ಮಾನ್ಪಡೆಯವರ ಹೋರಾಟಗಳು ದಿಟ್ಟತನದಿಂದ ಕೂಡಿದ್ದವು : ಚಂದು ಜಾಧವ್

Update: 2024-10-20 13:08 GMT

ಕಲಬುರಗಿ : ರಾಜ್ಯ ಸರ್ಕಾರದಿಂದ ಪ್ರತಿವರ್ಷ ಆಚರಿಸುವ ʼಪಂಚಾಯತ್ ರಾಜ್ ದಿವಸವನ್ನು ಇನ್ಮುಂದೆ ಮಾರುತಿ ಮಾನ್ಪಡೆʼ ದಿನವನ್ನಾಗಿ ಆಚರಿಸಬೇಕೆಂದು ಕಾಮ್ರೇಡ್ ಮಾರುತಿ ಮಾನ್ಪಡೆ ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡ ಕಾಮ್ರೇಡ್ ಮಾರುತಿ ಮಾನ್ಪಡೆ ಅವರ 4ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾರುತಿ ಮಾನ್ಪಡೆ ಅವರು ಗ್ರಾಮ ಪಂಚಾಯಿತಿಯ ವ್ಯವಸ್ಥೆಗಳ ಬದಲಾವಣೆಗೆ ಜೀವನಪೂರ್ತಿ ಹೋರಾಟ ನಡೆಸಿದ್ದಾರೆ. ಅವರ ಹೋರಾಟದ ಶ್ರಮವೇ ಇಂದು ಪಂಚಾಯಿತಿ ನೌಕರರ ಬಡ್ತಿ, ಖಾಯಂ ನೇಮಕಾತಿ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳು ಆಗಿವೆ. ಹಾಗಾಗಿ ಅವರ ನೆನಪಿಗೋಸ್ಕರ ಪಂಚಾಯತ್ ದಿನವನ್ನು ಮಾನ್ಪಡೆ ದಿವಸವನ್ನಾಗಿ ಆಚರಿಸಬೇಕು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಲಾಗುವುದು ಎಂದು ನಿರ್ಣಯಿಸಿದ್ದಾರೆ.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾರುತಿ ಮಾನ್ಪಡೆ ಅವರ ಸ್ನೇಹಿತ ಮತ್ತು ಕಾರ್ಮಿಕ ಮುಖಂಡರಾದ ಚಂದು ಜಾಧವ್, ʼಕಾಲೇಜು ಕಲಿಯುವಾಗ ನಮ್ಮೊಂದಿಗೆ ಮಾರುತಿ ಮಾನ್ಪಡೆ ಬಹಳಷ್ಟು ಕಷ್ಟ ಪಟ್ಟಿದ್ದರು. ಹಾಗಾಗಿಯೇ ಅವರಿಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಇದೇ ವೇಳೆ ರೈತ ಹೋರಾಟದಲ್ಲಿ 15 ರಿಂದ 20 ರೈತರು ಸಾವನ್ನಪ್ಪಿದ್ದರು. ಈ ಘಟನೆಯೇ ಅವರಿಗೆ ಹಲವು ಹೋರಾಟಗಳನ್ನು ಮಾಡಲು ಸ್ಪೂರ್ತಿ ನೀಡಿತು. ಹಾಗಾಗಿ ಅವರು ಸರಕಾರಿ ಹುದ್ದೆಯನ್ನು ತ್ಯಜಿಸಿ, ರೈತರ, ಕಾರ್ಮಿಕರ ಸೇರಿದಂತೆ ಗ್ರಾಮ ಪಂಚಾಯಿತಿ ನೌಕರರ ಪರವಾಗಿ ರಸ್ತೆಗೆ ಇಳಿದು ಹೋರಾಟ ಮಾಡಲು ಪ್ರಾರಂಭಿಸಿದ್ದರು ಎಂದು ಹೇಳಿದರು.

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಬಾಲವಾಡಿ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘಗಳನ್ನು ಮಾನ್ಪಡೆ ಅವರೇ ಹುಟ್ಟುಹಾಕಿದ್ದರು. ಅವರ ಹೋರಾಟಗಳು ದಿಟ್ಟತನದಿಂದ ಕೂಡಿದ್ದವು ಎಂದು ನೆನಪಿಸಿಕೊಂಡರು.

ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಭಿಮಳ್ಳಿ ಮಾತನಾಡಿ, ʼಮಾನ್ಪಡೆ ಅವರ ಹಲವು ಹೋರಾಟಗಳು ನಮಗೆಲ್ಲ ಸ್ಪೂರ್ತಿ ನೀಡಿವೆ. ಮುಂದಿನ ದಿನಗಳಲ್ಲಿ ಅವರ ಹೋರಾಟ, ತತ್ವ ಸಂದೇಶಗಳನ್ನು ಅನುಸರಿಸಿಕೊಂಡು ಹೋಗೋಣʼ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಲವು ರೈತ, ಕಾರ್ಮಿಕ ಮುಖಂಡರು, ಮಾರುತಿ ಮಾನ್ಪಡೆಯವರ ಆಪ್ತ ಸ್ನೇಹಿತರು ಸೇರಿದಂತೆ ಹಲವರು ಮಾತನಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಂಡಯ್ಯ ಸ್ವಾಮಿ, ನರಸಯ್ಯ ಗುತ್ತೇದಾರ, ಬಾಬುರಾವ್ ದುತ್ತರಗಾಂ, ಶಿವಶರಣಪ್ಪ ಸಿರಿ, ಸೂರ್ಯಕಾಂತ್ ನಿಂಬಾಳ್ಕರ್, ಶಿವಾನಂದ ಕೌಲಗಿ, ಸುನೀಲ್ ಮಾನ್ಪಡೆ, ಗುರುನಾಥ್ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News