ಕಲಬುರಗಿ | ಹನಿಟ್ರ್ಯಾಪ್ ಆರೋಪ : ದಲಿತ ಸೇನೆಯ ರಾಜ್ಯಾಧ್ಯಕ್ಷ ಸೇರಿ 8 ಮಂದಿ ವಿರುದ್ಧ ಪ್ರಕರಣ ದಾಖಲು, ಓರ್ವನ ಬಂಧನ
ಕಲಬುರಗಿ : ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಸೇರಿದಂತೆ 8 ಜನ ಸಹಚರರ ವಿರುದ್ಧ ಅಮಾಯಕ ಯುವತಿಯರು ಮತ್ತು ಮಹಿಳೆಯರನ್ನು ಬಳಸಿ ಹನಿಟ್ರ್ಯಾಪ್ ಮಾಡಿರುವ ಆರೋಪ ಸಂಬಂಧ ಇಲ್ಲಿನ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನ್ನು ಪೊಲೀಸರು ಶುಕ್ರವಾರ ಬಂಧಿಸಿರುವುದಾಗಿ ವರದಿಯಾಗಿದೆ.
ದಲಿತ ಸೇನೆಯ ಕಮಲಾಪುರ ತಾಲ್ಲೂಕು ಅಧ್ಯಕ್ಷ ರಾಜು ಲೆಂಗಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರಕ್ಕೆ ಸೇರಿದ ಯುವತಿಯೊಬ್ಬಳು ನೀಡಿದ ದೂರಿನ ಹಿನ್ನೆಲೆಯಲ್ಲಿ ದಲಿತ ಸೇನೆಯ ರಾಜ್ಯಧ್ಯಕ್ಷ ನ್ಯಾಯವಾದಿ ಹನುಮಂತ ಯಳಸಂಗಿ, ಪ್ರಭು ಹಿರೇಮಠ, ರಾಜು ಲೆಂಗಟಿ, ಶ್ರೀಕಾಂತ ರೆಡ್ಡಿ, ಮಂಜು ಭಂಡಾರಿ, ಉದಯಕುಮಾರ ಖಣಗೆ ತಳಪತಿ, ಅರವಿಂದ ಕಮಲಾಪುರ ಬಸವನಗರ ಹಾಗೂ ಸಂತೋಷ ಪಾಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರ ಮೂಲದ ಇಬ್ಬರು ಯುವತಿಯರು ಮತ್ತು ಜಿಲ್ಲೆಯ ಓರ್ವ ವಿವಾಹಿತ ಮಹಿಳೆಯು ತಮ್ಮನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಹಲವರಿಂದ ಹಣ ಪಡೆದಿರುವುದಾಗಿ ಭೀಮ್ ಆರ್ಮಿ ಪದಾಧಿಕಾರಿಗಳೊಂದಿಗೆ ಮಾಧ್ಯಮಗಳ ಮುಂದೆ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ್ ಯಳಸಂಗಿ ಹಾಗೂ ಸಹಚರರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಈ ಬಗ್ಗೆ ನಗರ ಪೋಲಿಸ್ ಆಯುಕ್ತ ಶರಣಪ್ಪ.ಡಿ ಅವರು ಸಂತ್ರಸ್ತೆಯರ ಅಹವಾಲುಗಳನ್ನು ಕೇಳಿ, ಪ್ರಕರಣದ ತನಿಖೆಗೆ ಸೂಚಿಸಿದ್ದರು.