ಕಲಬುರಗಿ | ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿಗರಿಗೆ ತಂಪು ಪಾನೀಯ ವ್ಯವಸ್ಥೆ ಮಾಡಿದ ಕಾಂಗ್ರೆಸ್
ಕಲಬುರಗಿ : ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಬಿಜೆಪಿಗರಿಗೆ ಕಾಂಗ್ರೆಸ್ ಕಾರ್ಯಕರ್ತರು ತಂಪು ಪಾನೀಯ ವ್ಯವಸ್ಥೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆಯಿತು.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖಂಡರು, ಪ್ರಿಯಾಂಕ್ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕುವ ಹೋರಾಟ ನಡೆಸುತ್ತಿದ್ದರೆ ಸಚಿವರ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಗೂಂಡಾಗಿರಿ ನಮ್ಮ ಗಾಂಧಿಗಿರಿ ಎಂಬ ಶೀರ್ಷಿಕೆಯಡಿಯಲ್ಲಿ ಬ್ಯಾನರ್ ಹಿಡಿದು ಹೋರಾಟ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರು ಎಳನೀರು, ನೀರು, ಚಾಹಾ ಮೂಲಕ ಬಿಜೆಪಿಯ ಮುತ್ತಿಗೆ ಹೋರಾಟಕ್ಕೆ ಕೌಂಟರ್ ಹೋರಾಟದ ವೇದಿಕೆಯ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಸ್ವಾಗತಿಸುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.
ಬಿಜೆಪಿಯ ಹೋರಾಟಕ್ಕೆ ಬೆಂಗಳೂರ್ ನಿಂದ ಬರುತ್ತಿರುವ ಮುಖಂಡರಿಗೆ ಎಳನೀರು, ಮಜ್ಜಿಗೆ ತಂಪು ಪಾನಿಯ ವ್ಯವಸ್ಥೆ ಮಾಡಲಾಗಿದ್ದು, ಅವರ ಗೂಂಡಾಗಿರಿಗೆ ನಾವು ನಮ್ಮ ಗಾಂಧಿಗಿರಿ ಮೂಲಕ ಸ್ವಾಗತಿಸುತ್ತೇವೆ ಎಂದರು.
ಸಂವಿಧಾನದಲ್ಲಿ ಹೋರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಬಿಜೆಪಿ ಅವರು ಸಂವಿಧಾನಕವಾಗಿ ಹೋರಾಟ ಮಾಡುವುದನ್ನು ಬಿಟ್ಟು, ಸಚಿವರ ಮನೆಗೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಳ್ಳುವ ಮೂಲಕ ಗೂಂಡಾಗಿರಿಗೆ ಮುಂದಾಗಿದ್ದಾರೆ. ಅವರ ಗೂಂಡಾಗಿರಿಯ ವಿರುದ್ಧ ನಮ್ಮ ಗಾಂಧಿಗಿರಿ ಹೋರಾಟ ನಡೆಯುತ್ತಿದೆ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಝರ್ ಅಲಾಮ್ ಖಾನ್ ಹೇಳಿದರು.
ಸಚೀನ್ ಪಾಂಚಾಳ ಡೆತ್ ನೋಟ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಲ್ಲ. ಅವರ ರಾಜೀನಾಮೆ ಕೇಳುವುದು ಮುರ್ಖತನವಾಗಿದೆ. ಸಚಿನ್ ಆತ್ಮಹತ್ಯೆ ವಯಕ್ತಿಕ ವ್ಯವಹಾರದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖರ್ಗೆ ಅವರಿಗೆ ಕಪ್ಪು ಚುಕ್ಕೆ ತರಲು ಮತ್ತು ಬಿಜೆಪಿ ಮುಖಂಡರು ಪಕ್ಷದಲ್ಲಿ ತನ್ನ ನಾಯಕತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯ ಅರ್ಥಹಿನ ಹೋರಾಟ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಮತ್ತು ಮಹಿಳಾ ಘಟಕದ ನಾಯಕಿಯರು ಹೋರಾಟದಲ್ಲಿ ಇದ್ದರು.