ನಮ್ಮ ಸರ್ಕಾರದ ಅವಧಿಯಲ್ಲಿ ರೌಡಿಗಳನ್ನು ನಿಯಂತ್ರಣ ಮಾಡಿರುವುದು ಬಿಜೆಪಿಗರಿಗೆ ಸಂಕಷ್ಟವಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ನಮ್ಮ ಸರ್ಕಾರದ ಅವಧಿಯಲ್ಲಿ ರೌಡಿಗಳನ್ನು ನಿಯಂತ್ರಣ ಮಾಡಿರುವುದಕ್ಕೆ ಬಿಜೆಪಿಗರಿಗೆ ಸಂಕಷ್ಟವಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿಲ್ಲ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
'ಪ್ರಿಯಾಂಕ್ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯಲ್ಲಿ 13 ಕೊಲೆಗಳಾಗಿವೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ' ಎಂಬ ಸಂಸದ ಉಮೇಶ ಜಾಧವ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಉಮೇಶ ಜಾಧವ್ ಅವರು ಹೇಳಿರುವ ಬಹುತೇಕ ಕೊಲೆಗಳಲ್ಲಿ ಅವರ ಚಿರಪರಿಚಿತರೇ ಆರೋಪಿಗಳಾಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ 28 ಕೊಲೆಗಳಾಗಿದ್ದವು. ಅಫಜಲ್ ಪುರ ತಾಲೂಕಿನಲ್ಲಿ ನಮ್ಮ ಸರ್ಕಾರದ ಅಧಿಕಾರಿಯ ಮೇಲೆ ಟ್ರಾಕ್ಟರ್ ಹತ್ತಿಸಿದವರು ಯಾರು? ಎಂದು ಪ್ರಶ್ನಿಸಿದರು.
ಗುಜರಾತ್ ನಲ್ಲಿ ಕಳೆದ ವರ್ಷದ ಅವಧಿಯಲ್ಲಿ 2209 ಅತ್ಯಾಚಾರ ನಡೆದಿದ್ದು 36 ಗ್ಯಾಂಗ್ ರೇಪ್ ಗಳಾಗಿವೆ ಇದಕ್ಕೆ ಸುವ್ಯವಸ್ಥೆ ಕುಸಿದಿದೆ ಎನ್ನಬಹುದು. ಬಿಜೆಪಿ ಅಧಿಕಾರವಿದ್ದಾಗಲೇ ಎಬಿವಿಪಿ ಕಾರ್ಯಕರ್ತರು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಕಾರಿಗೆ ಅಡ್ಡಹಾಕಿದ್ದರು. ಅದನ್ನು ಕಾನೂನು ಸುವ್ಯವಸ್ಥೆ ಕುಸಿದಿದೆ ಎನ್ನಬಹುದು. ಬಿಜೆಪಿ ಅಧಿಕಾರದಲ್ಲಿ ಆಳಂದದ ಲಾಡ್ಲೆ ಮಷಾಖ್ ದರ್ಗಾದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಗಲಾಟೆಗಳಾಗಿದ್ದವು ಆಗ ಕಾನೂನು ಸುವ್ಯವಸ್ಥೆ ಕುಸಿದಿತ್ತು. ಈ ಸಲ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಂಡಿದ್ದೇವೆ ಎಂದು ಹೇಳಿದರು.
ಸಂಸದರಾಗಿ ಜಾಧವ ಏನು ಅಭಿವೃದ್ದಿ ಮಾಡಿದ್ದಾರೆ ಹೇಳಲಿ. ಸಿಯುಕೆಗೆ ಸುಣ್ಣ ಬಣ್ಣ ಬಳಿಸಿಲ್ಲ. ರೈಲ್ವೆ ವಲಯ, ನಿಮ್ಝ್, ಟೆಕ್ಸ್ ಟೈಲ್ ಪಾರ್ಕ್ ಮುಂತಾದ ಯೋಜನೆಗಳು ವಾಪಸ್ ಹೋಗಿವೆ. ಈ ಸಲದ ರೈಲ್ವೆ ಬಜೆಟ್ ನಲ್ಲಿ ಕಲಬುರಗಿಗೆ ಕೇವಲ ಒಂದು ಸಾವಿರ ರೂಪಾಯಿ ಮೀಸಲಿಟ್ಟಿದ್ದಾರೆ. ಇವತ್ತು ವಂದೇ ಭಾರತ ಡಕೋಟಾ ರೈಲಿಗೆ ಉದ್ಘಾಟನೆ ಮಾಡಿದ್ದಾರೆ. ಜಾಧವ್ ವಾಸ್ತವದ ಮೇಲೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್. ಅಶೋಕ್ ರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರಿಗೆ ನಾನು ಮನೆ ದೇವರು ಇದ್ದಹಾಗೆ. ನನ್ನನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇಲ್ಲದಿದ್ದರೆ ಅವರಿಗೆ ಆಹಾರ ಜೀರ್ಣವಾಗುವುದಿಲ್ಲ ಎಂದರು.
ಸಂವಿಧಾನ ತಿದ್ದುಪಡಿ ಬಗ್ಗೆ ಮಾತನಾಡಿದ ಸಂಸದ ಅನಂತ್ ಕುಮಾರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರಿಗೆ ತಲೆ ಕೆಟ್ಟಿದೆ, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದರು.