ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌

Update: 2025-03-25 18:11 IST
Photo of Metting
  • whatsapp icon

ಕಲಬುರಗಿ : ಬೇಸಿಗೆ ಆರಂಭವಾದ್ದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕೆಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ತಾಲೂಲಿನ ಪಿಡಿಓ‌ಗಳಿಗೆ ಸೂಚನೆ ನೀಡಿದರು.

ಸೇಡಂ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಮಟ್ಟದ 'ಟಾಸ್ಕ್‌ ಪೋರ್ಸ್' ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚಾಯತ್ ಮಟ್ಟದಲ್ಲಿ ಪಿಡಿಓಗಳು ಬೋರ್ ವೆಲ್ ಗಳು ಹಾಗೂ ಜಲ ಮೂಲಗಳನ್ನು ಪರೀಕ್ಷಿಸಿ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ಹೆಚ್ಚು ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಶಾಶ್ವತ ಬೋರ್ ವೆಲ್‌ ಕೊರೆಸಿ, ಇತರೆ ಬೋರ್ ವೆಲ್ ಗಳನ್ನು ಫ್ಲಶಿಂಗ್ ಮಾಡಿಸಿ ಜನರ ಅನುಕೂಲಕ್ಕೆ‌ ತಕ್ಕಂತೆ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು.

ಸೇಡಂ ತಾಲೂಕಿನ ಕುರಕುಂಟಾ, ಮುಧೋಳ, ಆಡಕಿ, ಆಡಕಿ ತಾಂಡ, ವೆಂಕಟಾಪೂರ ತಾಂಡ, ಬಟಗಿ ಕೆ, ಬಟಗಿರ ಬಿ, ಮಳಖೇಡ, ಹಂದರಕಿ, ಕೋಡ್ಲಾ, ಬೆನಕನಹಳಿ. ದೇವನೂರು, ಹಂಗನಹಳಿ, ಉಡಗಿ ಸೇರಿದಂತೆ ಪ್ರತಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ ಬೋರವೆಲ್ ಹಾಕಿಸಿಕೊಡಬೇಕು. ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ಮಾಡಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸೇಡಂ ತಾಲೂಕಿನಲ್ಲಿ ನೀರಿನ ಪೂರೈಕೆಯಲ್ಲಿ ಎಲ್ಲಿಯೂ ಲೋಪಗಳಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದ ಅವರು, ಅನುದಾನದ ಬಳಕೆಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಆದ್ಯತೆ ನೀಡಿ ಎಂದರು.

ಪಿಡಿಓಗಳು ಗ್ರಾಮಗಳಿಗೆ ಭೇಟಿ‌ ನೀಡಿ ಒಂದು ವಾರದಲ್ಲಿ ನನಗೆ ವರದಿ ಸಲ್ಲಿಸಬೇಕು. ಹೆಚ್ವು ಬಿಸಿಲಿದೆ ಎಂದು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ವರದಿ ಸಲ್ಲಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ತಹಶೀಲ್ದಾರ್‌ ಶ್ರೇಯಾಂಕ್ ಪಾಟೀಲ, ಚಿಂಚೋಳಿ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಪಿಡಿಓಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News