ಬೆಳಗಾವಿ, ಕಲಬುರಗಿಯಲ್ಲಿ ತಾಪಮಾನ ಹೆಚ್ಚಳ; ನರೇಗಾ ಕಾರ್ಮಿಕರಿಗೆ ಶೇ.30ರಷ್ಟು ಕೆಲಸದ ಪ್ರಮಾಣ ಕಡಿತ : ಸಚಿವ ಪ್ರಿಯಾಂಕ್ ಖರ್ಗೆ

Update: 2025-04-04 19:47 IST
Photo of Priyank Kharge

ಪ್ರಿಯಾಂಕ್ ಖರ್ಗೆ

  • whatsapp icon

ಕಲಬುರಗಿ : ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಏರಿಕೆಯಾಗಿದ್ದು, ಹೆಚ್ಚಿನ ಬಿಸಿಲು ಇರುವ ಕಾರಣ, ಗ್ರಾಮೀಣ ಭಾಗದ ಜೀವನೋಪಾಯದ ಪ್ರಮುಖ ಭಾಗವಾದ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗದ ಕಾರ್ಮಿಕರಿಗೆ ಎಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಶೇ.30 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಘೋಷಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೇಸಿಗೆ ದಿನಗಳಲ್ಲಿ ಕೂಲಿ ಕಾರ್ಮಿಕರು ಶಾಖಾಘಾತದಿಂದ, ತಮ್ಮ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ಬಿಳಿಯ ಬಣ್ಣದ ಸಡಿಲವಾದ ಖಾದಿ ಬಟ್ಟೆಗಳನ್ನು ಹಾಗೂ ತಲೆಯ ಮೇಲೆ ಬಿಳಿ ಬಣ್ಣದ ರುಮಾಲು ಧರಿಸಿ ಕೆಲಸ ಮಾಡಬೇಕು, ಚಹಾ, ಕಾಫಿ , ತಂಪಾದ ಪಾನೀಯಗಳು, ಮಸಾಲೆ ಮತ್ತು ಎಣ್ಣೆಭರಿತ ಆಹಾರದ ಬದಲಾಗಿ ಹೆಚ್ಚು ತೇವಾಂಶವುಳ್ಳ ತರಕಾರಿ, ಅಂಬಲಿ, ಮಜ್ಜಿಗೆ, ಎಳೆನೀರು ಸೇವನೆ ಮಾಡಬೇಕು ಹಾಗೂ ನೀರನ್ನು ಯಥೇಚ್ಛವಾಗಿ ಕುಡಿಯಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಸ್ಥಳಗಳಲ್ಲಿ ಯೋಜನೆಯ ಮಾರ್ಗಸೂಚಿಯಂತೆ ಕಡ್ಡಾಯವಾಗಿ ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲು ಸಚಿವರು ನಿರ್ದೇಶನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News