ಕಲಬುರಗಿ | ಹನಿಟ್ರ್ಯಾಪ್ ಪ್ರಕರಣ; ದಲಿತ ಸೇನೆಯ ರಾಜ್ಯಾಧ್ಯಕ್ಷ ಸಹಿತ ಆರು ಮಂದಿಯ ಬಂಧನ

Update: 2024-09-10 07:11 GMT

ಕಲಬುರಗಿ: ಯುವತಿಯರನ್ನು ಬಳಸಿಕೊಂಡು ನಗರದಲ್ಲಿ ಹನಿಟ್ರ್ಯಾಪ್ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಸೇನೆಯ ರಾಜ್ಯಾಧ್ಯಕ್ಷ ಸಹಿತ ಒಟ್ಟು ಆರು ಜನರನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ದಲಿತ ಸೇನೆಯ ರಾಜ್ಯಾಧ್ಯಕ್ಷ ನ್ಯಾಯವಾದಿ ಹನುಮಂತ್ ಯಳಸಂಗಿ, ಸಂಘಟನೆ ಕಲಬುರಗಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಭಂಡಾರಿ, ಶ್ರೀಕಾಂತ್ ರೆಡ್ಡಿ, ಉದಯಕುಮಾರ್ ಖಣಗೆ, ಅರವಿಂದ ಕುಮಾರ್ ಕಮಲಾಪುರ ಹಾಗೂ ಸಂತೋಷ ಪಾಳ ಅವರು ನಗರ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಸ್ವಯಂ ಪ್ರೇರಿತರಾಗಿ ಪೊಲೀಸರಿಗೆ ಶರಣಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಬಂಧಿಸಲಾಯಿತು.

ಸರಕಾರಿ ಅಧಿಕಾರಿಗಳು, ಉದ್ಯಮಿಗಳನ್ನೇ ಗುರಿಯಾಗಿರಿಸಿ ಗಾಳ ಹಾಕ್ತಿದ್ದ ಗ್ಯಾಂಗ್, ಯುವತಿಯರನ್ನು ಮುಂದೆ ಬಿಟ್ಟು ಲಾಡ್ಜ್ ಗೆ ಕರೆಸುತ್ತಿದ್ದು, ನಂತರ ತಾವೇ ದಾಳಿ ನಡೆಸಿ, ಪೋಟೋ-ವಿಡಿಯೋ ಚಿತ್ರೀಕರಿಸಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿದ್ದರು ಎಂದು ಪ್ರಕರಣ ದಾಖಲಾಗಿದೆ.

ಓರ್ವ ಕಾನ್ಸ್‌ಟೇಬಲ್‌ ಹಾಗೂ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿ 47 ಲಕ್ಷ ವಸೂಲಿ ಮಾಡಿದ್ದು, ಅಮಾಯಕ ಯುವತಿಯರನ್ನೂ ಹಣ ನೀಡದೇ ವಿಡಿಯೋ ಇಟ್ಟುಕೊಂಡು ವಂಚಿಸಿದ್ದಾರೆ ಎಂದು ನೊಂದ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವೇಳೆ ಮಾತನಾಡಿದ ಹನುಮಂತ್ ಯಳಸಂಗಿ ಹನಿಟ್ರ್ಯಾಪ್‍ ಗೂ ಹಾಗೂ ನನಗೂ ಯಾವುದೇ ರೀತಿಯಲ್ಲಿ ಸಂಬಂಧ ಇಲ್ಲ. ಸುಳ್ಳು ಪ್ರಕರಣದಲ್ಲಿ ನನ್ನನ್ನು ಬಂಧಿಸಲು ದೂರು ಕೊಟ್ಟಿದ್ದು, ನಾನು ನಿರ್ದೋಷಿಯಾಗಿ ಹೊರಬರುತ್ತೇನೆ. ಹಾಗಾಗಿ ಕಾನೂನಿನ ಮೇಲೆ ಹಾಗೂ ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇರುವುದರಿಂದ ಸ್ವ ಇಚ್ಛೆಯಿಂದ ಶರಣಾಗಿದ್ದೇನೆ ಎಂದರು.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣದಿಂದ ಸ್ವಯಂ ಪ್ರೇರಿತನಾಗಿ ಶರಣಾಗಿದ್ದೇನೆ. ನನ್ನ ವಿರುದ್ಧ ಪಿತೂರಿ ಮಾಡಿದವರ ಹೊಟ್ಟೆ ತಣ್ಣಗಾಗಿರಬಹದು. ಸಂತೋಷ ಬಂದಿರಬಹುದು. ಇದು ಕೇವಲ ತಾತ್ಕಾಲಿಕ. ನಾನು ಅನ್ಯಾಯದ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇನೆ. ನಾನು ದೋಷಮುಕ್ತನಾಗಿ ಹೊರಬರುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ನಂತರ ಪ್ರಕರಣವನ್ನು ಸೈಬರ್ ಕ್ರೈಂಗೆ ವರ್ಗಾವಣೆ ಮಾಡಲಾಗಿತ್ತು.

ಹನಿ ಟ್ರ್ಯಾಪ್ ಕಪ್ಪುಚುಕ್ಕೆ 

ಹನಿಟ್ರ್ಯಾಪ್ ಕಲಬುರಗಿ ಜಿಲ್ಲೆಗೆ ಒಂದು ಕಪ್ಪುಚುಕ್ಕೆಯಾಗಿದೆ. ಜಿಲ್ಲೆಯಲ್ಲಿ ಹನಿಟ್ರ್ಯಾಪ್ ನಡೆದಿರುವ ಕುರಿತಂತೆ ಈಗಾಗಲೇ ದೂರು ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಯಾವುದೇ ಸಂಘಟನೆಯವರು ಇರಲಿ ಅಥವಾ ಎಂಥದ್ದೇ ವ್ಯಕ್ತಿಗಳಾಗಿರಲಿ, ಪೊಲೀಸ್ ತನಿಖೆ ನಂತರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.‌ ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ಸೆನ್ ಇಲಾಖೆಗೆ ಸೂಚಿಸಲಾಗಿದೆ. ಹನಿಟ್ರ್ಯಾಪ್ ಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ನೊಂದವರು ನೇರವಾಗಿ ನನಗೆ ಇಲ್ಲವೇ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ಸಲ್ಲಿಸಲಿ. ಅಂಥವರ ವಿವರ ಹಾಗೂ ಗುರುತು ಗೌಪ್ಯವಾಗಿಡಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News