ರಾಜ್ಯ ಶಿಕ್ಷಣ ನೀತಿ: ತಜ್ಞರ ಆಯ್ಕೆಯಲ್ಲಿ ತಾರತಮ್ಯ
ವಿಜ್ಞಾನ, ತಂತ್ರಜ್ಞಾನ ಮತ್ತು ವೃತ್ತಿಪರ ಕೋರ್ಸುಗಳು ಪ್ರಾಮುಖ್ಯತೆ ಪಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ವಿಭಿನ್ನ ವಿಷಯಗಳ ತಜ್ಞರ ಇರುವಿಕೆ ರಾಜ್ಯ ಶಿಕ್ಷಣ ನೀತಿಗೆ ವ್ಯಾಪಕತೆ, ಸಮಗ್ರತೆ ತಂದುಕೊಡಬಹುದು. ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಗ್ರಹವಿಜ್ಞಾನ, ರಸಾಯನಶಾಸ್ತ್ರ ಬಯೋಟೆಕ್ನಾಲಜಿ, ಜೀವ ವಿಜ್ಞಾನ, ಪರಿಸರ ವಿಜ್ಞಾನ ಸೇರಿದಂತೆ ಹಲವು ಸ್ಕೂಲ್‌ಗಳ ಒಬ್ಬೊಬ್ಬ ಪ್ರತಿನಿಧಿಯಾದರೂ ಸಮಿತಿಯಲ್ಲಿ ಇರಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಮೂಲ ವಿಜ್ಞಾನ ಮಾಯವಾಗಿ ತಂತ್ರಜ್ಞಾನ ವಿಜೃಂಭಿಸುವಂತಾಗಿದೆ. ಮೂಲ ವಿಜ್ಞಾನದ ವಿವಿಧ ಶಾಖೆಗಳ ಎಲ್ಲರನ್ನೂ ಒಳಗೊಳ್ಳಲು ಆಗಲಿಕ್ಕಿಲ್ಲ. ಪರಸ್ಪರ ಪೂರಕವಾಗಿರುವ ವಿಜ್ಞಾನ ಸ್ಕೂಲ್‌ಗಳ ತಜ್ಞರು ಇರಬೇಕಿತ್ತು. ಪ್ರೊ. ಸುಖದೇವ್ ಥೊರಾಟ್ ಅಧ್ಯಕ್ಷತೆಯ ‘ರಾಜ್ಯ ಶಿಕ್ಷಣ ನೀತಿ’ ಆಯೋಗ ವಿಷಯವಾರು ತಜ್ಞರನ್ನು ಒಳಗೊಂಡಷ್ಟೂ ಕರ್ನಾಟಕದ ಅಗತ್ಯ ಪೂರೈಸುವ ಸಮಗ್ರ ಶಿಕ್ಷಣ ನೀತಿ ರೂಪಿಸಬಹುದು. ಕೇಂದ್ರ ಸರಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ರದ್ದುಪಡಿಸಿ ಸಿದ್ಧಪಡಿಸುವ ರಾಜ್ಯ ಶಿಕ್ಷಣ ನೀತಿ ಇಡೀ ದೇಶಕ್ಕೆ ಮಾದರಿಯಾಗುವಂತಿರಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಶಿಕ್ಷಣ ನೀತಿ ರೂಪಿಸಲು ಒಂದು ಆಯೋಗ ರಚಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಶಿಕ್ಷಣ ಕ್ಷೇತ್ರದ ಬಗ್ಗೆ ತಮಗಿರುವ ಕಾಳಜಿ ಮತ್ತು ಬದ್ಧತೆಯನ್ನು ರುಜುವಾತು ಪಡಿಸಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರ ಕರ್ನಾಟಕದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ತಾತ್ವಿಕವಾಗಿ ಒಪ್ಪಿಕೊಂಡು ಅದನ್ನು ಜಾರಿಗೊಳಿಸಿತ್ತು. ಡಾ.ಕೆ. ಕಸ್ತೂರಿ ರಂಗನ್ ಅಧ್ಯಕ್ಷತೆಯ ಆಯೋಗ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರ ಕರಡು ಸಿದ್ಧಪಡಿಸಿದಾಗಲೇ ಅದರ ವಿರುದ್ಧ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದವು. ಕರ್ನಾಟಕದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಜಾರಿಗೊಳಿಸಬಾರದೆಂದು ಶಿಕ್ಷಣ ತಜ್ಞರು, ಪ್ರಗತಿಪರ ಸಾಹಿತಿಗಳು ಒತ್ತಾಯಿಸುತ್ತಲೇ ಇದ್ದರು. ಪ್ರಮುಖವಾಗಿ ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಸೇರಿದಂತೆ ಹಲವರು ಸೈದ್ಧಾಂತಿಕ ನೆಲೆಯಲ್ಲಿ ವಿರೋಧಿಸಿ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದರು. ವಿಚಾರ ಸಂಕಿರಣಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ತಾತ್ವಿಕವಾಗಿ ವಿರೋಧ ವ್ಯಕ್ತಪಡಿಸಿದ ಬಹುಪಾಲು ಚಿಂತಕರು, ತಜ್ಞರು ಶಿಕ್ಷಣ ನೀತಿಯಲ್ಲಿ ಕೇಸರೀಕರಣದ ಅಂಶಗಳಿರುವುದನ್ನು ಗುರುತಿಸಿದರು. ಕನ್ನಡದಂತಹ ಸ್ಥಳೀಯ ಭಾಷೆಗಳಿಗೆ ಶಿಕ್ಷಣ ನೀತಿಯಲ್ಲಿ ಮೊದಲ ಸ್ಥಾನ ಕಲ್ಪಿಸಿಲ್ಲವೆಂದೂ, ಎಂಟ್ರಿ-ಎಕ್ಸಿಟ್ ಲೆವೆಲ್‌ಗಳ ಪರಿಕಲ್ಪನೆ ಗೊಂದಲದಿಂದ ಕೂಡಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದರು. ಅಷ್ಟು ಮಾತ್ರವಲ್ಲ; ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಪರಿಚಯಿಸಲು ಹೊರಟಿದ್ದ 5+3+3+4 ಶಿಕ್ಷಣ ವ್ಯವಸ್ಥೆಯನ್ನು ಮೂಲಭೂತ ಸೌಕರ್ಯಗಳ ಕೊರತೆಯ ಕಾರಣಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲವೆಂದೇ ಅಭಿಪ್ರಾಯ ವ್ಯಕ್ತವಾಗಿದ್ದವು.
ಹಲವರ ವಿರೋಧದ ನಡುವೆಯೂ ಈ ಹಿಂದಿನ ಬಿಜೆಪಿ ಸರಕಾರ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ನ್ನು ಜಾರಿಗೊಳಿಸಿತ್ತು. ಶಿಕ್ಷಣ ತಜ್ಞರು ಮತ್ತು ಪ್ರಗತಿಪರ ಚಿಂತಕರ ಅಭಿಪ್ರಾಯಗಳಿಗೆ ಕಿವಿಗೊಟ್ಟ ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಸರಕಾರ ಜಾರಿಗೊಳಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ್ದರು. 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಶಿಕ್ಷಣದ ಕೇಸರೀಕರಣವನ್ನು ವಿರೋಧಿಸಿ: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ರದ್ದುಗೊಳಿಸುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತ್ತು. ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿದರು. ಎರಡನೆಯ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಸಿದ್ದರಾಮಯ್ಯನವರು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದರ ಜೊತೆಗೆ ರಾಜ್ಯ ಶಿಕ್ಷಣ ನೀತಿ ಸಿದ್ಧಪಡಿಸುವ ಸವಾಲನ್ನು ಸ್ವೀಕರಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದರೂ ಕರ್ನಾಟಕಕ್ಕೆ ಮೊದಲ ಬಾರಿಗೆ ‘ರಾಜ್ಯ ಶಿಕ್ಷಣ ನೀತಿ’ ರೂಪಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭಾರತದಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ಧಪಡಿಸಿದ್ದ ಕೊಠಾರಿ ಆಯೋಗದ ಶಿಫಾರಸುಗಳು ಸೇರಿದಂತೆ ಕೇಂದ್ರ ಸರಕಾರ ರೂಪಿಸಿದ ಶಿಕ್ಷಣ ನೀತಿಗಳನ್ನೇ ಕರ್ನಾಟಕ ಸರಕಾರ ಜಾರಿಗೊಳಿಸುತ್ತಾ ಬಂದಿತ್ತು.
ಹಾಗೆ ನೋಡಿದರೆ ಭಾರತದಲ್ಲಿ ‘ಶಿಕ್ಷಣ ಸುಧಾರಣೆ’ಗೆ ಹಲವಾರು ಸಮಿತಿ ಮತ್ತು ಆಯೋಗಗಳು ಕಾಲಾನುಕಾಲಕ್ಕೆ ವರದಿ-ಶಿಫಾರಸುಗಳನ್ನು ನೀಡಿ ಶಿಕ್ಷಣ ವ್ಯವಸ್ಥೆಗೆ ಸುಭದ್ರ ಅಡಿಪಾಯ ನಿರ್ಮಿಸಿವೆ. ಭಾರತಕ್ಕೆ ಬ್ರಿಟಿಷರು ಬರುವ ಮುಂಚೆ ಸಾಂಪ್ರದಾಯಿಕ ನೆಲೆಯ ಶಿಕ್ಷಣ ಪದ್ಧತಿ ಜಾರಿಯಲ್ಲಿತ್ತು. ಗುರುಕುಲ ಶಿಕ್ಷಣ ಪದ್ಧತಿ ಮತ್ತು ಮದ್ರಸಾ ಶಿಕ್ಷಣ ಪದ್ಧತಿಗಳು ಅಂದಿನ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದ್ದವು. ಈಸ್ಟ್ ಇಂಡಿಯಾ ಕಂಪೆನಿ ಭಾರತಕ್ಕೆ ಬಂದು ನೆಲೆ ಕಂಡ ಮೇಲೆ ಬ್ರಿಟಿಷರ ಆಡಳಿತ ಶುರುವಾಯಿತು. ಆರಂಭದ ವರ್ಷಗಳಲ್ಲಿ ಬ್ರಿಟಿಷರು ಭಾರತೀಯರಿಗೆ ಅಗತ್ಯವಾದ ಶೈಕ್ಷಣಿಕ ನೀತಿಯನ್ನೇನೂ ರೂಪಿಸಲಿಲ್ಲ. ಸ್ವಾತಂತ್ರ್ಯ ಪೂರ್ವ ಭಾರತದ ಮೊದಲ ಶಿಕ್ಷಣ ನೀತಿ ಅಂದರೆ 1813ರ ಚಾರ್ಟರ್ ಆ್ಯಕ್ಟ್. ಚಾರ್ಲ್ಸ್ ಗ್ರ್ಯಾಂಟ್ ನೇತೃತ್ವದ ಸಮಿತಿ ಭಾರತೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಚಿಂತನೆ ನಡೆಸಿತು. ವಾರ್ಷಿಕ ಒಂದು ಲಕ್ಷ ರೂ.ಗಳ ಅನುದಾನ ನಿಗದಿಪಡಿಸಿತು. ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ಸಂಸ್ಕೃತ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಗಮನ ಹರಿಸಿತು. ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಅಗತ್ಯವನ್ನು ಒತ್ತಿ ಹೇಳಿತು. ಚಾರ್ಟರ್ ಆ್ಯಕ್ಟ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯೇನೋ ಆಗಲಿಲ್ಲ.
1835ರ ಮೆಕಾಲೆಯ ಮಿನಿಟ್ಸ್ ಭಾರತದ ಶಿಕ್ಷಣ ರಂಗದಲ್ಲಿ ಸಂಚಲನವಂತೂ ಮೂಡಿಸಿತು. ಥಾಮಸ್ ಬೆಬಿಂಗ್ಟನ್ ಮೆಕಾಲೆ ಭಾರತದ ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಿ ಪರಿಣಾಮಗಳನ್ನು ಬೀರುವ ನೀತಿಯೇನೂ ರೂಪಿಸಲಿಲ್ಲ. ಕಂಪೆನಿ ಸರಕಾರದ ಹಿತವನ್ನು ಗಮನದಲ್ಲಿಟ್ಟುಕೊಂಡು ‘ಗುಮಾಸ್ತರನ್ನು’ ಸೃಷ್ಟಿಸುವ ಶಿಕ್ಷಣಕ್ಕೆ ಆದ್ಯತೆ ನೀಡಿದ. ಸ್ಥಳೀಯ ಭಾಷೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು; ಅದು ಮೇಲು ಮತ್ತು ಮಧ್ಯಮ ವರ್ಗದವರಿಗೆ ಮಾತ್ರ. ಆತನ ಡೌನ್‌ವರ್ಡ್ ಫಿಲ್ಟರೇಶನ್ ಥಿಯರಿ ಜನಸಾಮಾನ್ಯರಿಗೆ ಶಿಕ್ಷಣವನ್ನು ನಿರಾಕರಿಸುವಂತಿತ್ತು. ಇಂಗ್ಲಿಷ್ ಶಿಕ್ಷಣ ಪಡೆಯುವ ಮೇಲು ಮತ್ತು ಮಧ್ಯಮ ವರ್ಗದವರೇ ಕೆಳಸ್ತರದಲ್ಲಿರುವವರಿಗೆ ಶಿಕ್ಷಣ ನೀಡಬೇಕೆಂಬುದು ಮೆಕಾಲೆಯ ಅಭಿಮತವಾಗಿತ್ತು. ಯುರೋಪಿಯನ್ ಶಿಕ್ಷಣ ಪದ್ಧತಿಗೆ ಒತ್ತು ನೀಡಿದ. ದೇಸಿ ಜ್ಞಾನ ಪರಂಪರೆಯ ಬಗ್ಗೆ ಸದಭಿಪ್ರಾಯ ಹೊಂದಿರಲಿಲ್ಲ. ಶಿಕ್ಷಣದ ಅಗತ್ಯವನ್ನು ಮನಗಾಣಿಸಿದ. ಮಾತ್ರವಲ್ಲ; ಶಿಕ್ಷಣ ಸರಕಾರದ ಜವಾಬ್ದಾರಿ ಎಂಬುದನ್ನು ಮನವರಿಕೆ ಮಾಡಿಕೊಟ್ಟ. ಆ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳು ಎದ್ದುನಿಂತವು. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ‘ನಿಜವಾದ ಶಿಕ್ಷಣ ಕ್ರಾಂತಿ’ ಶುರುವಾದದ್ದು 1854ರ ‘ವುಡ್ಸ್ ಡಿಸ್ಪ್ಯಾಚ್’ ಮೂಲಕ. ಚಾರ್ಲ್ಸ್ ವುಡ್ ಅಧ್ಯಕ್ಷತೆಯ ಸಮಿತಿಯ ಶಿಫಾರಸುಗಳು ‘ವುಡ್ಸ್ ಡಿಸ್ಪ್ಯಾಚ್’ ಎಂದು ಗುರುತಿ ಸಲಾಗುತ್ತದೆ. ಭಾರತೀಯರಿಗೆ ಶಿಕ್ಷಣ ನೀಡುವುದು ಕಂಪೆನಿ ಸರಕಾರದ ಆದ್ಯ ಕರ್ತವ್ಯ ಎಂದು ಪ್ರತಿಪಾದಿಸಿದ. ಅಷ್ಟೇ ಅಲ್ಲ, ಮೆಕಾಲೆಯ ಡೌನ್‌ವರ್ಡ್ ಫಿಲ್ಟರೇಶನ್ ಥಿಯರಿಯನ್ನೇ ತಿರಸ್ಕರಿಸಿದ. ಭಾರತೀಯ ಭಾಷೆಗಳು ಮತ್ತು ಸಾಹಿತ್ಯದ ಮಹತ್ವವನ್ನು ಮನಗಾಣಿಸಿದ. ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿ, ಉನ್ನತ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ನೀಡಬೇಕೆಂದು ಪ್ರತಿಪಾದಿಸಿದ. ಶಿಕ್ಷಕರ ತರಬೇತಿ ಸಂಸ್ಥೆ, ಕಾಲೇಜು, ವಿಶ್ವವಿದ್ಯಾನಿಲಯಗಳನ್ನು ಆರಂಭಿಸಬೇಕೆಂದು ಮನವರಿಕೆ ಮಾಡಿಕೊಟ್ಟ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅವಕಾಶವಿರಬೇಕೆಂದು ಹೇಳಿದ. ಕಾನೂನು, ವೈದ್ಯಕೀಯ, ತಾಂತ್ರಿಕ ಸೇರಿದಂತೆ ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ಕಲ್ಪಿಸಿದ. ಭಾರತೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವಂತೆ ಶಿಫಾರಸು ಮಾಡಿದ. ಚಾರ್ಲ್ಸ್ ವುಡ್ ಒತ್ತಾಸೆಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಅಸ್ತಿತ್ವಕ್ಕೆ ಬಂತು. ಸಾರ್ವತ್ರಿಕ ಮತ್ತು ಜಾತ್ಯತೀತ ಶಿಕ್ಷಣಕ್ಕೆ ಅವಕಾಶ ದೊರೆಯಿತು. ಆತನ ಶಿಫಾರಸಿನ ಮೇರೆಗೆ ಕಲ್ಕತ್ತಾ ವಿ.ವಿ., ಮುಂಬೈ ವಿ.ವಿ., ಮದ್ರಾಸ್ ವಿ.ವಿ.ಗಳು ಆರಂಭಗೊಂಡವು
1882ರ ಹಂಟರ್ ಕಮಿಷನ್ ವರದಿ ಭಾರತದಲ್ಲಿ ಶಿಕ್ಷಣ; ಬಹುಮುಖಿ ಆಯಾಮದಲ್ಲಿ ವ್ಯಾಪಕಗೊಳ್ಳುವಂತೆ ಮಾಡಿತು. ಸರ್ ವಿಲಿಯಂ ಹಂಟರ್ ಅಧ್ಯಕ್ಷತೆಯ ಆಯೋಗ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿತು. ಆದಿವಾಸಿ ಮತ್ತು ಹಿಂದುಳಿದ ಸಮುದಾಯದ ಮಕ್ಕಳಿಗೆ ಶಿಕ್ಷಣ ಸಿಗುವಂತಾಗ ಬೇಕೆಂದು ಪ್ರತಿಪಾದಿಸಿದ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವ ಮೂಲಕ ಹೆಚ್ಚು ಪ್ರಾಥಮಿಕ ಶಾಲೆಗಳು ಶುರುವಾಗಬೇಕೆಂದು ಕಂಪೆನಿ ಸರಕಾರಕ್ಕೆ ಒತ್ತಾಯಿಸಿದ. ಪ್ರಾಥಮಿಕ ಶಿಕ್ಷಣದ ಜವಾಬ್ದಾರಿಯನ್ನು ಸ್ಥಳೀಯ ಆಡಳಿತ ಮಂಡಳಿಗಳು ವಹಿಸಿಕೊಳ್ಳುವುದರ ಅಗತ್ಯವನ್ನು ಮನದಟ್ಟು ಮಾಡಿಸಿದ. 1902ರ ಇಂಡಿಯನ್ ಯುನಿವರ್ಸಿಟಿ ಕಮಿಷನ್ ಉನ್ನತ ಶಿಕ್ಷಣದ ಸುಧಾರಣೆಗೆ ವಿಶೇಷವಾಗಿ ಒತ್ತು ನೀಡಿತು. ಲಾರ್ಡ್ ಕರ್ಜನ್ ಅಧ್ಯಕ್ಷತೆಯ ಆಯೋಗ ಮೊದಲ ಬಾರಿಗೆ ವಿಶ್ವವಿದ್ಯಾನಿಲಯ ಆಡಳಿತ ವ್ಯವಸ್ಥೆಯನ್ನು ಪುನರ್‌ರಚಿಸಲು ಶಿಫಾರಸು ಮಾಡಿತು, ಸೆನೆಟ್, ಸಿಂಡಿಕೇಟ್ ಅಸ್ತಿತ್ವಕ್ಕೆ ಬಂದವು, ಕಾಲೇಜು ವಿ.ವಿ.ಗಳ ಪ್ರಾಧ್ಯಾಪಕರ ನೇಮಕಾತಿಗೆ ನಿರ್ದಿಷ್ಟ ನಿಯಮಾವಳಿಗಳನ್ನು ರೂಪಿಸಲಾಯಿತು. ಸೆನೆಟ್, ಸಿಂಡಿಕೇಟ್‌ಗಳಲ್ಲಿ ಶಿಕ್ಷಕರ ಪ್ರಾತಿನಿಧ್ಯ ಕಲ್ಪಿಸಲಾಯಿತು. 3 ವರ್ಷದ ಪದವಿ, 4 ವರ್ಷದ ಆನರ್ಸ್ ಪದವಿ ಶುರುವಾದದ್ದು ಆಗಲೇ. 1928-29ರ ಹರ್ಟೊಗ್ ಕಮಿಟಿಯ ಶಿಫಾರಸುಗಳು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದವು. ಸರ್ ಫಿಲಿಪ್ ಹರ್ಟೊಗ್ ಅಧ್ಯಕ್ಷತೆಯ ಸಮಿತಿಯ ಶಿಫಾರಸಿನ ಮೇರೆಗೆ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾದವು. ಸಂಶೋಧನೆಗೆ ಆದ್ಯತೆ ದೊರೆಯಿತು. ಸಾರ್ವತ್ರಿಕ ಶಿಕ್ಷಣಕ್ಕೆ ಒತ್ತು ನೀಡಲಾಯಿತು. ಆಬ್ಬಾಟ್ ವುಡ್ ರಿಪೋರ್ಟ್-1937 ಮತ್ತು 1944ರ ಸಾರ್ಜೆಂಟ್ ರಿಪೋರ್ಟ್‌ಗಳು ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣದ ಮಹತ್ವವನ್ನು ಮನಗಾಣಿಸಿದವು. ಪಾಲಿಟೆಕ್ನಿಕ್‌ಗಳು ಸ್ಥಾಪನೆಯಾದವು. ತರಬೇತಿ ಪಡೆದ ಮಹಿಳಾ ಶಿಕ್ಷಕರ ನೇಮಕ, ದೈಹಿಕ ಶಿಕ್ಷಣಕ್ಕೆ ವಿಶೇಷ ಅವಕಾಶ ದೊರೆತವು. ಭಾರತ ಸರಕಾರಕ್ಕೆ ಶೈಕ್ಷಣಿಕ ಸಲಹೆಗಾರನಾಗಿದ್ದ ಸರ್ ಜಾನ್ ಸಾರ್ಜೆಂಟ್ ಪರೀಕ್ಷಾ ಪದ್ಧತಿಯ ಸುಧಾರಣೆಗೆ ಕ್ರಮವಹಿಸಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತನ್ನು ಸ್ಥಾಪನೆ ಮಾಡಲಾಯಿತು. ಭಾರತೀಯ ಶಿಕ್ಷಣ ವ್ಯವಸ್ಥೆಗೆ ಬ್ರಿಟಿಷರು ಅಪಾರವಾಗಿ ಶ್ರಮಿಸಿದ್ದು ಮೇಲಿನ ನಿದರ್ಶನಗಳಿಂದ ಸ್ಪಷ್ಟವಾಗುತ್ತದೆ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶಿಕ್ಷಣ ಸುಧಾರಣೆಗೆ ಸಂಬಂಧಿಸಿದ ಸಮಿತಿ-ಆಯೋಗಗಳು ಸಾಕಷ್ಟು ಕೊಡುಗೆ ನೀಡಿವೆ ಅವುಗಳಲ್ಲಿ 1964-68ರ ಕೊಠಾರಿ ಕಮಿಷನ್ ಒಂದು ಮೈಲಿಗಲ್ಲು. 1965ರಲ್ಲಿ ಶಿಕ್ಷಣ ತಜ್ಞ ಡಿ.ಎಸ್. ಕೊಠಾರಿ ಅಧ್ಯಕ್ಷತೆಯ ಆಯೋಗ ಸಮಗ್ರ ಶಿಕ್ಷಣ ನೀತಿ ಸಿದ್ಧಪಡಿಸಿಕೊಟ್ಟಿತು. ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು 1968ರಲ್ಲಿ ಕೊಠಾರಿ ಆಯೋಗದ ಶಿಫಾರಸು ಆಧರಿಸಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದರು. ಅದಕ್ಕೂ ಮೊದಲು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆಯೋಗ (1948-49)ಉನ್ನತ ಶಿಕ್ಷಣಕ್ಕ್ಕೆ, ಲಕ್ಷ್ಮಣ ಸ್ವಾಮಿ ಮುದಲಿಯಾರ್ ಆಯೋಗ (1952-53) ಮಾಧ್ಯಮಿಕ ಶಿಕ್ಷಣಕ್ಕೆ ಸೀಮಿತಗೊಳಿಸಿಕೊಂಡಿದ್ದವು. ರಾಧಾಕೃಷ್ಣನ್ ಆಯೋಗ ಯುಜಿಸಿ ಸ್ಥಾಪನೆಗೆ ಶಿಫಾರಸು ಮಾಡಿತ್ತು. ಮಾತ್ರವಲ್ಲ; ವಿಶ್ವವಿದ್ಯಾನಿಲಯ ಮಟ್ಟದ ಕುಲಪತಿ, ಉಪಕುಲಪತಿ, ಸೆನೆಟ್, ಸಿಂಡಿಕೇಟ್, ಅಕಾಡಮಿ ಕೌನ್ಸಿಲ್ ವ್ಯವಸ್ಥೆಯನ್ನು ಕಲ್ಪಿಸಲು ಸೂಚಿಸಿತು. ಅಧ್ಯಾಪಕರ ಆಯ್ಕೆ, ರಿಫ್ರೆಶರ್ ಕೋರ್ಸ್, ಎನ್.ಸಿ.ಸಿ., ಎನ್.ಎಸ್.ಎಸ್. ಪರಿಚಯಿಸುವ ಮೂಲಕ ತನ್ನದೇ ಆದ ಕೊಡುಗೆ ನೀಡಿತ್ತು. ಆದರೆ ಕೊಠಾರಿ ಆಯೋಗದ ಶಿಫಾರಸು 1968ರ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ ಶೈಕ್ಷಣಿಕ ವ್ಯವಸ್ಥೆಗೆ ಹೊಸ ಭಾಷ್ಯ ಬರೆಯಿತು. ‘‘ಭಾರತದ ಭವಿಷ್ಯ ಕ್ಲಾಸ್ ರೂಮ್‌ನಲ್ಲಿ ನಿರ್ಧಾರವಾಗುತ್ತದೆ’’ ಎಂದು ಹೇಳುವ ಮೂಲಕ ಕೊಠಾರಿ ಆಯೋಗ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮುಖ್ಯ ಎಂದು ಒತ್ತಿ ಹೇಳಿತು. ವಿಜ್ಞಾನ ಶಿಕ್ಷಣಕ್ಕೆ ಆದ್ಯತೆ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಒಬಿಸಿ, ಮಹಿಳೆಯರ ಶಿಕ್ಷಣಕ್ಕೆ ವಿಶೇಷ ಗಮನಹರಿಸಲು ಶಿಫಾರಸು ಮಾಡಿತು. ಜಿಡಿಪಿಯ ಪ್ರತಿಶತ 6ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸಬೇಕು ಎಂಬ ಶಿಫಾರಸು ಈಗಲೂ ಕನಸಾಗಿದೆ. ಮಾತೃಭಾಷೆಗೆ ಆದ್ಯತೆ ನೀಡಿದ ತ್ರಿಭಾಷಾ ಸೂತ್ರ ಕೊಠಾರಿ ಆಯೋಗದ ಮುಖ್ಯ ಅಂಶ.
1986ರ ರಾಷ್ಟ್ರೀಯ ಶಿಕ್ಷಣ ನೀತಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸಿನ ಫಲ. 14 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಯೋಗ ಶಿಕ್ಷಣಕ್ಕೆ ಆದ್ಯತೆ, ರಾಜ್ಯದಲ್ಲಿ ಉನ್ನತ ಶಿಕ್ಷಣ ಪರಿಷತ್‌ಗಳ ರಚನೆಗೆ ಶಿಫಾರಸು, ನವೋದಯ ಶಾಲೆಗಳ ಪರಿಕಲ್ಪನೆ, ಆಪರೇಷನ್ ಬ್ಲ್ಯಾಕ್ ಬೋರ್ಡ್ ಸ್ಕೀಮ್-ಚಾರಿತ್ರಿಕ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಅತ್ಯುತ್ತಮವಾದದ್ದನ್ನು ಕೊಡಲು ಸಾಧ್ಯವಿತ್ತು. ಭಾರತೀಯ ಶಿಕ್ಷಣ ಕ್ಷೇತ್ರದಲ್ಲಿನ ಸ್ಥಿತ್ಯಂತರಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಶಿಕ್ಷಣ ನೀತಿ ರೂಪಿಸುವ ಜವಾಬ್ದಾರಿ ಪ್ರೊ. ಸುಖದೇವ್ ಥೊರಾಟ್ ಅಧ್ಯಕ್ಷತೆಯ ಸಮಿತಿಯ ಮೇಲಿದೆ. ಈ ಆಯೋಗದಲ್ಲಿ ತಜ್ಞರ ಆಯ್ಕೆಯಲ್ಲಿ ಎಲ್ಲಾ ಕ್ಷೇತ್ರದವರನ್ನು ಒಳಗೊಂಡಂತೆ ಕಾಣುವುದಿಲ್ಲ. ಅಷ್ಟಕ್ಕೂ ತಜ್ಞರ ಆಯ್ಕೆ ಮಾಡುವಾಗ ಶಿಕ್ಷಣ ತಜ್ಞರಾದ ಡಾ. ಬರಗೂರು ರಾಮಚಂದ್ರಪ್ಪ ಮತ್ತು ಡಾ. ನಿರಂಜನಾರಾಧ್ಯ ವಿ.ಪಿ. ಅವರ ಸಲಹೆ ಪಡೆಯಬೇಕಿತ್ತು. ಪ್ರೊ. ಸುಖದೇವ್ ಥೊರಾಟ್ ಅನುಭವಿ ಶಿಕ್ಷಣ ತಜ್ಞರಾಗಿರುವುದರಿಂದ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿಸಿದ್ದು ಸರಿಯಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಪ್ಲ್ಯಾನಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ (ಎನ್‌ಐಇಪಿಎ) ಸಂಸ್ಥೆಯಿಂದ ಒಬ್ಬರು ಸಾಕಿತ್ತು. ದಿಲ್ಲಿ ಮೂಲದ ಈ ಸಂಸ್ಥೆಗೆ ಅತ್ಯುತ್ತಮ ಹೆಸರಿದೆ. ಆ ಸಂಸ್ಥೆಯ ಪ್ರೊ. ಸುಧಾಂಶ್ ಭೂಷಣ್ ಉನ್ನತ ಶಿಕ್ಷಣ-ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅದೇ ಸಂಸ್ಥೆಯ ಪ್ರೊ. ಪ್ರಣತಿ ಪಾಂಡಾ ಮ್ಯಾನೇಜ್‌ಮೆಂಟ್ ಪ್ರಾಧ್ಯಾಪಕರು. ದಿಲ್ಲಿಯ ಜಾಮಿಯಾ ಮಿಲ್ಲಿಯಾ ವಿ.ವಿ.ಯ ಮ್ಯಾನೇಜ್‌ಮೆಂಟ್ ಪ್ರಾಧ್ಯಾಪಕರು ಡಾ. ಫರ್ಕಾನ್ ಖಮರ್ ಅವರೂ ಈ ಆಯೋಗದ ಸದಸ್ಯರಾಗಿದ್ದಾರೆ. ಪ್ರೊ. ಪ್ರಣತಿ ಪಾಂಡಾ ಬದಲಿಗೆ ಬೇರೆ ವಿ.ವಿ.ಯ ಬೇರೆ ವಿಷಯದ ತಜ್ಞರನ್ನು ಒಳಗೊಳ್ಳಬೇಕಿತ್ತು.
ಪ್ರೊ. ಜೋಗನ್ ಶಂಕರ್, ಪ್ರೊ. ಎಸ್. ಜಾಫೆಟ್, ಪ್ರೊ. ಸಂತೋಷ್ ನಾಯಕ್-ಮೂವರೂ ಸಮಾಜ ಶಾಸ್ತ್ರಜ್ಞರು. ಮೂವರಲ್ಲಿ ಒಬ್ಬರು ಸಾಕಿತ್ತು. ಅಷ್ಕಕ್ಕೂ ಪ್ರೊ. ಜೋಗನ್ ಶಂಕರ್ ಮೋದಿ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಒಲವು ಹೊಂದಿದವರು. ಡಾ. ನಿರಂಜನಾರಾಧ್ಯ ವಿ.ಪಿ. ಅವರು ಶಾಲಾ ಶಿಕ್ಷಣದ ಬಗ್ಗೆ ಕಾಳಜಿ, ಬದ್ಧತೆ, ಅಪಾರ ತಿಳುವಳಿಕೆ ಹೊಂದಿದವರು. ಹೀಗಿರುವಾಗ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್. ತಳವಾರ ಸಮಿತಿಗೆ ಅಗತ್ಯವಿರಲಿಲ್ಲ. ಪ್ರೊ. ಸುಧಾಂಶು ಭೂಷಣ್ ಕೂಡಾ ಶಿಕ್ಷಣ ಪ್ರಾಧ್ಯಾಪಕರು. ಎ. ನಾರಾಯಣ, ಶರತ್ ಅನಂತಮೂರ್ತಿ ಬೇರೆ ವಿಷಯಗಳ ತಜ್ಞರಾಗಿರುವುದರಿಂದ ಇವರು ಸಮಿತಿಯಲ್ಲಿರುವುದು ಸರಿಯಾಗಿದೆ. ಆಯೋಗದ ಅಧ್ಯಕ್ಷರಿಗೆ ಹೆಚ್ಚು ಕಾಲಾವಕಾಶದ ಅಗತ್ಯವಿದೆ.
ಜೆಎನ್‌ಯು ವಿ.ವಿ.ಯ ಇತಿಹಾಸ ಪ್ರಾಧ್ಯಾಪಕಿ ಜಾನಕಿ ನಾಯರ್, ರಾಜೀವ್ ಗಾಂಧಿ ವಿ.ವಿ.ಯ ಮಾಜಿ ಕುಲಪತಿ ಡಾ. ಚಂದ್ರಶೇಖರ ಶೆಟ್ಟಿ, ಜೆ.ಎನ್‌ಯು ವಿ.ವಿ.ಯ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ವೆಲೆರಿಯನ್ ಭಿನ್ನ ವಿಷಯಗಳ ತಜ್ಞರಾಗಿರುವುದರಿಂದ ಅವರು ಸಮಿತಿಯಲ್ಲಿ ಇರುವುದು ಸಮರ್ಥನೀಯ. ಲಡಾಖ್‌ನ ಸೋನಂ ಇಂಜಿನಿಯರ್ ಕಂ ಶಿಕ್ಷಣ ತಜ್ಞರು ಎಂದಿದೆ. ಇವರ ಬದಲಿಗೆ; ಧಾರವಾಡ ಐಐಟಿ ಅಥವಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಅಲ್ಲಿಂದ ಸ್ಪೇಸ್ ಸೈನ್ಸ್ ಅಥವಾ ಬೇರೆ ವಿಷಯ ತಜ್ಞರನ್ನು ಒಳಗೊಳ್ಳಬಹುದಿತ್ತು. ಐದು ಜನ ಕನ್ನಡ ಸಾಹಿತಿಗಳು ಈ ಸಮಿತಿಯಲ್ಲಿದ್ದಾರೆ. ಪ್ರೊ. ರಾಜೇಂದ್ರ ಚೆನ್ನಿ, ಡಾ. ನಟರಾಜ ಬೂದಾಳು, ಡಾ. ಸಬಿಹಾ ಭೂಮಿಗೌಡ, ಡಾ. ರಹಮತ್ ತರೀಕೆರೆ, ಡಾ. ವಿನಯಾ ಒಕ್ಕುಂದ. ಈ ಐವರಲ್ಲಿ ಪ್ರೊ. ರಾಜೇಂದ್ರ ಚೆನ್ನಿ ಇಂಗ್ಲಿಷ್ ಪ್ರಾಧ್ಯಾಪಕರು. ಅವರ ಆಯ್ಕೆಯನ್ನು ಆಂಗ್ಲ ಪ್ರಾಧ್ಯಾಪಕರಾಗಿರುವುದರಿಂದ ಸಮರ್ಥಿಸಿಕೊಳ್ಳ ಬಹುದು. ಇನ್ನು ನಾಲ್ಕು ಜನ ಕನ್ನಡದ ಪ್ರಾಧ್ಯಾಪಕರು ಈ ಸಮಿತಿಗೆ ಅಗತ್ಯವೇ? ಕನ್ನಡ ಸಾಹಿತ್ಯದ ಪ್ರತಿನಿಧಿಯಾಗಿ ನಾಲ್ವರಲ್ಲಿ ಒಬ್ಬರು ಇರುವುದು ಸಮರ್ಥನೀಯ. ಈ ಸಮಿತಿಯಲ್ಲಿ ಭಾಷಾ ವಿಜ್ಞಾನಿ ಇಲ್ಲ, ಉರ್ದು ಭಾಷೆಯ ಒಬ್ಬ ತಜ್ಞ ಇಲ್ಲ. ಸಂಗೀತ, ಚಿತ್ರಕಲೆ, ಶಿಲ್ಪಕಲೆ, ರಂಗಭೂಮಿ ಅಥವಾ ಪ್ರದರ್ಶಕ ಕಲೆಗಳ ಪ್ರತಿನಿಧಿಯಾಗಿ ಒಬ್ಬ ತಜ್ಞರಾದರೂ ಇರಬೇಕಿತ್ತು. ಶೈಕ್ಷಣಿಕ ಮನೋವಿಜ್ಞಾನದವರೂ ಇಲ್ಲ.
ವಿಜ್ಞಾನ, ತಂತ್ರಜ್ಞಾನ ಮತ್ತು ವೃತ್ತಿಪರ ಕೋರ್ಸುಗಳು ಪ್ರಾಮುಖ್ಯತೆ ಪಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ವಿಭಿನ್ನ ವಿಷಯಗಳ ತಜ್ಞರ ಇರುವಿಕೆ ರಾಜ್ಯ ಶಿಕ್ಷಣ ನೀತಿಗೆ ವ್ಯಾಪಕತೆ, ಸಮಗ್ರತೆ ತಂದುಕೊಡಬಹುದು. ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಗ್ರಹವಿಜ್ಞಾನ, ರಸಾಯನಶಾಸ್ತ್ರ ಬಯೋಟೆಕ್ನಾಲಜಿ, ಜೀವ ವಿಜ್ಞಾನ, ಪರಿಸರ ವಿಜ್ಞಾನ ಸೇರಿದಂತೆ ಹಲವು ಸ್ಕೂಲ್‌ಗಳ ಒಬ್ಬೊಬ್ಬ ಪ್ರತಿನಿಧಿಯಾದರೂ ಸಮಿತಿಯಲ್ಲಿ ಇರಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಮೂಲ ವಿಜ್ಞಾನ ಮಾಯವಾಗಿ ತಂತ್ರಜ್ಞಾನ ವಿಜೃಂಭಿಸುವಂತಾಗಿದೆ. ಮೂಲ ವಿಜ್ಞಾನದ ವಿವಿಧ ಶಾಖೆಗಳ ಎಲ್ಲರನ್ನೂ ಒಳಗೊಳ್ಳಲು ಆಗಲಿಕ್ಕಿಲ್ಲ. ಪರಸ್ಪರ ಪೂರಕವಾಗಿರುವ ವಿಜ್ಞಾನ ಸ್ಕೂಲ್‌ಗಳ ತಜ್ಞರು ಇರಬೇಕಿತ್ತು. ಪ್ರೊ. ಸುಖದೇವ್ ಥೊರಾಟ್ ಅಧ್ಯಕ್ಷತೆಯ ‘ರಾಜ್ಯ ಶಿಕ್ಷಣ ನೀತಿ’ ಆಯೋಗ ವಿಷಯವಾರು ತಜ್ಞರನ್ನು ಒಳಗೊಂಡಷ್ಟೂ ಕರ್ನಾಟಕದ ಅಗತ್ಯ ಪೂರೈಸುವ ಸಮಗ್ರ ಶಿಕ್ಷಣ ನೀತಿ ರೂಪಿಸಬಹುದು. ಕೇಂದ್ರ ಸರಕಾರದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ರದ್ದುಪಡಿಸಿ ಸಿದ್ಧಪಡಿಸುವ ರಾಜ್ಯ ಶಿಕ್ಷಣ ನೀತಿ ಇಡೀ ದೇಶಕ್ಕೆ ಮಾದರಿಯಾಗುವಂತಿರಬೇಕು.