ಕಲಬುರಗಿ | ಅಂಗನವಾಡಿಯ ಕಳಪೆ ಆಹಾರ ಸೇವನೆಯಿಂದಲೇ ಬಾಣಂತಿಯರ ಸಾವು : ಚಂದ್ರಶೇಖರ ಕಾಶಿ

Update: 2025-03-25 18:35 IST
Photo of Metting
  • whatsapp icon

ಕಲಬುರಗಿ : ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿರುವ ಕಳಪೆ ಆಹಾರದಿಂದಲೇ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಚಂದ್ರಶೇಖರ ಕಾಶಿ ಹೇಳಿದರು.

ಚಿತ್ತಾಪುರ ಪಟ್ಟಣದ ಪುರಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ಪಟ್ಟಣದ ಪ್ರತಿಯೊಂದು ವಾರ್ಡ್'ಗಳಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಗುಣಮಟ್ಟದ ಆಹಾರ ಪದಾರ್ಥಗಳು ಪೊರೈಕೆಯಾಗುತ್ತ ದೆಯಾ ಅಥವಾ ಇಲ್ಲ ಎನ್ನುವುದು ತಾವು ಭೇಟಿ ನೀಡಿ ಪರಿಶೀಲನೆ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ, ಸಿಡಿಪಿಓ ಆರತಿ ತುಪ್ಪದ್ ಮಾತನಾಡಿ, ನಾವು ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರವೇ ಪೊರೈಕೆ ಮಾಡುತ್ತಿದ್ದೇವೆ. ನಾವು ಕೊಡುತ್ತಿರುವ ಆಹಾರದಿಂದಲೇ ಬಾಣಂತಿಯರು ಸಾಯುತ್ತಿದ್ದಾರೆ ಎಂದು ಹೇಳಬೇಡಿ ಎಂದು ಉತ್ತರಿಸಿದರು.

ಸದಸ್ಯರಾದ ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಪಾಶಾ ಖುರೇಶಿ ಮಾತನಾಡಿ, ಮಹಿಳಾ ದಿನಾಚರಣೆಯ ಅರ್ಥ ಏನು?  ಮಹಿಳಾ ದಿನಾಚರಣೆ ದಿನದಂದು ಮಹಿಳೆಯರಿಗೆ ಗೌರವ ಕೊಡುವುದು ನಿಮ್ಮ ಕರ್ತವ್ಯ ಎಂದಾಗ ಸಿಡಿಪಿಓ ಮಾತನಾಡಿ, ನನ್ನ ಕಡೆಯಿಂದ ತಪ್ಪಾಗಿದೆ, ಕ್ಷಮಿಸಿ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸದಸ್ಯ ನಾಗರಾಜ ಭಂಕಲಗಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಪೊರೈಕೆ ಮಾಡುವ ಮೊಟ್ಟೆಗಳು, ಪೂರಕ ಪೌಷ್ಠಿಕ ಆಹಾರ ಪದಾರ್ಥಗಳನ್ನು ಹಸುಗಳು ಸಹ ತಿನ್ನುವುದಿಲ್ಲ. ಅಂತಹ ಕಳಪೆ ಆಹಾರ ಪದಾರ್ಥಗಳನ್ನು ಕೊಡುತ್ತಿದ್ದೀರಿ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಏನೆಲ್ಲಾ ಕೊಡುತ್ತಿದ್ದೀರಿ ಎನ್ನುವುದು ವಾರ್ಡಗಳ ಸದಸ್ಯರಿಗೆ ಮಾಹಿತಿಯೇ ಇಲ್ಲ ಎಂದು ಹೇಳಿದರು.

ಇದಕ್ಕೆ ಸಿಡಿಪಿಓ ಪ್ರತ್ಯುತ್ತರ ನೀಡುತ್ತಾ, ಪ್ರತಿಯೊಬ್ಬ ಅಂಗನವಾಡಿ ಶಿಕ್ಷಕಿಯರಿಗೆ ಸದಸ್ಯರಿಗೆ ಮಾಹಿತಿ ನೀಡಲು ಆದೇಶ ಮಾಡುತ್ತೇನೆ ಎಂದರು.

ಮಹಿಳಾ ಮೀಸಲಾತಿಯಡಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದೀರಿ, ಹೀಗಾಗಿ ತಾವುಗಳೇ ಅಧಿಕಾರ ಚಲಾಯಿಸಬೇಕು. ಬೇರೆಯವರಿಗೆ ಅಧಿಕಾರ ಚಲಾಯಿಸಲು ಬಿಡಬಾರದು. ವಾರ್ಡ್'ಗಳ ಸದಸ್ಯರಿಗೆ ಮಾಹಿತಿ ಇಲ್ಲದೇ ವಾರ್ಡ್'ಗಳಿಗೆ ಭೇಟಿ ನೀಡುತ್ತಿದ್ದೀರಿ ಇದು ಎಷ್ಟರ ಮಟ್ಟಿಗೆ ಸರಿ? ಈ ರೀತಿಯ ಸರ್ವಾಧಿಕಾರಿ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಸದಸ್ಯರಾದ ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಮಹ್ಮದ್ ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಕಾಳಗಿ, ಪಾಶಾ ಖುರೇಶಿ ಹೇಳಿದರು.

ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಮಾತನಾಡಿ, ಸದಸ್ಯರ ಗಮನಕ್ಕೆ ಯಾಕೆ ತರಬೇಕು, ನಾನು ಅಧ್ಯಕ್ಷೆ ಇದ್ದೇನೆ, ನನಗೆ ಭೇಟಿ ಕೊಡುವ ಹಕ್ಕಿದೆ ಎಂದು ಹೇಳಿದ ಕೂಡಲೇ 23 ವಾರ್ಡ್'ಗಳ ಸದಸ್ಯರ ಗಮನಕ್ಕೆ ತರದೇ ನೀವು ಒಬ್ಬರೇ ಭೇಟಿ ಕೊಡುವುದಾರೇ ಸದಸ್ಯರು ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಉಪಾಧ್ಯಕ್ಷೆ ಆತೀಯಾ ಬೇಗಂ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಪಾಶಾ ಖುರೇಶಿ, ಶೀಲಾ ಕಾಶಿ, ನಾಗರಾಜ ಭಂಕಲಗಿ, ರಮೇಶ ಬಮ್ಮನಳ್ಳಿ, ಮಹ್ಮದ್ ರಸೂಲ್ ಮುಸ್ತಫಾ, ಶೃತಿ ಪೂಜಾರಿ, ವಿನೋದ್ ಗುತ್ತೇದಾರ, ಜಗದೀಶ ಚವ್ಹಾಣ, ಶ್ರೀನಿವಾಸ್ ರೆಡ್ಡಿ, ಶಿವರಾಜ ಪಾಳೇದ್, ಸಂತೋಷ ಚೌದ್ರಿ, ಪ್ರಭು ಗಂಗಾಣಿ, ಶ್ಯಾಮ್ ಮೇಧಾ, ಬೇಬಿಬಾಯಿ, ಕಾಶಿಬಾಯಿ ಬೆಣ್ಣೂರ್, ಶಹನಾಜ್ ಬೇಗಂ, ಸುಶೀಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಕಚೇರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News