ಕಲಬುರಗಿ | ಮಾ.27ರಂದು ಜಿಪಂ ಕಚೇರಿ ಎದುರು ಅರೆಬೆತ್ತಲೆ ಧರಣಿ : ಬಂಡಪ್ಪ

ಕಲಬುರಗಿ : ಕಾಳಗಿ ತಾಲೂಕಿನ ರಟಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಮಾ.27ರಂದು ಜಿಪಂ ಕಚೇರಿ ಎದುರು ಗ್ರಾಪಂ ಸದಸ್ಯರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಗ್ರಾಪಂ ಸದಸ್ಯ ಬಂಡಪ್ಪ ಮತ್ತು ಸುಭಾಷ್ ಸ್ಟಾಮಗೋಳ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 20 ಜನ ಗ್ರಾಪಂ ಸದಸ್ಯರಿದ್ದು, ಅದರಲ್ಲಿ 11 ಜನ ಮಹಿಳಾ ಸದಸ್ಯರಿದ್ದು, ಉಳಿದ 9 ಸದಸ್ಯರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾಮಗಾರಿ ಮತ್ತು ನಿರ್ವಹಣೆ ಮಾಡದೆ 67,54,387 ಲಕ್ಷ ರೂ. ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
31.10.2023 ರಿಂದ 28.08.2024ರವರೆಗಿನ (10 ತಿಂಗಳು) ಹಣವನ್ನು ಕೇವಲ ನೀರು ನಿರ್ವಹಣೆ ಮತ್ತು ವಿದ್ಯುತ್ ಉಪಕರಣಗಳಿಗೆ ಖರ್ಚು ಹಾಕಿದ್ದಾರೆ. ಆದರೆ, ಯಾವುದೇ ಕಾಮಗಾರಿ ಹಾಗೂ ನಿರ್ವಹಣೆ ಮಾಡಿಲ್ಲ. ತನಿಖಾಧಿಕಾರಿಗಳಿಂದ ತನಿಖೆ ಮಾಡಿಸಿದಾಗ ಯಾವುದೇ ಕಾಮಗಾರಿ ಹಾಗೂ ನಿರ್ವಹಣೆಗೆ ಮಾಡಿದ ಸಮಕ್ಷಮವಾಗಿ ಕಂಡು ಬಂದಿರುವುದಿಲ್ಲ. ಇಷ್ಟೇಲ್ಲ ಹಣ ದುರುಪಯೋಗ ಮಾಡಿದ್ದರೂ ಕೂಡ ಮೇಲಾಧಿಕಾರಿಗಳು ಅಮಾನತು ಮಾಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಇಷ್ಟೇಲ್ಲಾದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸರ್ವಾಧಿಕಾರ ನಡೆಸುತ್ತಿದ್ದಾರೆ. ಇವರಿಗೆ ಗ್ರಾಪಂ ಸದಸ್ಯರು ಯಾವುದೇ ಪ್ರಶ್ನೆ ಮಾಡುವಂತಿಲ್ಲ. ಗ್ರಾಮದ ಸಮಸ್ಯೆ ಕೇಳಿದರೆ ಲಿಖಿತ ರೂಪದಲ್ಲಿ ಕೊಡಿ, ಇಲ್ಲವೇ ಮಾಹಿತಿ ಹಕ್ಕು ಕಾಯ್ದೆಯಡಿ ಹೇಳಿ ಎಂದು ಗದರಿಸುತ್ತಿದ್ದಾರೆ. ನಾವು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೆ ಮಾಹಿತಿಯೂ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2022-23, 2023-24 ಮತ್ತು 2024-25ನೇ ಸಾಲಿನ 14 ಮತ್ತು 15ನೇ ಸಾಲಿನ ಹಣಕಾಸು ಕ್ರಿಯೆ ಯೋಜನೆ ಪ್ರತಿ ಕೇಳಿದರೂ ನೀಡುತ್ತಿಲ್ಲ. ಈ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಕಾಳಗಿ ಕಾರ್ಯನಿರ್ವಾಹಕ ಅಧಿಕಾರಿಗೆ, ಜಿಪಂ ಉಪ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಕಳೆದ 16 ತಿಂಗಳಿನಿಂದ ಯಾವುದೇ ಸಭೆ ನಡೆಸಿಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಈ ಅಧಿಕಾರಿ ಧೋರಣೆ ಖಂಡಿಸಿ ಮತ್ತು ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಮಾ.27 ರಂದು ಜಿಪಂ ಕಚೇರಿ ಎದುರು ಅರೆಬೆತ್ತಲೆ ಧರಣಿ ನಡೆಸಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾರತು ಗಂಜಗಿರಿ ಇದ್ದರು.