ಕಲಬುರಗಿ | ಮೋಘಾ.ಕೆ, ಅಲ್ಲಾಪೂರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

Update: 2025-03-26 23:41 IST
ಕಲಬುರಗಿ | ಮೋಘಾ.ಕೆ, ಅಲ್ಲಾಪೂರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ
  • whatsapp icon

ಕಲಬುರಗಿ : ಬೇಸಿಗೆ ಕಾಲ ಇನ್ನೂ ಪೂರ್ಣ ಪ್ರಮಾಣದಲ್ಲಿ ತನ್ನ ರೌದ್ರರೂಪ ತೋರಿಸುವ ಮೊದಲೇ, ತಾಲೂಕಿನ ಮೋಘಾ ಕೆ ಮತ್ತು ಅಲ್ಲಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡತೊಡಗಿದೆ.

ಅಲ್ಲಾಪೂರದಲ್ಲಿ ಒಂದು ಹನಿ ನೀರಿಗಾಗಿ ಗ್ರಾಮಸ್ಥರು ಪರದಾಡುವ ದುಸ್ಥಿತಿ ಎದುರಾಗಿದ್ದು, ಗ್ರಾಮಕ್ಕೆ ನೀರು ಪೂರೈಕೆಗೆ ತೆರೆದ ಬಾವಿಯನ್ನು ಸುಮಾರು 15 ವರ್ಷಗಳ ಹಿಂದೆ ತೋಡಿ ನೀರು ಪೂರೈಸಲಾಗಿತ್ತು. ಆದರೆ ಈ ಬಾವಿ ಖಾಸಗಿ ಜಮೀನಿನವರ ಸ್ಥಳದಲ್ಲಿದ್ದ ಕಾರಣ ಕಳೆದ ಮೂರು ತಿಂಗಳಿಂದ ಆ ಜಮೀನು ಮಾಲಕರು ನೀರು ಬಿಟ್ಟುಕೊಡದೆ ಈಗ ಗ್ರಾಮದಲ್ಲಿ ನೀರು ಪೂರೈಕೆಯಿಲ್ಲದೆ ಹಲವಾರು ಸಮಸ್ಯೆಗಳು ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಮತ್ತೊಂದಡೆ ಮೋಘಾ ಕೆ. ಗ್ರಾಮದ ಶ್ರೀ ಪರಮೇಶ್ವರ ದೇವರ ಜಾತ್ರೆ ನಡೆಯಲಿದೆ. ಈ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಲಿದ್ದು, ನೀರಿನ ಕೊರತೆ ತಲೆದೋರಿರುವ ಆತಂಕ ಎದುರಾಗಿದೆ. ಮೋಘಾ.ಕೆ. ಗ್ರಾಮದಲ್ಲಿ ಗ್ರಾಮ ಪಂಚಾಯತ್‌ ಕಾರ್ಯನಿರ್ವಹಿಸುತ್ತಿದ್ದರೂ, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಾವುದೇ ಗಂಭೀರ ಪ್ರಯತ್ನ ನಡೆದಿಲ್ಲ ಎಂದು ಗ್ರಾಮದ ಸೂರ್ಯಕಾಂತ ವಗ್ಗಾಲೆ, ನಬೀಸಾಬ, ಪುಟರಾಜ ಅಮಾಣೆ ಅವರು ತಿಳಿಸಿದ್ದಾರೆ.

ಗ್ರಾಮದಲ್ಲಿ ನಾಲ್ಕು ಜನ ಗ್ರಾಮ ಪಂಚಾಯತ್ ಸದಸ್ಯರಿದ್ದು, ಈ ಸಮಸ್ಯೆಯನ್ನು ಪಂಚಾಯತ್ ಅಧ್ಯಕ್ಷರು ಹಾಗೂ ಆಡಳಿತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಇದುವರೆಗೆ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ ಎಂದರು.

ಬೇಸಿಗೆ ತೀವ್ರವಾಗುವ ಮುನ್ನವೇ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು." ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಸರಿಯಾಗಿ ಇಲ್ಲದಿರುವುದು ಮಾತ್ರವಲ್ಲ, ಅಂತರ್ಜಲ ಮಟ್ಟ ಕುಸಿದಿರುವುದು ಮತ್ತು ಬೋರ್ವೆಲ್ ಗಳಲ್ಲಿ ನೀರು ಬತ್ತಿರುವುದು ಸಮಸ್ಯೆಯನ್ನು ಉಗ್ರಗೊಳಿಸಿದೆ. "ಪ್ರತಿ ವರ್ಷ ಬೇಸಿಗೆಯಲ್ಲಿ ಈ ಸಮಸ್ಯೆ ಮರುಕಳಿಸುತ್ತದೆ, "ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಜಲ ಸಂರಕ್ಷಣಾ ಯೋಜನೆಗಳನ್ನು ಜಾರಿಗೆ ತರಬೇಕು, ಜೊತೆಗೆ ತುರ್ತು ಪರಿಸ್ಥಿತಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಮಸ್ಯೆ ನಿವಾರಣೆ ಯತ್ನ :

ಅಲ್ಲಾಪೂರ ಗ್ರಾಮದಲ್ಲಿ ನೀರು ಪೂರೈಕೆ ಸರ್ಕಾರದಿಂದ ತೊಡಿದ ಬಾವಿಯನ್ನು ಖಾಸಗಿಯವರು ತಮ್ಮ ಜಮೀನಿನಲ್ಲಿ ಬಾವಿ ಇದೆ ಎಂದು ನೀರು ಕೊಡುತ್ತಿಲ್ಲ. ಹೀಗಾಗಿ ಮೂರು ತಿಂಗಳಿಂದ ನೀರಿಲ್ಲದೆ ಜನ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಪಂನಿಂದಲೂ ಪಯಾರ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಕೊಳವೆ ಬಾವಿಯ ಮೊಟಾರ್‌ ದುರಸ್ಥಿ ಕಾರ್ಯಕೈಗೊಂಡು ತಕ್ಕಮಟ್ಟಿನ ನೀರು ಒದಗಿಸಲಾಗುತ್ತಿದೆ. ಮೋಘಾ ಕೆ. ಗ್ರಾಮದಲ್ಲೂ ನೀರಿನ ಅವ್ಯವಸ್ಥೆ ಎದುರಾದರೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೋಘಾ ಕೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನುಸುಯಾ ಮಹಾದೇವ ಪೋತೆ ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News