ಜ್ಞಾನ, ಕೌಶಲ್ಯಗಳು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಆಯುಧಗಳು : ಶಶೀಲ್ ಜಿ.ನಮೋಶಿ
ಕಲಬುರಗಿ : ನಾವು ಹಾಕಿಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಜ್ಞಾನ, ಸಾಮರ್ಥ್ಯ ಮತ್ತು ಕೌಶಲ್ಯ ಹೊಂದಿರಬೇಕು, ಇವುಗಳೇ ನಮ್ಮ ಬೆಳವಣಿಗೆಯ ಆಯುಧಗಳು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಗಣಕ ಯಂತ್ರ ವಿಭಾಗದ ನೇತೃತ್ವದಲ್ಲಿ ನಡೆದ ಸ್ವಯಂ 'ಉಚಿತ ಶಿಕ್ಷಣ ವೇದಿಕೆ ತಂತ್ರಜ್ಞಾನ ವರ್ಧಿತಾ ಕಲಿಕಾ ರಾಷ್ಟ್ರೀಯ ಕಾರ್ಯಕ್ರಮ' (ಎನ್ಪಿ ಟಿಎಲ್) ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಜ್ಞಾನ ಮತ್ತು ಕೌಶಲ್ಯಗಳು ವ್ಯಕ್ತಿ ನಿರ್ಮಾಣದ ಪ್ರಮುಖ ಆಯುಧಗಳಾಗಿವೆ. ಜೀವನದಲ್ಲಿ ಜ್ಞಾನವನ್ನು ಸಂಪಾದಿಸದೇ ಇರುವ ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಜ್ಞಾನವೇ ಜೀವನದ ಯಶಸ್ಸಿನ ಮಾರ್ಗವಾಗಿದೆ. ಜ್ಞಾನವಿಲ್ಲದ ಮಾನವನ ಜೀವನ ಅಪೂರ್ಣವೆಂದು ಹೇಳಲಾಗುತ್ತದೆ. ಈ ಜ್ಞಾನವನ್ನು ಮೂರು ರೀತಿಯಲ್ಲಿ ಸಂಪಾದಿಸಬಹುದು. ಮೊದಲನೆಯದು - ಚಿಂತನೆಯಿಂದ, ಇದು ಉತ್ತಮ ಮಾರ್ಗವಾಗಿದೆ. ಎರಡನೆಯದು ಅನುಕರಣೆಯಿಂದ, ಇದು ಸುಲಭವಾದ ಮಾರ್ಗವಾಗಿದೆ ಮತ್ತು ಮೂರನೆಯದು ಅನುಭವದಿಂದ, ಇದು ಒಂದಿಷ್ಟು ಕಠಿಣವಾಗಿರುತ್ತದೆ ಎಂದರು.
ಎನ್ ಪಿ ಟಿ ಎಲ್ ಹಿರಿಯ ವ್ಯವಸ್ಥಾಪಕ ಹಾಗೂ ಐಐಟಿ ಮದ್ರಾಸ್ ಶಿವಶಂಕರ್ ದಾಸ್ ಮಾತನಾಡಿ, NPTEL ಜಾಗೃತಿ ಕಾರ್ಯಾಗಾರಗಳ ಉದ್ದೇಶವು NPTEL ಮತ್ತು ಅದರ ವಿವಿಧ ಉಪಕ್ರಮಗಳ ಬಗ್ಗೆ ಅಧ್ಯಾಪಕರಲ್ಲಿ ಗರಿಷ್ಠ ಅರಿವು ಮೂಡಿಸುವುದು ಹಾಗೂ NPTEL ಈಗ ತನ್ನ ಪಾಲುದಾರ ಕಾಲೇಜುಗಳ ಸಹಯೋಗದೊಂದಿಗೆ ಇ-ಜಾಗೃತಿ ಕಾರ್ಯಾಗಾರಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರಗಿ ನಿರ್ದೇಶಕರಾದ ಡಾ.ಶಂಭುಲಿಂಗ ಆಗಮಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯರಾದ ಡಾ.ಮಹಾದೇವಪ್ಪ ರಾಂಪೂರೆ, ಡಾ. ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ್ ಡಾ.ಕಿರಣ್ ದೇಶಮುಖ್ , ನಾಗಣ್ಣ ಘಂಟಿ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ಎಸ್. ಆರ್ ಹೊಟ್ಟಿ, ಪ್ರಾಚಾರ್ಯರಾದ ಡಾ.ಎಸ್ ಆರ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ.ಜಯಶ್ರೀ ಅಗರಖೇಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಾ ಪ್ರಾರ್ಥಿಸಿದರು, ಕು.ಸೀಮಾ ಕುಲಕರ್ಣಿ ನಿರೂಪಿಸಿದರೆ, ಉಪ ಪ್ರಾಚಾರ್ಯ ಡಾ.ಭಾರತಿ ಹರಸೂರ ವಂದಿಸಿದರು.