ಪ್ರೀತಿ, ಸಾಮರಸ್ಯ, ಐಕ್ಯತೆಗೆ ಸಾಹಿತ್ಯವಿದೆ: ಡಾ. ಸ್ವಾಮಿರಾವ ಕುಲಕರ್ಣಿ
ಕಲಬುರಗಿ: ದ್ವೇಷ ಮಾಡುವುದಕ್ಕೆ ಜಾತಿ, ಧರ್ಮಗಳಿವೆ. ಆದರೆ ಪ್ರೀತಿ, ಸಾಮರಸ್ಯ, ಐಕ್ಯತೆಗೆ ಸಾಹಿತ್ಯವಿದೆ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.
ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ವಿಶ್ವನಾಥರಡ್ಡಿ ಮುದ್ನಾಳ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಭುದವಾರ ಹಮ್ಮಿಕೊಂಡಿದ್ದ ನನ್ನ ಮೆಚ್ಚಿನ ಪುಸ್ತಕ ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಮಾಯಣ, ಮಹಾಭಾರತದ ಆದರ್ಶವನ್ನು ಕಥಾ ರೂಪದಲ್ಲಿ ಹೇಳುವುದರಿಂದ ಉತ್ತಮ ಸಂಸ್ಕೃತಿ ಬೆಳೆಯಲಿದೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಚಿದಾನಂದ ಮಠ ವಿಶೇಷ ಉಪನ್ಯಾಸ ನೀಡಿ, ಕುವೆಂಪು ರಚಿಸಿದ ಈ ಮಹಾಕಾವ್ಯ ನಾಲ್ಕು ಸಂಪುಟಗಳಲ್ಲಿದ್ದು, ಸುಮಾರು 22 ಸಾವಿರ ಸಾಲುಗಳ ಮಹಾ ಕಾವ್ಯವಾಗಿದೆ ಎಂದು ಹೇಳಿದರು.
ಶ್ರೀರಾಮಾಯಣ ದರ್ಶನಂ ಕೃತಿಯು ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದೆ. ಈ ಕಾವ್ಯದಲ್ಲಿಸರ್ವೋದಯ ಹಾಗೂ ವೈಚಾರಿಕತೆ, ವಿಶ್ವಮಾನವ ಸಂದೇಶ ಒಳಗೊಂಡಿದ್ದು, ಕನ್ನಡ ಸಾಹಿತ್ಯಕ್ಕೆ ಹಲವು ಹೊಸ ಆಯಾಮಗಳನ್ನು ಒದಗಿಸಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಮಹಾಕಾವ್ಯಗಳ ಕಾಲ ಮುಗಿದೇ ಹೋಯಿತು ಎನ್ನುವಾಗ ಕುವೆಂಪು ಅವರಿಂದ ರಚಿತವಾದ ಆಧುನಿಕ ಸಾಹಿತ್ಯದ ಲೋಕೋತ್ತರ ಕೃತಿಯಾಗಿದೆ ಎಂದು ತಿಳಿಸಿದರು.
ಕಾವ್ಯಗಳಲ್ಲಿ ಮಾನವೀಯ ದರ್ಶನವಿರುವ ಈ ಮಹಾಕಾವ್ಯವು ಎದೆಯ ದನಿಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ ಎಂಬ ವೈಚಾರಿಕ ನವೀನ ದೃಷ್ಟಿಕೋನ ಹೊಂದಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ಮಾತನಾಡಿದರು. ಪ್ರಾಧ್ಯಾಪಕ ಡಾ. ಶರಣಬಸಪ್ಪ ವಡ್ಡನಕೇರಿ ವೇದಿಕೆಯಲ್ಲಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಆಶಯ ಭಾಷಣ ಮಾಡಿದರು. ಪ್ರಾಚಾರ್ಯ ಬಸವರಾಜ ಮಠಪತಿ ಸ್ವಾಗತಿಸಿದರು. ಡಾ. ಪ್ರೇಮಾ ಅಪಚಂದ ವಂದಿಸಿದರು. ನಾಗರತ್ನ ಪ್ರಾರ್ಥನೆಗೀತೆ ಹಾಡಿದರು.