ಕಲಬುರಗಿ | ಎಸೆಸೆಲ್ಸಿ ಪರೀಕ್ಷೆ : ತಡಕಲ್ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿಗೆ ಕಲ್ಲೇಟು

Update: 2025-03-21 19:48 IST
ಕಲಬುರಗಿ | ಎಸೆಸೆಲ್ಸಿ ಪರೀಕ್ಷೆ : ತಡಕಲ್ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿಗೆ ಕಲ್ಲೇಟು
  • whatsapp icon

ಕಲಬುರಗಿ : 10ನೇ ತರಗತಿಯ ವಾರ್ಷಿಕ ಬೋರ್ಡ್ ಪರೀಕ್ಷೆಯ ಶುಕ್ರವಾರ ನಡೆದ ಮೊದಲ ಭಾಷೆ ಪರೀಕ್ಷೆಯಲ್ಲಿ ಶೇ.93.64 ಹಾಜರಾತಿ, ವಿದ್ಯಾರ್ಥಿಗಳ ಉತ್ತಮ ಪ್ರಸ್ತುತಿಯೊಂದಿಗೆ ಪರೀಕ್ಷಾ ಪ್ರಕ್ರಿಯೆ ಶಿಸ್ತುಬದ್ಧವಾಗಿ ನಡೆದ ಬಗ್ಗೆ ವರದಿಯಾಗಿದೆ.

ಆಳಂದ ತಾಲೂಕಿನಲ್ಲಿ ನಡೆದ ಮೊದಲ ಭಾಷೆ ಪರೀಕ್ಷೆಗೆ 5,497 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 5,147 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ಮೂಲಕ ಶೇ.93.64 ಹಾಜರಾತಿ ದಾಖಲಾಗಿದೆ.

ಶಿಸ್ತುಬದ್ಧ ಪರೀಕ್ಷಾ ಪ್ರಕ್ರಿಯೆ, ಯಾವುದೇ ಅಕ್ರಮ ವರದಿ ಇಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅವ್ಯವಸ್ಥೆ ಅಥವಾ ಅಕ್ರಮ ವರದಿಯಾಗಿಲ್ಲ. ಕೇವಲ 350 ವಿದ್ಯಾರ್ಥಿಗಳು ಗೈರಾಗಿದ್ದು, ಮಿಕ್ಕವರೆಲ್ಲರೂ ಶಿಸ್ತಿನಿಂದ ಪರೀಕ್ಷೆ ಎದುರಿಸಿದ್ದಾರೆ.

ಭದ್ರತಾ ಸಿಬ್ಬಂದಿಗೆ ಕಲ್ಲೇಟು :

ತಾಲೂಕಿನ ತಡಕಲ್ ಗ್ರಾಮದ ಮೊರಾರ್ಜಿ ದೇಸಾಯಿ ಸವತಿ ಶಾಲೆಯಲ್ಲಿ ಸ್ಥಾಪಿಸಲಾದ 10ನೇ ತರಗತಿಯ ಪರೀಕ್ಷಾ ಕೇಂದ್ರದಲ್ಲಿ ಕಿಡಿಗೇಡಿಯೋರ್ವ ನಕಲು ಚೀಟಿಯಲ್ಲಿ ಕಲ್ಲುಸುತ್ತಿ ಎಸೆಯುವಾಗ ಭದ್ರತಾ ಸಿಬ್ಬಂದಿಗೆ ಬಡಿದು ಗಾಯಗೊಂಡ ಘಟನೆ ವರದಿಯಾಗಿದೆ. ಪರೀಕ್ಷೆ ವೇಳೆ ಕಿಡಿಗೇಡಿಯೋರ್ವ ಚೀಟಿಯಲ್ಲಿ ಕಲ್ಲುಹಾಕಿ ಎಸೆಯುವಾಗ ಹೋಂಗಾರ್ಡ್ ಕಲ್ಲು ಬಡಿದಿದೆ. ಇದರ ಪರಿಣಾಮ ಆತ ಗಾಯಗೊಂಡಿದ್ದಾನೆ. ಘಟನೆಯ ನಂತರವೂ ಪರೀಕ್ಷೆ ಸುಸೂತ್ರವಾಗಿ ಮುಂದುವರಿದಿದೆ.

ಪಟ್ಟಣದಲ್ಲಿ ಐದು ಹಾಗೂ ಗ್ರಾಮೀಣ ಭಾಗದಲ್ಲಿ 11 ಕೇಂದ್ರ ಸೇರಿ ಒಟ್ಟು 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಮೊದಲು ದಿನ ಶುಕ್ರವಾರ ಸುಸೂತ್ರವಾಗಿ ಪರೀಕ್ಷೆ ನಡೆದಿವೆ ಎಂದು ವರದಿಯಾಗಿದೆ.

ಪರೀಕ್ಷೆ ಸುಸೂತ್ರವೇನು ಸರಿ, ಮುಖ್ಯಸ್ಥರಿಗೆ ಸಮಸ್ಯೆ :

ಪಟ್ಟಣದ ಐದು ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಲಭ್ಯಗಳ ಕೊರತೆ ಎದುರಾಗಿದ್ದು, ಕೇಂದ್ರಗಳ ಮುಖ್ಯಸ್ಥರು ಸಮಸ್ಯೆ ಪರಿಹರಿಸಲು ಹೆಣಗಾಡುತ್ತಿದ್ದಾರೆ. ಡೆಸ್ಕ್, ಸಿಸಿ ಕ್ಯಾಮೆರಾ, ಯುಪಿಎಸ್ ಬ್ಯಾಟರಿ ಬ್ಯಾಕಪ್ ಕೊರತೆ ಉಂಟಾಗಿದ್ದು, ಈ ಕುರಿತು ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೆ ಈ ವ್ಯವಸ್ಥೆಯನ್ನು ಆರ್ಥಿಕವಾಗಿ ಹೇಗೆ ನಿರ್ವಹಿಸಬೇಕು ಎಂಬ ಗೊಂದಲದಿಂದ ಶಾಲಾ ಮುಖ್ಯ ಶಿಕ್ಷಕರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಅನೇಕ ಕೇಂದ್ರಗಳಲ್ಲಿ ಬೃಹತ್ ಕೋಣೆಗಳ ಕೊರತೆಯಿದ್ದರಿಂದ ಡೆಸ್ಕ್ ವ್ಯವಸ್ಥೆ ಮಾಡಲು ಕಷ್ಟವಾಗಿದೆ. ಆದರೆ, ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಡೆಸ್ಕ್ ನೀಡುವಂತೆ ಮೇಲಾಧಿಕಾರಿಗಳು ಸೂಚಿಸಿದ್ದು, ಇದರಿಂದ ವ್ಯವಸ್ಥಾಪನಾ ಹೊಣೆಗಾರರು ತಲೆನೋವು ಅನುಭವಿಸುತ್ತಿದ್ದಾರೆ. ಮೊದಲು ಖಾಸಗಿ ಶಾಲೆ-ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿತ್ತು, ಆದರೆ ಕಿಟಕಿ ಗಾಜು ಹಾನಿಯಾಗುವುದರಿಂದ ಇವುಗಳನ್ನು ರದ್ದುಗೊಳಿಸಲಾಗಿದೆ. ಹೀಗಾಗಿ, ಈಗಿನ ಕೇಂದ್ರಗಳಲ್ಲಿ ಮೂಲಸೌಲಭ್ಯಗಳ ಕೊರತೆ ತೀವ್ರವಾಗಿ ಅನುಭವಿಸುತ್ತಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ದೊಡ್ಡ ಕೋಣೆಗಳಿದ್ದರೆ, ಪ್ರತಿಯೊಂದಕ್ಕೂ ಎರಡು ಕ್ಯಾಮರಾಗಳನ್ನು ಅಳವಡಿಸುವಂತೆ ಮೇಲಾಧಿಕಾರಿಗಳಿಂದ ಕಡ್ಡಾಯ ಸೂಚನೆ ನೀಡಲಾಗಿದೆ. ಆದರೆ, ಈ ಕ್ಯಾಮರಾಗಳನ್ನು ತಂದು ಅಳವಡಿಸುವ ಜವಾಬ್ದಾರಿ ಯಾರಿಗೆ ಎಂಬುದರ ಬಗ್ಗೆ ಗೊಂದಲವಿದೆ.

ಈ ನಿರ್ವಹಣೆಯ ಹೊಣೆ ಶಾಲಾ ಮುಖ್ಯಸ್ಥರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ನೀಡಲಾಗಿದ್ದು, ಇದರಿಂದ ಅವರು ಹೈರಾಣಾಗಿದ್ದಾರೆ. ನಿತ್ಯ ರಾತ್ರಿ-ಹಗಲು ಈ ವ್ಯವಸ್ಥೆ ಮಾಡಬೇಕಾದ ಹೊಣೆಗಾರಿಕೆಯು ಶಾಲಾ ಮತ್ತು ಕಾಲೇಜು ಮುಖ್ಯಸ್ಥರ ಮೇಲೆ ಬಿದ್ದಿದೆ.

ತಮ್ಮ ಶಾಲೆ ಅಥವಾ ಕಾಲೇಜಿನ ಕಟ್ಟಡ ಪರೀಕ್ಷಾ ಕೇಂದ್ರಕ್ಕೆ ವಹಿಸಲಾಗಿದೆ. ಆದರೆ ಇಲ್ಲಿ ಸೌಲಭ್ಯ ಒದಗಿಸುವ ಜವಾಬ್ದಾರಿಯೂ ಇಲ್ಲಿನ ಶಾಲೆಯ ಪ್ರಾಚಾರ್ಯ ಅಥವಾ ಮುಖ್ಯ ಶಿಕ್ಷನ ಹೆಗಲಿಗೆ ಹಾಕಲಾಗಿದೆ. ಮತ್ತೊಂದಡೆ ಇವರಿಗೆ ಪರೀಕ್ಷಾ ಕರ್ತವ್ಯವೂ ಬೇರೆ ಕೇಂದ್ರಗಳಿಗೆ ವಹಿಸಲಾಗಿದೆ. ಹೀಗಾದಲ್ಲಿ ತಮ್ಮ ಶಾಲೆಗೆ ಸೌಲಭ್ಯ ಕಲಿಸಬೇಕೋ ಅಥವಾ ಕರ್ತವ್ಯ ನಿರ್ವಹಿಸಲು ಬೇರೆ ಕೇಂದ್ರಕ್ಕೆ ಹೋಗಬೇಕೋ ಎಂದು ಅವರು ಪ್ರಶ್ನಿಸತೊಡಗಿದ್ದಾರೆ.

ಆಯ್ಕೆ ಮಾಡಿದ ಪರೀಕ್ಷಾ ಕೇಂದ್ರದ ಕಟ್ಟಡದ ಮುಖ್ಯಸ್ಥರ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಪರೀಕ್ಷಾ ಕರ್ತವ್ಯ ನಿರ್ವಹಣೆಗೆ ಬೇರೆಡೆ ನಿಯೋಜಿಸಿದ ಪರಿಣಾಮ, ಸ್ಥಳೀಯ ಮುಖ್ಯಸ್ಥರು ಈ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಪಟ್ಟಣದ ಜ್ಯೂನಿಯರ್ ಕಾಲೇಜು, ಮಹಾತ್ಮ ಗಾಂಧಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆಗಳ ಪರೀಕ್ಷಾ ಕೇಂದ್ರಗಳಲ್ಲೂ ಇಂತಹ ಸಮಸ್ಯೆಗಳು ಎದುರಾಗಿದ್ದು, ಶೀಘ್ರವೇ ಈ ಕುರಿತಂತೆ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News