ಪ್ರಿಯಾಂಕ್ ಖರ್ಗೆ ಅವರ ಉದ್ಧಟತನದ ಹೇಳಿಕೆ ಶೋಭೆ ತರಲ್ಲ: ಬಾಬುರಾವ್ ಚವ್ಹಾಣ
ಕಲಬುರಗಿ : ಪ್ರಿಯಾಂಕ್ ಖರ್ಗೆ ಒಬ್ಬರು ಸಚಿವರಾಗಿ ಉದ್ಧಟತನದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಬಾಬುರಾವ್ ಚವ್ಹಾಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖವಾಗಿದೆ, ಅಲ್ಲದೆ ರಾಜು ಕಪನೂರ್ ಮತ್ತಿತರ ಆರೋಪಿಗಳಿಗೆ ಸಚಿವರೇ ರಕ್ಷಣೆ ಮಾಡುತ್ತಿದ್ದಾರೆ. ಸರಕಾರದ ಕೈಗೊಂಬೆಯಾಗಿರುವ ಸಿಐಡಿಗೆ ವಹಿಸಿರುವುದರಿಂದ ಕೇಸ್ ಮುಚ್ಚಿ ಹಾಕಲು ಮತ್ತಷ್ಟು ಸುಲಭವಾಗಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಆಂದೋಲಾಶ್ರೀ ಸೇರಿದಂತೆ ಬಿಜೆಪಿಯ ಮೂರು ಮುಖಂಡರನ್ನು ಕೊಲೆ ಮಾಡುವುದಾಗಿ ಸಂಚು ರೂಪಿಸಿದರ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯಿಸುತ್ತಿದೆ. ಆದರೆ ಸಚಿವರು ಪ್ರತಿಯಾಗಿ ನಮ್ಮ ಪಕ್ಷಕ್ಕೆ ಮತ್ತು ಮುಖಂಡರ ವಿರುದ್ಧ ಉದ್ಧಟನದ ಹೇಳಿಕೆ ನೀಡಿ ಅಹಂಕಾರ ದರ್ಪ ಎಸೆಯುತ್ತಿದ್ದಾರೆ, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಹೊರತು ಪ್ರಜಾತಂತ್ರ ಅಲ್ಲ ಎಂದು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮದೇ ಬಂಜಾರ ಸಮುದಾಯದ ಕೆಲ ಕಾಂಗ್ರೆಸ್ ನಾಯಕರು, ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈಗೊಂಬೆಯಾಗಿದ್ದಾರೆ, ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಗಿರವಿ ಇಟ್ಟವರಂತೆ ಮಾತನಾಡುತ್ತಿದ್ದಾರೆ ಎಂದು ತಮ್ಮ ಸಮಾಜದ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಕ್ಷತ್ರು ರಾಠೋಡ್, ಬಾಬು ಪವಾರ್, ಬಿಂಕು ಸಿಂಗ್, ಸತೀಶ್ ಚವ್ಹಾಣ ಸೇರಿದಂತೆ ಇತರರು ಇದ್ದರು.