ರಾಜ್ಯೋತ್ಸವ ಪ್ರಶಸ್ತಿ: ‘ನಿಜ ಸಾಧಕರಿಗೆ’ ಮನ್ನಣೆ

ಸಾಹಿತ್ಯ-ಸಂಸ್ಕೃತಿಯ ಗಂಧಗಾಳಿ ಇಲ್ಲದ ಶಿವರಾಜ ತಂಗಡಗಿಯವರು ಎಲ್ಲವನ್ನು ಹಾಳು ಮಾಡಬಹುದು ಎಂಬ ನಿರೀಕ್ಷೆ ಸುಳ್ಳಾಗಿಸಿದ್ದಾರೆ. ತಂಗಡಗಿಯವರ ಒಳ್ಳೆಯತನ ಗೆದ್ದಿದೆ. 2023ರ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಅವರಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಿತ್ತು. ಎಲ್ಲ ಬಲ್ಲವರಿಂದ ಕಲಿತು ತಂಗಡಗಿಯವರು ಸರ್ವಜ್ಞರಾಗಲು ಯತ್ನಿಸಿದ್ದಾರೆ. ಪ್ರತಿಭಾವಂತರ ಸಲಹಾ ಸಮಿತಿ ರಚಿಸಿ ಜಾಣತನ ಮೆರೆದಿದ್ದಾರೆ. 2023ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಗಮನಿಸಿದರೆ; ನಿಜವಾದ ಸಾಧಕರಿಗೆ ಮನ್ನಣೆ ದೊರಕಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಆಧರಿಸಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಯಶಸ್ವಿಯಾಗಿ ಮಾಡಿದ್ದಾರೆ.

Update: 2023-11-04 05:31 GMT

ಪ್ರತೀ ವರ್ಷ ನವೆಂಬರ್ ಒಂದರಂದು ನೀಡುವ ರಾಜ್ಯೋತ್ಸವ ಪ್ರಶಸ್ತಿ ಬಗ್ಗೆ ಸಾಂಸ್ಕೃತಿಕ ಮತ್ತು ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಹಿರಿಯ ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರು ಬದುಕಿದ್ದಾಗ ‘ಲಂಕೇಶ್’ ಪತ್ರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕುರಿತು ಒಂದು ಲೇಖನ ಪ್ರಕಟವಾಗಿತ್ತು. ಆ ಲೇಖನದ ಶೀರ್ಷಿಕೆ: ‘ಅರ್ಹರಿಗೆ ಮುಂದಿನ ವರ್ಷ’-ಎಂದಿತ್ತು. ಅನರ್ಹರಿಗೆ ಪ್ರಶಸ್ತಿ ದೊರಕಿದೆ ಎಂಬುದು ಅವರ ಧ್ವನಿಯಾಗಿತ್ತು. ಜಾತೀಯತೆ ಆಳವಾಗಿ ಬೇರೂರಿರುವ ಕರ್ನಾಟಕ ಸಮಾಜದಲ್ಲಿ ಪ್ರತಿಭೆ-ಅರ್ಹತೆಯನ್ನು ಮೇಲು ಜಾತಿಗಳೊಂದಿಗೆ ಸಮೀಕರಿಸುತ್ತಾ ಬರಲಾಗಿದೆ. ಈ ಹೊತ್ತಿಗೂ ಪ್ರತಿಭೆಯ ವ್ಯಾಖ್ಯಾನದಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಜ್ಞಾನಪೀಠ ಪ್ರಶಸ್ತಿಯಿಂದ ಮೊದಲು ಮಾಡಿ ಬಹುತೇಕ ಎಲ್ಲಾ ಖಾಸಗಿ ಪ್ರಶಸ್ತಿಗಳು ಯಾರ ಪಾಲಾಗುತ್ತಿವೆ ಎಂಬುದು ಮನದಟ್ಟಾಗುತ್ತದೆ. ಖಾಸಗಿ ಪ್ರಶಸ್ತಿಗಳ ಮಾತು ಒತ್ತಟ್ಟಿಗಿರಲಿ; ಪ್ರತೀವರ್ಷ ಕೇಂದ್ರ ಸರಕಾರ ನೀಡುವ ಪದ್ಮ ಪ್ರಶಸ್ತಿಗಳು ಮತ್ತು ಭಾರತ ರತ್ನಕ್ಕೆ ಭಾಜನರಾದವರ ಪಟ್ಟಿ ತರಿಸಿಕೊಂಡು ಒಮ್ಮೆ ಕಣ್ಣಾಡಿಸಿದರೆ ಕಠೋರ ಸತ್ಯ ಮನವರಿಕೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿಭಾ ನ್ಯಾಯದ ಜೊತೆಗೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯದಂತಹ ಪದಗಳು ಹೆಚ್ಚು ಚಾಲ್ತಿಗೆ ಬಂದಿವೆ.

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ನಂಬಿಸಲಾಗಿದೆ. ಇಲ್ಲಿಯವರೆಗೆ ಆ ಪ್ರಶಸ್ತಿ ಪಡೆದವರ ಹೆಸರುಗಳನ್ನು ಗಮನಿಸಿದರೆ ಸಂವೇದನಾಶೀಲ ಮನಸ್ಸುಗಳಿಗೆ ಶಾಕ್ ಆಗುತ್ತದೆ. ಅಕಾಡಮಿಗಳು ಕೊಡುವ ಪುಸ್ತಕ ಬಹುಮಾನಗಳು ತೀರ್ಪುಗಾರರು ಯಾರು ಎನ್ನುವುದರ ಮೇಲೆಯೇ ನಿರ್ಧಾರವಾಗಿರುತ್ತದೆ. ಭಾರತದ ಜಾತಿ ವ್ಯವಸ್ಥೆಯ ವಿರಾಟ್ ದರ್ಶನ ಮಾಡಬೇಕೆಂದರೆ ಪ್ರಶಸ್ತಿ ವಿಜೇತರ ಪಟ್ಟಿ ಇಟ್ಟುಕೊಂಡು ಸೂಕ್ಷ್ಮ ನೆಲೆಯಲ್ಲಿ ಅಧ್ಯಯನ ಕೈಗೊಂಡರೆ ಎಲ್ಲವೂ ನಿಚ್ಚಳವಾಗುತ್ತದೆ. ನೀತಿ ನಿಯಮ, ನಿರ್ದಿಷ್ಟ ಮಾನದಂಡಗಳು ಇಲ್ಲದ ಕಡೆ ಪ್ರಶಸ್ತಿ-ಪುರಸ್ಕಾರಗಳು ಜಾತಿ ಪ್ರೇರಿತವಾಗಿಯೇ ವಿತರಿಸಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ 99 ವರ್ಷ ಕಳೆದರೂ ದಲಿತ ಸಮುದಾಯಕ್ಕೆ ಸೇರಿದ ಒಬ್ಬರೂ ಸಮ್ಮೇಳನಾಧ್ಯಕ್ಷರಾಗಲು ಸಾಧ್ಯವಾಗಿರಲಿಲ್ಲ. ಹಾಗೆ ನೋಡಿದರೆ ಸೋಸಲೆ ಸಿದ್ದಪ್ಪನವರಿಂದ ಹಿಡಿದು ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಕೆ.ಬಿ. ಸಿದ್ದಯ್ಯ, ಎಲ್. ಹನುಮಂತಯ್ಯ ಸೇರಿದಂತೆ ನೂರಾರು ಜನ ಲೇಖಕರು ಅತ್ಯುತ್ತಮ ಸಾಹಿತ್ಯ ರಚಿಸಿ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಸುಬ್ಬು ಹೊಲೆಯಾರ್, ಎನ್.ಕೆ. ಹನುಮಂತಯ್ಯ, ಲಕ್ಷ್ಮೀನಾರಾಯಣ ಸ್ವಾಮಿಯಂತಹ ಯುವಕವಿಗಳು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಅತ್ಯುತ್ತಮ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡಮಿ, ಕರ್ನಾಟಕ ಸಾಹಿತ್ಯ ಅಕಾಡಮಿ, ಕನ್ನಡ ಸಾಹಿತ್ಯ ಪರಿಷತ್‌ನಂತಹ ‘ಅಪ್ಪಟ ಸಾಹಿತ್ಯ’ ಕೇಂದ್ರದ ಸಂಸ್ಥೆಗಳೇ ಜಾತಿ ಪ್ರೇರಿತವಾಗಿ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿರುವಾಗ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯ ಬಗ್ಗೆ ‘ನಿಜ ಸಾಧಕ’ರಿಗೆ ಯಾವ ನಿರೀಕ್ಷೆಗಳೂ ಇರಲಿಲ್ಲ. ಹಾಗೆ ನೋಡಿದರೆ ಅಕಾಡಮಿ, ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಂಸ್ಥೆಗಳು ಸರಕಾರದ ಅನುದಾನವನ್ನು ಅವಲಂಬಿಸಿಯೇ ಕಾರುಬಾರು ನಡೆಸುತ್ತವೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಸಂವೇದನಾಶೀಲರಾದ, ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇರುವ ಪುಂಡಲೀಕ ಹಾಲಂಬಿಯವರು ಅಧ್ಯಕ್ಷರಾಗಿದ್ದಾಗ ಕನ್ನಡದ ಪ್ರತಿಭಾವಂತ ಕವಿ ಡಾ. ಸಿದ್ದಲಿಂಗಯ್ಯನವರು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪುಂಡಲೀಕ ಹಾಲಂಬಿಯವರಿಗೆ ‘ಪ್ರತಿಭೆ’ ಎಂಬುದು ಒಂದು ಜಾತಿ, ಧರ್ಮ, ಪ್ರದೇಶ ಮತ್ತು ಪುರುಷರಿಗೆ ಸೀಮಿತವಾಗಿರುವುದಿಲ್ಲ. ಎಲ್ಲಾ ಸಮುದಾಯಗಳಲ್ಲೂ, ಎಲ್ಲಾ ಪ್ರದೇಶಗಳಲ್ಲೂ ಪ್ರತಿಭಾವಂತರಿದ್ದಾರೆ. ಅವರನ್ನು ಹುಡುಕಿ ಗೌರವಿಸಬೇಕು ಎಂಬ ತತ್ವಾದಶರ್ಗಳಲ್ಲಿ ನಂಬಿಕೆ ಇರಿಸಿದ್ದರು. ಆ ಕಾರಣಕ್ಕೆ ಪುಂಡಲೀಕ ಹಾಲಂಬಿಯವರ ಅಧಿಕಾರಾವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕ್ರೈಸ್ತ ಸಮುದಾಯಕ್ಕೆ ಸೇರಿದ ಕನ್ನಡದ ಪ್ರತಿಭಾವಂತ ಸಾಹಿತಿ ನಾ. ಡಿಸೋಜಾ, ದಲಿತ ಸಮುದಾಯಕ್ಕೆ ಸೇರಿದ ಕನ್ನಡದ ಕ್ರಾಂತಿಕಾರಿ ಕವಿ ಡಾ. ಸಿದ್ದಲಿಂಗಯ್ಯನವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕರಾವಳಿ ಕರ್ನಾಟಕದ ಮೊದಲ ಮುಸ್ಲಿಮ್ ಲೇಖಕಿ ಡಾ. ಸಾರಾ ಅಬೂಬಕರ್, ಕಲ್ಯಾಣ ಕರ್ನಾಟಕದ ಡಾ. ಕುಂ. ವೀರಭದ್ರಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್‌ನ ಪ್ರತಿಷ್ಠಿತ ‘ನೃಪತುಂಗ ಪ್ರಶಸ್ತಿ’ಗೆ ಭಾಜನರಾಗಿದ್ದರು. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಆಧರಿತ ಪ್ರತಿಭಾ ನ್ಯಾಯದಲ್ಲಿ ಪುಂಡಲೀಕ ಹಾಲಂಬಿಯವರಿಗೆ ಗಾಢವಾದ ನಂಬಿಕೆ ಇದ್ದಿದ್ದರಿಂದಲೇ ‘ಪ್ರತಿಭೆ’ ಎಂಬ ಪದಕ್ಕೆ ಹೊಸ ಅರ್ಥ ನೀಡಿದರು.

ರಾಮಕೃಷ್ಣ ಹೆಗಡೆಯವರ ಕಾಲಾವಧಿಯಿಂದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಪಾಲಿಸುತ್ತಾ ಬಂದಿದ್ದರೂ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರಲಿಲ್ಲ. ತಜ್ಞರ ಸಲಹಾ ಸಮಿತಿಯೂ ಇರುತ್ತಿರಲಿಲ್ಲ. ರಾಜ್ಯದಲ್ಲಿ ಜನತಾ ಪರಿವಾರದ ಸರಕಾರ ಇದ್ದಾಗಲೆಲ್ಲ ಸಾಂಸ್ಕೃತಿಕ ಕ್ಷೇತ್ರದ ಹೊಣೆಗಾರಿಕೆ ಎಂ.ಪಿ. ಪ್ರಕಾಶ್ ಅವರ ಹೆಗಲೇರುತ್ತಿತ್ತು. ಸಾಹಿತ್ಯ, ಸಂಗೀತ, ಸಂಸ್ಕೃತಿ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದ ಎಂ.ಪಿ. ಪ್ರಕಾಶ್ ಅವರಿಗೆ ಜಂಗಮ ಜಾತಿ ಪ್ರೀತಿ ತುಸು ಜಾಸ್ತಿಯೇ ಇತ್ತು. ಬೆಂಗಳೂರಿನ ಖ್ಯಾತನಾಮರಿಗೆ ಮಣೆ ಹಾಕಿ ಜಾತಿ ಪ್ರೀತಿಯನ್ನು ಜಾರಿಗೊಳಿಸುತ್ತಿದ್ದರು. ಹಾಗಾಗಿ ಅಕಾಡಮಿ, ಪ್ರಾಧಿಕಾರಗಳ ನೇಮಕಾತಿ, ರಾಜ್ಯೋತ್ಸವ ಪ್ರಶಸ್ತಿ ನೀಡಿಕೆಯಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಆಧರಿತ ಪ್ರತಿಭಾ ನ್ಯಾಯ ಪಾಲನೆಯಾಗುತ್ತಿರಲಿಲ್ಲ. ಆಗ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ವಯಸ್ಸಿನ ಮಿತಿ ಇಲ್ಲದಿದ್ದುದರಿಂದ ಬೇಕಾಬಿಟ್ಟಿ ವಿತರಣೆಯಾಗುತ್ತಿದ್ದವು, ಬಂಗಾರಪ್ಪ, ಮೊಯ್ಲಿ, ಧರಂಸಿಂಗ್ ಅವರ ಅಧಿಕಾರಾವಧಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಅರ್ಹರ ಜೊತೆ ಯಾರ್ಯಾರೋ ಗಿಟ್ಟಿಸಿಕೊಂಡರು. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಗುಣಮಟ್ಟದ ಆಯ್ಕೆಗೆ ಆದ್ಯತೆ ನೀಡಿದ್ದರು. ಆದರೆ ವಯಸ್ಸಿನ ಮಿತಿ ಮೀರಿ ಅವಕಾಶ ಸಿಕ್ಕವರೆಲ್ಲ ಸಾಧಕರಾದರು. ಕೃಷ್ಣ ಅವರು ಪ್ರಶಸ್ತಿ ಆಯ್ಕೆಯಲ್ಲಿ ತಜ್ಞರ ಸಲಹೆ ಕೇಳುತ್ತಿದ್ದರು.

2008ರಲ್ಲಿ ಮುಖ್ಯಮಂತ್ರಿಯಾದ ಯಡಿಯೂರಪ್ಪನವರು ರಾಜ್ಯೋತ್ಸವ ಪ್ರಶಸ್ತಿ ಮೊತ್ತ ರೂ. 10 ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಿಸಿದ್ದರು. ಆದರೆ ಪ್ರಶಸ್ತಿ ಆಯ್ಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಿಲ್ಲ. ಸಾಹಿತಿ, ಕಲಾವಿದರ ಹೆಸರಲ್ಲಿ ಅನರ್ಹರಿಗೆ ಪ್ರಶಸ್ತಿ ನೀಡಿದರು. ಮಾಧ್ಯಮ ಕ್ಷೇತ್ರದ ಪ್ರಶಸ್ತಿಯನ್ನು ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಿಗೆ ನೀಡಿ ಸಂತೃಪ್ತಿ ಸೂತ್ರ ಅನುಸರಿಸಿದರು. ಅರ್ಹತೆಗೆ ಸಂಘ ಪರಿವಾರದ ಸಾಂಗತ್ಯ ಕಡ್ಡಾಯಗೊಳಿಸಲಿಲ್ಲ ಎಂಬುದು ಸಮಾಧಾನ ತರುವ ಸಂಗತಿ.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೊದಲ ವರ್ಷ ಅವರೇ ಸಂಸ್ಕೃತಿ ಇಲಾಖೆ ಹೊಂದಿದ್ದರು. ಆನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಆಗಿದ್ದ ಗೋವಿಂದ ಕಾರಜೋಳ ಅವರು ರಾಜ್ಯೋತ್ಸವ ಪ್ರಶಸ್ತಿಗೆ ವಯಸ್ಸಿನ ಮತ್ತು ಸಂಖ್ಯೆಯ ಮಿತಿ ಹೇರಿದರು. ತಮ್ಮ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರಶಸ್ತಿ ಎಂಬ ನೀತಿ ಜಾರಿಗೆ ತಂದರು. ರಾಜ್ಯೋತ್ಸವ ವರ್ಷಕ್ಕನುಗುಣವಾಗಿ ಪ್ರಶಸ್ತಿಯ ಸಂಖ್ಯೆ ಕಡಿಮೆಯಾದವು. ಪ್ರಶಸ್ತಿ ಆಯ್ಕೆಯಲ್ಲಿ ಗುಣಮಟ್ಟ ಉಳಿಯಲಿಲ್ಲ. ಅಯೋಗ್ಯರಿಗೂ ಪ್ರಶಸ್ತಿ ನೀಡಿ ಮೌಲ್ಯ ಕುಸಿಯುವಂತೆ ಮಾಡಿದರು. ಬಿಜೆಪಿ ಕಾರ್ಯಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠಕ್ಕೆ ನಾಂದಿ ಹಾಡಿದರು.

ರಾಜ್ಯೋತ್ಸವ ಪ್ರಶಸ್ತಿಗೆ ನಿಜವಾದ ಮೌಲ್ಯ ಪ್ರಾಪ್ತವಾಗಿದ್ದು ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ 2013 ರಿಂದ 2018ರ ವರೆಗಿನ ಕಾಲಾವಧಿಯಲ್ಲಿ. ಪ್ರತಿಭಾವಂತ ನಟಿ ಉಮಾಶ್ರೀ ಅವರು 5 ವರ್ಷಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಯಾಗಿದ್ದರು, ಅಕಾಡಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರ ನೇಮಕಾತಿಯಿಂದ ಹಿಡಿದು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿ ಅದರಂತೆ ನಡೆದುಕೊಂಡಿದ್ದರು. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಆಧರಿಸಿದ ‘ಪ್ರತಿಭಾವಂತರ’ ಆಯ್ಕೆ ಶುರುವಾದದ್ದೇ ಉಮಾಶ್ರೀ ಅವರ ಕಾಲದಲ್ಲಿ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೆ ಎರಡು ತಿಂಗಳ ಮೊದಲೇ ಸಲಹಾ ಸಮಿತಿ ರಚಿಸಿ ಸರಣಿ ಸಭೆ ನಡೆಸುತ್ತಿದ್ದರು. ಸಲಹಾ ಸಮಿತಿ ಸದಸ್ಯರ ಜೊತೆ ಉಮಾಶ್ರೀಯವರೂ ಕೂತು ಪಟ್ಟಿ ಸಿದ್ಧಪಡಿಸುತ್ತಿದ್ದರು. ಉಮಾಶ್ರೀ ಅವರು ಕನ್ನಡ ಮತ್ತು ಸಂಸ್ಕೃತಿ ಮಂತ್ರಿ ಆಗಿದ್ದ ಅವಧಿಯಲ್ಲಿ ಬೆರಳೆಣಿಕೆಯ ಕೆಲವರನ್ನು ಹೊರತುಪಡಿಸಿ ಅತ್ಯುತ್ತಮ ಸಾಧಕರನ್ನೇ ಗುರುತಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿಗೆ ನಿಜವಾದ ಅರ್ಥದಲ್ಲಿ ತಾರಾಮೌಲ್ಯ ಬಂದಿತ್ತು. ಆಗಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡಿರಲಿಲ್ಲ. ಉಮಾಶ್ರೀ ಅವರ ಸಾಂಸ್ಕೃತಿಕ ಕಾಳಜಿ, ಕ್ರಿಯಾಶೀಲತೆ, ಅತ್ಯುತ್ತಮವಾದುದನ್ನು ‘ಜಾತಿ’ ಮೀರಿ ಗುರುತಿಸುವ ಗುಣ ಸರ್ವಕಾಲಕ್ಕೂ ಮಾದರಿಯಂತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕ್ಷರಶಃ ಸಂಘ ಪರಿವಾರದ ಶಾಖಾ ಕಚೇರಿಯಾಗಿ ಮಾರ್ಪಟ್ಟಿದ್ದು 2019ರಿಂದ 2023ರ ವರೆಗಿನ ಕಾಲಾವಧಿಯಲ್ಲಿ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅಕಾಡಮಿ-ಪ್ರಾಧಿಕಾರಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಸೇರಿವೆ ಎಂಬುದನ್ನೇ ಮರೆತರು. ಸಂಸ್ಕೃತಿ ಇಲಾಖೆಯ ನಿರ್ವಹಣೆಯನ್ನು ಸಂಘ ಪರಿವಾರದವರಿಗೆ ಹೊರಗುತ್ತಿಗೆಗೆ ವಹಿಸಿಕೊಟ್ಟಿದ್ದರು. ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರ ನೇಮಕಾತಿಯಲ್ಲಿ ಆಯಾ ಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸುವ ಅವಕಾಶ ನೀಡುವ ಪದ್ಧತಿಯನ್ನೇ ಕೈಬಿಟ್ಟರು. ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದು ಪ್ರಮುಖ ಮಾನದಂಡವನ್ನಾಗಿ ಇಟ್ಟುಕೊಂಡು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಎಲ್ಲಾ ಅವಕಾಶಗಳನ್ನು ಧಾರೆ ಎರೆದರು. ಸಂಘ ಪರಿವಾರದ ಕಾರ್ಯಕರ್ತರಿಗೆ ಹೆಚ್ಚು ಅನುಕೂಲವಾಗಲೆಂದು ಬಸವರಾಜ ಬೊಮ್ಮಾಯಿಯವರು ರಾಜ್ಯೋತ್ಸವ ಪ್ರಶಸ್ತಿ ಮೊತ್ತವನ್ನು ರೂ. 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದರು. ಸಂಘ ಪರಿವಾರದ ಮನದಂಡ ಅನುಸರಿಸಿ ನೀಡಿದ ರಾಜ್ಯೋತ್ಸವ ಪ್ರಶಸ್ತಿ ಕನ್ನಡಕ್ಕೆ ಕಳಂಕ.

ಎರಡನೆಯ ಅವಧಿಗೆ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯನವರು ಶಿವರಾಜ ತಂಗಡಗಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜವಾಬ್ದಾರಿ ವಹಿಸಿದ್ದರು. ಸಾಹಿತ್ಯ-ಸಂಸ್ಕೃತಿಯ ಗಂಧಗಾಳಿ ಇಲ್ಲದ ಶಿವರಾಜ ತಂಗಡಗಿಯವರು ಎಲ್ಲವನ್ನು ಹಾಳು ಮಾಡಬಹುದು ಎಂಬ ನಿರೀಕ್ಷೆ ಸುಳ್ಳಾಗಿಸಿದ್ದಾರೆ. ತಂಗಡಗಿಯವರ ಒಳ್ಳೆಯತನ ಗೆದ್ದಿದೆ. 2023ರ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಅವರಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಿತ್ತು. ಎಲ್ಲ ಬಲ್ಲವರಿಂದ ಕಲಿತು ತಂಗಡಗಿಯವರು ಸರ್ವಜ್ಞರಾಗಲು ಯತ್ನಿಸಿದ್ದಾರೆ. ಪ್ರತಿಭಾವಂತರ ಸಲಹಾ ಸಮಿತಿ ರಚಿಸಿ ಜಾಣತನ ಮೆರೆದಿದ್ದಾರೆ. 2023ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಗಮನಿಸಿದರೆ; ನಿಜವಾದ ಸಾಧಕರಿಗೆ ಮನ್ನಣೆ ದೊರಕಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಆಧರಿಸಿ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಯಶಸ್ವಿಯಾಗಿ ಮಾಡಿದ್ದಾರೆ. ಇಲ್ಲದಿದ್ದರೆ ಶಹನಾಯ್ ಮಾಂತ್ರಿಕ ಡಾ. ಬಾಳೇಶ ಭಜಂತ್ರಿ, ನೀಲಮ್ಮ ಕೊಡ್ಲಿ, ಶಬ್ಬೀರ್ ಸಂಗೀತ ಸಾಧಕರ ಪಟ್ಟಿಯಲ್ಲಿ ಸೇರುತ್ತಿರಲಿಲ್ಲ. ಜಾನಪದ ಕ್ಷೇತ್ರದ ಸಾಧಕರಾದ ಶಕುಂತಲಾ ದೇವಲಾ ನಾಯಕ, ವಿಭೂತಿ ಗುಂಡಪ್ಪ, ಹುಸೇನ್ ಸಾಬ ಸಿದ್ದಿ, ಎಚ್.ಕೆ. ಕಾರಮಂಚಪ್ಪ, ಮಹದೇವು, ನರಸಪ್ಪ, ಶ್ರೀಮತಿ ಚೌಡಮ್ಮ, ಶ್ರೀಮತಿ ಶಿವಂಗಿ ಕಣ್ಮರಿ ರಾಜ್ಯೋತ್ಸವ ಪ್ರಶಸ್ತಿಯ ಘನತೆ ಹೆಚ್ಚಿಸಿದ್ದಾರೆ. ರಂಗಭೂಮಿಗೆ ದುಡಿದ ಚಿದಂಬರರಾವ್ ಜಂಬೆ, ಪಿ. ಗಂಗಾಧರ ಸ್ವಾಮಿ, ಶ್ರೀಮತಿ ಸರೋಜಮ್ಮ, ಚಿತ್ರಕಲೆ ವಿಮರ್ಶಕಿ ಶ್ರೀಮತಿ ಮಾರ್ಥಾ ಜಾಕಿಮೋವಿಚ್ ಅಪ್ಪಟ ಕಲಾಸಾಧಕರು.

ಶ್ರೀಮತಿ ಹುಚ್ಚಮ್ಮ ಬಸಪ್ಪ ಚೌದ್ರಿ ‘ಸಮಾಜ ಸೇವೆ’ ಎಂಬ ಪದಕ್ಕೆ ಅನ್ವರ್ಥನಾಮವಾಗಿದ್ದಾರೆ. ತನಗಿರುವ ಎರಡು ಎಕರೆ ಜಮೀನನ್ನು ಸರಕಾರಿ ಶಾಲೆಗೆ ಕೊಟ್ಟು ಅದೇ ಶಾಲೆಯಲ್ಲಿ ಬಿಸಿಯೂಟ ನೌಕರಳಾಗಿ ಸೇವೆ ಸಲ್ಲಿಸಿದ್ದು ಅಪರೂಪದಲ್ಲಿ ಅಪರೂಪದ್ದು. ದಕ್ಷಿಣ ಕನ್ನಡದ ಚಾರ್ಮಾಡಿ ಹಸನಬ್ಬ ನಾಗರಿಕ ಸಮಾಜಕ್ಕೆ ಪಾಠದಂತಿದ್ದಾರೆ. ಚಾರ್ಮಾಡಿ ಘಾಟ್ ರಸ್ತೆ ದುರಂತದಲ್ಲಿ ಸಂಕಷ್ಟ ಅನುಭವಿಸಿದವರ ಪಾಲಿಗೆ ಹಸನಬ್ಬ ಆಪದ್ಬಾಂಧವರಾಗಿ ದುಡಿದಿದ್ದಾರೆ. ಅಪಘಾತವಾದಾಗ ಹೊರಳಿ ನೋಡುವವರೂ ಇರುವುದಿಲ್ಲ. ಅಂತಹದರಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸುವುದು ಶ್ರೇಷ್ಠ ಕೆಲಸ. ಅದು ಜಾತಿ-ಧರ್ಮ ಮೀರಿದ ಕಾಯಕ. ಸಾಹಿತ್ಯ ಕ್ಷೇತ್ರದ ಪ್ರತಿಭಾವಂತರಿಗೆ ಪ್ರಶಸ್ತಿ ದೊರಕಿದೆ.ಪ್ರೊ. ಸಿ. ನಾಗಣ್ಣ, ಸುಬ್ಬು ಹೊಲೆಯಾರ್, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಫ.ಗು. ಸಿದ್ದಾಪೂರ, ಕೆ. ಶರೀಫಾ ಸಾಮಾಜಿಕ ಪ್ರಜ್ಞೆಯೊಂದಿಗೆ ಅತ್ಯುತ್ತಮ ಸಾಹಿತ್ಯ ರಚಿಸಿದವರು. ಪತ್ರಿಕಾ ಕ್ಷೇತ್ರದ ಸಾಧನೆಗೆ ದಿನೇಶ್ ಅಮಿನ್ ಮಟ್ಟು ಅವರನ್ನು ಆಯ್ಕೆ ಮಾಡಿದ್ದು ಮಾಧ್ಯಮ ಕ್ಷೇತ್ರ ಹೆಮ್ಮೆ ಪಡುವಂತಿದೆ. ಪತ್ರಿಕಾ ವಿತರಕ ಜವರಪ್ಪ, ಕನ್ನಡ-ಉರ್ದು ಸೇತುವೆಯಂತಿರುವ ರಫಿ ಭಂಡಾರಿ ಪ್ರಶಸ್ತಿಗೆ ಭಾಜನರಾದದ್ದು ಒಳ್ಳೆಯ ಬೆಳವಣಿಗೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಸ್ತಕ್ಷೇಪ ಮಾಡದಿರುವುದು ಮಿಥಿಕ್ ಸೊಸೈಟಿ ಆಯ್ಕೆಯಲ್ಲೇ ಗೊತ್ತಾಗುತ್ತದೆ.

ವಿಜ್ಞಾನ ತಂತ್ರಜ್ಞಾನದ ಪ್ರಶಸ್ತಿಗೆ ಇಸ್ರೋ ಮುಖ್ಯಸ್ಥ ಸೋಮನಾಥ್, ಏರೋಸ್ಪೇಸ್ ಕ್ಷೇತ್ರದ ಪ್ರೊ. ಗೋಪಾಲನ್ ಜಗದೀಶ್ ಆಯ್ಕೆ ಮಾಡಿದ್ದು ಅರ್ಥಪೂರ್ಣವಾದದ್ದು. ಡಾ. ಶಂಭು ಬಳಿಗಾರ, ಡಾ. ವಿಶ್ವನಾಥ ವಂಶಾಕೃತ ಮಠ ಮತ್ತು ವೈದ್ಯಕೀಯ ಕ್ಷೇತ್ರದ ಕೆಲವರ ಹೆಸರು ಈ ಪಟ್ಟಿಗೆ ನ್ಯಾಯ ಒದಗಿಸುವುದಿಲ್ಲ. ಕೃಷಿ-ಪರಿಸರ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರದವರ ಸಾಧನೆ ಎದ್ದು ಕಾಣುತ್ತದೆ. ಪ್ರಶಸ್ತಿಗೆ ಹಿರಿಯಸಾಧಕರು, ಅಕಾಡಮಿ -ಪ್ರಾಧಿಕಾರಗಳಿಗೆ ಪ್ರತಿಭಾವಂತ ಕ್ರಿಯಾಶೀಲರನ್ನು ಆಯ್ಕೆ ಮಾಡಿದರೆ ಸಚಿವ ಶಿವರಾಜ ತಂಗಡಗಿಯವರು ಗೆದ್ದಂತೆ. ಸಾಂಸ್ಕೃತಿಕ ಲೋಕ ತನ್ನಷ್ಟಕ್ಕೇ ಅರ್ಥಪೂರ್ಣವಾಗುತ್ತದೆ. ಮೌಲಿಕ ಎನಿಸಿಕೊಳ್ಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News