ಕಲಬುರಗಿ | ಕಸಾಪದ ಕೆಲಸಗಳಿಗೆ ಪ್ರೋತ್ಸಾಹ ಅಗತ್ಯ: ಬಿ.ಜಿ.ಪಾಟೀಲ್
ಕಲಬುರಗಿ : ನಾಡು-ನುಡಿ, ನೆಲ-ಜಲಗಳ ಬಗ್ಗೆ ನಿರಂತರವಾಗಿ ಕನ್ನಡ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜ.19ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿರುವ ಮಹಿಳಾ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ಕಟ್ಟುವ ಕಾರ್ಯಗಳನ್ನು ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಭವನದ ಆವರಣದಲ್ಲಿರುವ ಬಾಪೂಗೌಡ ದರ್ಶನಾಪೂರ ರಂಗಮoದಿರಕ್ಕೆ ಸುಸಜ್ಜಿತ ಧ್ವನಿ ಬೆಳಕು ಅಳವಡಿಸುವ ಕಾರ್ಯ ಕೈಗೊಳ್ಳಬೇಕು. ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ನೆರವು ಒದಗಿಸಿಕೊಡುವಲ್ಲಿ ತಾವೂ ಸಹಕರಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಹೊಸ ಪೀಳಿಗೆಗೆ ಅಗತ್ಯವಾದ ಮಾರ್ಗದರ್ಶನವನ್ನು ನೀಡುವ ಮೂಲಕ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಆಕರ್ಷಿಸುವ ನಿಟ್ಟಿನಲ್ಲಿ ಪರಿಷತ್ತು ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಪರಿಷತ್ತು ಹೊಸ ಆಲೋಚನೆಗಳಿಂದ ಕೂಡಿದ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ಧರ್ಮರಾಜ ಜವಳಿ, ರಾಜೇಂದ್ರ ಮಾಡಬೂಳ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಭುರ್ಲಿ ಪ್ರಹ್ಲಾದ, ಗೌರವಾಧ್ಯಕ್ಷ ಸೋಮಶೇಖರ ಗೋನಾಯಕ್, ಕಾರ್ಯಾಧ್ಯಕ್ಷ ಶರಣು ಹೊನ್ನಗೆಜ್ಜೆ, ಶಿವಶರಣ ಹಡಪದ, ವೀರೇಂದ್ರಕುಮಾರ ಕೊಲ್ಲೂರ, ದಿನೇಶ ಮದಕರಿ, ಗಣೇಶ ಚಿನ್ನಾಕಾರ, ಸೋಮಶೇಖರಯ್ಯಾ ಹೊಸಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪರಿಷತ್ತಿನ ಕೇಂದ್ರ ಸಮಿತಿಯಿಂದ ಯಾವುದೇ ಅನುದಾನ ಇಲ್ಲದಿದ್ದರೂ ದಾನಿಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜಿಲ್ಲಾ ಘಟಕ ಹಾಗೂ ವಿವಿಧ ತಾಲೂಕು ಘಟಕದ ಆಶ್ರಯದಲ್ಲಿ ಸಾಹಿತ್ಯ ಸಮ್ಮೇಳನಗಳು ಏರ್ಪಡಿಸುತ್ತಿರುವುದು ಅಧ್ಯಕ್ಷರು ಹಾಗೂ ಪದಾಧಿಕಾರಿಗಳಲ್ಲಿನ ಕನ್ನಡ ಕಟ್ಟುವ ತುಡಿತ ಎತ್ತಿ ತೋರಿಸುತ್ತದೆ. ಪರಿಷತ್ತಿನ ಜವಾಬ್ದಾರಿ ಸಿಕ್ಕಿರುವುದೇ ಪೂರ್ವಜನ್ಮದ ಪುಣ್ಯ.
ವಿಜಯಕುಮಾರ ಪಾಟೀಲ ತೇಗಲತಿಪ್ಪಿ (ಜಿಲ್ಲಾಧ್ಯಕ್ಷರು, ಕಸಾಪ, ಕಲಬುರಗಿ)