ಮೋದಿ ʼಧರ್ಮ ಕಾರಣಕ್ಕೆʼ ಹೀನಾಯ ಸೋಲು
ಬಹುತ್ವ ಭಾರತದ ಮತದಾರರ ವಿವೇಕ ನರೇಂದ್ರ ಮೋದಿಯವರ ಧರ್ಮದ ಹೆಸರಿನ ರಾಜಕಾರಣವನ್ನು ಹೀನಾಯವಾಗಿ ಸೋಲಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240ಕ್ಕೆ ಕುಸಿದು ಸರಳ ಬಹುಮತಕ್ಕೂ ಲಾಯಕ್ ಆಗಿಲ್ಲ. ಕಾಂಗ್ರೆಸ್ 99 ಸ್ಥಾನವನ್ನು ಪಡೆದು 47 ಹೆಚ್ಚಿಸಿಕೊಂಡಿದೆ. 353 ಸಂಖ್ಯಾ ಬಲದಿಂದ ಎನ್‌ಡಿಎ 292ಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಮನ ಜನ್ಮಸ್ಥಳ ಅಯೋಧ್ಯೆ ಬಿಜೆಪಿಯ ಕೈಬಿಟ್ಟಿದೆ. ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದಲ್ಲಿ ಮತದಾರ ಬಿಜೆಪಿಗೆ ಬುಲ್ಡೋಜ್ ಮಾಡಿದ್ದಾರೆ. ಅಲ್ಲಿ 32 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ ಉಳಿದೆಡೆ ಬಿಜೆಪಿಯ ಚಾರ್‌ಸೌ ಪಾರ್ ಸ್ಲೋಗನ್‌ಗೆ ಬೆಚ್ಚಿ ಪ್ರತಿಪಕ್ಷಗಳನ್ನು ಬೆಂಬಲಿಸಿದ್ದಾರೆ. ಮೋದಿಯ ಕಪಟ ಭಕ್ತಿಗೆ ರಾಮನು ಒಲಿದಿಲ್ಲ. ಬಿಜೆಪಿಯ ಕೋಮುವಾದಿ ಅಜೆಂಡಾ ಮತದಾರರಿಗೆ ಒಪ್ಪಿಗೆ ಇಲ್ಲವೆಂಬುದು ಸಾಬೀತಾಗಿದೆ. ಈ ಚುನಾವಣಾ ಫಲಿತಾಂಶ ಮೋದಿಯವರಿಗೆ ಜನತಂತ್ರದ ಪಾಠ ಮಾಡಿದಂತಿದೆ.
ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ
ಭಾರತ ಗೆದ್ದಿದೆ.
ಹೌದು ಬಹುತ್ವ ಭಾರತ ಗೆದ್ದಿದೆ. ಮೋದಿಯ ‘ಧರ್ಮ ಕಾರಣಕ್ಕೆ’ ಹೀನಾಯ ಸೋಲಾಗಿದೆ. ಮಾಧ್ಯಮಗಳ ವಿಪರೀತ ಹಾವಳಿಯ ನಡುವೆಯೂ ಭಾರತದ ಮತದಾರರು ಪ್ರಬುದ್ಧತೆ ಮೆರೆದಿದ್ದಾರೆ. 2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಭಾರತ ದೇಶಕ್ಕೆ ಒಂದರ್ಥದಲ್ಲಿ ಹೊಸಬರೇ. ಗುಜರಾತ್ ಮುಖ್ಯಮಂತ್ರಿಯಾಗಿ ಒಳ್ಳೆಯ ಮತ್ತು ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದರು. ಆದರೆ ಭಾರತದ ಜನಮಾನಸಕ್ಕೆ ಅವರ ಜಾತಿ ಮತ್ತು ಕುಟುಂಬದ ಹಿನ್ನೆಲೆಯೂ ತಿಳಿದಿರಲಿಲ್ಲ. ಅಂತಹ ನರೇಂದ್ರ ಮೋದಿಯವರನ್ನು ಭಾರತೀಯ ಜನತಾ ಪಕ್ಷ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಅದಕ್ಕೂ ಮೊದಲು ಬಿಜೆಪಿಯ ಮುಖ್ಯ ಪಾತ್ರಧಾರಿ ಎಂದರೆ ಅಟಲ್ ಬಿಹಾರಿ ವಾಜಪೇಯಿ ಮಾತ್ರ. ಹುಟ್ಟಿನಿಂದ ಬ್ರಾಹ್ಮಣ ಮತ್ತು ಸೈದ್ಧಾಂತಿಕವಾಗಿ ಸಂಘ ಪರಿವಾರದ ತಾತ್ವಿಕತೆಯನ್ನು ಮೈಗೂಡಿಸಿಕೊಂಡಿದ್ದ ವಾಜಪೇಯಿಯವರು ಜನಸಂಘ ಕಾಲದಿಂದ ರಾಜಕಾರಣದಲ್ಲಿ ಸಕ್ರಿಯರಾಗಿದ್ದವರು. 1980ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಾಗ ವಾಜಪೇಯಿಯವರು ಪಕ್ಷದ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಅವರೊಂದಿಗೆ ಪೋಷಕ ನಟರಾಗಿ ಸಿಂಧಿ ಸಮಾಜದ ಲಾಲ್ ಕೃಷ್ಣ ಅಡ್ವಾಣಿ ಕಾಣಿಸಿಕೊಳ್ಳುತ್ತಿದ್ದರು. ಬಿಜೆಪಿ ಅಂದರೆ ಹಿಂದಿ ಭಾಷಿಕ ಪ್ರದೇಶದ ಬ್ರಾಹ್ಮಣ-ಬನಿಯಾಗಳ ಪಕ್ಷವೆಂದೇ ಭಾವಿಸಲಾಗುತ್ತಿತ್ತು. ಮೂಲತಃ ಕವಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸಂಘ ಪರಿವಾರದ ಗರಡಿಯಲ್ಲಿ ಬೆಳೆದಿದ್ದರೂ ಭಾರತದ ಮುಸ್ಲಿಮರ ವಿರುದ್ಧ ದ್ವೇಷದ ಮಾತುಗಳನ್ನಾಡುತ್ತಿರಲಿಲ್ಲ.
ಅಟಲ್ ಬಿಹಾರಿ ವಾಜಪೇಯಿಯವರು ಭಾರತದ ಪ್ರಧಾನ ಮಂತ್ರಿಯಾಗಿದ್ದಾಗಲೇ ಖ್ಯಾತ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ ಅವರಿಗೆ ‘ಭಾರತ ರತ್ನ’ ಗೌರವ ನೀಡಿದ್ದರು. ಅಷ್ಟು ಮಾತ್ರವಲ್ಲ; ಶ್ರೇಷ್ಠ ವಿಜ್ಞಾನಿ ಅಬ್ದುಲ್ ಕಲಾಂ ಅವರಿಗೆ ಭಾರತದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಜಾತಿ ಮತ್ತು ಧರ್ಮದ ಎಲ್ಲೆಕಟ್ಟುಗಳನ್ನು ಮೀರಿ ಪಕ್ಷದಲ್ಲಿ ಹೊಸಬರನ್ನು ಬೆಳೆಸಿದ್ದರು. 1992ರಲ್ಲಿ ಅಡ್ವಾಣಿ ನೇತೃತ್ವದ ರಥಯಾತ್ರೆ ಮತ್ತು ಕರಸೇವಕರು ಬಾಬರಿ ಮಸೀದಿಯನ್ನು ಕಾನೂನುಬಾಹಿರವಾಗಿ ಧ್ವಂಸಮಾಡಿದಾಗ ವಾಜಪೇಯಿಯವರು ಕಳವಳ ವ್ಯಕ್ತಪಡಿಸಿ ವಿರೋಧಿಸಿದ್ದರು. ಗುಜರಾತ್‌ನಲ್ಲಿನ ಗೋಧ್ರಾ ಘಟನೆ ಮತ್ತು ನಂತರ ನಡೆದ ಹಿಂಸಾಚಾರದ ಕುರಿತು ಆತಂಕಿತರಾಗಿದ್ದ ವಾಜಪೇಯಿಯವರು ‘ರಾಜಧರ್ಮ’ ಪಾಲನೆಯಾಗುತ್ತಿಲ್ಲ ಎಂದು ಮೋದಿಯವರ ಕಿವಿ ಹಿಂಡಿದ್ದರು. ಬ್ರಾಹ್ಮಣ-ಬನಿಯಾ ಪಕ್ಷದಲ್ಲಿ ಯಡಿಯೂರಪ್ಪ, ನರೇಂದ್ರ ಮೋದಿ, ಗೋಪಿನಾಥ ಮುಂಡೆಯಂತಹ ಶೂದ್ರ ನಾಯಕರ ಶಕ್ತಿ ಗುರುತಿಸಿದ್ದು ವಾಜಪೇಯಿಯವರೇ. ಅಂತಹ ವಾಜಪೇಯಿಯವರನ್ನು ಬಿಜೆಪಿ 1996, 1998 ಮತ್ತು 1999ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. 1996 ಮತ್ತು 1998ರಲ್ಲಿ ಬಿಜೆಪಿಗೆ ಸರಳ ಬಹುಮತ ದೊರೆಯಲೇ ಇಲ್ಲ. ಮೈತ್ರಿಕೂಟದ ಸಂಖ್ಯಾಬಲದಲ್ಲಿ ಒಮ್ಮೆ 16 ದಿವಸ, ಇನ್ನೊಮ್ಮೆ 13 ತಿಂಗಳುಗಳ ಕಾಲ ಪ್ರಧಾನ ಮಂತ್ರಿಯಾಗಿದ್ದರು. ಬಿಜೆಪಿಗೆ 1996ರಲ್ಲಿ 161 ಸೀಟು, 1998ರಲ್ಲಿ 182 ಸೀಟುಗಳು ಮಾತ್ರ ದಕ್ಕಿದ್ದವು. ಮುಖ್ಯವಾಗಿ ರಾಮ ಜನ್ಮಭೂಮಿ ಮತ್ತು ಉಗ್ರ ಹಿಂದುತ್ವದ ಕಾರಣಕ್ಕೆ.
ರಾಮ ಜನ್ಮ ಭೂಮಿ ಮತ್ತು ಉಗ್ರ ಹಿಂದುತ್ವದ ಪ್ರತಿಪಾದನೆಯಿಂದಾಗಿ ಕಾಂಗ್ರೆಸೇತರ ರಾಜಕೀಯ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಲು ಒಪ್ಪಿಕೊಳ್ಳುತ್ತಿರಲಿಲ್ಲ. ವಿ.ಪಿ. ಸಿಂಗ್ ಸರಕಾರದ ಭಾಗವಾಗಿದ್ದ ಬಿಜೆಪಿ ಮಂಡಲ-ಕಮಂಡಲದ ಸಂಘರ್ಷದ ಕಾರಣಕ್ಕೆ ಬೆಂಬಲ ವಾಪಸ್ ಪಡೆದು ಸರಕಾರದಿಂದ ಹೊರಬಂತು. 1999ರ ಲೋಕಸಭಾ ಚುನಾವಣೆಯಲ್ಲೂ ಧರ್ಮದ ಹೆಸರಿನ ರಾಜಕಾರಣವನ್ನೇ ಬಿಜೆಪಿ ಮಾಡಿತು. ಆದರೆ ಬಿಜೆಪಿಯ ಸಂಖ್ಯಾಬಲವೇನೂ ಹೆಚ್ಚಲಿಲ್ಲ. 1999ರಲ್ಲೂ ಬಿಜೆಪಿಗೆ 182 ಸ್ಥಾನಗಳು ದೊರೆತವು. ಅಟಲ್ ಬಿಹಾರಿ ವಾಜಪೇಯಿ ಅವರ ಉದಾರವಾದಿ ವ್ಯಕ್ತಿತ್ವದ ಕಾರಣಕ್ಕೆ ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳೂ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ 1999ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರಕಾರ ರಚಿಸಿದರು. ಶಿವಸೇನೆ ಮಹಾರಾಷ್ಟ್ರದಲ್ಲಿ ಬಿಜೆಪಿಗಿಂತಲೂ ಹೆಚ್ಚು ಉಗ್ರ ಹಿಂದುತ್ವ ಪ್ರತಿಪಾದಿಸುತ್ತಿದ್ದ ಪಕ್ಷವಾಗಿತ್ತು. ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಶಿವಸೇನೆ, ಶಿರೋಮಣಿ ಅಕಾಲಿ ದಳ, ರಾಷ್ಟ್ರೀಯ ಲೋಕದಳ, ಇಂಡಿಯನ್ ನ್ಯಾಷನಲ್ ಲೋಕದಳ, ಡಿಎಂಕೆ, ಬಿಜು ಜನತಾದಳ, ಮಮತಾ ದೀದಿಯ ತೃಣಮೂಲ ಕಾಂಗ್ರೆಸ್, ಎಂಡಿಎಂಕೆ, ಪಟ್ಟಾಳಿ ಮಕ್ಕಳ್ ಕಚ್ಚಿ ಮತ್ತು ಫಾರೂಕ್ ಅಬ್ದುಲ್ಲ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್, ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು) ಸೇರಿಕೊಂಡಿದ್ದವು. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಕೂಡ ವಾಜಪೇಯಿಯವರನ್ನು ಬೆಂಬಲಿಸಿತ್ತು. ಆ ಮೈತ್ರಿಕೂಟ ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿತ್ತು. ಜಾರ್ಜ್ ಫೆರ್ನಾಂಡೀಸ್ ಮುಂತಾದವರು ಬಿಜೆಪಿಯ ಕೋಮುವಾದಿ ಅಜೆಂಡಾವನ್ನು ಪಕ್ಕಕ್ಕೆ ತಳ್ಳುವಲ್ಲಿ ಶ್ರಮಿಸಿದ್ದರು.
ಆಗ ಅಟಲ್ ಬಿಹಾರಿ ವಾಜಪೇಯಿ ಅವರೂ ಕೇವಲ ಅಭಿವೃದ್ಧಿ ಮಂತ್ರ ಮಾತ್ರ ಜಪಿಸಿದರು. ಸೈದ್ಧಾಂತಿಕ ಭಿನ್ನಮತದ ನಡುವೆಯೂ ಸರಕಾರ ನಡೆಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಆ ಸರಕಾರ ಜನತೆಯ ನಿರೀಕ್ಷೆಗಳನ್ನು ಹುಸಿಗೊಳಿಸಿತ್ತು ಆದರೆ ‘ಇಂಡಿಯಾ ಶೈನಿಂಗ್’ ಘೋಷಣೆಯೊಂದಿಗೆ ಚುನಾವಣೆ ಎದುರಿಸಿತು. ಮಾಧ್ಯಮಗಳು ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸಿದವು. ಎಕ್ಸಿಟ್ ಪೋಲ್‌ಗಳು ಅಟ್ಟಕ್ಕೇರಿಸಿದವು. ಆದರೆ ಚುನಾವಣೆ ಫಲಿತಾಂಶ ಬಂದಾಗ ಬಿಜೆಪಿ ಮತ್ತು ಮೈತ್ರಿಕೂಟ ನೆಲಕಚ್ಚಿದ್ದವು. ಬಿಜೆಪಿ ಕೇವಲ 138 ಸ್ಥಾನಗಳಲ್ಲಿ ಗೆದ್ದು 44 ಸ್ಥಾನಗಳನ್ನು ಕಳೆದುಕೊಂಡಿತ್ತು. ಯುಪಿಎಗೆ ಕಾಂಗ್ರೆಸ್ ನೇತೃತ್ವ ವಹಿಸಿತ್ತು. ಅಧಿಕಾರವೂ ಹಿಡಿಯಿತು. 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಲಾಲ್‌ಕೃಷ್ಣ ಅಡ್ವಾಣಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯೆಂದು ವ್ಯಾಪಕ ಪ್ರಚಾರ ಮಾಡಿತು. ಬಾಬರಿ ಮಸೀದಿ ಧ್ವಂಸದ ನೇತೃತ್ವ ವಹಿಸಿದ್ದ ಅಡ್ವಾಣಿಯವರನ್ನು ಭಾರತದ ಮತದಾರರು ತಿರಸ್ಕರಿಸಿದರು. ಬಿಜೆಪಿಗೆ ಕೇವಲ 116 ಸ್ಥಾನಗಳು ಲಭಿಸಿದ್ದವು. ಆಗಲೂ ಯುಪಿಎ ಸರಕಾರವೇ ರಚನೆಯಾಯಿತು ಬಿಜೆಪಿಯ ಉದಾರವಾದಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಸಾಕಷ್ಟು ಪ್ರಯತ್ನ ಮಾಡಿ ಬಿಜೆಪಿಯ ಸಂಖ್ಯಾ ಬಲ ವನ್ನು ಗರಿಷ್ಠ 182ಕ್ಕೆ ಹೆಚ್ಚಿಸುವಲ್ಲಿ ಮಾತ್ರ ಸಫಲರಾಗಿದ್ದರು. ಬಿಜೆಪಿಯ ಉಗ್ರ ಹಿಂದುತ್ವವೇ ವಾಜಪೇಯಿಯವರ ನಾಯಕತ್ವದ ಮಿತಿಯಾಗಿತ್ತು.
ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ ಸರಕಾರ ಹಗರಣಗಳ ಕಾರಣಕ್ಕೆ ಸುದ್ದಿಯಾಯಿತು. ಆ ಸರಕಾರದ ಒಳ್ಳೆಯ ಕೆಲಸಗಳನ್ನು ಮರೆಸುವಷ್ಟು ಅಪಪ್ರಚಾರ ನಡೆಯಿತು. ಅಣ್ಣಾ ಹಝಾರೆ, ಅರವಿಂದ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಮುಂತಾದವರು ಯುಪಿಎ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದರು. ಮನಮೋಹನ್ ಸಿಂಗ್ ನೇತೃತ್ವದ ಹತ್ತು ವರ್ಷಗಳ ಯುಪಿಎ ಸರಕಾರವನ್ನು ಅತ್ಯಂತ ಭ್ರಷ್ಟ ಸರಕಾರ ಎಂದು ಬಿಂಬಿಸಲಾಯಿತು. ಸಂಕ್ರಮಣ ಕಾಲದಲ್ಲಿ ನರೇಂದ್ರ ಮೋದಿಯವರ ಪ್ರವೇಶವಾಯಿತು. ಯುಪಿಎ ಸರಕಾರದ ಎಲ್ಲಾ ಕೆಡುಕುಗಳನ್ನು ಜನರ ಮುಂದೆ ಇಟ್ಟು ಭಾರತದ ಅಭಿವೃದ್ಧಿ ಕುರಿತು ಮಾತನಾಡತೊಡಗಿದರು. ವಿಕಾಸ ಮಂತ್ರ ಯುವ ಸಮುದಾಯವನ್ನು ಮೋಡಿ ಮಾಡಿತು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಸ್ಲೋಗನ್ ಬಿಜೆಪಿಯ ನರೇಂದ್ರ ಮೋದಿಯವರ ಬಾಯಲ್ಲಿ ಕೇಳಿ ಭಾರತದ ಜನ ‘ಭರವಸೆಯ ಬೆಳಕು’ ಎಂದೇ ಭಾವಿಸಿದರು. ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಅಕ್ರಮವಾಗಿ ನಿರ್ಮಿಸಿದ್ದ ಸುಮಾರು 200 ದೇವಾಲಯಗಳನ್ನು ನೆಲಸಮ ಮಾಡಿದ್ದರು. ವಿಶ್ವ ಹಿಂದೂ ಪರಿಷತ್‌ನವರ ವಿರೋಧವನ್ನೂ ಲೆಕ್ಕಿಸಿರಲಿಲ್ಲ. ‘‘ಗುಡಿಗಳ ಅಗತ್ಯವಿಲ್ಲ; ಶಾಲೆ ಮತ್ತು ಶೌಚಾಲಯಗಳು ಭಾರತದ ಅಗತ್ಯ’’ ಎಂದು ಮೋದಿ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ಯುಪಿಎ ಸರಕಾರದ ವಿರುದ್ಧ ನಡೆದ ಅಪಪ್ರಚಾರದಷ್ಟೇ ಗುಜರಾತ್ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆದವು. ಗುಜರಾತ್ ಅಭಿವೃದ್ಧಿ ಮಾದರಿ ದೇಶಕ್ಕೆ ಅಗತ್ಯ ಎಂಬಂತೆ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ವಿಕಾಸ ಪುರುಷ ಮೋದಿ ಭಾರತದ ಭಾಗ್ಯ ಬದಲಿಸಬಲ್ಲರು ಎಂದು ನಂಬಿಸಲಾಯಿತು. ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣವನ್ನು ಮಾತ್ರ ಬೆಂಬಲಿಸುತ್ತದೆ. ಪ್ರಜಾತಂತ್ರದಲ್ಲಿ ಕಾಂಗ್ರೆಸ್‌ಗೆ ನಂಬಿಕೆಯೇ ಇಲ್ಲ ಎಂಬ ಬಲವಾದ ನೆರೇಟಿವ್ ರೂಪಿಸಿ ಪ್ರಚಾರ ಮಾಡಿದರು. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದ ಅಭಿವೃದ್ಧಿ ಬಗ್ಗೆ ತಿಳಿಯದ ಮೊದಲ ಬಾರಿ ಮತದಾನ ಮಾಡುವ ಯುವಕರನ್ನು ಮೋದಿ ಮಾತ್ರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬಲ್ಲರು ಎಂದು ಬಲವಾಗಿ ನಂಬಿಸಲಾಯಿತು.
ಮತದಾರರು ನರೇಂದ್ರ ಮೋದಿಯವರ ಹೊಸ ಪರಿಭಾಷೆಯಲ್ಲಿನ ಮಾತುಗಳಿಂದ ಪ್ರಭಾವಿತರಾದರು. ಮದುವೆ ಇಲ್ಲ, ಹೆಂಡತಿ- ಮಕ್ಕಳಿಲ್ಲ. ದೇಶದ ಅಭಿವೃದ್ಧಿಗೆ ಮಾತ್ರ ಜೀವನ ಮುಡಿಪು ಎಂದು ಹೇಳಿ ಯುಗಪುರುಷನ ಆಗಮನವಾಯಿತು ಎಂಬ ಭ್ರಮೆ ಬಿತ್ತಿದರು. ವಿದೇಶದಿಂದ ಕಪ್ಪು ಹಣ ತರುತ್ತಾರೆ, ಎಲ್ಲಾ ಭಾರತೀಯರ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತಾರೆ ಎಂಬುದನ್ನು ನಂಬಿಸಿಬಿಟ್ಟರು. ಅಣ್ಣಾ ಹಝಾರೆ ಕಾಂಗ್ರೆಸ್ ಮತ್ತು ಯುಪಿಎ ಸರಕಾರದ ವಿರುದ್ಧ ಜನಾಂದೋಲನ ರೂಪಿಸಿ ಅದರ ಸಾಧನೆಯನ್ನು ಮರೆಮಾಚಿದರೆ, ಮೋದಿ ಅಭಿವೃದ್ಧಿಯ ಹರಿಕಾರ ಎನ್ನುವುದನ್ನು ಬ್ರ್ಯಾಂಡ್ ಮಾಡಿದರು. ಚುನಾವಣೆಯಲ್ಲಿ ಬಿಜೆಪಿ, ಅದರ ಹಳೆಯ ಅಜೆಂಡಾಗಳು ಹೆಚ್ಚು ಚರ್ಚೆಗೆ ಬರಲಿಲ್ಲ. ಮೋದಿ ಹೆಸರು ಮಾತ್ರ ಮುನ್ನೆಲೆಗೆ ಬಂತು. ಮೋದಿ ಬ್ರ್ಯಾಂಡ್ ನೋಡ ನೋಡುತ್ತಿದ್ದಂತೆ ಎಲ್ಲ ಭಾರತೀಯರ ಮನೆ ಮನಗಳಲ್ಲಿ ಸ್ಥಾಪಿತವಾಯಿತು. ಚುನಾವಣೆಯ ಫಲಿತಾಂಶ ಬಂದಾಗ ಪ್ರತಿಪಕ್ಷಗಳಿಗೆ ಅಚ್ಚರಿ ಕಾದಿತ್ತು. ಬ್ರ್ಯಾಂಡ್ ಮೋದಿ ಮಾಡುವಲ್ಲಿ ಸಾಮಾಜಿಕ ಜಾಲತಾಣ ಪ್ರಮುಖ ಪಾತ್ರ ವಹಿಸಿತು. ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿ ನೇತೃತ್ವದಲ್ಲಿ 282 ಸ್ಥಾನಗಳನ್ನು ಗಳಿಸಿ ಸರಳ ಬಹುಮತದ ಸರಕಾರ ರಚಿಸುವ ಸಾಮರ್ಥ್ಯ ಪಡೆದುಕೊಂಡಿತು. ಎನ್‌ಡಿಎ ಮೈತ್ರಿಕೂಟದ ಬಲ 336ಕ್ಕೇರಿತು. ಮೊದಲ ಬಾರಿಗೆ ಕಾಂಗ್ರೆಸ್ ಬಲ 44ಕ್ಕೆ ಕುಸಿದು ಆ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ದಕ್ಕಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹಲವು ಪ್ರಯತ್ನಗಳ ನಂತರವೂ ಮತದಾರರ ಸಂಪೂರ್ಣ ವಿಶ್ವಾಸ ಗಳಿಸಲು ಸಾಧ್ಯವಾಗಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಮೊದಲ ಪ್ರಯತ್ನದಲ್ಲೇ ಮತದಾರರ ಪ್ರೀತಿಗೆ ಪಾತ್ರರಾಗಿದ್ದರು. ಮೋದಿಯವರ ಜಾತಿಯನ್ನು ಕೇಳದೆ ಭಾರತೀಯರು ಅಭಿವೃದ್ಧಿಗಾಗಿ, ಕೇವಲ ಭಾರತದ ಅಭಿವೃದ್ಧಿಗಾಗಿ ಬೆಂಬಲಿಸಿದ್ದರು. ನರೇಂದ್ರ ದಾಮೋದರ ದಾಸ್ ಮೋದಿ ಭಾರತದ ಪ್ರಧಾನಿಯಾದರು.
ನರೇಂದ್ರ ದಾಮೋದರ ದಾಸ್ ಮೋದಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನದಿಂದ ಅಭಿವೃದ್ಧಿಗಿಂತ ಬ್ರ್ಯಾಂಡ್ ಮೋದಿ ಪ್ರಚಾರಕ್ಕೆ ಮೊದಲ ಆದ್ಯತೆ ನೀಡಿದರು. ಅಭಿವೃದ್ಧಿ ಮಂತ್ರ ಜಪಿಸುವುದಕ್ಕಿಂತ ಮಾತಿನಲ್ಲೇ ಮಂತ್ರ ಸೃಜಿಸಿ ಮರುಳು ಮಾಡ ತೊಡಗಿದರು. ವಿದೇಶದಿಂದ ಕಪ್ಪು ಹಣ ತರುವ ಮತ್ತು 15 ಲಕ್ಷ ರೂ. ಖಾತೆಗೆ ಜಮಾ ಮಾಡುವ ವಾಗ್ದಾನ ಮರೆತರು. ರಾತ್ರೋರಾತ್ರಿ ನೋಟ್‌ಬ್ಯಾನ್ ಮಾಡಿ ಬಡ-ಮಧ್ಯಮ ವರ್ಗದ ಜನ ಕಷ್ಟಪಟ್ಟು ಸಂಪಾದಿಸಿದ ಹಣ ಪಡೆಯಲು ಪರದಾಡುವಂತೆ ಮಾಡಿದರು. ಪರ್ಯಾಯ ಅರ್ಥ ವ್ಯವಸ್ಥೆ ಹಾಳು ಮಾಡಿ ಕಪ್ಪು ಹಣದ ವಹಿವಾಟು ಮತ್ತಷ್ಟು ಹೆಚ್ಚಿಸಿದರು. ನೋಟ್ ಬ್ಯಾನ್‌ನಿಂದ ಶ್ರೀಮಂತರಿಗೆ ಹೆಚ್ಚು ಅನುಕೂಲವಾಯಿತು. ನೋಟ್ ಬ್ಯಾನ್ ಸಂದರ್ಭದಲ್ಲಿ ಬದುಕು ಕಳೆದುಕೊಂಡವರು ಈ ಹೊತ್ತಿಗೂ ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಮಾತ್ರವಲ್ಲ ಮೋದಿಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಬಹುದೊಡ್ಡ ಜನಾಂದೋಲನ ರೂಪಿಸಿದ್ದರೆ 2019ರ ಲೋಕಸಭಾ ಚುನಾವಣಾ ಫಲಿತಾಂಶದಲ್ಲೇ ಮೋದಿ ಬಂಡವಾಳ ಬಯಲಾಗುತ್ತಿತ್ತು. ಮೊದಲ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಸಾಧಿಸಿರಲಿಲ್ಲವಾದರೂ ಬಿಜೆಪಿಯ ಸ್ಥಳೀಯ ನಾಯಕತ್ವವನ್ನು ಕೆಣಕುವ ದುಸ್ಸಾಹಸ ಮಾಡಿರಲಿಲ್ಲ. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಜೊತೆ ದೇಶಭಕ್ತಿ, ಭಾರತದ ಹಿರಿಮೆ-ಗರಿಮೆಯ ಪದಗಳೂ ಸೇರಿಕೊಂಡವು. 5 ವರ್ಷ ಅಧಿಕಾರಾವಧಿ ಪೂರೈಸುವ ಹೊತ್ತಿಗೆ ರಿಪೋರ್ಟ್ ಕಾರ್ಡನ್ನು ಮತದಾರರಿಗೆ ತೋರಿಸುವ ಬದಲು ಪುಲ್ವಾಮಾ ದಾಳಿ, ಭಾರತಕ್ಕೆ ಅಪಾಯವಿತ್ತು ರಕ್ಷಿಸಿದೆ ಎಂಬ ಹುಸಿ ದೇಶಭಕ್ತಿಯ ನೆರೇಟಿವ್ ತೇಲಿ ಬಿಟ್ಟು ಚುನಾವಣೆ ಎದುರಿಸಿದರು. ಅಷ್ಟಾಗಿ ನರೇಂದ್ರ ಮೋದಿಯವರು ಹಿಂದೂ-ಮುಸ್ಲಿಮ್ ಸಂಘರ್ಷದ ಮಾತುಗಳಾಡಿರಲಿಲ್ಲ. ಆದರೆ ಮೋದಿಯವರ ಸ್ಥಾನ ಬಲದಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ಕೋಮುವಾದಿ ಸಂಘಟನೆಗಳು ಅಲ್ಲಲ್ಲಿ ಬೆಂಕಿ ಹಚ್ಚುತ್ತಲೇ ಇದ್ದವು. ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಿರಲಿಲ್ಲ. ಮೋದಿಯವರ ದೇಶ ಮೊದಲು ಎಂಬ ಮಾತನ್ನು ನಂಬಿ 2019ರ ಲೋಕಸಭಾ ಚುನಾವಣೆಯಲ್ಲೂ ಭಾರತದ ಜನತೆ ಬೆಂಬಲಿಸಿದರು. ಇನ್ನೊಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿಗೆ 303 ಸ್ಥಾನಗಳನ್ನು, ಎನ್‌ಡಿಎ ಮೈತ್ರಿಕೂಟಕ್ಕೆ 353 ಸ್ಥಾನಗಳನ್ನು ನೀಡಿದರು.
ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು 2019ರ ಲೋಕಸಭಾ ಫಲಿತಾಂಶದಿಂದ ಅಕ್ಷರಶಃ ಕಂಗಾಲಾಗಿದ್ದವು. ಇವಿಎಂ ಮತ್ತು ಭಾರತದ ಮತದಾರರ ಮೇಲೆಯೇ ಸಂಶಯ ಮೂಡ ತೊಡಗಿತು. ಜನತೆಯ ವಿವೇಕಕ್ಕೆ ಮಂಕು ಕವಿದಿದೆಯೇ ಎಂಬ ಭಾವನೆ ಕಾಡತೊಡಗಿತು. ಕೋವಿಡ್‌ನಂತಹ ಭೀಕರ ದಿನಮಾನಗಳಲ್ಲೂ ಜನ ಮೋದಿ ಹೇಳಿದಂತೆ ಗಂಟೆ ಬಾರಿಸಿದರು, ದೀಪ ಹಚ್ಚಿದರು, ಭಾಷಣವನ್ನು ಕೇಳಿಯೇ ಸಮಾಧಾನ ಪಟ್ಟುಕೊಂಡರು. ಮೋದಿ ಹೇಳಿದ್ದಕ್ಕೆಲ್ಲ ಸ್ಪಂದನೆ ದೊರೆಯುತ್ತಿರುವುದರಿಂದ ಅವರೊಳಗಿನ ಸರ್ವಾಧಿಕಾರಿ ಕ್ರಿಯಾಶೀಲವಾದ. ಬಿಜೆಪಿಯೊಳಗಿನ ಸ್ಥಳೀಯ ನಾಯಕತ್ವವನ್ನು ಹೊಸಕಿ ಹಾಕತೊಡಗಿದರು. ವಸುಂಧರಾ ರಾಜೇ, ರಮಣ್ ಸಿಂಗ್, ಶಿವರಾಜ್ ಸಿಂಗ್ ಚವ್ಹಾಣ್, ಯಡಿಯೂರಪ್ಪರ ಸಾಮರ್ಥ್ಯದ ಲಾಭ ಪಡೆದು ಎಲ್ಲೆಡೆ ಮೋದಿ ಕಾರಣಕ್ಕೆ ಯಶಸ್ಸು ಎಂದು ಪ್ರಚಾರ ಮಾಡಿಕೊಂಡರು. ಬಿಜೆಪಿಯ ಸಂಸದರೇ ಸಂವಿಧಾನ ಬದಲಿಸುವ ಮಾತುಗಳನ್ನಾಡಿದಾಗಲೂ ಮೋದಿ ಕಿವಿ ಹಿಂಡಲಿಲ್ಲ. ಮುಖ್ಯಮಂತ್ರಿಗಳನ್ನು ಬದಲಿಸುವುದು ಬಿಜೆಪಿಯ ಶಕ್ತಿ ಎಂಬ ದುರಹಂಕಾರದ ಮಾತುಗಳು ಕೇಳಿ ಬಂದಾಗಲೂ ಕೇಳಿಸಿಕೊಳ್ಳಲಿಲ್ಲ. ಪ್ರತಿಪಕ್ಷಗಳ ಮುಖಂಡರನ್ನು ಹತ್ತಿಕ್ಕಲು ಅತಿಯಾಗಿ ಈ.ಡಿ., ಸಿಬಿಐ ಬಳಕೆ ಮಾಡಿದರು. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗಿನ ಮೈತ್ರಿ ಕಡಿದುಕೊಂಡು ಏನೆಲ್ಲಾ ಆಟ ಆಡಿದರು. ಅಭಿವೃದ್ಧಿ ಮಾಡದೇ ಸುಳ್ಳಿನ ಸರಮಾಲೆ ತೊಡಿಸಿದರು. ರಾಮಮಂದಿರ ನಿರ್ಮಾಣ ಮಾಡಿ, 370 ರದ್ದುಪಡಿಸಿದರು. ಮಂದಿರ ನಿರ್ಮಾಣ ಅಂತರ್‌ರಾಷ್ಟ್ರೀಯ ಸುದ್ದಿ ಮಾಡಿದರು. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಹಿಂದೆ ಸರಿದು ಮುಸ್ಲಿಮ್ ದ್ವೇಷ ಮೋದಿ ಮಂತ್ರವಾಯಿತು. ಚುನಾವಣಾ ಆಯೋಗ ಸೂತ್ರದ ಬೊಂಬೆಯಾಯಿತು. ರಾಮ, ಧರ್ಮ, ಅತಿಯಾದ ಪ್ರಚಾರ, ಮಾಧ್ಯಮಗಳ ಬ್ರೈನ್‌ವಾಶ್ ತಂತ್ರ, ಡನ್‌ಡೀಲ್ ಚರ್ಚೆಗಳು, ಅಷ್ಟೇ ಯಾಕೆ ಪ್ರಾಯೋಜಿತ ಎಕ್ಸಿಟ್ ಪೋಲ್‌ಗಳು ಬೆತ್ತಲೆಯಾದವು. ಬಹುತ್ವ ಭಾರತದ ಮತದಾರರ ವಿವೇಕ ನರೇಂದ್ರ ಮೋದಿಯವರ ಧರ್ಮದ ಹೆಸರಿನ ರಾಜಕಾರಣವನ್ನು ಹೀನಾಯವಾಗಿ ಸೋಲಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240ಕ್ಕೆ ಕುಸಿದು ಸರಳ ಬಹುಮತಕ್ಕೂ ಲಾಯಕ್ ಆಗಿಲ್ಲ. ಕಾಂಗ್ರೆಸ್ 99 ಸ್ಥಾನವನ್ನು ಪಡೆದು 47 ಹೆಚ್ಚಿಸಿಕೊಂಡಿದೆ. 353 ಸಂಖ್ಯಾ ಬಲದಿಂದ ಎನ್‌ಡಿಎ 292ಕ್ಕೆ ತೃಪ್ತಿಪಟ್ಟುಕೊಂಡಿದೆ.
ರಾಮನ ಜನ್ಮಸ್ಥಳ ಅಯೋಧ್ಯೆ ಬಿಜೆಪಿಯ ಕೈಬಿಟ್ಟಿದೆ. ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದಲ್ಲಿ ಮತದಾರ ಬಿಜೆಪಿಗೆ ಬುಲ್ಡೋಜ್ ಮಾಡಿದ್ದಾರೆ. ಅಲ್ಲಿ 32 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ ಉಳಿದೆಡೆ ಬಿಜೆಪಿಯ ಚಾರ್‌ಸೌ ಪಾರ್ ಸ್ಲೋಗನ್‌ಗೆ ಬೆಚ್ಚಿ ಪ್ರತಿಪಕ್ಷಗಳನ್ನು ಬೆಂಬಲಿಸಿದ್ದಾರೆ. ಮೋದಿಯ ಕಪಟ ಭಕ್ತಿಗೆ ರಾಮನು ಒಲಿದಿಲ್ಲ. ಬಿಜೆಪಿಯ ಕೋಮುವಾದಿ ಅಜೆಂಡಾ ಮತದಾರರಿಗೆ ಒಪ್ಪಿಗೆ ಇಲ್ಲವೆಂಬುದು ಸಾಬೀತಾಗಿದೆ. ಈ ಚುನಾವಣಾ ಫಲಿತಾಂಶ ಮೋದಿಯವರಿಗೆ ಜನತಂತ್ರದ ಪಾಠ ಮಾಡಿದಂತಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಹೇಳುವುದಲ್ಲ ಮಾಡಿ ತೋರಿಸಬೇಕು.