ಕಲಬುರಗಿ | ಮೊರಾರ್ಜಿ ಶಾಲೆಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ವಿಸ್ತರಣೆ

ಕಲಬುರಗಿ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ (ಆಂಗ್ಲ ಮಾಧ್ಯಮ) ಶಾಲೆಗಳಿಗೆ ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ (ಸಿ.ಬಿ.ಎಸ್.ಸಿ) ಶಾಲೆಗೆ 6ನೇ ತರಗತಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2025ರ ಏ.10 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವೇಶ ಪಡೆಯಲು ಇಚ್ಚಿಸುವ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ) ವಿದ್ಯಾರ್ಥಿಗಳಿಗೆ ಶೇ. 75 ಹಾಗೂ ಇತರೆ ವರ್ಗಗಳ ವಿದ್ಯಾರ್ಥಿಗಳಿಗೆ 25 ರಷ್ಟು ಸ್ಥಾನಗಳು ಮೀಸಲಿದ್ದು, ಇದರಲ್ಲಿ ಬಾಲಕಿಯರಿಗೆ ಶೇ. 50 ರಷ್ಟು ಸ್ಥಾನಗಳು ಮೀಸಲಿರಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು/ ಪಾಲಕರು, ಸೇವಾ ಸಿಂಧು ಪೋರ್ಟಲ್ ಲಿಂಕ್ https://sevasindhuservices.karnataka.gov.in ಮೂಲಕ ಸಮೀಪದ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರಗಳಲ್ಲಿ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಡಾ.ಎ.ಪಿ.ಜೆ ಅಬ್ದುಲ ಕಲಾಂ ವಸತಿ ಶಾಲೆಗಳಿಗೆ ಭೇಟಿ ನೀಡಿ ಮೇಲ್ಕಂಡ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ https://dom.karnataka.gov.in, ರಾಜ್ಯ ಸಹಾಯವಾಣಿ: 827779990 ಹಾಗೂ ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿ.ಡಿ.ಎ. ಕಚೇರಿ ಮೊದಲನೇ ಮಹಡಿ ಸ್ಟೇಷನ್ ರೋಡ ಕಲಬುರಗಿ ಕಚೇರಿ ದೂರವಾಣಿ ಸಂಖ್ಯೆ : 08472-247260ಗೆ ಸಂಪರ್ಕಿಸಲು ಕೋರಲಾಗಿದೆ.