ಕಲಬುರಗಿ | ಗೋಧಿ ಬೆಳೆ ಬೆಂಕಿಗಾಹುತಿ : ನಂದಿಸಲು ಹೋದ ರೈತನಿಗೆ ಗಾಯ

ಗಾಯಗೊಂಡ ರೈತ, ಬೆಂಕಿಗಾಹುತಿಯಾದ ಬೆಳೆ
ಕಲಬುರಗಿ : ಕ್ವೋದಿಟ್ಟ ಗೋಧಿ ಬೆಳೆಯ ಹೊಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಗೋಧಿ ಬೆಳೆ ಸುಟ್ಟು ಕರಕಲಾಗಿದ್ದು, ಬೆಂಕಿ ನಂದಿಸಲು ಹೋದ ರೈತನು ಗಾಯಗೊಂಡ ಘಟನೆ ತಾಲೂಕಿನ ಮಾದನಹಿಪ್ಪರಗಾ ಸಮೀಪದ ಮದಗುಣಕಿ ಗ್ರಾಮದ ಹೊಲದಲ್ಲಿ ನಡೆದಿದೆ.
ಆಳಂದ ತಾಲೂಕಿನ ಮದಗುಣಕಿ ಗ್ರಾಮದ ರೈತ ವಿಠ್ಠಲ ಸಣ್ಣಮನಿ ಅವರು ತಮ್ಮ ಒಂದು ಎಕರೆಯಲ್ಲಿ ಉತ್ತಮವಾಗಿ ಬೆಳೆದಿದ್ದ ಗೋಧಿಯನ್ನು ರಾಶಿ ಮಾಡಲು ನಾಲ್ಕೈದು ದಿನಗಳ ಹಿಂದೆ ಹೊಲದಲ್ಲಿ ಕಟಾವು ಮಾಡಿ ಗುಂತಿಗಳನ್ನಿಟ್ಟಿದ್ದರು.
ಸೋಮವಾರ ಮಧ್ಯಾಹ್ನ ರಾಶಿ ಮಾಡಲು ಗೋಧಿ ಸೂಡುಗಳನ್ನು ಕೊಂಡೊಯ್ಯುವಾಗ ಹೊಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ದಿಕ್ಕೂ ತೋಚದ ರೈತ ವಿಠ್ಠಲ ಅವರು ಬೆಂಕಿ ನಂದಿಸಲು ಮುಂದಾಗಿದ್ದರು. ಈ ವೇಳೆ ದೇಹಕ್ಕೆ ಬೆಂಕಿ ತಗುಲಿದ ಬಗ್ಗೆ ಅರಿವಿಲ್ಲದೆ, ಬೆಳೆಗೆ ಹತ್ತಿಕೊಂಡ ಬೆಂಕಿ ನಂದಿಸುವಲ್ಲಿ ಮುಂದಾಗಿದ್ದರು ಎನ್ನಲಾಗಿದೆ.
ಈ ಹೊಲದಲ್ಲಿನ ಉರಿಯನ್ನು ಗಮನಿಸಿದ ನೆರೆಯ ಹೊಲದ ಕಸ್ತೂರಬಾಯಿ ಸಣ್ಣಮನಿ, ಮಹಾಂತಪ್ಪ ಸಣ್ಣಮನಿ, ರೈತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳಹಿಸಕೊಡಲಾಯತು.
ಈ ಕುರಿತು ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.