಬಿಜಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು 36ನೇ ವಯಸ್ಸಿಗೆ ಸಂಸದರಾದ ಯತ್ನಾಳ್ ಮೊದಲ ಅವಧಿಯಲ್ಲೇ ಮಂತ್ರಿಯೂ ಆದರು. ಯತ್ನಾಳ್ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಟೆಕ್ಸ್‌ಟೈಲ್, (2002ರಿಂದ 2003) ರೈಲ್ವೆ ರಾಜ್ಯಮಂತ್ರಿ(2003ರಿಂದ 2004)ಯಾಗಿದ್ದರು. ಹಾಗೆ ನೋಡಿದರೆ ಯಡಿಯೂರಪ್ಪ ಬಿಜೆಪಿಗಾಗಿ ಸೈಕಲ್ ಸುತ್ತಿ ಶಾಸಕನಾಗಿದ್ದು 40ನೇ ವಯಸ್ಸಿಗೆ. ಮಾಜಿ ಮುಖ್ಯಮಂತ್ರಿ ಮಗ ಬಸವರಾಜ ಬೊಮ್ಮಾಯಿ ಎಂಎಲ್‌ಸಿ ಆದದ್ದು 38ನೇ ವಯಸ್ಸಿಗೆ. ವಿಧಾನಸಭಾ ಸದಸ್ಯರಾಗಲು ಸಾಧ್ಯವಾದದ್ದು 48ನೇ ವಯಸ್ಸಿಗೆ. ಯಡಿಯೂರಪ್ಪ ಮಗ ವಿಜಯೇಂದ್ರ ವಿಧಾನಸಭೆ ಪ್ರವೇಶಿಸಿದ್ದು 49ನೇ ವಯಸ್ಸಿಗೆ. 49ನೇ ವಯಸ್ಸಿನೊಳಗೆ ಬಸನಗೌಡ ಪಾಟೀಲ್ ಯತ್ನಾಳ್ ಒಂದು ಬಾರಿ ಶಾಸಕ, ಎರಡು ಅವಧಿಗೆ ಸಂಸದ, ಎರಡು ವರ್ಷ ಕೇಂದ್ರದಲ್ಲಿ ಮಂತ್ರಿ. ಇಷ್ಟೊಂದು ಅವಕಾಶ ರಾಜಕೀಯ ಹಿನ್ನೆಲೆ ಇರದ ಕುಟುಂಬದಿಂದ ಬಂದ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಸಿಗುತ್ತಿದೆ ಅಂದರೆ ಜನತಂತ್ರದ ಪವಾಡವೇ ಸರಿ. ಇಷ್ಟೆಲ್ಲ ನೀಡಿದ ಪಕ್ಷಕ್ಕೆ ಯತ್ನಾಳ್ ಜೀವನವಿಡೀ ಋಣಿಯಾಗಿರಬೇಕಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ವಾಚಾಮ ಗೋಚರ ಟೀಕಿಸುತ್ತಾರೆ. ಪಕ್ಷದ ಕೆಂಗಣ್ಣಿಗೆ ಗುರಿಯಾಗುತ್ತಾರೆ. 2010ರಿಂದ 2013ರ ವರೆಗೆ ಮಾಜಿ ಪ್ರಧಾನಿ ದೇವೇಗೌಡರ ಜೆಡಿಎಸ್‌ನಲ್ಲಿ ಕ್ರಿಯಾಶೀಲರಾಗುತ್ತಾರೆ.

ಜೆಡಿಎಸ್‌ನವರು ಯತ್ನಾಳ್ ಅವರನ್ನು ಮಹಾಪ್ರಧಾನ ಕಾರ್ಯದರ್ಶಿ ಮಾಡುತ್ತಾರೆ. ಲಿಂಗಾಯತ ವೋಟು ತರದ, ಸ್ವತಃ ಗೆಲ್ಲದ ಯತ್ನಾಳ್‌ಗೆ ದೇವೇಗೌಡರು ರಾಜ್ಯಾಧ್ಯಕ್ಷನ ಸ್ಥಾನ ನೀಡುವುದಿಲ್ಲ. ಆ ಪಕ್ಷ ತೊರೆದು ಬಿಜೆಪಿಯ ಬಾಗಿಲು ತಟ್ಟುತ್ತಾರೆ. ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಜನ ಬಿಜೆಪಿಯ ಹಿರಿಯ ಮುಖಂಡರು ಯತ್ನಾಳ್ ಸೇರ್ಪಡೆಗೆ ಒಪ್ಪಿಕೊಳ್ಳುವುದಿಲ್ಲ. ಆದರೆ 2018ರ ಚುನಾವಣೆಗೂ ಮುನ್ನ ಯಡಿಯೂರಪ್ಪನವರು ವಿಶೇಷ ಆಸಕ್ತಿ ತೋರಿ, ಹೈಕಮಾಂಡ್ ಮನವೊಲಿಸಿ ಯತ್ನಾಳ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿ 2015ರಲ್ಲಿ ಎಂಎಲ್‌ಸಿ (ಸ್ಥಳೀಯ ಸಂಸ್ಥೆಗಳ) ಚುನಾವಣೆ ಗೆದ್ದಿದ್ದು, 2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದ್ದು ಯತ್ನಾಳ್ ಪಿತ್ತ ನೆತ್ತಿಗೇರುವಂತೆ ಮಾಡುತ್ತದೆ. ಮುಸ್ಲಿಮ್ ದ್ವೇಷ, ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಟೀಕಿಸಿದರೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಯಾರೋ ತಲೆ ತುಂಬಿರಬೇಕು. 2023ರ ಚುನಾವಣೆ ಗೆದ್ದಾಗಿನಿಂದ ಮುಸ್ಲಿಮರು ಮತ್ತು ಯಡಿಯೂರಪ್ಪ ಕುಟುಂಬದ ಮೇಲೆ ಹರಿಹಾಯುವುದು, ಕುಹಕದ ಮಾತುಗಳನ್ನಾಡುವುದು ಒಂದು ವ್ಯಸನವಾಗಿಬಿಟ್ಟಿದೆ.

ಬೆಳಗಾವಿ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ಹುಬ್ಬಳ್ಳಿಯಲ್ಲಿ ಮುಸ್ಲಿಮ್ ಧರ್ಮಗುರುಗಳ ದಕ್ಷಿಣ ಭಾರತದ ಸಮಾವೇಶ ಜರುಗುತ್ತದೆ. ಆ ಸಮಾವೇಶದಲ್ಲಿ ವಿಜಯಪುರದ ಮೌಲ್ವಿ ತನ್ವೀರ್ ಹಾಶ್ಮಿಯವರೂ ಭಾಗವಹಿಸಿರುತ್ತಾರೆ. ಸಮಾವೇಶದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ಸಂವೇದನಾಶೀಲರಾಗಿಯೇ ‘‘ನಿಮಗೂ ಉತ್ತಮ ಶಿಕ್ಷಣ ಸಿಗಬೇಕು. ನಿಮಗೂ ಈ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು. ನೀವೂ ಭಾರತೀಯರು. ಈ ದೇಶ ನಿಮಗೂ ಸೇರಿದ್ದು, ನನಗೂ ಸೇರಿದ್ದು. ಎಲ್ಲರೂ ಒಂದು ತಾಯಿಯ ಮಕ್ಕಳಂತೆ, ಅಣ್ಣ ತಮ್ಮಂದಿರಂತೆ ಬಾಳೋಣ. ಎಲ್ಲಾ ಧರ್ಮ, ಜಾತಿಗಳಲ್ಲಿ ಬಡವರಿದ್ದಾರೆ. ಮುಸ್ಲಿಮ್ ಸಮುದಾಯದ ಏಳ್ಗೆಗೆ ಶ್ರಮಿಸುವ ಮುಹಮ್ಮದ್ ಭಾಷಾ ಪೀರಾ ದರ್ಗಾಕ್ಕೆ ಅನುದಾನ ಕೊಡುತ್ತೇನೆ. ಅಲ್ಪಸಂಖ್ಯಾತರ ಇಲಾಖೆಗೆ ರೂ. 10,000 ಕೋಟಿ ಅನುದಾನ ಕೊಡುತ್ತೇನೆ’’ ಎಂದು ಮಾತನಾಡಿದ್ದರು. ಸಮಾವೇಶದಲ್ಲಿ ಭಾಗವಹಿಸಿದ ಮೌಲ್ವಿ ತನ್ವೀರ್ ಹಾಶ್ಮಿಯವರಿಗೆ ಐಸಿಸ್ ನಂಟಿದೆಯೆಂದೂ, ಮುಸ್ಲಿಮರಿಗೆ ದೇಶದ ಸಂಪತ್ತಿನಲ್ಲಿ ಪಾಲು ಕೊಡುತ್ತಾರೆಂದು ಗದ್ದಲ ಶುರುಮಾಡಿದ ಯತ್ನಾಳ್ ಸಾಕಷ್ಟು ಪ್ರಚಾರ ಗಿಟ್ಟಿಸಿದರು. ಮೌಲ್ವಿ ತನ್ವೀರ್ ಹಾಶ್ಮಿಯವರು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆಗೆ ಇರುವ ಭಾವಚಿತ್ರಗಳು ಹೊರಬಂದ ಮೇಲೆ ಯತ್ನಾಳ್ ಐಸಿಸ್ ನಂಟಿನ ತರ್ಕ ಬಿದ್ದು ಹೋಯಿತು.

ಯತ್ನಾಳ್ ಸೇರಿದಂತೆ ದ್ವೇಷದ ಬೀಜ ಬಿತ್ತುವ ಬಿಜೆಪಿ ನಕಲಿ ಹಿಂದೂಗಳು ಸ್ವಾಮಿ ವಿವೇಕಾನಂದರ ಈ ಮಾತುಗಳನ್ನು- ‘‘ಪ್ರಪಂಚದಲ್ಲಿ ಒಂದೇ ಧರ್ಮವನ್ನು, ಒಂದೇ ಬಗೆಯ ಪೂಜೆಯನ್ನು, ಒಂದೇ ಬಗೆಯ ನೀತಿಯನ್ನು ಒಪ್ಪಿಕೊಂಡರೆ ಅದೇ ಪ್ರಪಂಚಕ್ಕೆ ಒದಗಬಹುದಾದ ಮಹಾ ದುರ್ಗತಿ. ಇದು ಎಲ್ಲಾ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಕುಠಾರಪ್ರಾಯವಾಗುವುದು. ಯಾವುದನ್ನು ಶ್ರೇಷ್ಠ ಧರ್ಮವೆಂದು ನಾವು ಭಾವಿಸುವೆವೋ ಅದನ್ನು ನ್ಯಾಯವಾದ ಮಾರ್ಗದಿಂದಲೂ, ಅನ್ಯಾಯವಾದ ಮಾರ್ಗದಿಂದಲೂ ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡಿ ಧರ್ಮವು ಶೀಘ್ರವಾಗಿ ನಾಶವಾಗುವಂತೆ ಮಾಡುವುದಕ್ಕಿಂತ, ಪ್ರತಿಯೊಬ್ಬರೂ ತಾವು ಯಾವುದನ್ನು ಶ್ರೇಷ್ಠ ಆದರ್ಶ ಎಂದು ಭಾವಿಸುತ್ತಾರೋ ಅದಕ್ಕೆ ಇರುವ ಆತಂಕಗಳನ್ನು ನಿವಾರಿಸಿ ಒಂದೇ ಧರ್ಮವು ಜಗತ್ತಿನಲ್ಲಿ ಸ್ಥಾಪಿತವಾಗದಂತೆ ನೋಡಿಕೊಳ್ಳಲು ಯತ್ನಿಸಬೇಕು’’- ಎಂಬುದು ಅರ್ಥ ಮಾಡಿಕೊಳ್ಳಬೇಕು. ಯತ್ನಾಳ್ ಅವರು ದ್ವೇಷ-ನಂಜು ಕಾರುವ, ಬೆಂಕಿ-ಹೊಗೆಯುಗುಳುವ ಯಂತ್ರವಾಗಿದ್ದಾರೆ. ಅವರು ನಿಜವಾದ ಹಿಂದೂವಾಗಬೇಕಾದರೆ ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ರಾಮಕೃಷ್ಣ ಪರಮಹಂಸರ ವಿಚಾರಧಾರೆಗಳನ್ನು ಓದಿ ಮನನ ಮಾಡಬೇಕು. ನಿಜಶರಣನಾಗಬೇಕೆಂದರೆ ನುಡಿ ಮುತ್ತಿನ ಹಾರದಂತೆ, ಮಾಣಿಕ್ಯರ ದೀಪ್ತಿಯಂತೆ, ಸ್ಫಟಿಕದ ಸಲಾಕೆಯಂತಿರಬೇಕು. ಓದಿನ ಕೊರತೆಯಿಂದ ಯತ್ನಾಳ್ ಉತ್ತಮ ಸಂಸದೀಯ ಪಟುವಾಗಿಯೂ ರೂಪುಗೊಂಡಿಲ್ಲ. ನಡೆ-ನುಡಿಯಲ್ಲಿ ಫ್ಯೂಡಲ್ ಗತ್ತು ಮಾತ್ರ ಎದ್ದು ಕಾಣುತ್ತದೆ. ನೀರಾವರಿ ಸಮಸ್ಯೆಗಳ ಬಗ್ಗೆ, ಪ್ರಾದೇಶಿಕ ಅಸಮಾನತೆ ಕುರಿತು, ಒಟ್ಟಾರೆ ರಾಜ್ಯದ ಅಭಿವೃದ್ಧಿ ಬಗ್ಗೆ ಆಳವಾದ ತಿಳುವಳಿಕೆ ಯತ್ನಾಳ್ ಅವರಿಗಿಲ್ಲ.

ಮುಸ್ಲಿಮ್ ಸಮುದಾಯವನ್ನು ದ್ವೇಷಿಸುವುದು ಹಿಂದೂವಿನ ಕೆಲಸ ಎಂದು ಭಾವಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೂ ಧರ್ಮವನ್ನು ಕುಬ್ಜಗೊಳಿಸುತ್ತಿದ್ದಾರೆ. ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಜಗತ್ತಿಗೇ ಪರಿಚಯಿಸಿದ ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ ಅವರನ್ನು ಅಪಮಾನಿಸುತ್ತಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವ, ಭಾರತದ ಸಂವಿಧಾನದ ಆಶಯಗಳ ವಿರುದ್ಧ ದ್ವೇಷದ ರಾಜಕಾರಣಕ್ಕೆ ಕುಮ್ಮಕ್ಕು ಕೊಡುವ ಮೂಲಕ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರನ್ನು ಅಗೌರವದಿಂದ ಕಾಣುತ್ತಿದ್ದಾರೆ. ಅಷ್ಟು ಮಾತ್ರವಲ್ಲ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ಧಿಕ್ಕರಿಸುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಆಚಾರವಿಲ್ಲದ ನಾಲಿಗೆಯಿಂದ ಬಿಜೆಪಿಗೇ ಭಾರವಾಗಿದ್ದಾರೆ. ಮೋದಿ-ಅಮಿತ್ ಶಾ ಸೇರಿಯೇ ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ. ಅವರಿಬ್ಬರ ನಿರ್ಣಯವನ್ನೇ ಧಿಕ್ಕರಿಸಿ ಮಾತನಾಡುವ ಯತ್ನಾಳ್‌ಗೆ ಯಾವ ಶಕ್ತಿ ಬೆಂಬಲಿಸುತ್ತಿರಬಹುದು? ಹಿಂದೂ ಧರ್ಮದ ವಿರೋಧಿ, ಶರಣ ಸಂಸ್ಕಾರದ ವಿರೋಧಿ, ಭಾರತದ ಸಂವಿಧಾನದ ವಿರೋಧಿ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿಯ ಮೋದಿ-ಅಮಿತ್ ಶಾ ಜೋಡಿ ಮಾತ್ರ ತಕ್ಕ ಪಾಠ ಕಲಿಸಬೇಕು. ನಕಲಿ ಹಿಂದೂ ಹುಲಿಯನ್ನು ಬೋನಿಗೆ ಹಾಕಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News