ಕಲಬುರಗಿ | ವಿಷಕಾರಿ ವಸ್ತು ಬಾವಿಗೆ ಎಸೆದ ಆರೋಪ: ಖಜೂರಿ ಮಠದಿಂದ ವಿಮುಕ್ತಗೊಂಡ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ವಿಷಕಾರಿ ವಸ್ತು ಬಾವಿಗೆ ಎಸೆದ ಆರೋಪದ ಮೇಲೆ ಆಳಂದ ತಾಲ್ಲೂಕಿನ ಖಜೂರಿ ಕೋರಣೇಶ್ವರ ವಿರಕ್ತ ಮಠದಿಂದ ವಿಮುಕ್ತಗೊಂಡಿರುವ ಸ್ವಾಮೀಜಿ ಹಾಗೂ ಮಹಿಳೆಯೊಬ್ಬರ ಮೇಲೆ ಆಳಂದ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಖಜೂರಿಯ ಶ್ರೀ ಕೊರಣೇಶ್ವರ ವಿರಕ್ತ ಮಠದ ಟ್ರಸ್ಟ್ ಕಮಿಟಿ ಮತ್ತು ಗ್ರಾಮಸ್ಥರ ಪರವಾಗಿ ಗ್ರಾಮದ ಹಣಮಂತ ಕಲ್ಯಾಣಪ್ಪ ಸಾವಳೇಶ್ವರ ಅವರು, ಶ್ರೀ ಕೊರಣೇಶ್ವರ ವಿರಕ್ತ ಮಠದಿಂದ ವಿಮುಕ್ತಗೊಳಿಸಲಾದ ಚಂದ್ರಶೇಖರಯ್ಯಾ ಅಸೂಟಿ (ಹಿಂದಿನ ಹೆಸರು ಮುರುಘೇಂದ್ರ ಸ್ವಾಮಿ) ಎಂಬವರ ವಿರುದ್ಧ ದೂರು ನೀಡಿದ್ದಾರೆ.
ಮಠಕ್ಕೆ ಕೆಟ್ಟ ಹೆಸರು ತಂದಿದ್ದರಿಂದ ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕಲಾಗಿತ್ತು. ಆದರೆ, ದುರುದ್ದೇಶದಿಂದ ಮಠ ಮತ್ತು ಟ್ರಸ್ಟ್‌ಗೆ ಕೆಟ್ಟ ಹೆಸರು ತರುವ ಉದ್ದೇಶದೊಂದಿಗೆ ಅವರು ಮಠದ ಹತ್ತಿರದ ಕೊಣೆಯಲ್ಲಿ ಉಳಿದುಕೊಂಡಿದ್ದಾರೆ. ಅಲ್ಲದೆ, ಶ್ರೀ ಕೊರಣೇಶ್ವರ ಶಿಕ್ಷಣ ಸಂಸ್ಥೆಯ ಸುಮಾರು 300 ಮಕ್ಕಳ ಮಧ್ಯಾಹ್ನದ ಬಿಸಿಯೂಟ ಮತ್ತು ಮುಂಜಾನೆ ಪ್ರಸಾದವನ್ನು ನಿಲ್ಲಿಸುವ ಉದ್ದೇಶದಿಂದ ಬಾವಿಗೆ ವಿಷಕಾರಿ ವಸ್ತು ಎಸೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು, ಚಂದ್ರಶೇಖರಯ್ಯಾ ಅಸೋಟಿ ಮತ್ತು ಅನಿತಾ ಎಂಬವರ ಮೇಲೆ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.