ಹಾಲು ದರ ಏರಿಕೆ ಹಿನ್ನೆಲೆ; 4 ರೂ. ಹಾಲು ಉತ್ಪಾದಕರ ಸಂಘಕ್ಕೆ ನೀಡಲು ಕಲಬುರಗಿ ಒಕ್ಕೂಟ ನಿರ್ಧಾರ : ಆರ್.ಕೆ.ಪಾಟೀಲ್

ಆರ್.ಕೆ.ಪಾಟೀಲ್
ಕಲಬುರಗಿ : ಇತ್ತೀಚೆಗೆ ರಾಜ್ಯ ಸರ್ಕಾರವು ಹಾಲಿನ ದರ ಪ್ರತಿ ಲೀಟರ್ ಗೆ 4 ರೂ. ಹೆಚ್ಚಳ ಮಾಡಿರುವುದನ್ನು ಸ್ವಾಗತಿಸಿರುವ ಕಲಬುರಗಿ-ಬೀದರ್ ಹಾಗೂ ಯಾದಗಿರ ಹಾಲು ಒಕ್ಕೂಟವು, ಹೆಚ್ಚಿನ ದರ 4 ರೂ. ಸಂಪೂರ್ಣವಾಗಿ ಹಾಲು ಉತ್ಪಾದಕರಿಗೆ ನೀಡಲು ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ಒಕ್ಕೂಟದ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಪ್ರಸ್ತುತ ಆಕಳು ಮತ್ತು ಎಮ್ಮೆ ಹಾಲು ಪ್ರತಿ ಲೀ. ಶೇಖರಣೆಗೆ 4 ರೂ. ಗಳಂತೆ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಸಿದ್ದು, ಈ ದರವು ಎ.1 ರಿಂದಲೆ ಅನ್ವಯವಾಗಲಿದೆ ಎಂದು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
3.5-8.5 ಜಿಡ್ಡು ಮತ್ತು ಘನವಸ್ತು (FAT-SNF) ಹೊಂದಿದ ಆಕಳ ಹಾಲು ಪ್ರತಿ ಲೀ.ಗೆ ಪ್ರಸ್ತುತ ಒಕ್ಕೂಟವು ಸಂಘಗಳಿಗೆ 30.80 ರೂ. ನೀಡುತ್ತಿದ್ದು, ಪರಿಷ್ಕೃತ ದರದಂತೆ 34.80 ರೂ. ನೀಡಲಾಗುತ್ತದೆ. ಅದೇ ರೀತಿ ಎಮ್ಮೆ ಹಾಲಿಗೆ ಪ್ರತಿ ಲೀ.ಗೆ ಪ್ರಸ್ತುತ ಒಕ್ಕೂಟವು ಸಂಘಗಳಿಗೆ 42.00 ರೂ. ನೀಡುತ್ತಿದ್ದು, ಪರಿಷ್ಕೃತ ದರದಂತೆ 46.00 ರೂ. ನೀಡಲಾಗುವುದು. ಇನ್ನು ಸಂಘಗಳು ಪ್ರತಿ ಲೀ. ಆಕಳ ಹಾಲಿಗೆ 29.76 ರೂ. ಗಳು ಮತ್ತು ಎಮ್ಮೆ ಹಾಲಿಗೆ 40.96 ರೂ. ಉತ್ಪಾದಕರಿಗೆ ನೀಡುತ್ತಿದ್ದು, ಇನ್ನು ಮುಂದೆ ಪರಿಷ್ಕೃತ ದರದಂತೆ ಕ್ರಮವಾಗಿ ಆಕಳ ಹಾಲಿಗೆ 33.76 ರೂ. ಮತ್ತು ಎಮ್ಮೆ ಹಾಲಿಗೆ 44.96 ರೂ. ಉತ್ಪಾದಕರಿಗೆ ಸಂಘಗಳು ನೀಡಲಿವೆ ಎಂದು ಆರ್.ಕೆ.ಪಾಟೀಲ ಅವರು ತಿಳಿಸಿದ್ದಾರೆ.
ದಾಖಲೆಯ 1.82 ಲಕ್ಷ ಲೀ. ಹಾಲು ಮಾರಾಟ :
ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆಯ ದಿನ ಒಕ್ಕೂಟದ ವತಿಯಿಂದ 18,800 ಲೀಟರ್ ಮಜ್ಜಿಗೆ ಮಾರಾಟ ಮಾಡಲಾಗಿದೆ. ಆದೇ ರೀತಿ ಮಾ.31 ರಂದು ರಮಝಾನ್ ಹಬ್ಬದ ಪ್ರಯುಕ್ತ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಗ್ರಾಹಕರ ಬೇಡಿಕೆಯ ಅನುಸಾರ ಒಕ್ಕೂಟದ ವತಿಯಿಂದ ಅತ್ಯಧಿಕ ದಾಖಲೆ ಪ್ರಮಾಣದ 1,82,210 ಲೀ. ಹಾಲು, 16,779 ಲೀ. ಮೊಸರು ಹಾಗೂ 245 ಕೆ.ಜಿ. ಖೋವಾ ಮಾರಾಟ ಮಾಡಲಾಗಿದೆ. ಇದಲ್ಲದೆ ಪ್ರಸ್ತುತ ಬೇಸಿಗೆ ಇರುವ ಕಾರಣ ಸರಾಸರಿ ಪ್ರತಿ ದಿನ 7,000 ಲೀ. ಮಸಾಲಾ ಮಜ್ಜಿಗೆ ಮತ್ತು 1,000 ಲೀ. ಲಸ್ಸಿ ಮಾರಾಟ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಆರ್.ಕೆ.ಪಾಟೀಲ ತಿಳಿಸಿದ್ದಾರೆ.
ಮೇಗಾ ಡೈರಿ ನಿರ್ಮಾಣ ಘೋಷಣೆ, ಮಂಡಳಿ ಹರ್ಷ :
ರಾಜ್ಯ ಸರ್ಕಾರವು ಇತ್ತೇಚೆಗೆ ಮಂಡಿಸಿದ 2025-26ನೇ ಸಾಲಿನ ಆಯವ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಮೇಗಾ ಡೈರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 50 ಕೋಟಿ ರೂ. ಅನುದಾನ ಘೋಷಿಸಿದ್ದಕ್ಕೆ ಆಡಳಿತ ಮಂಡಳಿಯು ಹರ್ಷ ವ್ಯಕ್ತಪಡಿಸಿದೆ. ಈ ನಿರ್ಧಾರವು ಡೇರಿ ವಲಯದ ಅಭಿವೃದ್ಧಿಗೆ ಮತ್ತು ಒಕ್ಕೂಟದ ಮೂರು ಜಿಲ್ಲೆಯ ರೈತರು, ಹಾಲು ಉತ್ಪಾದಕರ ಏಳಿಗೆಗೆ ಮಹತ್ವದ ಕೊಡುಗೆಯಾಗಿರುತ್ತದೆ. ಇದಕ್ಕೆ ಕಾರಣಿಭೂತರಾದ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಸಚಿವರು ಹಾಗೂ ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಒಕ್ಕೂಟವು ಕೃತಜ್ಞತೆ ಸಲ್ಲಿಸಿದೆ.