ಕಲಬುರಗಿ | ವಿಜ್ಞಾನದ ಸಂಶೋಧನೆ ಮಾನವಕುಲಕ್ಕೆ ಪ್ರಯೋಜನ ನೀಡಬೇಕು : ಡಾ.ದಯಾನಂದ ಅಗಸರ್

Update: 2025-01-04 11:05 GMT

ಕಲಬುರಗಿ : ಮೂಲಭೂತ ವಿಜ್ಞಾನ ಅಥವಾ ಅನ್ವಯಿಕ ವಿಜ್ಞಾನದ ಯಾವುದೇ ಸಂಶೋಧನೆಯ ಫಲಿತಾಂಶವು ಮನುಕುಲಕ್ಕೆ ಉಪಯೋಗವಾಗುವ ಉದ್ದೇಶದಿಂದ ಹೊಂದಿರಬೇಕು ಹೊರತು ಮನುಕುಲದ ನಾಶಕ್ಕೆ ಬಳಕೆಯಾಗಬಾರದು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ದಯಾನಂದ ಅಗಸರ್ ಅಭಿಪ್ರಾಯಪಟ್ಟರು.

ಶನಿವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ʼ2 ದಿನಗಳ ಶುದ್ಧ ಮತ್ತು ಅನ್ವಯಿಕ ವಿಜ್ಞಾನಗಳ ಅಂತರಾಷ್ಟ್ರೀಯ ಸಮ್ಮೇಳನʼದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ.ಅಗಸರ್, ಪ್ರಪಂಚದಲ್ಲಿ ವಿವಿಧ ದೇಶಗಳ ನಡುವಿನ ಸಂಘರ್ಷಗಳು ಮಾನವನ ಜೀವ ಮತ್ತು ಆಸ್ತಿಗೆ ವ್ಯಾಪಕವಾದ ನಷ್ಟವನ್ನು ಉಂಟುಮಾಡುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಪ್ರಗತಿಯನ್ನು ಈ ಯುದ್ಧಗಳಲ್ಲಿ ಮನಕುಲದ ಪರಸ್ಪರ ವಿನಾಶಕ್ಕೆ ಬಳಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶುದ್ಧ ವಿಜ್ಞಾನ ಮತ್ತು ಅನ್ವಯಿಕ ವಿಜ್ಞಾನಗಳ ಜೊತೆಗೆ ಕೃಷಿ ಮತ್ತು ಪರಿಸರ ಮತ್ತು ಇಂಧನ ಕ್ಷೇತ್ರಗಳಲ್ಲಿ ವಿವಿಧ ಪ್ರಯೋಗಾಲಯಗಳಲ್ಲಿ ಅನೇಕ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿವೆ. ಅಂತಹ ಸಂಶೋಧನಾ ಚಟುವಟಿಕೆಗಳಲ್ಲಿ ಒಂದಾದ ಗುಲ್ಬರ್ಗಾ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಆಹಾರ ತ್ಯಾಜ್ಯದಿಂದ ವಿದ್ಯುಚ್ಛಕ್ತಿ ಉತ್ಪಾದಿಸಲು ಸಿಎಸ್ಐಆರ್ ಮತ್ತು ಐಐಟಿ ಹೈದರಾಬಾದ್ನೊಂದಿಗೆ ತಿಳುವಳಿಕೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಜಮೈಕಾದ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಡಾ.ಮಹೇಶ ನಾರಾಯಣ್ ಮುಖ್ಯ ಭಾಷಣ ಮಾಡಿದರು. ಸಮ್ಮೇಳನದ ಆರಂಭದಲ್ಲಿ ಡಾ.ಬಿ.ರಾಮಕೃಷ್ಣ ರೆಡ್ಡಿ ಸಮ್ಮೇಳನದ ಕುರಿತು ಕಿರು ಪರಿಚಯ ಮಾಡಿದರು. ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ ಸ್ವಾಗತಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ದೇಶ ವಿದೇಶದ ವಿವಿಧ ಭಾಗಗಳಿಂದ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News