ಕಲಬುರಗಿ | ಅಪ್ರಾಪ್ತರು ಚಲಾಯಿಸಿದ 154 ಬೈಕ್ ವಶ: ಕಮಿಷನರ್ ಶರಣಪ್ಪ ಎಸ್.ಡಿ
ಕಲಬುರಗಿ: ನಗರದಲ್ಲಿ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವ ಅಪ್ರಾಪ್ತ ವಯಸ್ಸಿನ ಬಾಲಕ/ಬಾಲಕಿಯರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ, 154 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸಾರ್ವಜನಿಕರಿಂದ ದಿನದಿಂದ ದಿನಕ್ಕೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ, ಬೇಕಾಬಿಟ್ಟಿ ಸಿಗ್ನಲ್ ಉಲ್ಲಂಘನೆ, ಟ್ರಿಬಲ್ ರೈಡಿಂಗ್, ಅಪ್ರಾಪ್ತರಿಂದ ಬೈಕ್ ಚಾಲನೆ ಸೇರಿದಂತೆ ಪರವಾನಗಿ ಇಲ್ಲದೆ ವಾಹನ ಚಲಾಯಿಸುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಅದನ್ನು ತಡೆಗಟ್ಟಲು ಮೊದಲ ಹಂತವಾಗಿ ವಿಶೇಷ ಕಾರ್ಯಾಚರಣೆ ನಡೆಸಿ, 154 ಬೈಕ್ ವಶಕ್ಕೆ ಪಡೆದು ಅಪ್ರಾಪ್ತ ವಯಸ್ಸಿನ ಮಕ್ಕಳ ಪಾಲಕರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಜಪ್ತಿ ಮಾಡಿಕೊಂಡ 154 ದ್ವಿಚಕ್ರ ವಾಹನಗಳನ್ನು ದಂಡ ಪಾವತಿಸದೇ ಎಚ್ಚರಿಕೆ ಕೊಟ್ಟು, ವಾಪಸ್ ಹಿಂಡಿರುಗಿಸಲಾಗಿದೆ. ಒಂದು ವೇಳೆ ಮತ್ತೊಮ್ಮೆ ಅಪ್ರಾಪ್ತರಿಗೆ ವಾಹನಗಳನ್ನು ನೀಡಿದರೆ, ಕಲಂ 199(ಎ)(2) 1998 ರ ಮೋಟಾರ್ ವಾಹನ ಕಾಯ್ದೆಯಡಿ ಪಾಲಕರಿಗೆ ಅಥವಾ ಮಾಲೀಕರಿಗೆ ಜೈಲು ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಲಾಗುತ್ತದೆ. ವಾಹನ ಚಾಲನೆ ಪರವಾನಗಿ(ಡಿಎಲ್) ಹೊಂದಿರದಿದ್ದರೆ ಕಲಂ 181, 1988ರ ಮೋಟಾರ್ ವಾಹನ ಕಾಯ್ದೆಯಡಿ 3 ತಿಂಗಳು ಸಜೆ, 5,000 ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ಅನುಮತಿ ಕೊಡದೆ ಪಾಲಕರು ಎಚ್ಚರಿಕೆ ವಹಿಸಬೇಕು, ಶಾಲಾ- ಕಾಲೇಜುಗಳಿಗೆ ತೆರಳುವ ಮಕ್ಕಳನ್ನು ಸ್ವತಃ ಪಾಲಕರೇ ಅವರನ್ನು ಶಾಲೆಯತ್ತ ತಲುಪಿಸಿ ಬರಬೇಕು, ವಾಹನ ಮಾಲೀಕರು ಬೇರೆಯವರಿಗೆ ಚಲಾಯಿಸಲು ತಮ್ಮ ವಾಹನಗಳನ್ನು ಕೊಡಬಾರದು. ಒಂದು ವೇಳೆ ನಗರದಲ್ಲಿ ಇನ್ಮುಂದೆ ಟ್ರಿಬಲ್ ರೈಡಿಂಗ್, ಸಿಗ್ನಲ್ ಜಂಪ್, ಮತ್ತಿತರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.
18 ವಯಸ್ಸಿನ ಒಳಗಿನ ಮಕ್ಕಳಿಗೆ ವಾಹನ ನೀಡುವುದು, ಆಟೋ ಚಾಲಕರಿಂದ ಅಶಿಸ್ತು ವಾಹನ ಚಾಲನೆ ಮಾಡುತ್ತಿರುವುದು ಹೆಚ್ಚಾಗಿ ನಡೆಯುತ್ತಿವೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಜರುಗಬಾರದು. ಒಂದು ವೇಳೆ ನಡೆದಿದ್ದಲ್ಲಿ ದಂಡ ಪಾವತಿಸಲು ಡಿಜಿಟಲ್ ಪಾವತಿಯೂ ಜಾರಿಗೆ ತರಲಾಗುತ್ತಿದೆ ಎಂದರು.
ಕಲಬುರಗಿ ನಗರದಲ್ಲಿ ಎಲ್ಲ ರೀತಿಯ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಕೆಲಸ ಮಾಡುತ್ತಿದ್ದೇವೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಂತ ಹಂತವಾಗಿ ನಗರವನ್ನು 'ಕ್ರೈಮ್ ಮುಕ್ತ' ವನ್ನಾಗಿ ಮಾಡಲು ಪಣ ತೊಟ್ಟಿದ್ದೇವೆ.
- ಡಾ.ಶರಣಪ್ಪ ಎಸ್.ಡಿ (ನಗರ ಪೊಲೀಸ್ ಆಯುಕ್ತ, ಕಲಬುರಗಿ)