ಆಳಂದ | ಡಾ.ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿ ಆಚರಣೆಗೆ ತೀರ್ಮಾನ

Update: 2025-04-04 11:17 IST
ಆಳಂದ | ಡಾ.ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿ ಆಚರಣೆಗೆ ತೀರ್ಮಾನ
  • whatsapp icon

ಕಲಬುರಗಿ : ಆಳಂದ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ಎ.14 ರಂದು ಆಯೋಜಿಸಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ಗುರುವಾರ ನಡೆಯಿತು.

ಸಭೆಯಲ್ಲಿ ಜಯಂತಿ ಉತ್ಸವ ಮತ್ತು ಸಮಾರಂಭ ಅದ್ಧೂರಿಯಾಗಿ ಕೈಗೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಹಾಗೂ ಜಯಂತಿ ಸಮಿತಿ ಅಧ್ಯಕ್ಷ ಅಣ್ಣಾರಾವ್ ಪಾಟೀಲ್‌ ಮಾತನಾಡಿ, "ಅಂಬೇಡ್ಕರ್ ಜಯಂತಿ ಗೌರವಪೂರ್ಣವಾಗಿ, ವಿಜೃಂಭಣೆಯಿಂದ ನಡೆಯಬೇಕಾದರೆ ಸಮಸ್ತ ಇಲಾಖೆಗಳ ಸಮನ್ವಯ ಮತ್ತು ಸಂಘಟಿತ ಯೋಜನೆ ಅಗತ್ಯ" ಎಂದು ತಿಳಿಸಿದರು.

"ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜಕ್ಕೆ ತಲುಪಿಸುವ ದೃಷ್ಟಿಯಿಂದ ಜಯಂತಿಯನ್ನು ಶಿಸ್ತಿನೊಂದಿಗೆ ಮತ್ತು ಗೌರವಪೂರ್ಣವಾಗಿ ಆಚರಿಸಬೇಕು. ಎಲ್ಲ ಸಮುದಾಯಗಳ ಸಹಭಾಗಿತ್ವದಿಂದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಹರಡುವಂತಾಗಲಿ" ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಮಾತನಾಡಿ, "ಜಯಂತಿಯಂದು ನಗರ ಸೌಂದರ್ಯೀಕರಣ, ಸುಗಮ ಸಂಚಾರ ವ್ಯವಸ್ಥೆ, ಸ್ವಚ್ಛತೆ ಮತ್ತು ಅಲಂಕಾರಾತ್ಮಕ ತಯಾರಿಗಳನ್ನು ಕೈಗೊಳ್ಳಲಾಗುವುದು" ಎಂದು ಹೇಳಿದರು.

ತಾಲೂಕು ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಹೋಳ್ಕರ್ ಮಾತನಾಡಿ, "ಸಮಾಜ ಕಲ್ಯಾಣ ಇಲಾಖೆ ಜಯಂತಿ ಆಚರಣೆಗೆ ಸಂಪೂರ್ಣ ಸಹಭಾಗಿತ್ವ ನೀಡಲಿದೆ. ವಿಶೇಷ ಕಾರ್ಯಕ್ರಮಗಳು ಮತ್ತು ಸರ್ಕಾರಿ ಸೌಲಭ್ಯಗಳ ಪ್ರಚಾರಕ್ಕೆ ಒತ್ತು ನೀಡಲಾಗುವುದು" ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾಗವಹಿಸಿದ್ದ ಹಿರಿಯ ಮುಖಂಡ ದಯಾನಂದ ಶೇರಿಕಾರ, ಪ್ರಕಾಶ ಮೂಲಭಾರತಿ, ಪಿಎಲ್‌ಡಿ ನಿರ್ದೇಶಕ ಬಾಬುರಾವ್ ಅರುಣೋದಯ, ಆನಂದ ಗಾಯಕವಾಡ, ತೈಯಬ್‌ಅಲಿ ಶೇಖ, ಮಲ್ಲಿಕಾರ್ಜುನ ಬೋಳಣಿ, ಚನ್ನಬಸವ ಕಾಳಕಿಂಗೆ ಜಿಡಗಾ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಬಂಜಾರಾ ಸಮಾಜ ಮುಖಂಡ ಸುಭಾಷ ಫೌಜಿ, ನ್ಯಾಯವಾದಿ ಸಂಜಯ ನಾಯಕ, ಕಲ್ಯಾಣ ಕರ್ನಾಟಕ ಕಲ್ಯಾಣ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶರಣು ಕುಲಕರ್ಣಿ, ದತ್ತಾ ಕಟ್ಟಿಮನಿ, ಮುತ್ತಣ್ಣಾ ಜಂಗಲೆ, ಆಕಾಶ ದೇಗಾಂವ ಮಾತನಾಡಿ ಉತ್ಸವದ ಯಶಸ್ವಿ ನಿರ್ವಹಣೆಗೆ ಮಹತ್ವದ ಸಲಹೆಗಳು ನೀಡಿದರು.

ಶ್ರೀರಾಮ ಮಾರುಕಟ್ಟೆಯಲ್ಲಿ ಸಾರ್ವಜನಿಕ ಸಮಾರಂಭ ಹಾಗೂ ಪರಿಣಿತ ಭಾಷಣಕಾರರನ್ನು ಆಮಂತ್ರಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ್‌ ಬಿ.ಜಿ. ಕುದರಿ, ಪಿಡಬ್ಲೂಡಿ ಎಇಇ ಆನಂದ, ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ ಹೊನ್ನಪ್ಪಗೊಳ, ಪುರಸಭೆ ಪ್ರತಿನಿಧಿಗಳು, ಸಮಾಜದ ಹಿರಿಯರು ಭಾಗವಹಿಸಿದ್ದರು.

ಸಭೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಶಶಿಕಾಂತ ಮಾನೆ, ಆಳಂದ ಪುಂಟು ಸಾಲೇಗಾಂವ, ಡಾ.ಅವಿನಾಶ ದೇವನೂರ ಸೇರಿದಂತೆ ಇಲಾಖೆಗಳ ಸಿಬ್ಬಂದಿಗಳು ಮತ್ತು ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News