ಕಾಂಗ್ರೆಸ್ಸಿನಲ್ಲಿ ಹೊಡೆದಾಟ ಶುರುವಾಗಲಿದೆ : ಬಿ.ವೈ.ವಿಜಯೇಂದ್ರ
ಕಲಬುರಗಿ : ʼಕಾಂಗ್ರೆಸ್ ಪಕ್ಷದಲ್ಲಿ ಜಿದ್ದಾಜಿದ್ದಿ ಶುರುವಾಗಿದೆ. 4 ಗೋಡೆ ಮಧ್ಯೆ ಇದ್ದುದು ಈಗ ಬಹಿರಂಗವಾಗಿದೆ. ಇನ್ನು ಹೊಡೆದಾಟವೂ ಆಗಲಿದೆʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಕಲಬುರಗಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಒಪ್ಪಂದ ಕುರಿತಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿಭಿನ್ನ ಹೇಳಿಕೆ ಕೊಡುತ್ತಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಈ ಉತ್ತರ ನೀಡಿದರು.
ಸಿಎಂ ಗಾದಿಗೆ ಪೈಪೋಟಿ ನಡೆದಿದೆ :
3 ಚುನಾವಣೆ ಗೆದ್ದಿದ್ದು ಮುಖ್ಯಮಂತ್ರಿ ಸ್ಥಾನ ಬಿಡುವುದಿಲ್ಲ ಎಂಬ ಧಮ್ಕಿಯನ್ನು ಜನಕಲ್ಯಾಣದ ಹೆಸರಿನಲ್ಲಿ ಮಾಡಲು ಹೊರಟಿದ್ದರು. ಸರಕಾರ ಅಧಿಕಾರಕ್ಕೆ ಬರಲು ತಮ್ಮದೂ ಶೇ.50ರಷ್ಟು ಪಾತ್ರ ಇದೆ ಎಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಕಾಯುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಸಿಎಂ ಗಾದಿಗೆ ಪೈಪೋಟಿ ನಡೆದಿದೆ. ಒಳ ಒಪ್ಪಂದದ ಕುರಿತು ಸಿದ್ದರಾಮಯ್ಯನವರೇ ತಿಳಿಸಬೇಕು ಎಂದು ಹೇಳಿದರು.
ʼಗ್ಯಾರಂಟಿʼ ಅವಮಾನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ :
ಲೋಕಸಭಾ ಚುನಾವಣೆ ಬಂದಾಗ ಮತದಾನ ಆಗುವ 3 ದಿನ ಮುಂಚೆ ಮಹಿಳೆಯರ ಖಾತೆಗಳಿಗೆ ಗ್ಯಾರಂಟಿ ಹಣ ಬಿಡುಗಡೆ ಮಾಡುವುದು, ಆಮೇಲೆ ಮರೆತು ವಿಧಾನಸಭಾ ಉಪಚುನಾವಣೆ ಬಂದಾಗ ಮತ್ತೆ ಇವರಿಗೆ ಗ್ಯಾರಂಟಿ ನೆನಪಾಗಿದೆ. ಗ್ಯಾರಂಟಿಗಳನ್ನು ಅವಮಾನಿಸುವ ರೀತಿಯಲ್ಲಿ, ಬಡವರನ್ನು ಅಪಮಾನಿಸುವ ಮಾದರಿಯಲ್ಲಿ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.