ಕಲಬುರಗಿ: ಹಣದ ಬೇಡಿಕೆ ಮುಂದಿಟ್ಟು ಮೂವರನ್ನು ಕೂಡಿ ಹಾಕಿ ಚಿತ್ರಹಿಂಸೆ: 8 ಆರೋಪಿಗಳ ಬಂಧನ
ಕಲಬುರಗಿ, ಮೇ 12: ಹಣ ನೀಡುವಂತೆ ಒತ್ತಾಯಿಸಿ ಹಳೆಯ ಕಾರುಗಳನ್ನು ಮಾರಾಟ ಮಾಡುವ ಮೂವರು ವ್ಯಾಪಾರಿಗಳನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಳೆ ಕಾರುಗಳ ಮಾರಾಟಗಾರ ಸೇಡಂ ತಾಲೂಕಿನ ದೇವನೂರ್ ಗ್ರಾಮದ ನಿವಾಸಿ ಅರ್ಜುನಪ್ಪ ಮಡಿವಾಳ್ (30), ಹೀರಾಪುರದ ಚಾಲಕ ಅಬ್ದುಲ್ ರಹ್ಮಾನ್(36) ಹಾಗೂ ಇಸ್ಲಾಮಾಬಾದ್ ಕಾಲನಿಯ ಟ್ಯಾಕ್ಸಿ ಚಾಲಕ ಮುಹಮ್ಮದ್ ಸಮೀರುದ್ದೀನ್(28) ಹಲ್ಲೆಗೊಳಗಾದವರು.
ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್ ಸ್ಟರ್ ಸದ್ದಾಮ್, ಇಮ್ರಾನ್ ಪಟೇಲ್, ಮುಹಮ್ಮದ್ ಮತೀನ್ ಅಲಿಯಾಸ್ ಸ್ಟೀಲ್ ಮತೀನ್, ಮುಹಮ್ಮದ್ ಝಿಯಾವುಲ್ ಹುಸೇನ್, ಮುಹಮ್ಮದ್ ಅಫ್ಝಲ್ ಶೇಕ್, ಹುಸೈನ್ ಶೇಖ್, ರಮೇಶ್ ದೊಡ್ಡಮನಿ ಮತ್ತು ಸಾಗರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ರಮೇಶ್ ದೊಡ್ಡಮನಿ ಎಂಬಾತನ ಬೇಡಿಕೆಯಂತೆ ಹಳೆಯ ಕಾರು ತೋರಿಸಲೆಂದು ಅರ್ಜುನಪ್ಪ ಅವರು ಅಬ್ದುಲ್ ರಹ್ಮಾನ್ ಮತ್ತು ಸಮೀರುದ್ದೀನ್ ಜೊತೆ ಮೇ 4ರಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.
ರಮೇಶ್ ಮತ್ತು ಇಮ್ರಾನ್ ನಿರ್ದೇಶನದಂತೆ 10-12 ಮಂದಿಯಷ್ಟಿದ್ದ ತಂಡವು ಅರ್ಜುನಪ್ಪ, ಅಬ್ದುಲ್ ರಹ್ಮಾನ್ ಮತ್ತು ಸಮೀರುದ್ದೀನ್ ರನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ನಗರದ ಹಾಗರಗಾ ಕ್ರಾಸ್ ಬಳಿಯಲ್ಲಿರುವ ಗ್ಯಾಂಗ್ ಸ್ಟರ್ ಸದ್ದಾಮ್ ಗೆ ಸೇರಿದ ಮನೆಯ ಕೋಣೆಯೊಂದರಲ್ಲಿ ಕೂಡಿ ಹಾಕಿದೆ. ಬಳಿಕ ಹಣ ನೀಡುವಂತೆ ಒತ್ತಾಯಿಸಿ ಅವರನ್ನು ಬೆತ್ತಲೆಗೊಳಿಸಿ ಬಡಿಗೆಗೆಗಳಿಂದ ಯದ್ವಾತದ್ವ ಥಳಿಸಿದೆ. ಸಿಗರೇಟಿನ ಬೆಂಕಿಯಿಂದ ಚುಚ್ಚಿದೆ. ಅರ್ಜುನಪ್ಪರ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಿ ಹಿಂಸಿಸಿದೆ ಎಂದು ಪೊಲೀಸ್ ದೂರಿನಲ್ಲಿ ಅರ್ಜುನಪ್ಪ ತಿಳಿಸಿದ್ದಾರೆ.
ದುಷ್ಕರ್ಮಿಗಳು ಈ ರೀತಿ ಸುಮಾರು ಒಂದೂವರೆ ದಿನ ಚಿತ್ರಹಿಂಸೆ ನೀಡಿದೆ. ಬಳಿಕ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತರನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಕಲಬುರಗಿ ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ್ ತಿಳಿಸಿದ್ದಾರೆ.