ಅಸ್ಪೃಶ್ಯತೆ ಕಾರಣದಿಂದ ಜನಪದ ಕಲೆಗಳು ನಶಿಸುತ್ತಿವೆ: ದಯಾನಂದ ಅಗಸರ
ಕಲಬುರಗಿ: ಕಲ್ಯಾಣ ಕರ್ನಾಟಕದ ಬಯಲಾಟ ಪರಂಪರೆ ಶ್ರೀಮಂತವಾಗಿದೆ. ನಮ್ಮ ತಂದೆ ಬಯಲಾಟದ ಮೇಷ್ಟ್ರಾಗಿದ್ದರು. ನಾನು ತಂದೆಯ ಜತೆ ಬಯಲಾಟದಲ್ಲಿ ಭಾಗವಹಿಸುತ್ತಿದ್ದೆ ಎಂದು ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ, ಬರುವ ನ್ಯಾಕ್ ಕಮಿಟಿಯ ಸಂದರ್ಭದಲ್ಲಿ ಒಳ್ಳೆಯ ಬಯಲಾಟ ತಂಡದ ಪ್ರದರ್ಶನ ಆಯೋಜಿಸುವ ಯೋಜನೆ ಇದೆ. ಇಂದು ಅಸ್ಪೃಶ್ಯತೆ ಕಾರಣದಿಂದ ಜನಪದ ಕಲೆಗಳು ನಶಿಸುತ್ತಿವೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ದಯಾನಂದ ಅಗಸರ ಅವರು ಆತಂಕ ವ್ಯಕ್ತಪಡಿಸಿದರು.
ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ, ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರ, ಕನ್ನಡ ವಿಭಾಗ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡ `ಕಲ್ಯಾಣ ಕರ್ನಾಟಕ ಬಯಲಾಟ ಪರಂಪರೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ಬಯಲಾಟ ಪರಂಪರೆಯನ್ನು ಯುವಜನರಿಗೆ ದಾಟಿಸಬೇಕಿದೆ. ನಶಿಸುತ್ತಿರುವ ಬಯಲಾಟಗಳಿಗೆ ಹೊಸ ಜೀವ ಕೊಡುವ ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಡಾ.ಅರುಣ್ ಜೋಳದಕೂಡ್ಲಿಗಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಚಿಂತಕರಾದ ಆರ್.ಕೆ.ಹುಡುಗಿ ಅವರು ಆಶಯ ಭಾಷಣ ಮಾಡುತ್ತಾ, `ಜನಪದ ಸಾಹಿತ್ಯ ಜನಪರ ಸಾಹಿತ್ಯ ಎಂದು ತೆಗೆದುಕೊಳ್ಳಬೇಕಿಲ್ಲ. ಶಿಷ್ಟ ಕಲಾವಿದರಿಗೆ ಸಿಗುವ ಗೌರವ ಜನಪದ ಕಲಾವಿದರಿಗೆ ಸಿಗುತ್ತಿಲ್ಲ. ಇಂದಿನ ಜನಪದ ಕಲಾವಿದರು ತಮ್ಮ ಮಕ್ಕಳನ್ನು ಕಲಾವಿದರನ್ನಾಗಿ ಮಾಡಲು ಮುಂದೆ ಬರುತ್ತಿಲ್ಲ. ಜನಪದ ಪರಂಪರೆ ಮುಂದಕ್ಕೆ ಬರಬೇಕಾದರೆ ಸ್ಥಿರವಾದ ಆರ್ಥಿಕ ಭದ್ರತೆ ಬೇಕಾಗುತ್ತದೆ. ಹಲಗೆ ಬಾರಿಸುವವರ ಮಕ್ಕಳು ಹಲಗೆಯನ್ನೆ ಬಾರಿಸಬೇಕಾ? ಚಪ್ಪಲಿ ಹೊಲೆಯುವವರ ಮಕ್ಮಳು ಚಪ್ಪಲೆಯನ್ನೇ ಹೊಲೆಯಬೇಕಾ ಎನ್ನುವ ಪ್ರಶ್ನೆ ಬಂದಾಗ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಕ್ಷಗಾನದಂತೆ ಆಯಾ ಕಾಲದ ಹೊಸ ವಿಷಯಗಳು ಸೇರ್ಪಡೆ ಮಾಡಿಕೊಂಡರೆ ಬಯಲಾಟ ಉಳಿಯುತ್ತದೆ ಎಂದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಇಂದು ಸಾಂಸ್ಕೃತಿಕ ದುಸ್ಥಿತಿ ಒದಗಿದೆ, ಎಲ್ಲಾ ಅಕಾಡೆಮಿಗಳಿಗೂ ಸರಕಾರ ಹೆಚ್ಚಿನ ಅನುದಾನ ಕೊಡಬೇಕು, ಹಾಗಾದಾಗ ಅಕಾಡೆಮಿಗಳು ಹೆಚ್ಚು ಕ್ರಿಯಾಶೀಲಗೊಳ್ಳುತ್ತವೆ. ಯಕ್ಷಗಾನದಂತೆ ಬಯಲಾಟವೂ ಕೂಡ ಈ ಭಾಗದಲ್ಲಿ ಹೊಸ ತಲೆಮಾರಿನ ಜತೆ ಬೆಳೆಯಬೇಕಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಅವರು `ಜನಪದವು ದುಡಿಯುವ ವರ್ಗದ, ಮಹಿಳೆಯರ ಕಲಾ ಪರಂಪರೆಯಾಗಿದೆ. ಕಲ್ಯಾಣ ಕರ್ನಾಟಕದ ಜನಪದ ಬಯಲಾಟಗಳ ಬಗ್ಗೆ ಗುಲ್ಬರ್ಗಾ ವಿವಿ ಮಹತ್ವದ ಕೆಲಸ ಮಾಡಿದೆ. ವಿದ್ಯಾವಂತರು, ನೌಕರರು ಬಯಲಾಟ ಪರಂಪರೆಗೆ ಬರಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ.ದುರ್ಗಾದಾಸ್ ಮಾತನಾಡಿ, ಕೆಳಜಾತಿಗಳಿಗೆ ಬಯಲಾಟಗಳು ಮಾನಸಿಕ ಆತ್ಮಸ್ಥೈರ್ಯ ಕೊಟ್ಟಿವೆ. ಬಯಲಾಟ ಒಂದು ಶಾಲೆಯಾಗಿ ಜನರನ್ನು ನೈತಿಕ ಶಿಕ್ಷಣ ನೀಡಿದೆ. ಅನಕ್ಷರಸ್ಥ ಕಲಾವಿದರನ್ನು ಬಯಲಾಟಗಳು ಸಾಕ್ಷರರನ್ನಾಗಿಸಿವೆ. ರಜಾಕಾರರ ಹಾವಳಿ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಹಿಂದು ಪುರುಷರನ್ನು ರಕ್ಷಿಸಿದ್ದು ಜನಪದ ಹಾಡುಗಳಲ್ಲಿದೆ. ಹೀಗೆ ಜಾತಿ ಧರ್ಮವನ್ನು ಮೀರಿ ಬಯಲಾಟಗಳು ಬೆಳೆದಿವೆ. ಬಯಲಾಟ ಪರಂಪರೆಯನ್ನು ಉಳಿಸುವ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ದೊಡ್ಡ ಜವಾಬ್ದಾರಿ ಬಯಲಾಟ ಅಕಾಡೆಮಿಯ ಮೇಲಿದೆ. ಈ ಉದ್ದೇಶದ ಈಡೇರಿಕೆಗೆ ಜನರ ಬೆಂಬಲ ಬೇಕಾಗಿದೆ’ ಎಂದು ತಿಳಿಸಿದರು.
ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ರಾಜನಾಳಕರ್ ಲಕ್ಷ್ಮಣ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಅಧ್ಯಾಪಕರು ವಿದ್ಯಾರ್ಥಿಗಳು ನಾಡಗೀತೆಯನ್ನು ಪ್ರಸ್ತುತಪಡಿಸಿದರು. ಶ್ರೀ ಲಕ್ಷ್ಮಿ ದೊಡ್ಡಾಟ ಸಂಘ ಚಡಚಣ ತಂಡದವರು ಬಯಲಾಟದ ಹಾಡುಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಡಾ.ಸಂತೋಷ್ ಕಂಬಾರ್ ನಿರೂಪಿಸಿದರು.