ಓದದೇ ಬರಹಗಾರನಾಗಲು ಸಾಧ್ಯವಿಲ್ಲ: ಡಾ.ಬಡಿಗೇರ

Update: 2024-10-21 13:12 GMT

ಕಲಬುರಗಿ: ಬರಹಗಾರನಾಗುವ ಆಸಕ್ತನಿಗೆ ಓದು ಬಹು ಅಗತ್ಯ, ಒಂದು ವೇಳೆ ಓದದೇ ಕಾವ್ಯ ರಚಿಸಲು ಯೋಜಿಸಿದರೆ ಆತನು ಉತ್ತಮ ಬರಹಗಾರನಾಗಲು ಸಾಧ್ಯವಿಲ್ಲ ಎಂದು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾದೇವ ಬಡಿಗೇರ ಅಭಿಪ್ರಾಯಪಟ್ಟರು.

ನಗರದ ವಿಶ್ವನಾಥ್ ರೆಡ್ಡಿ ಮುದ್ನಾಳ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಾತೋಶ್ರೀ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ರಾಜ್ಯಮಟ್ಟದ ಒಂದು ದಿನದ 'ಕನ್ನಡ, ಕವಿ - ಕಾವ್ಯ - ಕಥೆ - ಸಂಸ್ಕೃತಿ ಅಧ್ಯಯನ ಕಮ್ಮಟ' ದಲ್ಲಿ ಅವರು ವಿಷಯವನ್ನು ಮಂಡಿಸಿದರು.

ಹೊಸದಾಗಿ ಕಾವ್ಯ ರಚಿಸುವವರು ಹಿಂದಿನ ಕಾವ್ಯಗಳ ಅಧ್ಯಯನ ಮಾಡುವುದು ಅವಶ್ಯಕವಾಗಿದ್ದು, ಬರಹಗಾರರು ಒಂದೇ ವಿಷಯದಲ್ಲಿ ಹಲವು ರೀತಿಯಲ್ಲಿ ತಮ್ಮ ಕಾವ್ಯವನ್ನು ತೆರೆದಿಡಬಹುದು. ಹೇಗೆ ರಾಮಾಯಣ ಮಹಾಕಾವ್ಯವು ವಿವಿಧ ಕವಿ, ಲೇಖಕರಿಂದ ನಾನಾ ವಿಷಯಗಳನ್ನು ಬಿಚ್ಚಿಟ್ಟಿದ್ದೆಯೋ, ಅದೇ ರೀತಿಯಾಗಿ ನವ ಕಾವ್ಯಗಳನ್ನು ಸೃಷ್ಟಿಸುವ ಕವಿಗಳಿಗೆ ಹಲವು ಚಿಂತನೆಗಳು ಬೇಕಾಗುವುದು ಅಗತ್ಯ ಎಂದರು.

ಕಾವ್ಯ ರಚಿಸುವವನ ಕಾವ್ಯವು ಕೇವಲ ಭಾಷೆಯಾಗಿರದೆ, ಅದರಲ್ಲಿ ರಸಜೀವ, ಅಲಂಕಾರ ಸೇರಿದಂತೆ ಸುಖ ನಿಲಯವು ಒಳಗೊಂಡಿರಬೇಕು. ಬರಹಗಾರನ ಸಾಹಿತ್ಯವು ಋಣಾತ್ಮಕ ಟೀಕೆಗಳಿಗೆ ಅನ್ವಯಿಸದೆ ವ್ಯಕ್ತಿ, ಕುಟುಂಬ, ಸಮಾಜ & ಇಡೀ ದೇಶಕ್ಕೆ ಒಳ್ಳೆಯದನ್ನು ಸೂಚಿಸಿದಾಗಿರಬೇಕು ಎಂದು ಶಿಬಿರಾರ್ಥಿಗಳಿಗೆ ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಕಾಶಕ ಬಸವರಾಜ್ ಕೊನೆಕ್ ಮಾತನಾಡಿ, ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸಬೇಕಾದರೆ ಉತ್ತಮ ಬರಹಗಾರ ಬೇಕಾಗುತ್ತದೆ, ಆದರೆ ನಮ್ಮ ವ್ಯಾಪ್ತಿಯಲ್ಲಿ ಬರಹಗಾರ ಕೊರತೆ ಎದ್ದು ಕಾಣುತ್ತಿದೆ ಎಂದು ಬೇಸರ ಹೊರಹಾಕಿದರು.

ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸುಮಾರು 37ಕ್ಕು ಹೆಚ್ಚು ರಾಜಮನೆತನಗಳು ಆಳಿವೆ. ಅವುಗಳ ಇತಿಹಾಸ ಬರೆದಿಟ್ಟವರು ಮಾತ್ರ ಬೆರಳಣಿಕೆಯ ಲೇಖಕರಷ್ಟೇ ಸಿಗುತ್ತಾರೆ. ಕಾವ್ಯಕ್ಕೆ ಮೂಲವೇ ಜನಪದ. ಇಂದಿನ ಕೇಳುಗನಷ್ಟೇ ನಾಳೆಯ ಹೇಳುಗನಾಗುತ್ತಾನೆ ಎಂದು ಹೇಳಿದರು.

ಸಮಾರಂಭದಲ್ಲಿ ಸಾಹಿತಿಗಳಾದ ಡಾ.ಶರಣಬಸಪ್ಪ ವಡ್ಡನಕೇರಿ, ಪ್ರೇಮಾ ಅಪಚಂದ ಸೇರಿದಂತೆ ಕಮ್ಮಟದ ಶಿಬಿರಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News