ಆಳಂದ | ಬುದ್ಧ ವಿಹಾರದ ಗುಡ್ಡಕ್ಕೆ ಆಕಸ್ಮಿಕ ಬೆಂಕಿ : ಅಪಾರ ನಷ್ಟ

ಕಲಬುರಗಿ : ಆಳಂದ ತಾಲೂಕಿನ ಬೆಳಮಗಿ ಗ್ರಾಮದ ಸಮೀಪವಿರುವ ಭಂತೆ ಅಮರ ಜ್ಯೋತಿ ಧ್ಯಾನ ಭೂಮಿ ಬುದ್ಧ ವಿಹಾರದ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಮೌಲ್ಯದ ಸಾಮಗ್ರಿಗಳು ಮತ್ತು ಗಿಡಮರಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 25,000 ರೂ. ಮೌಲ್ಯದ ಸಾಮಗ್ರಿಗಳನ್ನು ರಕ್ಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಆದರೆ, ಬೆಂಕಿಯ ತೀವ್ರತೆಯಿಂದ ಉದ್ಯಾನವನದ ಹೆಚ್ಚಿನ ಭಾಗಕ್ಕೆ ತೀವ್ರ ಹಾನಿಯಾಗಿದೆ.
ಈ ವೇಳೆ ಭಂತೆ ಅಮರ ಜ್ಯೋತಿ ಮಾತನಾಡಿ, ಧ್ಯಾನ ಭೂಮಿ ಬುದ್ಧ ವಿಹಾರದ ಜವಾಬ್ದಾರಿಗಳು, "ಈ ಆಕಸ್ಮಿಕ ಬೆಂಕಿಯಿoದ ಉದ್ಯಾನವನಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ. ಗಿಡಮರಗಳು ಮತ್ತು ಇತರ ಸಾಮಗ್ರಿಗಳ ನಷ್ಟದಿಂದ ನಾವು ದಿಗ್ಭ್ರಮೆಗೊಂಡಿದ್ದೇವೆ. ಅಧಿಕಾರಿಗಳ ಕಾಲಮಿತಿಯ ಕಾರ್ಯಾಚರಣೆಯಿಂದ ಕೆಲವು ಸಾಮಗ್ರಿಗಳನ್ನು ಉಳಿಸಲಾಗಿದೆ. ಘಟನೆಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ," ಎಂದು ತಿಳಿಸಿದ್ದಾರೆ.
ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಸ್ಥಳೀಯ ಆಡಳಿತ ಮತ್ತು ಅಗ್ನಿಶಾಮಕ ಅರಣ್ಯ ಇಲಾಖೆ ತನಿಖೆ ಆರಂಭವಾಗಿದೆ. ಘಟನೆಯಿಂದ ಉದ್ಯಾನವನದ ಸೌಂದರ್ಯಕ್ಕೆ ಧಕ್ಕೆಯುಂಟಾಗಿದ್ದು, ಪುನರ್‌ನಿರ್ಮಾಣಕ್ಕೆ ಸಾಕಷ್ಟು ಸಮಯ ಮತ್ತು ವೆಚ್ಚದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.