ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರಕಾರ ಘೋಷಿಸಿದ್ದು ನಿಜಕ್ಕೂ ಸ್ತುತ್ಯರ್ಹ ಕೆಲಸ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಸವಣ್ಣನವರ ಭಾವಚಿತ್ರಗಳನ್ನು ಸರಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಹಾಕಲು ಆದೇಶ ಮಾಡಿತ್ತು. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಭಾವಚಿತ್ರಗಳನ್ನು ಹಾಕಿಸಿದ್ದು ಸಿದ್ದರಾಮಯ್ಯ ಅವರಿಗೆ ಬಸವಾದಿ ಶರಣರ ಬಗೆಗೆ ಇರುವ ಗೌರವದ ದ್ಯೋತಕ. ಆದರೆ ಇಷ್ಟಕ್ಕೆ ಮತಾಂಧ ಶಕ್ತಿಗಳಿಗೆ ಸಮರ್ಪಕ ಮತ್ತು ಸಮರ್ಥ ಉತ್ತರವಾಗಲಾರದು.

Update: 2024-01-27 04:49 GMT

Photo: twitter.com/Tej_AnanthKumar

‘‘ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ

ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ

ಮಾಡುವ ನಿಜಗುಣವುಳ್ಳಡೆ

ಕೂಡಿಕೊಂಬ ನಮ್ಮ ಕೂಡಲಸಂಗಮದೇವ’’

-ಬಸವಣ್ಣ

12 ನೇ ಶತಮಾನದ ಧೀಮಂತ ಸಮಾಜ ಸುಧಾರಕ. ಶರಣ ಚಳವಳಿಯ ನೇತಾರ. ಬಸವಣ್ಣನವರ ವಿಷಯದಲ್ಲಿ ಕರ್ನಾಟಕದ ಜನ ಮನಸ್ಸಿಲ್ಲದೆ ಮಾಡಿ ಮಾಡಿ ಕೆಟ್ಟಿದ್ದಾರೆ. ಮಾಡುವ ನೀಡುವ ನಿಜಗುಣ ಗೊತ್ತಿಲ್ಲದೆ ಬಸವಾದಿ ಶರಣರ ತತ್ವಾದರ್ಶಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಕರ್ನಾಟಕದ ಜಾತಿವಾದಿ ಲಿಂಗಾಯತರು ಬಸವಣ್ಣನವರ ಸುತ್ತ ಜಾತಿ ಬೇಲಿ ಕಟ್ಟಿ ಅವರನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಲಿಂಗಾಯತ ಸಮುದಾಯದ ರಾಜಕಾರಣಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್ ಆದಿಯಾಗಿ ಎಲ್ಲರೂ ಬಸವ ನಾಮವನ್ನು ಅಗತ್ಯವೆನಿಸಿದಾಗ ಬಳಸಿಕೊಂಡು ಉದ್ಧಾರವಾಗಿದ್ದಾರೆ. ಬಸವಾದಿ ಶರಣರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಾಡಿನ ಸಮಸ್ತ ಜನತೆಯ ಅರಿವಿನ ಭಾಗವಾಗಿಸಿದ್ದರೆ ಈ ಹೊತ್ತು ಕರ್ನಾಟಕವು ಉತ್ತರ ಭಾರತದ ರಾಜ್ಯಗಳಂತೆ ಕೋಮುವಾದಿ ಕಾಯಿಲೆಯಿಂದ ಈ ಪ್ರಮಾಣದಲ್ಲಿ ಬಳಲುತ್ತಿರಲಿಲ್ಲ.

ಕರ್ನಾಟಕದ ಎಲ್ಲ ಪಕ್ಷಗಳ ರಾಜಕಾರಣಿಗಳು ಬಸವಾದಿ ಶರಣರನ್ನು ಮಾತ್ರವಲ್ಲ, ಸ್ವಾತಂತ್ರ್ಯ ಪೂರ್ವ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಕಹಳೆ ಮೊಳಗಿಸಿದ, ಅಭಿವೃದ್ಧಿಯ ಹರಿಕಾರರೆನಿಸಿಕೊಂಡ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ (ವಿಶಾಲ) ಎಲ್ಲ ಜಾತಿಯ ಬಡವರು ಮತ್ತು ಸಮಸ್ತ ಹಿಂದುಳಿದ ವರ್ಗಗಳಿಗೆ ಬಲ ನೀಡಿದ ದೇವರಾಜ ಅರಸು ಅವರನ್ನು ಉಪೇಕ್ಷಿಸಿದ್ದಾರೆ ಅಥವಾ ಅಗತ್ಯಕ್ಕೆ ತಕ್ಕಂತೆ ತಕ್ಕಷ್ಟು ಬಳಸಿಕೊಂಡಿದ್ದಾರೆ. ಬಸವಣ್ಣ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಮಾನತೆಯ ತತ್ವ ಪತಿಪಾದಿಸಿದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನಿಚ್ಚಳಗೊಳಿಸಿದ ಪ್ರಜಾಪ್ರಭುತ್ವವಾದಿ ಶರಣ ಮಂತ್ರಿ. ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಅತ್ಯುತ್ತಮ ಮಾದರಿಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ ಅಪರೂಪದ ಪ್ರಗತಿಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ದೇವರಾಜ ಅರಸು ಅವರು ಕರ್ನಾಟಕ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಾರದೆ ಇದ್ದಿದ್ದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಲ ಸಿಗುತ್ತಿರಲಿಲ್ಲ. ಬಡವರು, ದಲಿತರು, ಹಿಂದುಳಿದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಲಿಂಗಾಯತರು ರಾಜಕೀಯ ಬಲ ಪಡೆದುಕೊಳ್ಳಲು ಸಾಧ್ಯವಾದದ್ದು 12ನೇ ಶತಮಾನದಲ್ಲಿ ನಡೆದ ವ್ಯಾಪಕ ಮತಾಂತರದಿಂದ. ಬಸವ ಪೂರ್ವ ಕಾಲದಲ್ಲಿ ಶೈವದ ಪ್ರತ್ಯೇಕ ಭಾಗವಾಗಿದ್ದ ವೀರಶೈವ ಸಮುದಾಯದ ಸಂಖ್ಯಾಬಲ ನಗಣ್ಯ ಎನ್ನುವಷ್ಟು ಕಡಿಮೆ ಇತ್ತು. ಈ ಹೊತ್ತಿನ ಲಿಂಗಾಯತ ಸಮುದಾಯ ಎಲ್ಲಾ ಜಾತಿಗಳ ಒಕ್ಕೂಟವೇ ಆಗಿದೆ. ಅವುಗಳನ್ನೇ ಉಪಜಾತಿಗಳ ಮೂಲಕ ಗುರುತಿಸುತ್ತೇವೆ. ಶರಣ ಚಳವಳಿಯ ನೇತಾರ ಬಸವಣ್ಣ; ಎಲ್ಲಾ ಜಾತಿ ಜನಾಂಗದ ಸ್ತ್ರೀ-ಪುರುಷ, ಮೇಲು-ಕೀಳು ಭೇದವೆಣಿಸದೆ ಅನುಭವ ಮಂಟಪದಲ್ಲಿ ಮೇಳೈಸಿದ. ಅಭಿನವ ಗುಪ್ತ, ನಾಗಾರ್ಜುನ ಗೋರಖನಾಥರ ಮಟ್ಟದ ಅನುಭಾವಿ- ದಾರ್ಶನಿಕ ಕವಿ ಅಲ್ಲಮಪ್ರಭು ಅನುಭವ ಮಂಟಪದ ಅಧ್ಯಕ್ಷ. ಅಲ್ಲಮಪ್ರಭು ನೇತೃತ್ವದಲ್ಲಿ ಅರ್ಥಪೂರ್ಣ ಸಂವಾದ ನಡೆಯುತ್ತಿತ್ತು. ಸೂಳೆ ಸಂಕವ್ವೆ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ, ಲದ್ದೆ ಸೋಮಣ್ಣ, ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ, ಕಾಶ್ಮೀರದ ಮರುಳ ಶಂಕರ ದೇವ, ಸೊನ್ನಲಿಗೆಯ ಸಿದ್ದರಾಮಯ್ಯ, ಚನ್ನಬಸವಣ್ಣ ಮತ್ತು ಬಿಜ್ಜಳನ ಆಸ್ಥಾನದ ಅರ್ಥ ಮಂತ್ರಿ ಬಸವಣ್ಣ ಸೇರಿದಂತೆ ಅಸಂಖ್ಯಾತ ಶರಣರು ಅನುಭವ ಮಂಟಪದ ಭಾಗವಾಗಿದ್ದರು.

ಈ ಹೊತ್ತಿನಲ್ಲಿ ಮಂದಿರ-ಮಸೀದಿ ವಾಗ್ವಾದಗಳಿಗೆ ಬಸವಣ್ಣನವರು ಅತ್ಯಂತ ಸರಳ ಮತ್ತು ಉದಾತ್ತ ಉತ್ತರಗಳನ್ನು ಕಂಡುಕೊಂಡಿದ್ದರು. ಶಿವಭಕ್ತರಾದ ಬಸವಣ್ಣನವರು ಶಿವನ ಬಗೆಗೆ ಪ್ರೀತಿ-ಗೌರವ ಉಳಿಸಿಕೊಂಡೇ ಶಿವಾಲಯಗಳಿಗೆ ಪರ್ಯಾಯ ಸೂಚಿಸಿದರು.

‘‘ಉಳ್ಳವರು ಶಿವಾಲಯ ಮಾಡುವರು

ನಾನೇನು ಮಾಡಲಿ ಬಡವನಯ್ಯ

ಎನ್ನ ಕಾಲೇ ಕಂಬ ದೇಹವೇ ದೇಗುಲ

ಶಿರವೇ ಹೊನ್ನ ಕಲಶವಯ್ಯ

ಕೂಡಲಸಂಗಮದೇವ ಕೇೀಳಯ್ಯ

ಸ್ಥಾವರಕ್ಕಲಿವುಂಟು ಜಂಗಮಕ್ಕಳಿವಿಲ್ಲ’’

ಎಂದು ಹೇಳುವ ತತ್ವಾದರ್ಶಗಳ ಅಗತ್ಯವನ್ನು ಪ್ರತಿಪಾದಿಸಿದರು. ಬಸವಣ್ಣನ ಕಾಲದಲ್ಲಿ ನಿರ್ಮಿಸಿದ ಸ್ಥಾವರ ಕಟ್ಟಡಗಳು ಈಗ ಉಳಿದಿಲ್ಲ. ಆದರೆ ಅವರ ವಿಚಾರಧಾರೆಗಳು ನಮ್ಮ ಕಾಲಕ್ಕೂ ದೊರೆತಿವೆ. ಮುಂದಿನ ಕಾಲಕ್ಕೂ ಸಾಗುತ್ತವೆ. ಮೇಲಿನ ವಚನದಲ್ಲಿ ತತ್ವಶಾಸ್ತ್ರ, ಅರ್ಥಶಾಸ್ತ್ರ; ಅಷ್ಟು ಮಾತ್ರವಲ್ಲ ಭಕ್ತಿಯ ಸಮರ್ಪಣಾ ಭಾವದ ನಿಲುವು ಅಡಕವಾಗಿದೆ.

ಜಾತಿ ವ್ಯವಸ್ಥೆಯ ಅರ್ಥ ಹೀನತೆಯನ್ನು ಮನವರಿಕೆ ಮಾಡಿಕೊಡುವ ಬಸವಣ್ಣನವರ ಈ ವಚನ ಎಳೆ ಮಕ್ಕಳಲ್ಲಿ ಬಿತ್ತಿದ್ದರೆ ಜಾತಿ ರಹಿತ ಸಮಾಜವೆಂಬುದು ಎಂದೋ ಸಾಕಾರಗೊಳ್ಳುತ್ತಿತ್ತು. ‘‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ, ಕುಲವೊಂದೆ ತನ್ನ ತಾನಾರಿದವಂಗೆ, ಫಲವೊಂದೆ ಷಡುದರುಶನ ಮುಕ್ತಿಗೆ, ನಿಲವೊಂದೆ ಕೂಡಲಸಂಗಮದೇವ ನಿಮ್ಮ ನರಿದವಂಗೆ’’ ಜಾತಿಯೆಂಬ ಕೊಚ್ಚೆಯಲ್ಲಿ ಬಿದ್ದವರನ್ನು ಮೇಲೆತ್ತಲು ಇದಕ್ಕಿಂತಲೂ ಸರಳ ಸತ್ಯ ಇಲ್ಲವೇ ಇಲ್ಲ. ತನ್ನನ್ನು ತಾನು ತಿಳಿದುಕೊಳ್ಳುವುದೆಂದರೆ ದೇವರ ನಿಜರೂಪ ಅರಿತಂತೆ. ಮೌಢ್ಯ, ಕಂದಾಚಾರ ಮತ್ತು ಜ್ಯೋತಿಷಿಗಳ ಜಾಲದಲ್ಲಿ ಸಿಲುಕಿ ಒದ್ದಾಡುವವರಿಗೆ ಬದುಕಿನ ನೈಜ ಸ್ವರೂಪ ತೋರಿಸಿ ಕೊಡುವ ಈ ವಚನ ನೋಡಿ. ‘‘ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯ, ರಾಶಿಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ, ನಾಳಿನ ದಿನ ಇಂದಿಕಿಂದಿನ ದಿನ ಲೇಸೆಂದು ಹೇಳಿರಯ್ಯ, ಚಂದ್ರಬಲ, ತಾರಾಬಲ ಉಂಟೆಂದು ಹೇಳಿರಯ್ಯ, ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ’’ ಎಂಬ ಮಾತುಗಳು ಎಂಬುದು ಮೌಢ್ಯದ ಮುಖವಾಡವನ್ನೇ ಕಳಚುತ್ತವೆ. ಈ ವಚನ ಬಹುದೊಡ್ಡ ವೈಜ್ಞಾನಿಕ ಸತ್ಯವನ್ನೇ ಪ್ರತಿಪಾದಿಸುತ್ತದೆ ಎಂಬುದು ಚಾಲ್ತಿಯಲ್ಲಿರುವ ಪ್ರಮೇಯ. ಸಮಾನತೆಯ ತತ್ವ ಬೋಧಿಸಿದ, ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ತಾತ್ವಿಕ ನೆಲೆಯೊದಗಿಸಿದ, ಜಾತಿ ವ್ಯವಸ್ಥೆ, ಮೌಢ್ಯ-ಕಂದಾಚಾರಗಳ ಮುಖವಾಡ ಕಳಚಿದ ಬಸವಣ್ಣ ಸಮ ಸಮಾಜದ ಬದುಕಿಗೆ ಅಗತ್ಯವಾಗಿರುವ ಸರಳ ಸತ್ಯವನ್ನೇ ವಚನಗಳ ಮೂಲಕ ಹೇಳಿದ್ದಾರೆ. ವಚನ ಚಳವಳಿಯೆಂದರೆ ಬಹು ದೊಡ್ಡ ವಾಗ್ವಾದ-ಸಂವಾದಗಳ ಸಮುದ್ರ ಮಥನದ ಭಾವಾಭಿವ್ಯಕ್ತಿ. ಹಲವು ಅಭಿಪ್ರಾಯ ಭೇದಗಳ ಸಂಗಮ ಬಸವಣ್ಣ; ಬಸವಾದಿ ಶರಣರ ಒಟ್ಟಾಶಯದ ಪ್ರತೀಕ. ನಮ್ಮ ಕಾಲದ ಜಾತೀಯತೆ, ಕೋಮುವಾದಿ ಉನ್ಮಾದ ಮತ್ತು ಮತಾಂಧತೆಗೆ ದಿವ್ಯ ಔಷಧಿ ಇರುವುದೇ ಬಸವಾದಿ ಶರಣರ ವಚನಗಳು, ಮುಂದುವರಿದ ಭಾಗದಂತಿರುವ ಸೂಫಿ ತತ್ವಪದಗಳು. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರಕಾರ ಘೋಷಿಸಿದ್ದು ನಿಜಕ್ಕೂ ಸ್ತುತ್ಯರ್ಹ ಕೆಲಸ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಸವಣ್ಣನವರ ಭಾವಚಿತ್ರಗಳನ್ನು ಸರಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಹಾಕಲು ಆದೇಶ ಮಾಡಿತ್ತು. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಭಾವಚಿತ್ರಗಳನ್ನು ಹಾಕಿಸಿದ್ದು ಸಿದ್ದರಾಮಯ್ಯ ಅವರಿಗೆ ಬಸವಾದಿ ಶರಣರ ಬಗೆಗೆ ಇರುವ ಗೌರವದ ದ್ಯೋತಕ. ಆದರೆ ಇಷ್ಟಕ್ಕೆ ಮತಾಂಧ ಶಕ್ತಿಗಳಿಗೆ ಸಮರ್ಪಕ ಮತ್ತು ಸಮರ್ಥ ಉತ್ತರವಾಗಲಾರದು.

ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರೆಲ್ಲ ಬಸವಣ್ಣನವರನ್ನು ತಮ್ಮ ಲಿಂಗಾಯತ ಸ್ಥಾನ ಭದ್ರಪಡಿಸಿಕೊಳ್ಳಲು ಬಳಸಿಕೊಂಡರೇ ಹೊರತು ಬಸವಾದಿ ಶರಣರ ತತ್ವಾದರ್ಶಗಳು ಅವರಿಗೆ ಬೇಕಿರಲಿಲ್ಲ. ಯಾಕೆಂದರೆ ಸಂಘ ಪರಿವಾರದ ತಾತ್ವಿಕತೆಗೆ ಬಸವಾದಿ ಶರಣ ತತ್ವಗಳು ವಿರುದ್ಧವಾಗಿವೆ. ಹಾಗಾಗಿ ಅವರು ಯಾರೂ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಕರ್ನಾಟಕದಲ್ಲಿ 32 ವಿಶ್ವವಿದ್ಯಾನಿಲಯಗಳಿವೆ. ಯಾವೊಂದು ವಿಶ್ವವಿದ್ಯಾನಿಲಯಕ್ಕೂ ಬಸವಣ್ಣನವರ ಹೆಸರು ಇಡುವ ಗೋಜಿಗೆ ಹೋಗಲಿಲ್ಲ. ಬಸವಣ್ಣನವರ ಬಗ್ಗೆ ಅವರಿಗೆ ನಿಜವಾದ ಗೌರವ, ಪ್ರೀತಿ ಇದ್ದಿದ್ದರೆ ಬಸವಾದಿ ಶರಣರ ಸಾಹಿತ್ಯ ಅಧ್ಯಯನ-ಸಂಶೋಧನೆಗೆ ಒಂದು ಪ್ರಾಧಿಕಾರವು ಸ್ಥಾಪಿಸಬಹುದಿತ್ತು. ಕರ್ನಾಟಕ ಸರಕಾರ ನೀಡುವ ಬಸವಶ್ರೀ ಪ್ರಶಸ್ತಿ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದ ಸಾಧಕರಿಗೆ ಕೊಡಬೇಕು. ಈ ಹಿಂದೆ ನೆಲ್ಸನ್ ಮಂಡೇಲ ಅವರಿಗೆ ನೀಡಲಾಗಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗಲೆಲ್ಲ ಆರೆಸ್ಸೆಸ್ ಅನುಯಾಯಿಗಳಿಗೆ ಬಸವಶ್ರೀ ಪ್ರಶಸ್ತಿ ನೀಡಲಾಗಿದೆ. ಇದು ಬಸವ ತತ್ವಗಳಿಗೆ ಮಾಡಿದ ಅಪಮಾನ. ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಅಪ್ಪಟ ಬಸವ ದ್ರೋಹಿಗಳು. ಬಸವಣ್ಣ ಮತ್ತು ಬಸವಾದಿ ಶರಣರ ತತ್ವಾದರ್ಶಗಳು ಜನಸಾಮಾನ್ಯರಿಗೆ ಹತ್ತಿರವಾಗಿದ್ದರೆ ಈ ಬಸವ ದ್ರೋಹಿಗಳನ್ನು ಜನರೇ ತಿರಸ್ಕರಿಸುತ್ತಿದ್ದರು.

ಬುದ್ಧ-ಬಸವ-ಅಂಬೇಡ್ಕರ್ ಚಿಂತನಾಧಾರೆ ಬೇರು, ಕಾಂಡ, ಚಿಗುರು ಇದ್ದಂತೆ. ಈ ಹೊತ್ತು ಈ ನಾಡಿನಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರಧಾರೆಗಳ ಜಾಗದಲ್ಲಿ ಜಾತೀವಾದ, ಮತೀಯವಾದ ವಿಜೃಂಭಿಸುತ್ತಿವೆ. ಕೋಮುವಾದದ ಬೇರು-ಬಿಳಲುಗಳು ಎಲ್ಲೆಡೆ ವ್ಯಾಪಿಸುತ್ತಿವೆ. ಧರ್ಮೋನ್ಮಾದ, ಮೌಢ್ಯ, ಕಂದಾಚಾರ, ಢಾಂಬಿಕ ಭಕ್ತಿ, ಅವೈಜ್ಞಾನಿಕ ಮನೋಧರ್ಮ ಯುವ ಸಮುದಾಯವನ್ನು ವಿವೇಚನಾರಹಿತರನ್ನಾಗಿಸಿ ದಾರಿ ತಪ್ಪಿಸುತ್ತಿದೆ. ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸು ಅವರನ್ನು ಅತ್ಯುನ್ನತ ಮಾದರಿಗಳನ್ನಾಗಿ ಸ್ವೀಕರಿಸದೆ ಇರುವುದರಿಂದ ಬಿಜೆಪಿಯ ಉನ್ಮಾದದ ರೂಪಕಗಳು ಜನತೆಯನ್ನು ಆಕರ್ಷಿಸುತ್ತವೆ. ದೇವರಾಜ ಅರಸು ಅವರು ಲಿಂಗಾಯತರಲ್ಲಿನ ‘ಫ್ಯೂಡಲ್’ಗಳ ಸೊಂಟ ಮುರಿದು ಹಾವನೂರು ಆಯೋಗದ ವರದಿ ಮೂಲಕ ಬಡ ಕಾಯಕ ಜೀವಿಗಳಿಗೆ ಬಲ ನೀಡಿದ್ದರು. ದುರಂತವೆಂದರೆ ಸಿದ್ದರಾಮಯ್ಯನವರು ಕ್ಯಾಪಿಟೇಶನ್ ಕುಳಗಳಾದ ಮಾರ್ವಾಡಿ ಲಿಂಗಾಯತರೆಂದೇ ಖ್ಯಾತಿವೆತ್ತ ಬಸವ ವಿರೋಧಿಗಳಿಗೆ ಬಲ ನೀಡುತ್ತಿದ್ದಾರೆ. ಮಾರ್ವಾಡಿ ಲಿಂಗಾಯತರಿಗೆ ಲಿಂಗಾಯತ ಧರ್ಮ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಮತ್ತಷ್ಟು ಮೆಡಿಕಲ್-ಇಂಜಿನಿಯರಿಂಗ್ ಸೀಟುಗಳಿಗಾಗಿ ಬೇಕು. ಲಿಂಗಾಯತ ಧರ್ಮದ ಮೂಲ ತಿರುಳು; ವರ್ಣಸಂಕರ, ಅಂತರ್‌ಜಾತಿಯ ವಿವಾಹ ಮತ್ತು ಅಸಮಾನತೆ ಇಲ್ಲದ ಸಮಾಜ ಕಲ್ಪನೆ. ಬಸವಾದಿ ಶರಣರ ಕನಸಿನ ಲಿಂಗಾಯತ ಧರ್ಮವು ಈ ಜಾತಿವಾದಿ-ಮಾರ್ವಾಡಿ ಲಿಂಗಾಯತರಿಗೆ ಬೇಕಿಲ್ಲ. ಅಧಿಕಾರಕ್ಕಾಗಿ ಇವರೆಲ್ಲ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅಧಿಕಾರ ಸಿಗುವುದಿಲ್ಲ ಎಂಬುದು ಖಾತ್ರಿ ಆದ ಮರುಕ್ಷಣವೇ ಜಗದೀಶ್ ಶೆಟ್ಟರ್ ಹಾಗೆ ಪಕ್ಷ ಬದಲಾಯಿಸುತ್ತಾರೆ.

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಸಾರ್ಥಕವಾಗಬೇಕಾದರೆ ಬಸವಾದಿ ಶರಣರ ತತ್ವಾದರ್ಶಗಳು, ಅರ್ಥಾತ್ ವಚನಗಳು ಕರ್ನಾಟಕದ ಎಲ್ಲರಿಗೂ ತಲುಪಿಸಬೇಕು. ಶರಣರ ತತ್ವಗಳನ್ನು ಈ ನಾಡಿನ ಕಾಯಕ ಜೀವಿಗಳು ತಮಗೆ ಸೇರಿದ್ದು ಎಂದು ಅಭಿಮಾನದಿಂದ ಹೇಳಿಕೊಳ್ಳುವಂತಾಗಬೇಕು. ಹಾಗಾಗಬೇಕಾದರೆ ಬಸವಾದಿ ಶರಣರ ಸಾಹಿತ್ಯ ಅಧ್ಯಯನಕ್ಕೆ ಪ್ರಾಧಿಕಾರ ರಚಿಸಬೇಕು. ಕರ್ನಾಟಕದ ಮಹತ್ವದ ವಿಶ್ವವಿದ್ಯಾನಿಲಯಗಳಿಗೆ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅವರ ಹೆಸರನ್ನಿಡಬೇಕು. ಬಸವಾದಿ ಶರಣರ ಬರಹ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅವರ ಸಾಧನೆಯ ಗಾಥೆ ನಾಡಿನ ಮನೆಮನಕ್ಕೂ ತಲುಪಿಸುವಂತಾಗಬೇಕು. ವಚನ ಸಾಹಿತ್ಯ, ಸೂಫಿ ಮತ್ತು ತತ್ವಪದಗಳು ವ್ಯಾಪಕವಾಗಿ ಪ್ರಚಾರಗೊಳಿಸಿದರೆ ಧರ್ಮೋನ್ಮಾದದ ಅಬ್ಬರ ಕಡಿಮೆಯಾಗುತ್ತದೆ. ಮೆಟ್ರೋ ನಿಲ್ದಾಣಗಳಲ್ಲಿ, ವಿವಿಗಳಲ್ಲಿ ಮೀಸಲಾತಿ ವಿರೋಧಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರು ಢಾಳಾಗಿ ಕಾಣುತ್ತಿದೆ. ಆದರೆ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅವರ ಹೆಸರು ಕಾಣಿಸುವುದೇ ಇಲ್ಲ. ಎಲ್ಲರೂ ಮಾಡುವುದು ಚುನಾವಣೆಗಾಗಿಯೇ. ಅದರಲ್ಲೂ ಒಂದು ಅರ್ಥ ಇರಬೇಕು. ಸಾರ್ಥಕತೆ ಕಾಣಬೇಕು. ಹೆಮ್ಮೆ ಪಡಬಹುದಾದ ಸಂಕೇತಗಳನ್ನು ಮುನ್ನೆಲೆಗೆ ತರಬೇಕು.

ಬುದ್ಧ-ಬಸವ-ಅಂಬೇಡ್ಕರ್ ಸಮಾನತೆಯ ದೀಪ ಬೆಳಗಿಸಿದವರು. ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅವರು ಎಲ್ಲ ಗೌರವಗಳಿಗೆ ಮೀರಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದವರು. ಅವರು ನಮ್ಮ ನಿತ್ಯದ ಬದುಕಿನಲ್ಲಿ ಸಂಕೇತ ಪ್ರತಿಕರೂಪಕಗಳಾಗಿ ಎದುರುಗೊಳ್ಳುತ್ತಲೇ ಇರಬೇಕು. ಒಟ್ಟು ಬದುಕಿನ ಕೈಗನ್ನಡಿಯಾಗಬೇಕು. ತಮಿಳುನಾಡಿನಲ್ಲಿ ಅಣ್ಣಾದೊರೈ, ಕಾಮರಾಜ್, ಪೆರಿಯಾರ್ ನಿತ್ಯದ ಒಡನಾಡಿಗಳಾಗಿದ್ದರಿಂದಲೇ ಅಲ್ಲಿ ದ್ರಾವಿಡ ಚೈತನ್ಯ ಈಗಲೂ ಹಸಿರಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಬುದ್ಧ, ಗಾಂಧಿ, ಅಂಬೇಡ್ಕರ್, ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು ಅವರ ಜೀವನ ಸಾಧನೆಯನ್ನು ಮತ್ತೆ ಮತ್ತೆ ನೆನಪಿಸುವ ಸಂಸ್ಥೆ, ಸಂಕೇತ, ಪ್ರತೀಕಗಳನ್ನು ಹೆಚ್ಚು ಹೆಚ್ಚು ನಿರ್ಮಿಸಬೇಕು. ಅವರೆಲ್ಲರ ತತ್ವಾದರ್ಶಗಳೇ ದಾರಿದೀಪ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News