ಕಲಬುರಗಿ: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ ಟೆಂಪೊ ಪಲ್ಟಿ; ಓರ್ವ ಮೃತ್ಯು
Update: 2024-06-09 06:25 GMT
ಕಲಬುರಗಿ: ಚಲಿಸುತ್ತಿದ್ದ ಟೆಂಪೋ ಉರುಳಿ ಓರ್ವ ಕಟ್ಟಡ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ರವಿವಾರ ಬೆಳಿಗ್ಗೆ ತಾಲ್ಲೂಕಿನ ಡೊಂಗರಗಾಂವ ಕ್ರಾಸ್ ಸಮೀಪ ನಡೆದಿದೆ.
ಹರಕಂಚಿ ಗ್ರಾಮದಲ್ಲಿ ನಿವಾಸಿ ಶಿವಪ್ಪ ಹರಕಂಚಿ (34) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ನಾಗೂರ ಗ್ರಾಮದಿಂದ ಹುಮನಾಬಾದ್ಗೆ ಕಾರ್ಮಿಕರನ್ನು ಒಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಟೆಂಪೋದ ಮುಂದಿನ ಚಕ್ರ ಕಳಚಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಮಲಾಪುರ ಪಿಎಸ್ಐ ಚಂದಾನಂದ ಸವದಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.