‘ಕಲ್ಯಾಣ’ ಕರ್ನಾಟಕದ ಕತೆ-ವ್ಯಥೆ

ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಹೆಸರಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಕಲ್ಯಾಣವಾಗಿದೆ ಹೊರತು ಜನಸಾಮಾನ್ಯರ ಜೀವನಮಟ್ಟ ಹೆಚ್ಚಿಲ್ಲ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರದ ಬಗ್ಗೆ ಆ ಭಾಗದ ಜನಪ್ರತಿನಿಧಿಗಳಿಗೆ ಕನಿಷ್ಠ ತಿಳುವಳಿಕೆ ಮತ್ತು ಕಾಳಜಿ ಇಲ್ಲ. ಬಿ.ಆರ್. ಪಾಟೀಲ್‌ರಂತಹ ಬೆರಳೆಣಿಕೆ ಶಾಸಕರಿಗೆ ಕನಸುಗಳಿವೆ, ಅಧಿಕಾರವಿಲ್ಲ. ಅನುದಾನದ ಸದ್ಬಳಕೆ ಮತ್ತು ವೈಜ್ಞಾನಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸದ ಕಾರಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುತ್ತಿಲ್ಲ. ಆತ್ಮಾವಲೋಕನ ಅಗತ್ಯ.

Update: 2024-09-21 06:42 GMT

‘‘ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಮಾತ್ರಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗುವುದಿಲ್ಲ’’-ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಆ ಪಕ್ಷದ ಬಹುತೇಕ ಹಿರಿಯ ಮುಖಂಡರು ಹೇಳಿದ್ದಾರೆ. ದಿ. 17.9.20204ರಂದು ಕಲಬುರಗಿ ನಗರದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಡೆಸಿದ ಸಚಿವ ಸಂಪುಟ ಸಭೆ ಕುರಿತು ಬಿಜೆಪಿ ನಾಯಕರ ರಾಜಕೀಯ ಪ್ರತಿಕ್ರಿಯೆ ಅದು. ಅದರಾಚೆ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ಕುರಿತು ರಚನಾತ್ಮಕ ಸಲಹೆಗಳನ್ನೇನೂ ನೀಡಿಲ್ಲ. ಹಾಗೆ ನೋಡಿದರೆ ವಿಜಯೇಂದ್ರ ತಮ್ಮ ತಂದೆಯ ಅನುಭವದ ಮಾತುಗಳನ್ನೇ ಹೊರಹಾಕಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಎರಡು ಬಾರಿ ಸಚಿವ ಸಂಪುಟ ಸಭೆ ನಡೆಸಿದ್ದರು. ಅವರದ್ದೇ ಪಕ್ಷದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಸಚಿವ ಸಂಪುಟ ಸಭೆ ನಡೆಸಿದ್ದರು. ಆದರೂ ಕಲ್ಯಾಣ ಕರ್ನಾಟಕದ ಸ್ಥಿತಿಗತಿ ಹಾಗೆಯೇ ಇದೆ. 2014ರಲ್ಲಿ ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದರು. ಆವತ್ತು ಕೂಡ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಫ್ಯೂಡಲ್ ಮನಃಸ್ಥಿತಿಯ ಡಾ. ಶರಣಪ್ರಕಾಶ್ ಪಾಟೀಲ್ ಸಚಿವ ಸಂಪುಟ ಸಭೆಯ ನಂತರ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದರು. ಈಗಲೂ ಅದೇ ಆಗಿದೆ. ಡಾ. ಶರಣಪ್ರಕಾಶ್ ಪಾಟೀಲ್ ಜೊತೆ ಪ್ರಿಯಾಂಕ್ ಖರ್ಗೆಯವರು ಸಚಿವ ಸಂಪುಟ ಸಭೆ ಆಯೋಜಿಸಿ ಭರಪೂರ ಬೀಗಿದ್ದಾರೆ.

ಡಾ. ಶರಣಪ್ರಕಾಶ್ ಪಾಟೀಲ್ ಮತ್ತು ಪ್ರಿಯಾಂಕ ಖರ್ಗೆಯವರ ಉಸ್ತುವಾರಿಯಲ್ಲಿ ಜರುಗಿದ ಕಲಬುರಗಿ ಸಚಿವ ಸಂಪುಟ ಸಭೆಯ ಮರುದಿನ ಆಡಳಿತ ಪಕ್ಷದ ಶಾಸಕರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಸಲಹೆಗಾರರೂ ಆಗಿರುವ ಬಿ. ಆರ್. ಪಾಟೀಲ್ ‘ಕಟುಸತ್ಯ’ದ ಮಾತುಗಳನ್ನಾಡಿದ್ದಾರೆ. ‘‘ಅವಸರದಲ್ಲಿ ನಡೆದ ಸಚಿವ ಸಂಪುಟ ಸಭೆ. ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿನ ಅಂತರ್ಜಲ ಮಟ್ಟ ಹೆಚ್ಚಿಸದೆ ಆ ಎರಡೂ ಜಿಲ್ಲೆಗಳ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸುವುದು ಎಷ್ಟರಮಟ್ಟಿಗೆ ಸರಿ?’’ ಎಂದು ಪ್ರಶ್ನಿಸಿದ್ದಾರೆ. ಸಮಾಜವಾದಿ ಹಿನ್ನೆಲೆಯ ಬಿ.ಆರ್. ಪಾಟೀಲರು ವಿಶೇಷವಾಗಿ ಗ್ರಾಮೀಣಾಭಿವೃದ್ಧಿ ಬಗ್ಗೆ ಅಪಾರ ಕನಸುಗಳನ್ನು ಇಟ್ಟುಕೊಂಡವರು. ಮಂತ್ರಿಗಳಾದ ಈಶ್ವರ್ ಖಂಡ್ರೆ, ಡಾ. ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ಪಾಟೀಲ್ ದರ್ಶನಾಪುರ ಸ್ವಂತ ಅಭಿವೃದ್ಧಿಯಲ್ಲಿ ಮಾತ್ರ ನಂಬಿಕೆ ಇಟ್ಟಿರುವ ಅಪ್ಪಟ ಫ್ಯೂಡಲ್ ಪಳೆಯುಳಿಕೆಗಳು. ಮಂತ್ರಿ ಎನ್.ಎಸ್. ಭೋಸರಾಜು ಅವರಿಗೆ ಕಲ್ಯಾಣ ಕರ್ನಾಟಕಕ್ಕಿಂತ ಆಂಧ್ರ ಗುತ್ತಿಗೆದಾರರ ಹಿತ ಕಾಪಾಡುವುದೇ ಮೊದಲ ಆದ್ಯತೆ. ಮಂತ್ರಿಗಳಾದ ರಹಮಾನ್ ಖಾನ್, ಶಿವರಾಜ ತಂಗಡಗಿಯವರಿಗೆ ಬಲಾಢ್ಯರ ನಡುವೆ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದೇ ಹೆಚ್ಚುಗಾರಿಕೆ. ಪ್ರಿಯಾಂಕ್ ಖರ್ಗೆಯವರಿಗೆ ಕಲಬುರಗಿ ಅಭಿವೃದ್ಧಿಯೇ ಮೊದಲ ಆದ್ಯತೆಯಾಗಿಲ್ಲ. ಇನ್ನು ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಪುರುಸೊತ್ತು ಅವರಿಗೆಲ್ಲಿ ಸಿಗಬೇಕು? ಅವರಿಗೆ ಅಭಿವೃದ್ಧಿಗಿಂತ ರಾಜಕೀಯ ಹೇಳಿಕೆಗಳನ್ನು ನೀಡುವುದರಲ್ಲೇ ಹೆಚ್ಚು ಖುಷಿಯಿದೆ.

ಕಲ್ಯಾಣ ಕರ್ನಾಟಕದ ಒಟ್ಟಾರೆ ಹಿಂದುಳಿದಿರುವಿಕೆಗೆ, ಒಬ್ಬ ರಾಜಕಾರಣಿ, ಒಂದು ಪಕ್ಷ, ಒಂದು ಸರಕಾರ ಎಂದು ಹೇಳಿದರೆ ಅದು ಬೀಸು ಹೇಳಿಕೆ ಎನಿಸಿಕೊಳ್ಳುತ್ತದೆ. ಹೈದರಾಬಾದಿನ ನಿಜಾಮನಿಂದ ಹಿಡಿದು ಈ ಹೊತ್ತಿನ ರಾಜಕಾರಣಿಗಳ ವರೆಗೆ ಎಲ್ಲರೂ ಆ ಭಾಗದ ಜನರನ್ನು ಗುಣಮಟ್ಟದ ಬದುಕಿನಿಂದ ವಂಚಿಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ಭದ್ರ ಬುನಾದಿ ಹಾಕಿದವರೇ ಮೈಸೂರು ಸಂಸ್ಥಾನದ ಅರಸರು. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸರ್ವಾಂಗೀಣ ಅಭಿವೃದ್ಧಿ ಕುರಿತು ದೂರಗಾಮಿ ಕನಸುಗಳಿದ್ದವು. ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಅಪಾರ ನಂಬಿಕೆ ಇತ್ತು. ಆ ಕಾರಣಕ್ಕೆ ಮಿಲ್ಲರ್ ಕಮಿಷನ್ ಶಿಫಾರಸುಗಳನ್ನು ಜಾರಿಗೊಳಿಸಿ ಅಹಿಂದ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಅಭಿವೃದ್ಧಿಯ ಹರಿಕಾರರಾಗಿರಲಿಲ್ಲ. ಸ್ವತಃ ಸಾಹಿತಿ, ಕಲಾವಿದರಾಗಿದ್ದರು. ಅಭಿವೃದ್ಧಿ ಕೆಲಸಗಳ ಜೊತೆ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ನಾಲ್ವಡಿಯವರು ಸ್ವತಃ ಕರ್ನಾಟಕಿ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡೆದಿದ್ದರು. ಅವರು ಹಲವಾರು ವಾದ್ಯಗಳನ್ನು ನುಡಿಸುತ್ತಿದ್ದರು. ಉತ್ತರ ಭಾರತದ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರನ್ನು ಕರೆಸಿ, ತಮ್ಮ ಆಸ್ಥಾನದಲ್ಲಿ ಸಂಗೀತ ಕಚೇರಿಗಳನ್ನು ಏರ್ಪಡಿಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿರುವಷ್ಟು ವೈವಿಧ್ಯಮಯ ಕಲಾ ನೈಪುಣ್ಯ ಇಲ್ಲವಾದರೂ ಅವರ ಪರಂಪರೆಯನ್ನು ಅಪಾರವಾಗಿ ಗೌರವಿಸುತ್ತಾರೆ. ಸಾಹಿತ್ಯ-ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯನವರು ಅಪಾರ ಪ್ರೀತಿ-ಗೌರವ ಹೊಂದಿದ್ದಾರೆ. ಅಭಿವೃದ್ಧಿ ವಿಷಯದಲ್ಲಿಯೂ ಸಿದ್ದರಾಮಯ್ಯನವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾದರಿಯನ್ನೇ ಅನುಸರಿಸುತ್ತಿದ್ದಾರೆ. ಒಡೆಯರ್ ಅವರಿಗಿಂತ ಮೊದಲು ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ್ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದರು. ಕನ್ನಡ ಭಾಷೆ, ಸಂಸ್ಕೃತಿಯನ್ನು ಟಿಪ್ಪು ಸುಲ್ತಾನ್ ಅಪಾರವಾಗಿ ಗೌರವಿಸುತ್ತಿದ್ದರು.

ಟಿಪ್ಪು ಮತ್ತು ಒಡೆಯರ್ ಆಡಳಿತ ವೈಖರಿ ಮೂಲತಃ ಜನಪರವಾಗಿತ್ತು. ಆದರೆ ಹೈದರಾಬಾದಿನ ನಿಜಾಮಗೆ ಬಹುಸಂಖ್ಯಾತ ಹಿಂದೂ ಜಮೀನ್ದಾರರ ಮರ್ಜಿಯಂತೆ ಆಡಳಿತ ನಡೆಸುವ ಅನಿವಾರ್ಯತೆ ಇತ್ತು. ಅವರೂ ಸಾಹಿತ್ಯ, ಸಂಗೀತ, ಶಿಕ್ಷಣಕ್ಕೆ ಅವಕಾಶ ನೀಡಿದ್ದರು. ಉಸ್ಮಾನಿಯ ವಿದ್ಯಾನಿಲಯವನ್ನು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದ್ದರು. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಉರ್ದು ಭಾಷೆಯಲ್ಲಿ ಕಲಿಸುವ, ಕಲಿಯುವ ವ್ಯವಸ್ಥೆ ಕಲ್ಪಿಸಿದ್ದರು. ಹಳ್ಳಿಗೊಂದು ಕೆರೆ-ಕಟ್ಟೆ, ಎರಡೆರಡು ಬಾವಿಗಳನ್ನು ಕಟ್ಟಿಸಿದ್ದರು. ಅವರೂ ದಲಿತ ಪರ ಕಾಳಜಿ ಇಟ್ಟುಕೊಂಡಿದ್ದರು. ಆದರೆ ಜಮೀನ್ದಾರಿ ವ್ಯವಸ್ಥೆಯಲ್ಲಿ ಹೆಚ್ಚು ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯವಾಗಲಿಲ್ಲ. ಉರ್ದು ಆಡಳಿತ ಮತ್ತು ಶಿಕ್ಷಣ ಮಾಧ್ಯಮದ ಭಾಷೆಯಾಗಿತ್ತು. ಸಹಜವಾಗಿಯೇ ಕನ್ನಡ ಭಾಷಿಕ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರುಗಳಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿ ಹಿನ್ನಡೆ ಅನುಭವಿಸಬೇಕಾಯಿತು.

ಭಾಷಾವಾರು ಪ್ರಾಂತ ರಚನೆಗಾಗಿ ಕೇಂದ್ರ ಸರಕಾರ ರಾಜ್ಯಗಳ ಪುನರ್ವಿಂಗಡಣಾ ಆಯೋಗ ರಚಿಸಿತ್ತು. ನ್ಯಾಯಮೂರ್ತಿ ಫಝಲ್ ಅಲಿ ನೇತೃತ್ವದ ಏಕ ಸದಸ್ಯ ಆಯೋಗ ಹೈದರಾಬಾದ್ ರಾಜ್ಯದ ಭಾಗವಾಗಿದ್ದ ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳನ್ನು ಕರ್ನಾಟಕಕ್ಕೆ ಸೇರಿಸಿತು. ಬಳ್ಳಾರಿ ಜಿಲ್ಲೆ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತ್ತು. ಭಾಷಾವಾರು ಪ್ರಾಂತ ರಚನೆಯಾದ ಮೇಲೆ ಕಲಬುರಗಿ ವಿಭಾಗ ಕೇಂದ್ರವಾಯಿತು. ಆಡಳಿತಾತ್ಮಕ ಅನುಕೂಲಕ್ಕಾಗಿ ಬಳ್ಳಾರಿಯೂ ಕಲಬುರಗಿ ವಿಭಾಗದ ಕೇಂದ್ರ ಭಾಗವಾಗಿದ್ದರಿಂದ 371(ಜೆ) ವಿಶೇಷ ಸ್ಥಾನಮಾನದ ಅನುಕೂಲಗಳನ್ನು ಆ ಜಿಲ್ಲೆಯವರೂ ಪಡೆದುಕೊಂಡಿದ್ದರು.

ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲೇ ರಾಜ್ಯ ಪುನರ್ವಿಂಗಡಣಾ ಆಯೋಗದ ಅಧ್ಯಕ್ಷರಾದ ಫಝಲ್ ಅಲಿಯವರು ‘‘ಹೈದರಾಬಾದ್ ರಾಜ್ಯದ ಭಾಗವಾಗಿದ್ದ ಈಗಿನ ಮಹಾರಾಷ್ಟ್ರ ರಾಜ್ಯದ ವಿದರ್ಭ ಪ್ರದೇಶ ಜಿಲ್ಲೆಗಳು ತೆಲಂಗಾಣ ಪ್ರದೇಶ ಮತ್ತು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಚಾರಿತ್ರಿಕ ಕಾರಣಗಳಿಗಾಗಿ ಹಿಂದುಳಿದಿವೆ.’’ಎಂದು ಶಿಫಾರಸು ಮಾಡಿದ್ದರು. ಮೊತ್ತ ಮೊದಲ ಬಾರಿಗೆ 371 ಕಲಂಗೆ ತಿದ್ದುಪಡಿ ತಂದು ತೆಲಂಗಾಣ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳದ ಅವರು ಪ್ರತ್ಯೇಕ ರಾಜ್ಯವನ್ನೇ ಪಡೆದುಕೊಂಡರು. ಎರಡನೇ ಬಾರಿಗೆ 371ನೇ ಕಲಂಗೆ ತಿದ್ದುಪಡಿ ತಂದು ಮಹಾರಾಷ್ಟ್ರ ರಾಜ್ಯದ ವಿದರ್ಭ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲಾಯಿತು. ಮೂರನೇ ಬಾರಿಗೆ ಸಂವಿಧಾನದ 371(ಜೆ) ಕಲಂಗೆ ತಿದ್ದುಪಡಿ ಮಾಡಿ ಅಂದಿನ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಸವಲತ್ತುಗಳನ್ನು ಕಲ್ಪಿಸಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರಕಿಸಿ ಕೊಡುವಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್. ಧರಂ ಸಿಂಗ್ ಅವರ ಪಾತ್ರ ಪ್ರಮುಖವಾದದ್ದು. ವಿಶೇಷ ಸ್ಥಾನಮಾನದ ಪರಿಕಲ್ಪನೆಯನ್ನು ಆ ಭಾಗದ ಜನರಿಗೆ ತಿಳಿಸಿಕೊಟ್ಟು ಹೋರಾಟದ ಮೂಲಕ ಭೂಮಿಕೆ ಸಿದ್ಧಪಡಿಸಿದವರು ಮಾಜಿ ಮಂತ್ರಿ ದಿ. ವೈದ್ಯನಾಥ ಪಾಟೀಲರು.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಪರಿಕಲ್ಪನೆಗೆ ಮೊದಲ ಬಾರಿಗೆ ಚಾಲನೆ ನೀಡಿದವರು ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರು. 1981-82ರಲ್ಲಿ ಆಗಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಜರುಗಿತ್ತು. ಅಂದು ನಗರಾಭಿವೃದ್ಧಿ ಸಚಿವರಾಗಿದ್ದ ಎನ್. ಧರಂ ಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಕುರಿತು ವರದಿ ಸಲ್ಲಿಸಲು ಸೂಚಿಸಿತ್ತು. ಧರಂ ಸಿಂಗ್ ಸಮಿತಿಯೂ ಪ್ರದೇಶಾಭಿವೃದ್ಧಿ ಮಂಡಳಿ ರಚಿಸಲು ಶಿಫಾರಸು ಮಾಡಿತ್ತು. ಅದರಂತೆ ಪ್ರದೇಶಾಭಿವೃದ್ಧಿ ಮಂಡಳಿಯೂ ಅಸ್ತಿತ್ವಕ್ಕೆ ಬಂದಿತ್ತು. ಆ ಮಂಡಳಿಗೆ ವಿಶೇಷ ಅನುದಾನವನ್ನು ನೀಡಲಾಗುತ್ತಿತ್ತು. ಸರಕಾರವೇ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ನೇಮಿಸುತ್ತಿತ್ತು. 371ನೇ ಕಲಂಗೆ ತಿದ್ದುಪಡಿ ತಂದು ಕೇಂದ್ರ ಸರಕಾರ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ ಮೇಲೆ ಅಭಿವೃದ್ಧಿ ಮಂಡಳಿಯ ಸ್ವರೂಪ ಬದಲಾಯಿತು. 2014ರಿಂದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಸಂಪುಟ ದರ್ಜೆಯ ಸಚಿವರೇ ಅದಕ್ಕೆ ಅಧ್ಯಕ್ಷರಾಗಬೇಕೆಂದು ನಿಯಮ ರೂಪಿಸಲಾಗಿತ್ತು. 2013ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಖಮರುಲ್ ಇಸ್ಲಾಂ, ಡಾ. ಶರಣಪ್ರಕಾಶ್ ಪಾಟೀಲ್ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು. 2019ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ನಿಯಮಾವಳಿ ಮಾರ್ಪಡಿಸಿ ಶಾಸಕರನ್ನು ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸುವ ಪರಿಪಾಠ ಜಾರಿಗೆ ತಂದಿತು. ಅಷ್ಟು ಮಾತ್ರವಲ್ಲ ಶಾಸಕ ದತ್ತಾತ್ರೇಯ ಪಾಟೀಲ ರೇವೂರರನ್ನು ಅಧ್ಯಕ್ಷನನ್ನಾಗಿಸಿತ್ತು.

ಈಗ ಸಿದ್ದರಾಮಯ್ಯ ಸರಕಾರ ಎನ್. ಧರಂ ಸಿಂಗ್ ಅವರ ಪುತ್ರ ಸದಾಶಿವ ನಗರದ ನಿವಾಸಿ ಡಾ. ಅಜಯ್ ಸಿಂಗ್ ಅವರನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದ್ದು ಹಿಂದಿನ ಬಿಜೆಪಿ ಸರಕಾರ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯವೈಖರಿಯಲ್ಲಿ ಗುಣಾತ್ಮಕ ಬದಲಾವಣೆ ತಂದಿಲ್ಲವಾದ್ದರಿಂದ ಆ ಪ್ರದೇಶದ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿ ಈ ಹೊತ್ತಿಗೂ ಮರೀಚಿಕೆಯಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆ ಮತ್ತು ಅಧ್ಯಯನಕ್ಕಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅವರು ಸರಕಾರಕ್ಕೆ ಸಲ್ಲಿಸಿದ ವರದಿ ಅಭಿವೃದ್ಧಿ ರಾಜಕಾರಣದಲ್ಲಿ ನಿಜವಾದ ಆಸಕ್ತಿ ಮತ್ತು ಕಾಳಜಿ ಇರುವವರಿಗೆ ಮಾರ್ಗದರ್ಶಿ ಕೈಪಿಡಿಯಂತಿದೆ. ಅದು ನಂಜುಂಡಪ್ಪ ವರದಿ ಎಂದು ಸಾರ್ವಜನಿಕ ಬದುಕಿನಲ್ಲಿ ಜನಪ್ರಿಯವಾಗಿದೆ. ಕೆಲವು ಮಾನದಂಡಗಳನ್ನು ರೂಪಿಸಿ ಹೈದರಾಬಾದ್ ಕರ್ನಾಟಕ ಪ್ರದೇಶದ ತಾಲೂಕುಗಳನ್ನು ಹಿಂದುಳಿದಿರುವಿಕೆಯ ಪರಿಯನ್ನು ಅತ್ಯಂತ ವೈಜ್ಞಾನಿಕ ನೆಲೆಯಲ್ಲಿ ಅನಾವರಣಗೊಳಿಸಿದ್ದಾರೆ. ಆ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಪಾಲಿಸಿದ್ದರೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳು ಹಳೆ ಮೈಸೂರು ಭಾಗದ ಜಿಲ್ಲೆಗಳಿಗೆ ಸಮವಾಗಿ ಅಭಿವೃದ್ಧಿ ಹೊಂದುತ್ತಿದ್ದವು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371(ಜೆ)ನೇ ಕಲಂನಡಿ ವಿಶೇಷ ಸ್ಥಾನಮಾನ ದೊರಕಿದ್ದರಿಂದ ಏಳು ಜಿಲ್ಲೆಗಳ ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಏಳು ಜಿಲ್ಲೆಗಳ ವ್ಯಾಪ್ತಿಯ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರತಿಶತ 80ರಷ್ಟು ಸೀಟುಗಳು ಸ್ಥಳೀಯರಿಗೆ ದೊರೆಯುತ್ತಿವೆ. ರಾಜ್ಯದೆಲ್ಲೆಡೆಯ ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರತಿಶತ 8ರಷ್ಟು ಸೀಟುಗಳು ಲಭಿಸಿವೆ. ಕೆಲವು ಸಂಸ್ಥೆಗಳು ಹೊರತುಪಡಿಸಿದರೆ ಬಹುಪಾಲು ಮೆಡಿಕಲ್, ಇಂಜಿನಿಯರ್ ಕಾಲೇಜುಗಳು ವಿಶೇಷ ಸ್ಥಾನಮಾನದ ಕಾನೂನನ್ನು ಜಾರಿಗೊಳಿಸಿವೆ. ಉದ್ಯೋಗದಲ್ಲೂ ಇದೇ ಮಾದರಿಯ ಮೀಸಲಾತಿಯ ಲಾಭ ಈ ಭಾಗದವರಿಗೆ ದೊರಕಿದೆ. ಆದರೆ 30,000ದಷ್ಟು ಉದ್ಯೋಗಗಳನ್ನು ಭರ್ತಿ ಮಾಡಬೇಕಾಗಿದೆ. ಮೊದಲಿನ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಈಗಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ರೂ. ಅನುದಾನ ಹರಿದು ಬಂದಿದೆ. ಹಿಂದುಳಿದ, ಅತಿ ಹಿಂದುಳಿದ ತಾಲೂಕುವಾರು ಅನುದಾನವನ್ನು ಕಲ್ಯಾಣ ಕರ್ನಾಟಕದ ಎಲ್ಲ ಮತಕ್ಷೇತ್ರಗಳ ಶಾಸಕರಿಗೆ ಹಂಚಲಾಗಿದೆಯೇ ಹೊರತು ಅನುದಾನದ ಸದ್ಬಳಕೆಯ ಬಗ್ಗೆ ನಿಗಾ ವಹಿಸಿಲ್ಲ. ಅಭಿವೃದ್ಧಿಯ ಫಲಗಳು ಕಟ್ಟಕಡೆಯ ಮನುಷ್ಯನಿಗೆ ತಲುಪಿಯೇ ಇಲ್ಲ. ಅಭಿವೃದ್ಧಿಯ ಫಲಿತವನ್ನು ಅಳೆಯಲು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಮಾನದಂಡವನ್ನಾಗಿ ಬಳಸಲಾಗುತ್ತದೆ. ರಾಜ್ಯದ ಸರಾಸರಿ ಮಾನವ ಅಭಿವೃದ್ಧಿ ಸೂಚ್ಯಂಕದ ವಲಯವಾರು ಪಟ್ಟಿ ಇಟ್ಟುಕೊಂಡು ಕಲ್ಯಾಣ ಕರ್ನಾಟಕದ ತಾಲೂಕುಗಳ ಮಾನವ ಅಭಿವೃದ್ಧಿ ಸೂಚ್ಯಂಕದೊಂದಿಗೆ ತಾಳೆ ಹಾಕಿದರೆ ಎಲ್ಲರ ಬಣ್ಣ ಬಯಲಾಗುತ್ತದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳು ಮಾನವ ಅಭಿವೃದ್ಧಿ ಸೂಚ್ಯಂಕದ ಅನುಗುಣವಾಗಿ ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದರೆ ಎದ್ದು ಕಾಣುವಷ್ಟಾದರೂ ಅಭಿವೃದ್ಧಿ ಸಾಧಿಸಬಹುದಿತ್ತು. ಗುತ್ತಿಗೆದಾರರ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿ ಯೋಜನೆಗಳು ಮತ್ತು ಕ್ರಿಯಾ ಯೋಜನೆಗಳನ್ನು ರೂಪಿಸಿದ್ದರಿಂದ ಹಗರಣಗಳು ಕಾಣಿಸುತ್ತವೆಯೇ ಹೊರತು ಅಭಿವೃದ್ಧಿಯ ನೈಜ ಫಲಗಳಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿಯ ಆಡಿಟ್ ವರದಿ ಲಭ್ಯವಿದೆ. ಆಡಿಟ್ ಆಕ್ಷೇಪಣೆಯ ವರದಿಯನ್ನು ತನಿಖೆಗೆ ಒಳಪಡಿಸಿದರೆ ಹಲವರು ಕಂಬಿ ಹಿಂದೆ ನಿಲ್ಲಬೇಕಾಗುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಹೆಸರಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಕಲ್ಯಾಣವಾಗಿದೆ ಹೊರತು ಜನಸಾಮಾನ್ಯರ ಜೀವನಮಟ್ಟ ಹೆಚ್ಚಿಲ್ಲ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರದ ಬಗ್ಗೆ ಆ ಭಾಗದ ಜನಪ್ರತಿನಿಧಿಗಳಿಗೆ ಕನಿಷ್ಠ ತಿಳುವಳಿಕೆ ಮತ್ತು ಕಾಳಜಿ ಇಲ್ಲ. ಬಿ.ಆರ್. ಪಾಟೀಲ್‌ರಂತಹ ಬೆರಳೆಣಿಕೆ ಶಾಸಕರಿಗೆ ಕನಸುಗಳಿವೆ, ಅಧಿಕಾರವಿಲ್ಲ. ಅನುದಾನದ ಸದ್ಬಳಕೆ ಮತ್ತು ವೈಜ್ಞಾನಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸದ ಕಾರಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುತ್ತಿಲ್ಲ. ಆತ್ಮಾವಲೋಕನ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News