ಕಲಬುರಗಿ | ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

Update: 2025-01-06 16:22 GMT

ಕಲಬುರಗಿ : ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರ ದಿಢೀರನೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಎಸ್ ಯುಸಿಐ (ಸಿ) ಸಂಘಟನೆ ಪದಾಧಿಕಾರಿಗಳು ಶಹಾಬಾದ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ ಯುಸಿಐ (ಸಿ) ಕಾರ್ಯದರ್ಶಿ ಗಣಪತರಾವ ಮಾನೆ, ಬಸ್ಗಳ ಟಿಕೆಟ್ ದರವನ್ನು ಶೇ.15ರಷ್ಟು ಏರಿಕೆ ಮಾಡಿರುವುದು ಖಂಡನೀಯ, ಈಗಾಗಲೇ ಜನರು ಹಲವು ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಭಾರೀ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ, ಇಂತಹ ವೇಳೆಯಲ್ಲೇ ಮತ್ತೆ ದರ ಏರಿಸಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಬಳಿಕ ಮಾತನಾಡಿದ ಮುಖಂಡ ರಾಘವೇಂದ್ರ ಎಂ.ಜಿ., ಶಕ್ತಿ ಯೋಜನೆಯ ನಂತರ ಬಸ್ಸಿನಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆಯು ಹೆಚ್ಚಾದಾಗ ಅಗತ್ಯಕ್ಕೆ ತಕ್ಕಂತೆ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕಿತ್ತು, ಅಲ್ಲದೆ, ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಚಾಲಕ-ನಿರ್ವಾಹಕರನ್ನು ನೇಮಕಾತಿ ಮಾಡಿಕೊಂಡು ಅರ್ಹರಿಗೆ ಉದ್ಯೋಗ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ಸರಕಾರ ಇವುಗಳನ್ನೆಲ್ಲ ಬಿಟ್ಟು ಏಕಾಏಕಿ ಟಿಕೆಟ್ ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.

ಒಂದು ವೇಳೆ ಟಿಕೆಟ್ ದರ ಕಡಿಮೆ ಮಾಡದಿದ್ದರೆ ಜನರನ್ನು ಸಂಘಟಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗುಂಡಮ್ಮ ಮಡಿವಾಳ, ರಾಜೇಂದ್ರ ಅತನೂರ, ರಮೇಶ್ ದೇವಕರ, ರಘು ಪವಾರ, ಸಿದ್ದು ಚೌದ್ರಿ, ಮಹಾದೇವಿ ಮಾನೆ, ಮಹಾದೇವಿ ಅತನೂರ, ರಾಧಿಕಾ ಚೌದ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News