ಕಲಬುರಗಿ | ಜಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸರಬರಾಜಿನಲ್ಲಿ ವ್ಯತ್ಯಯ : ರೋಗಿಗಳ ಪರದಾಟ

ಕಲಬುರಗಿ : ಜಿಮ್ಸ್ (ಗುಲ್ಬರ್ಗಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆವರಣದ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತೊಂದು ಅವ್ಯವಸ್ಥೆ ಬೆಳಕಿಗೆ ಬಂದಿದೆ. ಆಸ್ಪತ್ರೆಗೆ ಪೂರೈಕೆಯಾಗಬೇಕಾದ ಆಕ್ಸಿಜನ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಐಸಿಯು ಹಾಗೂ ತುರ್ತು ನಿಗಾ ಘಟಕದಲ್ಲಿದ್ದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕೈಕೊಟ್ಟ ವಿದ್ಯುತ್, ಆಕ್ಸಿಜನ್ ಪೂರೈಕೆಯಲ್ಲಿ ಅಡಚಣೆ :
ಶನಿವಾರ ಸಂಜೆ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಿದ್ದು, ಆಕ್ಸಿಜನ್ ವ್ಯವಸ್ಥೆ ಸ್ಥಗಿತಗೊಂಡಿತ್ತು. ಪರ್ಯಾಯ ವ್ಯವಸ್ಥೆಯಾಗಿ ಬ್ಯಾಟರಿ ಬ್ಯಾಕಪ್ ಇದ್ದರೂ, ಅದು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಸಿಬ್ಬಂದಿ ಹ್ಯಾಂಡ್ ಪಂಪ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಬೇಕಾದ ಅವಸ್ಥೆ ಎದುರಾಯಿತು.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ವಾಸಕೋಶ ಹಾಗೂ ಕ್ಯಾನ್ಸರ್ ರೋಗಿಗಳು ಆಕ್ಸಿಜನ್ ಅಭಾವದಿಂದ ತೀವ್ರ ಸಂಕಷ್ಟ ಅನುಭವಿಸಿದರು. ಶಸ್ತ್ರಚಿಕಿತ್ಸೆ ಬಳಿಕ ನಿಗಾ ಘಟಕದಲ್ಲಿ ದಾಖಲಾದ ರೋಗಿಗಳ ಸ್ಥಿತಿಯೂ ಗಂಭೀರವಾಗಿತ್ತು. ಈ ಕುರಿತಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಲ್ಲಿನ ನಾಗರಿಕರು ಹಾಗೂ ರೋಗಿಗಳ ಬಂಧುಗಳು ಆಸ್ಪತ್ರೆಯ ನಿರ್ವಹಣೆಯ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ದೂರು ದಾಖಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ರೋಗಿಗಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.