ಬಸವಣ್ಣ ಪ್ರತಿಮೆಗೆ ಅಪಮಾನ ಖಂಡಿಸಿ ಆಳಂದದಲ್ಲಿ ಪ್ರತಿಭಟನೆ

ಕಲಬುರಗಿ: ಬೀದರ್‌ನ ಭಾಲ್ಕಿ ತಾಲೂಕಿನ ದಾಡಗಿ ಬಳಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪ್ರತಿಮೆಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಆಳಂದ ಪಟ್ಟಣದಲ್ಲಿ ಸೋಮವಾರ ಬಸವಸೇನೆ ನೇತೃತ್ವದಲ್ಲಿ ಬಸವಾಭಿಮಾನಿಗಳು ಬೃಹತ್ ಪ್ರತಿಭಟನೆ ಕೈಗೊಂಡು ಸರಕಾರವನ್ನು ಆಗ್ರಹಿಸಿದರು.
ಆಳಂದ ಪಟ್ಟಣದ ಗ್ರಾಮದೇವತಾ ಹನುಮಾನ್ ದೇವಸ್ಥಾನದಿಂದ ಶ್ರೀರಾಮ ಮಾರುಕಟ್ಟೆ ಮೂಲಕ ಬಸ್ ನಿಲ್ದಾಣವರೆಗೆ ಬಸವ ಸೇನೆ ಸಂಸ್ಥಾಪಕ ಅಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಲಿಂಗರಾಜ ಎಂ.ಪಾಟೀಲ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಪ್ರತಿಭಟನೆ ಕೈಗೊಂಡು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
12ನೇ ಶತಮಾನದಲ್ಲಿ ವಿಶ್ವಕ್ಕೆ ಅನುಭವ ಮಂಟಪದ ಮೂಲಕ ಜಾತ್ಯಾತೀತ ಸೌಹಾರ್ದ, ಸಮಾನತೆ, ದಾಸೋಹವನ್ನು ನುಡಿ ಮತ್ತು ನಡೆಯ ಮೂಲಕ ಸಮಾಜಕ್ಕೆ ಸಂದೇಶ ಕೊಟ್ಟಿರುವ ಮಹಾನ್ ನಾಯಕರ ಅವಮಾನಕರ ಘಟನೆಗಳು ಮರುಕಳಿಸುತ್ತಿದ್ದು, ಇದನ್ನು ತಡೆಗಟ್ಟಲು ಮಹಾತ್ಮರ ಪ್ರತಿಮೆಗಳ ಬಳಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಸವಸೇನೆ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಪಾಟೀಲ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸಪ್ಪ ಪಾಟೀಲ್, ಉಪಾಧ್ಯಕ್ಷ ಶ್ರೀಶೈಲ ಖಜೂರಿ, ನಿರ್ದೇಶಕರಾದ ಗುರು ಪಾಟೀಲ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಆನಂದ ಪಾಟೀಲ್, ಬಾಬಾಸಾಹೇಬ ವಿ.ಪಾಟೀಲ್, ನ್ಯಾಯವಾದಿ ದಿಲೀಪ್ ಕ್ಷೀರಸಾಗರ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಶ್ರೀರಾಮ ಸೇನೆ ಅಧ್ಯಕ್ಷ ಈರಣ್ಣ ಹತ್ತರಕಿ, ಪಿಆರ್‌ಪಿ ಅಧ್ಯಕ್ಷ ಪ್ರಕಾಶ ಮೂಲಭಾರತಿ, ಆದಿನಾಥ ಹೀರಾ, ಕಲ್ಲಪ್ಪ ಎಸ್. ಹತ್ತರಕಿ ಸೇರಿದಂತೆ ಅನೇಕರು ಇದ್ದರು.