ಸಾಂಸ್ಕೃತಿಕ ನೇಮಕಾತಿ ಮಹತ್ವ ಅರಿಯದ ಸರಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅಕಾಡಮಿ-ಪ್ರಾಧಿಕಾರ, ರಂಗಾಯಣಗಳ ಅಧ್ಯಕ್ಷರು-ಸದಸ್ಯರುಗಳ ನಿರ್ದೇಶಕರ ನೇಮಕಾತಿಗಳಲ್ಲಿ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಮತೀಯ ಕೊಳೆ ತೊಳೆಯಲು ಬದ್ಧತೆಯುಳ್ಳ, ಕ್ರಿಯಾಶೀಲರು ಅಧ್ಯಕ್ಷರು-ಸದಸ್ಯರಾಗಬೇಕಿದೆ. ಆಯಾ ಕ್ಷೇತ್ರದ ಕ್ರಿಯಾಶೀಲ ನೈಜ ಸಾಧಕರಿಗೆ ಅವಕಾಶ ಕಲ್ಪಿಸಿದರೆ ಮಾತ್ರ ಅಕಾಡಮಿ-ಪ್ರಾಧಿಕಾರಗಳು ಅಪ್ಪಟ ಜಾತ್ಯತೀತ ಸಾಂಸ್ಕೃತಿಕ ಕೇಂದ್ರಗಳಾಗಿ ಉಳಿದುಕೊಳ್ಳುತ್ತದೆ.

Update: 2023-12-30 04:27 GMT

Photo: kannadasiri.karnataka.gov.in

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ ಏಳು ತಿಂಗಳು ಕಳೆದಿವೆ. ಸರಕಾರ ಗ್ಯಾರಂಟಿಗಳ ಅನುಷ್ಠಾನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದೆ. ಕೊನೆಯ ಗ್ಯಾರಂಟಿ ‘ಯುವನಿಧಿ’ಯನ್ನು ಡಿಸೆಂಬರ್ ತಿಂಗಳಿಂದ ಜಾರಿಗೊಳಿಸುತ್ತಿದೆ. ಗ್ಯಾರಂಟಿಗಳ ಅನುಷ್ಠಾನದಲ್ಲಿ ಸಿದ್ದರಾಮಯ್ಯ ಸರಕಾರ ತೋರುತ್ತಿರುವ ಕಾಳಜಿ, ಬದ್ಧತೆ ಮೆಚ್ಚುವಂತಹದ್ದು. ಅಗತ್ಯದ ಸಂಪನ್ಮೂಲ ಕ್ರೋಡೀಕರಿಸಿ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿರುವುದು ಶ್ಲಾಘನೀಯ. ಹಾಗಂತ ಉಳಿದ ಇಲಾಖೆಗಳ ಕೆಲಸ ಕಾರ್ಯಗಳು ಸ್ಥಗಿತಗೊಳ್ಳಬಾರದು. ಅದರಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 14 ಅಕಾಡಮಿಗಳು, ನಾಲ್ಕು ಪ್ರಾಧಿಕಾರಗಳು, 24 ಟ್ರಸ್ಟ್‌ಗಳು, 3 ಕೇಂದ್ರಗಳು ಅಧ್ಯಕ್ಷರು ಮತ್ತು ಸದಸ್ಯರಿಲ್ಲದೆ ಹೆಚ್ಚು ಕಡಿಮೆ ಸ್ಥಗಿತಗೊಂಡಿವೆ. ಅಕಾಡಮಿ-ಪ್ರಾಧಿಕಾರಗಳ ರಿಜಿಸ್ಟ್ರಾರ್‌ಗಳು, ಸಹಾಯಕ ನಿರ್ದೇಶಕರು ದಿನನಿತ್ಯದ ಅಗತ್ಯದ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತಾರೆ. ಆದರೆ ಹೊಸ ಯೋಜನೆಗಳನ್ನು ರೂಪಿಸಲಾರರು.

ಕೇಂದ್ರದಲ್ಲೂ ಹಲವಾರು ಅಕಾಡಮಿಗಳು, ಪ್ರಾಧಿಕಾರ, ಎನ್‌ಎಸ್‌ಡಿಯಂತಹ ರಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆ ಸಂಸ್ಥೆಗಳು ಸರಕಾರದ ನೇಮಕಾತಿ ಮರ್ಜಿಗಾಗಿ ಕಾಯುವುದಿಲ್ಲ. ಕರ್ನಾಟಕದಲ್ಲಿ ಮಾತ್ರ ಅಕಾಡಮಿ-ಪ್ರಾಧಿಕಾರಗಳು, ಟ್ರಸ್ಟ್‌ಗಳು, ಆರು ರಂಗಾಯಣಗಳು ಸರಕಾರಗಳು ಬದಲಾದಾಗ ರದ್ದಾಗುವುದು, ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ನೇಮಕಾತಿ ಮರ್ಜಿಗಾಗಿ ಸರಕಾರದತ್ತ ಮುಖ ಮಾಡುವುದು ಸಂಪ್ರದಾಯವಾಗಿದೆ. ಕೆಲವೊಮ್ಮೆ ಅಕಾಡಮಿ-ಪ್ರಾಧಿಕಾರಗಳು, ಟ್ರಸ್ಟ್‌ಗಳು, ರಂಗಾಯಣಗಳು ಎರಡು-ಮೂರು ವರ್ಷಗಳ ಕಾಲ ಅಧ್ಯಕ್ಷರು-ಸದಸ್ಯರು, ನಿರ್ದೇಶಕರು ಇಲ್ಲದೆ ನಿಷ್ಕ್ರಿಯವಾಗಿ ಉಳಿದಿದೆ. ಸಾಂಸ್ಕೃತಿಕ ಕ್ಷೇತ್ರದ ನೇಮಕಾತಿಗಳು ಸರಕಾರಗಳ ರಾಜಕೀಯ ನಿಲುವಿನೊಂದಿಗೆ ತಳಕು ಹಾಕಿಕೊಂಡಿದ್ದರಿಂದ ಹೊಸ ಸರಕಾರ ಬಂದಾಗ ಆ ಸರಕಾರದೊಂದಿಗೆ ತಾತ್ವಿಕ ಸಹಮತ ಹೊಂದಿರುವ ತಂಡ ಅವಕಾಶ ಪಡೆದುಕೊಳ್ಳುತ್ತದೆ. ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಮೂಲ ಆಶಯ ಮರೆತು ವಿವಿಧ ಪಕ್ಷಗಳ ಮುಖವಾಣಿಯಾಗ ತೊಡಗಿವೆ. ಇದು ಸರ್ವಥಾ ಒಳ್ಳೆಯ ಬೆಳವಣಿಗೆಯಲ್ಲ. ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಗಳ ಮೂಲಕ ಆರೆಸ್ಸೆಸ್ ವಿಚಾರಧಾರೆಗಳನ್ನು ಪ್ರಸಾರ ಮಾಡುವ ಭಾರತೀಯ ಜನತಾ ಪಕ್ಷ ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಪ್ರಯೋಗ ನಡೆಸಿದೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಪರ್ವ ಶುರುವಾಗಿದ್ದು 2008ರಿಂದ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಲೇ ಅವರು ಹೆಚ್ಚಿನ ಗಮನ ಕೊಡುವುದು ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಗಳತ್ತ. ಆರೆಸ್ಸೆಸ್ ಮೂಲದಿಂದ ಬಂದ ಕ್ರಿಯಾಶೀಲ ಶಾಸಕರನ್ನು ಪ್ರಾಥಮಿಕ ಶಿಕ್ಷಣ-ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಗೆ ಮಂತ್ರಿಯನ್ನಾಗಿಸುತ್ತಾರೆ. ಅಷ್ಟು ಮಾತ್ರವಲ್ಲ ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರು, ಅಕಾಡಮಿ-ಪ್ರಾಧಿಕಾರಗಳು, ರಂಗಾಯಣಗಳು, ಟ್ರಸ್ಟ್‌ಗಳು, ಆರೆಸ್ಸೆಸ್ ಮೂಲದ ವ್ಯಕ್ತಿಗಳಿಗೆ ಒಪ್ಪಿಸುತ್ತಾರೆ. ಆರೆಸ್ಸೆಸ್ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡ ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರು ಆರ್ಥಿಕ ಲಾಭಗಳನ್ನು ಬಾಚಿಕೊಂಡು ಶಿಕ್ಷಣ ವ್ಯವಸ್ಥೆಯನ್ನು ಎಷ್ಟು ಸಾಧ್ಯವೋ ಅಷ್ಟು ಕೇಸರಿಮಯಗೊಳಿಸುತ್ತಾರೆ. ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ ಸಚಿವರಾಗಿ, ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರಾಗಿ, ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯನಿರ್ವಹಿಸಿದರು.

ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದದ್ದು 2008ರಲ್ಲಿ; ಯಡಿಯೂರಪ್ಪ ಅವರ ಮೂಲಕ. 2006ರಿಂದ 20 ತಿಂಗಳ ಕಾಲ ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ಪಾಲುದಾರರಾಗಿದ್ದ ಬಿಜೆಪಿಯವರು ಉನ್ನತ ಶಿಕ್ಷಣ ಇಲಾಖೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದರು. ಆ ಸರಕಾರದಲ್ಲಿ ಹಣಕಾಸು ಖಾತೆಯೊಂದಿಗೆ ಉಪಮುಖ್ಯಮಂತ್ರಿಯಾಗಿದ್ದವರು ಯಡಿಯೂರಪ್ಪ. ಉನ್ನತ ಶಿಕ್ಷಣ ಇಲಾಖೆಯ ಮಂತ್ರಿ ಆಗಿದ್ದವರು ಆರೆಸ್ಸೆಸ್ ಮೂಲದ ಡಿ.ಎಚ್. ಶಂಕರಮೂರ್ತಿಯವರು. 2006ರಿಂದಲೇ ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಆರೆಸ್ಸೆಸ್ ಸಿದ್ಧಾಂತಗಳ ದೀಕ್ಷೆ ಪಡೆದವರು ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರ ರೂಪದಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ಆರೆಸ್ಸೆಸ್ ಮೂಲದ ಉನ್ನತ ಶಿಕ್ಷಣ ಮಂತ್ರಿ ಡಿ.ಎಚ್. ಶಂಕರಮೂರ್ತಿಯವರು ಎಬಿವಿಪಿ ಮೂಲದವರನ್ನೇ ಕುಲಪತಿ, ಕುಲಸಚಿವರನ್ನಾಗಿಸಿದರು. ಸಿಂಡಿಕೇಟ್ ಸದಸ್ಯರೂ ಅದೇ ಮೂಲದವರು. ಕಾಂಗ್ರೆಸ್-ಜನತಾ ಪರಿವಾರದ ಸರಕಾರಗಳು ಪ್ರಾಥಮಿಕ-ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳನ್ನು ಅನುಭವಿಲ್ಲದ ಆ ಖಾತೆಗಳ ಬಗ್ಗೆ ಆಸಕ್ತಿಯೇ ಇಲ್ಲದ ಶಾಸಕರಿಗೆ ನೀಡಲಾಗುತ್ತದೆ, ಹಿರಿಯರು, ಅನುಭವಿಗಳು, ಸೈದ್ಧಾಂತಿಕ ಬದ್ಧತೆಯುಳ್ಳವರು ಹೆಚ್ಚು ಬಜೆಟ್ ಇರುವ ತೂಕದ ಖಾತೆಗಳನ್ನು ಪಡೆದುಕೊಳ್ಳುತ್ತಾರೆ.

ಸಿದ್ದರಾಮಯ್ಯನವರ ಸರಕಾರದಲ್ಲಿ: ಸೈದ್ಧಾಂತಿಕ ಕಾಳಜಿ ಉಳ್ಳ, ಆರೆಸ್ಸೆಸ್ ಸಿದ್ದಾಂತವನ್ನು ಸಮರ್ಥವಾಗಿ ಎದುರಿಸಬಲ್ಲ ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡರು, ಸತೀಶ್ ಜಾರಕಿಹೊಳಿಯವರು ಪ್ರಾಥಮಿಕ-ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಶೈಕ್ಷಣಿಕ, ಸಾಂಸ್ಕೃತಿಕ ಮಹತ್ವವುಳ್ಳ ಖಾತೆಗಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿತ್ತು. ಅನುಭವವಿಲ್ಲದ ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ-ಪ್ರೌಢ ಶಿಕ್ಷಣ, ಡಾ. ಎಂ.ಸಿ. ಸುಧಾಕರ್ ಅವರಿಗೆ ಉನ್ನತ ಶಿಕ್ಷಣ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಸಾಕಷ್ಟು ರಾಜಕೀಯ ಅನುಭವ ಇರುವ ಆದರೆ ಸಾಹಿತ್ಯ-ಸಂಸ್ಕೃತಿಯ ಗಂಧಗಾಳಿ ಇಲ್ಲದ ಕೋಮುವಾದಿ ಶಕ್ತಿಗಳ ಬಗ್ಗೆ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಶಿವರಾಜ ತಂಗಡಗಿಯವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಮಾಡಿದ್ದಾರೆ. ನಾಲ್ಕು ವರ್ಷಗಳ ಕಾಲ ಅಕಾಡಮಿ-ಪ್ರಾಧಿಕಾರಗಳು, ರಂಗಾಯಣಗಳು, ಟ್ರಸ್ಟ್ ಗಳಲ್ಲಿ ಆರೆಸ್ಸೆಸ್ ವಿಚಾರಧಾರೆಯ ಕಾರ್ಯಕರ್ತರು ಎಷ್ಟು ಸಾಧ್ಯವೊ ಅಷ್ಟು ಕೇಸರಿಮಯಗೊಳಿಸಿದ್ದಾರೆ. ಅದನ್ನು ಅಪ್ಪಟ ಕನ್ನಡ ಪ್ರಜ್ಞೆಯ ಕೇಂದ್ರಗಳನ್ನಾಗಿಸಬೇಕೆಂದರೆ; ಸಾಂಸ್ಕೃತಿಕ ನೇಮಕಾತಿಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕಿತ್ತು. ಹಾಗೆ ನೋಡಿದರೆ ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಜಾನಪದ ಅಕಾಡಮಿ, ಕರ್ನಾಟಕ ಲಲಿತಕಲಾ ಅಕಾಡಮಿ, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿ, ಕರ್ನಾಟಕ ಶಿಲ್ಪ ಅಕಾಡಮಿ, ಕೊಡವ, ಬ್ಯಾರಿ, ತುಳು, ಕೊಂಕಣಿ, ಅರೆಭಾಷೆ ಅಕಾಡಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷ ಸದಸ್ಯ ರಾಗುವವರಿಗೆ ಆಯಾ ಕ್ಷೇತ್ರದಲ್ಲಿ ಅಪಾರ ತಿಳುವಳಿಕೆ ಇರಬೇಕು. ಆದರೆ ಇಂದಿನ ಬಿಜೆಪಿ ಸರಕಾರ ಆಯಾ ಕ್ಷೇತ್ರದ ತಜ್ಞರನ್ನು ಕಡೆಗಣಿಸಿ ಆರೆಸ್ಸೆಸ್ ಕಾರ್ಯಕರ್ತನಾಗಿರುವುದೇ ಮುಖ್ಯ ಅರ್ಹತೆ ಎಂದು ಪರಿಗಣಿಸಿ ಅಧ್ಯಕ್ಷ, ಸದಸ್ಯರ ನೇಮಕಾತಿ ಮಾಡಿತ್ತು. ರಂಗಾಯಣದ ನಿರ್ದೇಶಕರಾಗುವವರಿಗೆ ರಂಗಭೂಮಿಯಲ್ಲಿ ಅಪಾರ ಅನುಭವವಿರಬೇಕು. ಸಂಘದ ಒಡನಾಟ ಹೊಂದಿರುವುದೇ ಪ್ರಧಾನ ಅರ್ಹತೆಯನ್ನಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿತ್ತು.

ಹೆಚ್ಚು ಕಮ್ಮಿ ಹತ್ತು ವರ್ಷಗಳ ಕಾಲ ಅಕಾಡಮಿ-ಪ್ರಾಧಿಕಾರಗಳು, ಟ್ರಸ್ಟ್ ಗಳು ಆರೆಸ್ಸೆಸ್ ವಿಚಾರಧಾರೆಯವರ ಸಂಸರ್ಗದಲ್ಲಿ ಕೇಸರೀಕರಣಗೊಂಡಿವೆ. ಬಿಜೆಪಿಯೇತರ ಸರಕಾರಗಳಿದ್ದಾಗ ಅಕಾಡಮಿ-ಪ್ರಾಧಿಕಾರಗಳಿಗೆ ಅತ್ಯುತ್ತಮ ಸಾಹಿತಿ-ಕಲಾವಿದರನ್ನು ಅಧ್ಯಕ್ಷ, ಸದಸ್ಯರನ್ನಾಗಿ ನೇಮಿಸಿದ್ದರು. ಆದರೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಪಾಲನೆಯಲ್ಲಿ ಬಹುತೇಕ ಹಿಂದಿನ ಎಲ್ಲಾ ಸರಕಾರಗಳು ಹಿಂದೆ ಬಿದ್ದಿವೆ. ಬೆಂಗಳೂರು ಕೇಂದ್ರಿತ ದೃಷ್ಟಿಕೋನದ ಫಲವಾಗಿ ಪ್ರತಿಭಾವಂತರು ಕೆಲವೇ ಕಡೆ ಇದ್ದಾರೆ ಎಂಬ ತಪ್ಪು ಗ್ರಹಿಕೆ ಸಾಂಸ್ಕೃತಿಕ ನೇಮಕಾತಿಗಳನ್ನು ಹಾದಿ ತಪ್ಪಿಸಿವೆ. ಅಷ್ಟಕ್ಕೂ ಅಕಾಡಮಿ-ಪ್ರಾಧಿಕಾರಗಳು, ಟ್ರಸ್ಟ್‌ಗಳ ಅಧ್ಯಕ್ಷ, ಸದಸ್ಯರ ನೇಮಕಾತಿಗೆ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿಲ್ಲ. ಕಾನೂನಿನ ಬಲ ಒದಗಿಸಿಲ್ಲ. ಬೇಕಾಬಿಟ್ಟಿಯಾಗಿ ನೇಮಕ ಮಾಡಿದ್ದರಿಂದ ‘ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ’ ಎಂಬಂತಾಗಿದೆ. ನಿರ್ದಿಷ್ಟವಾದ ಕಾಯ್ದೆಯಡಿ ಅಕಾಡಮಿ-ಪ್ರಾಧಿಕಾರಗಳು, ಟ್ರಸ್ಟ್‌ಗಳು, ರಂಗಾಯಣಗಳು ಬರುವುದಿಲ್ಲವಾದ್ದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಪಾಲನೆ ಮಾಡಲು ಸಾಧ್ಯವಾಗಿಲ್ಲ. ಆ ಕಾರಣಕ್ಕೆ ಅಧಿಕಾರದ ಅವಧಿಯೂ ಸ್ಥಿರವಾಗಿಲ್ಲ. ಬೈಲಾಗಳ ಮೂಲಕ ಅಕಾಡಮಿ-ಪ್ರಾಧಿಕಾರಗಳು, ಟ್ರಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಸಾಂಸ್ಕೃತಿಕ ಸಂಸ್ಥೆಗಳ ಮಹತ್ವ ಪ್ರಸಕ್ತ ಕಾಂಗ್ರೆಸ್ ಸರಕಾರಕ್ಕೆ ಗೊತ್ತಿಲ್ಲವಾದ್ದರಿಂದ ನಾಮ ನಿರ್ದೇಶನದತ್ತ ಗಮನಹರಿಸುತ್ತಿಲ್ಲ. ಅಷ್ಟು ಮಾತ್ರವಲ್ಲ ಸಾಂಸ್ಕೃತಿಕ ಸಂಸ್ಥೆಗಳು ಅಬಾಧಿತವಾಗಿ ಕಾರ್ಯನಿರ್ವಹಿಸುವಂತಾಗಲು ವ್ಯವಸ್ಥೆ ಕಲ್ಪಿಸುತ್ತಿಲ್ಲ.

ಕರ್ನಾಟಕದ ವಿಶ್ವವಿದ್ಯಾನಿಲಯಗಳನ್ನೇ ನೋಡಿ; ಕುಲಪತಿಗಳ ಅಧಿಕಾರಾವಧಿ ನಾಲ್ಕು ವರ್ಷಗಳಿಗೆ ನಿಗದಿಪಡಿಸಲಾಗಿದೆ. ಒಮ್ಮೆ ನಾಲ್ಕು ವರ್ಷ ಪೂರೈಸಿದ ವ್ಯಕ್ತಿ ಅದೇ ವಿಶ್ವವಿದ್ಯಾನಿಲಯಕ್ಕೆ ಮರುನೇಮಕವಾಗುವಂತಿಲ್ಲ. ಸರಕಾರ ಬದಲಾದ ಮೇಲೂ ಕುಲಪತಿ ಯಾದವರು ನಾಲ್ಕು ವರ್ಷ ಪೂರೈಸುತ್ತಾರೆ. ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಮೀಸಲಾತಿ ನೀತಿ ಅನುಸರಿಸಲಾಗುತ್ತಿದೆ. ಕುಲಪತಿ ನೇಮಕಾತಿಯಲ್ಲಿ ತಜ್ಞರ ಶೋಧನಾ ಸಮಿತಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅಕಾಡಮಿ-ಪ್ರಾಧಿಕಾರ, ರಂಗಾಯಣ, ಟ್ರಸ್ಟ್ ಗಳ ಅಧ್ಯಕ್ಷ-ಸದಸ್ಯರ ನೇಮಕಾತಿಗೆ ಅಧಿಕೃತವಾದ ತಜ್ಞರ ಸಮಿತಿ ರಚಿಸಿ ಆ ಸಮಿತಿಯ ಶಿಫಾರಸಿನ ಮೇರೆಗೆ ನಾಮನಿರ್ದೇಶನ ಪ್ರಕ್ರಿಯೆ ಅಂತಿಮ ಗೊಳಿಸಬೇಕು. ಆ ಸಮಿತಿಯಲ್ಲಿ ಎಲ್ಲಾ ಪ್ರದೇಶದ, ಎಲ್ಲಾ ಕಲಾ ಪ್ರಕಾರಗಳ, ಎಲ್ಲಾ ಸಮುದಾಯಗಳ ಮತ್ತು ಮಹಿಳಾ ಪ್ರಾತಿನಿಧ್ಯ ಒಳಗೊಂಡಂತೆ ಇರಬೇಕು. ಅಷ್ಟು ಮಾತ್ರವಲ್ಲ; ಆ ಸಮಿತಿಗೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ಪಾಲಿಸುವಂತೆ ಸೂಚನೆ ನೀಡಬೇಕು. ತಜ್ಞರ ಸಮಿತಿಯು ಆಯಾ ಕ್ಷೇತ್ರದ ತಜ್ಞ ಸಾಧಕರ ಹೆಸರು ಗಳನ್ನು ಮಾತ್ರ ಶಿಫಾರಸು ಮಾಡಬೇಕು. ಕೋಮುವಾದಿ ಹಿನ್ನೆಲೆಯ ವ್ಯಕ್ತಿ ಎಷ್ಟೇ ದೊಡ್ಡ ಸಾಧಕನಾಗಿದ್ದರೂ ಆತನ ಹೆಸರನ್ನು ಪರಿಗಣಿಸಬಾರದು. ಎಲ್ಲ ಅಕಾಡಮಿ-ಪ್ರಾಧಿಕಾರ, ರಂಗಾಯಣ, ಟ್ರಸ್ಟ್‌ಗಳ ಅಧಿಕಾರಾವಧಿ ನಿಗದಿಪಡಿ ಸಬೇಕು. ಸರಕಾರ ಬದಲಾದಾಗ ಅಧ್ಯಕ್ಷರು,ಸದಸ್ಯರು ಬದಲಾಗಬಾರದು.

ಅಕಾಡಮಿ-ಪ್ರಾಧಿಕಾರ, ರಂಗಾಯಣ, ಟ್ರಸ್ಟ್‌ಗಳ ಕಾರ್ಯವೈಖರಿ ಬೇಕಾಬಿಟ್ಟಿಯಾಗಿದೆ. ಬಹುತೇಕ ಅಕಾಡಮಿ-ಪ್ರಾಧಿಕಾರಗಳು ವಾರ್ಷಿಕ ಪ್ರಶಸ್ತಿ, ಬಹುಮಾನ ನೀಡುತ್ತಿವೆ. ಟ್ರಸ್ಟ್‌ಗಳು ತಮ್ಮ ಮೂಲ ಆಶಯ ಮರೆತು ಅವು ಪ್ರಶಸ್ತಿ ನೀಡುತ್ತಿವೆ. ಟ್ರಸ್ಟ್‌ಗಳ ಅಧಿಕಾರ ವ್ಯಾಪ್ತಿ, ಕಾರ್ಯವಿಧಾನ, ಆದ್ಯತಾ ವಲಯ ನಿಗದಿಯಾಗಬೇಕು, ಎಲ್ಲಕ್ಕೂ ಮಿಗಿಲಾಗಿ ಅಕಾಡಮಿ-ಪ್ರಾಧಿಕಾರ, ಟ್ರಸ್ಟ್‌ಗಳ ನಡುವೆ ಸಮನ್ವಯ ಇರಬೇಕು. ಈ ಸಮನ್ವಯದ ಕೊರತೆ ಇರುವುದರಿಂದ ಕೆಲಸಗಳು ಪುನರಾವರ್ತನೆಗೊಳ್ಳುತ್ತವೆ. ಕನ್ನಡ ಪುಸ್ತಕ ಪ್ರಾಧಿಕಾರ ಮಾಡಿದ್ದನ್ನೇ ಸಾಹಿತ್ಯ ಅಕಾಡಮಿ ಮಾಡಬಾರದು. ಕುವೆಂಪು ಭಾಷಾ ಭಾರತಿ ಅನುವಾದ ಕಾರ್ಯಕ್ಕೆ ಮೀಸಲಾದ ಸಂಸ್ಥೆ; ಬೇರೆ ಅಕಾಡಮಿ-ಪ್ರಾಧಿಕಾರಗಳು ಅನುವಾದದ ಕಾರ್ಯ ಕೈಗೊಳ್ಳುವ ಮುನ್ನ ಭಾಷಾ ಭಾರತಿಯನ್ನು ಸಂಪರ್ಕಿಸಬೇಕು. ರಂಗಾಯಣಗಳು ಮತ್ತು ಕರ್ನಾಟಕ ಅಕಾಡಮಿ ನಡುವೆ ಸಮನ್ವಯದ ಕೊರತೆ ಇರಬಾರದು. ರಂಗಾಯಣಗಳು ನಾಟಕೋತ್ಸವವನ್ನು ಆಯೋಜಿಸುತ್ತಲೇ ಇರುತ್ತವೆ. ನಾಟಕ ಅಕಾಡಮಿಯೂ ನಾಟಕೋತ್ಸವ ಆಯೋಜಿಸಿದರೆ ಪುನರಾವರ್ತನೆಯಾಗುತ್ತದೆ. ಸರಕಾರ ನೀತಿ ರೂಪಿಸಬೇಕು.

ಅಕಾಡಮಿ, ಪ್ರಾಧಿಕಾರ, ರಂಗಾಯಣ-ರಂಗ ಸಮಾಜ ಮತ್ತು ಟ್ರಸ್ಟ್ ಗಳ ಅಧ್ಯಕ್ಷರು-ಸದಸ್ಯರುಗಳ ನೇಮಕ ಮಾಡುವಾಗ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯವನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಭಾವಿಗಳು ಮತ್ತೆ ಮತ್ತೆ ಅಧಿಕಾರ ಸ್ಥಾನಕ್ಕೆ ಬರುತ್ತಿರುತ್ತಾರೆ. ಕರ್ನಾಟಕದಲ್ಲಿನ ಕೆಲವು ಅಕಾಡಮಿ-ಪ್ರಾಧಿಕಾರಗಳು ಕೆಲವೇ ಜಾತಿ ಪ್ರದೇಶದವರಿಗೆ ಫಿಕ್ಸ್ ಆಗಿವೆ. ಜಾತಿ, ಪ್ರದೇಶದ ಹಿಡಿತ ತಪ್ಪಿಸಬೇಕು. ಪ್ರತಿಭಾವಂತರು ಎಲ್ಲ ಜಾತಿ, ಪ್ರದೇಶಗಳಲ್ಲಿ ಇದ್ದಾರೆ. ಇಲ್ಲಿಯವರೆಗಿನ ಅಕಾಡಮಿ, ಪ್ರಾಧಿಕಾರ, ಟ್ರಸ್ಟ್ ಗಳ ಅಧ್ಯಕ್ಷರು-ಸದಸ್ಯರ ಪಟ್ಟಿ ಮೇಲೆ ಕಣ್ಣಾಡಿಸಿದರೆ ಪುರುಷ ಪ್ರಾಧಾನ್ಯ ಎದ್ದು ಕಾಣುತ್ತದೆ. ಶಾಸನ ಸಭೆಗಳಲ್ಲೇ ಮಹಿಳೆಯರಿಗೆ ಪ್ರತಿಶತ 33ರಷ್ಟು ಮೀಸಲಾತಿ ನೀಡಲು ನಿರ್ಧರಿಸುವಾಗ ಅಕಾಡಮಿ-ಪ್ರಾಧಿಕಾರ, ಟ್ರಸ್ಟ್‌ಗಳ ಅಧ್ಯಕ್ಷ-ಸದಸ್ಯರ ನೇಮಕಾತಿಯಲ್ಲೂ ಮಹಿಳಾ ಪ್ರಾತಿನಿಧ್ಯ ಹೆಚ್ಚಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಕ್ರಾಂತಿಕಾರಕ ಬದಲಾವಣೆ ತರಲು ಮುಂದಾದರೆ ಮಾತ್ರ ಜಡ್ಡು ಕಟ್ಟಿದ ಅಕಾಡಮಿ-ಪ್ರಾಧಿಕಾರ, ರಂಗಾಯಣ, ಟ್ರಸ್ಟ್‌ಗಳು ಮತೀಯವಾದ ಸ್ಪರ್ಶದ ಕಳಂಕವನ್ನು ತೊಳೆದುಕೊಳ್ಳಬಹುದು.

ಈ ಹಿಂದೆಲ್ಲ ಅಕಾಡಮಿ-ಪ್ರಾಧಿಕಾರ, ರಂಗಾಯಣ, ಟ್ರಸ್ಟ್‌ಗಳು ಅಪ್ಪಟ ಸಾಹಿತಿ-ಕಲಾವಿದರ ಕೈಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರುತ್ತಿದ್ದವು. ಆದರೆ 2019ರಿಂದ 2023ರ ಅವಧಿಯಲ್ಲಿ ಸಾಂಸ್ಕೃತಿಕ ಸಂಸ್ಥೆಗಳು ಸಂಘ ಪರಿವಾರದವರ ಕಪಿಮುಷ್ಟಿಯಲ್ಲಿ ಸಿಲುಕಿ ಮತೀಯ ವಿಚಾರಗಳ ತಾಳಕ್ಕೆ ತಕ್ಕಂತೆ. ಕುಣಿದಿವೆ ಬಿ.ವಿ. ಕಾರಂತರ ಕನಸುಗಳ ಸಾಕಾರ ರೂಪದಂತಿರುವ ಮೈಸೂರು ರಂಗಾಯಣ ಅಡ್ಡಂಡ ಕಾರ್ಯಪ್ಪರ ವಿಕೃತಿಗೆ ಮೂರು ವರ್ಷಗಳ ಕಾಲ ಬೇರೆಯದೇ ಬಗೆಯಲ್ಲಿ ರೂಪಾಂತರಗೊಂಡಿರುತ್ತದೆ. ಅದನ್ನು ಸರಿದಾರಿಗೆ ತರಲು ಹೆಚ್ಚು ಸಮರ್ಥರಾಗಿರುವವರು ನೇಮಕವಾಗಬೇಕು. 2008ರಲ್ಲಿ ಟ್ರಸ್ಟ್‌ಗಳಿಗೆ ಅಧ್ಯಕ್ಷರು-ಸದಸ್ಯರನ್ನು ನೇಮಕ ಮಾಡಲಾಗಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆರೆಸ್ಸೆಸ್ ಕಾರ್ಯಕರ್ತರು ಆ ಸ್ಥಾನಗಳಲ್ಲಿ ವಕ್ಕರಿಸಿದ್ದರು. 2013ರಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದಾಗಲೂ ಟ್ರಸ್ಟ್‌ಗಳ ಆಧ್ಯಕ್ಷರು-ಸದಸ್ಯರು ಬದಲಾಗಲಿಲ್ಲ. 2022ರ ಕೊನೆಗೆ ಬಿಜೆಪಿ ಸರಕಾರ ಅವುಗಳನ್ನು ಪುನರ‌್ರಚಿಸಿತ್ತು. ಕಾಂಗ್ರೆಸ್ ಸರಕಾರ ಬರುತ್ತಲೇ ಅವು ರದ್ದಾಗಿವೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಅಕಾಡಮಿ-ಪ್ರಾಧಿಕಾರ, ರಂಗಾಯಣಗಳ ಅಧ್ಯಕ್ಷರು-ಸದಸ್ಯರುಗಳ ನಿರ್ದೇಶಕರ ನೇಮಕಾತಿಗಳಲ್ಲಿ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಮತೀಯ ಕೊಳೆ ತೊಳೆಯಲು ಬದ್ಧತೆಯುಳ್ಳ, ಕ್ರಿಯಾಶೀಲರು ಅಧ್ಯಕ್ಷರು-ಸದಸ್ಯರಾಗಬೇಕಿದೆ. ಆಯಾ ಕ್ಷೇತ್ರದ ಕ್ರಿಯಾಶೀಲ ನೈಜ ಸಾಧಕರಿಗೆ ಅವಕಾಶ ಕಲ್ಪಿಸಿದರೆ ಮಾತ್ರ ಅಕಾಡಮಿ-ಪ್ರಾಧಿಕಾರಗಳು ಅಪ್ಪಟ ಜಾತ್ಯತೀತ ಸಾಂಸ್ಕೃತಿಕ ಕೇಂದ್ರಗಳಾಗಿ ಉಳಿದುಕೊಳ್ಳುತ್ತದೆ. ಟ್ರಸ್ಟ್ ಗಳ ವ್ಯಾಪ್ತಿ ಸೀಮಿತವಾಗಿರುವುದರಿಂದ ಹಿರಿಯ ಸಾಧಕರಿಗೆ ಅವುಗಳ ಜವಾಬ್ದಾರಿ ವಹಿಸಿದರೆ ಅನುಭವ ಕೆಲಸ ಮಾಡುತ್ತದೆ. ಮಾತಿಗಿಂತಲೂ ಕೆಲಸ ಮಾಡುವುದರಲ್ಲಿ ನಂಬಿಕೆ ಇರುವ ಅತ್ಯುತ್ತಮ ಕೆಲಸಗಾರರು ನಾಡು ಸುತ್ತುವಷ್ಟಾದರೂ ಶಕ್ತಿ ಉಳಿಸಿಕೊಂಡ ಕ್ರಿಯಾಶೀಲರು ಅಕಾಡಮಿ-ಪ್ರಾಧಿಕಾರ, ರಂಗಾಯಣಗಳನ್ನು ಕೇಸರಿಕರಣದಿಂದ ಮುಕ್ತ್ತಗೊಳಿಸಬಲ್ಲರು. ನಾಡಿನ ಸಾಂಸ್ಕೃತಿಕ ಕೇಂದ್ರಗಳು ಆಗ ಮಾತ್ರ ಕನ್ನಡ ಪ್ರಜ್ಞೆಗೆ ಕಸುವು ನೀಡಬಲ್ಲವು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

ಹಿರಿಯ ಬರಹಗಾರ, ಪತ್ರಕರ್ತ

Similar News