ಕಲಬುರಗಿ | ಬೆಳೆ ವಿಮೆ ಶೂನ್ಯ ದಾಖಲೆ ಖಂಡಿಸಿ ನಿರಗುಡಿ ರೈತರ ಪ್ರತಿಭಟನೆ

ಕಲಬುರಗಿ : ಬೆಳೆ ನಷ್ಟವಾದರು ಬೆಳೆ ವಿಮೆ ಆ್ಯಪ್ ನಲ್ಲಿ ನಷ್ಟ ಶೂನ್ಯ ಎಂದು ದಾಖಲಿಸಿರುವ ಕ್ರಮವನ್ನು ಖಂಡಿಸಿ ತಾಲೂಕಿನ ನಿರಗುಡಿ ಗ್ರಾಪಂ ವ್ಯಾಪ್ತಿಯ ರೈತರು ಪಟ್ಟಣದ ತಾಲೂಕು ಆಡಳಿತಸೌಧ ಮುಂಭಾಗದಲ್ಲಿ ಮಿಂಚಿನ ಪ್ರತಿಭಟನೆ ಕೈಗೊಂಡು ಬುಧವಾರ ಆಕ್ರೋಶ ಹೊರಹಾಕಿದರು.
ಆಳಂದ ತಾಲೂಕಿನ ನಿರಗುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟಕಿ, ನಿರಗುಡಿ ಮತ್ತು ತೀರ್ಥ ಗ್ರಾಮಗಳಲ್ಲಿ ಸುಮಾರು 3,000ಕ್ಕೂ ಹೆಚ್ಚು ರೈತರು ತಮ್ಮ ಉದ್ದು, ಹೆಸರು, ತೊಗರಿ, ಉಳ್ಳಾಗಡಿ ಮುಂತಾದ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ಆದರೆ, ಅಧಿಕ ಮಳೆ, ನೆಟೆ ರೋಗ ಹಾಗೂ ನೈಸರ್ಗಿಕ ವಿಕೋಪಗಳಿಂದ ಬೆಳೆಗಳು ಹಾಳಾದರೂ, ಸಂರಕ್ಷಣೆ ಆಪ್ ನಲ್ಲಿ ಈ ಗ್ರಾಮಗಳ ಬೆಳೆ ವಿಮೆಯನ್ನು "ಶೂನ್ಯ" ಎಂದು ತೋರಿಸಲಾಗಿದೆ ಎಂದು ವ್ಯವಸ್ಥೆಯ ಕ್ರಮವನ್ನು ಖಂಡಿಸಿದರು.
ಸರ್ವೇ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡದೆ, ಕಚೇರಿಯಿಂದಲೇ ಸರ್ವೇ ಮಾಡಿ ಈ ತಪ್ಪು ವರದಿ ಸಲ್ಲಿಸಿದ್ದಾರೆ. ರೈತರು ತಮ್ಮ ಬೆಳೆ ನಷ್ಟಕ್ಕೆ ಸೂಕ್ತ ವಿಮೆ ಮಂಜೂರಾತಿ ಹಾಗೂ ಬೇಜವ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಈ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.
"ಹೊಲಗಳಲ್ಲಿ ನಮ್ಮ ಬೆಳೆ ಹಾಳಾಗಿದೆ, ಆದರೆ ಕಾಗದದಲ್ಲಿ ಎಲ್ಲವೂ ಸರಿ ಎಂದು ತೋರಿಸಲಾಗಿದೆ. ಇದು ರೈತರೊಂದಿಗೆ ಮಾಡುತ್ತಿರುವ ಅನ್ಯಾಯ". ಕೂಡಲೇ ನಷ್ಟವಾದ ಬೆಳೆಗೆ ವಿಮೆ ಪಾವತಿಸಬೇಕು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಅವರು, ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಅನುಸರಿಸಲಾಗುವುದು ಕಾಲಾವಕಾಶ ನೀಡಬೇಕು ಎಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ನಿರಗುಡಿ ಪಿಕೆಪಿಎಸ್ ಅಧ್ಯಕ್ಷ ಆನಂದ ಎಸ್. ದೇಶಮುಖ, ಉಪಾಧ್ಯಕ್ಷ ಶಾಂತಪ್ಪ ಪಾಟೀಲ ತೀರ್ಥ, ಸಿದ್ಧಣ್ಣರಾವ್ ದೇಶಮುಖ, ಗ್ರಾಪಂ ಮಾಜಿ ಅಧ್ಯಕ್ಷ ಪಿಂಟು ಪಾಟೀಲ, ಸಿದ್ಧರಾಮ ಜಿ. ಬೆಳಮಗಿ, ಸಿದ್ಧರಾಮ ಬಿ.ಮುದಗಡೆ,ಅಪ್ಪಾರಾವ್ ದೇಶಮುಖ, ಸುಭಾಷ ಪಾಟೀಲ, ಗುಜಾರಲಾಲ ಪಾಟೀಲ, ರಾಮ ಪಾರಾಣೆ, ಹಣಮಂತರಾವ್ ಸರಾಟೆ, ಸಿದ್ಧರಾಮ ಬಂಡಗಾರ ಸೇರಿದಂತೆ ತೀರ್ಥ, ಮಟಕಿ ಮತ್ತು ನಿರಗುಡಿ ಗ್ರಾಮದ ರೈತರು ಭಾಗವಹಿಸಿದ್ದರು.