ಕಲಬುರಗಿ | ಫೆ.10ರಿಂದ ವಿಧಾನಸೌಧದ ಎದುರು ಅನಿರ್ಧಿಷ್ಟಾವಧಿ ಧರಣಿ
ಕಲಬುರಗಿ : ಕೃಷಿ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡುವುದನ್ನು ನಿಲ್ಲಿಸಬೇಕು. ಬಲವಂತದ ಭೂ ಸ್ವಾಧೀನ ಹಾಗು ಮೋಸದ ಭೂ ಬೆಲೆ ನಿಗದಿಸಿ ವಂಚಿಸುವುದನ್ನು ತಡೆಯಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಫೆ.10ರಿಂದ ಬೆಂಗಳೂರಿನ ವಿಧಾನಸೌಧದ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ ಹಾಗೂ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಗರ್ ಹುಕುಂ ಹಾಗು ಅರಣ್ಯ ಭೂಮಿ ಸಾಗುವಳಿ ನಿರತ ಬಡವರನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಿ, ಅವರಿಗೆ ಕೂಡಲೇ ಹಕ್ಕುಪತ್ರ ನೀಡಲು ಅಗತ್ಯ ಕ್ರಮವಹಿಸಬೇಕು. ಕೃಷಿ ಭೂಮಿಗಾಗಿ ಹಾತೊರೆಯುತ್ತಿರುವ ಭೂ ವಂಚಿತ ದಲಿತರು ಹಾಗು ದೇವದಾಸಿ ತಾಯಂದಿರು ಮತ್ತು ಮಸಣ ಕಾರ್ಮಿಕರಿಗೆ ತಲಾ ಐದು ಎಕರೆ ಕೃಷಿ ಭೂಮಿಯನ್ನು, ನಿವೇಶನ ರಹಿತರಿಗೆ ನಿವೇಶನ ಸಹಿತ ವಸತಿಯನ್ನು ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ದುರುದ್ದೇಶದ ದಾಳಿಗಳು ಶ್ರೀಮಂತರನ್ನು ಭಾರೀ ಶ್ರೀಮಂತರನ್ನಾಗಿಸುತ್ತಾ ಬಡವರನ್ನು ಕಡು ಬಡವರನ್ನಾಗಿಸುತ್ತಾ ಕೈಗಾರಿಕೆಗಳ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆಯದಂತೆ ಮಾಡಿ ದೇಶವನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಿವೆ ಎಂದು ಆರೋಪಿಸಿದರು.
ಈ ಕಾರಣಗಳಿಂದ ಸಾಲಬಾಧಿತರಾಗಿ ಮತ್ತು ಉದ್ಯೋಗ ವಂಚಿತರಾಗುತ್ತಿದ್ದಾರೆ, ರೈತರು ಹಾಗು ಕೂಲಿಕಾರರು ಆತ್ಮಹತ್ಯೆ ಹಾಗು ಹಸಿವಿನ ಸಾವುಗಳಿಗೆ ಬಲಿಯಾಗುತ್ತಿದ್ದಾರೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮಶೆಟ್ಟಿ ಯಂಪಳ್ಳಿ, ಪ್ರಕಾಶ್ ಜಾನೆ, ದಿಲೀಪ್ ನಾಗೂರೆ ಮತ್ತಿತರರು ಇದ್ದರು.